Friday, June 21, 2024

 ಕಥೆ'433

ಎದುರಾಳಿಯ ಅಶಕ್ತತೆ

ಆ ಪ್ರದೇಶದಲ್ಲಿ ಗಂಗಾನದಿ ಇಬ್ಭಾಗ­ವಾಗಿ ಹರಿದು ಮತ್ತೆ ಮುಂದೆ ಸೇರಿ ನಡುವೆ ಒಂದು ದ್ವೀಪವಾಗಿತ್ತು. ಆ ದ್ವೀಪದಲ್ಲಿ ಸಾವಿರಾರು ಮರಗಳು. ಅದರಲ್ಲಿ ಅನೇಕ ಮಾವು, ಹಲಸು ಮತ್ತಿತರ ಹಣ್ಣಿನ ಮರಗಳು ಹೇರಳವಾ­ಗಿದ್ದವು. ವರ್ಷದ ಹನ್ನೆರಡು ತಿಂಗಳೂ ಯಾವುದಾದರೂ ಹಣ್ಣು ದೊರೆಯು­ವಂತಿತ್ತು. ನದಿ ತೀರದಲ್ಲಿ ಅನೇಕ ಪ್ರಾಣಿ-ಪಕ್ಷಿಗಳು ನೆಲೆಯಾಗಿದ್ದವು. ಅವುಗಳಲ್ಲಿ ತುಂಬ ವಿಚಿತ್ರವಾದದ್ದು ಒಂದು ಕೋತಿ. ಅದು ಹುಟ್ಟುವಾಗಲೇ ಒಂದು ನಾಯಿಯಷ್ಟು ದೊಡ್ಡದಾಗಿತ್ತು. ದಿನದಿನಕ್ಕೂ ಬೆಳೆಯುತ್ತ ಎರಡು ವರ್ಷದಲ್ಲಿ ದೊಡ್ಡ ಕುದುರೆಯ­ಷ್ಟಾಯಿತು, ಅದರ ನೋಟ, ಓಟ ಹೆದರಿಕೆ ತರುತ್ತಿದ್ದವು.

ಅದು ಮರದಿಂದ ಮರಕ್ಕೆ ಹಾರಿದರೆ ಮರಗಳು ಬಿದ್ದೇ ಹೋಗು­ವಷ್ಟು ಅಲುಗಾಡುತ್ತಿದ್ದವು. ಯಾವ ಪ್ರಾಣಿಯೂ ಇದರ ಹತ್ತಿರ ಸುಳಿಯು­ತ್ತಿರಲಿಲ್ಲ. ಕೋತಿ ಮಾತ್ರ ನದಿಯ ಮಧ್ಯದಲ್ಲಿದ್ದ ದ್ವೀಪಕ್ಕೆ ನಿತ್ಯವೂ ಹೋಗಿ ಅಲ್ಲಿದ್ದ ಹಣ್ಣುಗಳನ್ನು ಹೊಟ್ಟೆತುಂಬ ತಿಂದು ಬರುತ್ತಿತ್ತು. ನದಿ ದಾಟುವುದಕ್ಕೆ ಯೋಜನೆಯೊಂದನ್ನು ಮಾಡಿಕೊಂಡಿತ್ತು. ನದಿಯ ಮಧ್ಯದಲ್ಲಿ ಒಂದು ದೊಡ್ಡ ಬಂಡೆಯಿತ್ತು. ಈ ಕೋತಿ ನದಿ ತೀರದಿಂದ ಜೋರಾಗಿ ಹಾರಿದರೆ ನೇರವಾಗಿ ಮಧ್ಯದ ಬಂಡೆಯ ಮೇಲೆ ಹೋಗಿ ನಿಲ್ಲುತ್ತಿತ್ತು. ನಂತರ ಅಲ್ಲಿಂದ ಹಾರಿ ದ್ವೀಪ­ದಲ್ಲಿ ಇಳಿಯುವುದು, ಬರುವಾಗಲೂ ಹಾಗೆಯೇ. ಹೀಗಾಗಿ ಬೆಳಿಗ್ಗೆ ದ್ವೀಪಕ್ಕೆ ಹೋದರೆ ಸಾಯಂಕಾಲವೇ ಮರಳಿ ಬಂದು ಮನೆ ಸೇರುತ್ತಿತ್ತು.

ಹೀಗಿರುವಾಗ ಒಮ್ಮೆ ಒಂದು ಮೊಸಳೆ ತನ್ನ ಪರಿವಾರ­ದೊಂದಿಗೆ ನದಿಯ ಈ ಭಾಗಕ್ಕೆ ಬಂದು ಸೇರಿಕೊಂಡಿತು. ಅವುಗಳಿಗೂ ಈ ಕೋತಿ ಇಲ್ಲಿಂದಲ್ಲಿಗೆ, ಅಲ್ಲಿಂದಿಲ್ಲಿಗೆ ಹಾರು­ವುದನ್ನು ಕಂಡು ಆಶ್ಚರ್ಯವಾಯಿತು. ಮೊಸಳೆಯ ಹೆಂಡತಿ ಯಾವು­ಯಾವುದೋ ಪ್ರಾಣಿಗಳನ್ನು ತಿಂದು ರುಚಿ ಸವಿದಿದ್ದ ಅದಕ್ಕೆ ಈ ಕೋತಿಯನ್ನು ತಿನ್ನುವ ಮನಸ್ಸಾಯಿತು. ಒಂದೇ ಸಮನೆ ಗಂಡನನ್ನು ಪೀಡಿಸ­ತೊಡ­ಗಿತು. ಕೊನೆಗೆ ಹೆಂಡತಿಯ ಕಾಟ ತಡೆಯದೆ ಗಂಡು ಮೊಸಳೆ ಒಪ್ಪಿ ಯೋಜನೆ ಹಾಕಿತು. ಹೇಗಿದ್ದರೂ ಸಂಜೆ ಮರಳುವಾಗ ಕೋತಿ ಮೊದಲು ಬಂಡೆಯ ಮೇಲೆಯೇ ಹಾರುತ್ತದೆ. ತಾನು ಹಾಗೆಯೇ ಬಂಡೆಯಂತೆ ಮಲಗಿದ್ದರೆ ಕೋತಿ ಕಾಲಿಟ್ಟ ಕೂಡಲೇ ಅದನ್ನು ಹಿಡಿದು­ಕೊಳ್ಳುತ್ತೇನೆ. ನೀವೂ ಬಂದು ಸಹ­ಕರಿಸಿ, ಯಾಕೆಂ­ದರೆ ಅದೊಂದು ಭಾರಿ ಗಾತ್ರದ ಕೋತಿ ಎಂದು ಪರಿವಾರಕ್ಕೆ ಸೂಚನೆ ಕೊಟ್ಟಿತು. ಅಂತೆಯೇ ಹೋಗಿ ಬಂಡೆಯ ಮೇಲೆ ಕಲ್ಲಿನಂತೆ ಅಲುಗಾಡದೆ ಮಲಗಿತು.


ದ್ವೀಪದಿಂದ ಹಾರುವುದಕ್ಕೆ ಮೊದಲು ಕೋತಿ ಬಂಡೆಯನ್ನು ನೋಡಿತು. ಏನೋ ಬದಲಾವಣೆ ಕಂಡಿತು. ಸೂಕ್ಷ್ಮವಾಗಿ ನೋಡಿದಾಗ ಮೊಸಳೆ ಕಾಣಿಸಿತು. ತನ್ನನ್ನು ತಿನ್ನಲೆಂದೇ ಬಂದಿದೆಯೇ ನೋಡೋಣ ಎಂದುಕೊಂಡು, ‘ಅಯ್ಯಾ, ಸ್ನೇಹಿತ ಬಂಡೆ’ ಎಂದು ಜೋರಾಗಿ ಕೂಗಿತು. ಎರಡು ನಿಮಿಷ ಬಿಟ್ಟು, ‘ಏನಯ್ಯ, ದಿನಾಲು ಉತ್ತರಕೊಡು­ತ್ತಿದ್ದವನು ಇಂದು ಸುಮ್ಮನಿದ್ದೀಯೆ. ಏನು ಕಾರಣ?’ ಎಂದಿತು. ಅಯ್ಯೋ, ಹಾಗಾದರೆ ನಿತ್ಯ ಈ ಬಂಡೆ ಮಾತನಾ­ಡುತ್ತಿರಬಹುದು ಎಂದುಕೊಂಡು ಮೊಸಳೆಯೇ ಕೂಗಿತು.


‘ಸ್ನೇಹಿತ ಕೋತಿ, ಏನು ಬೇಕಿತ್ತು?’. ‘ನೀನು ಮೊಸಳೆ­ಯಲ್ಲವೇ? ಅಲ್ಲೇಕೆ ಕುಳಿತಿದ್ದೀ?’ ಕೇಳಿತು ಕೋತಿ. ಮೊಸಳೆ ಹೇಳಿತು, ‘ನನ್ನ ಹೆಂಡತಿ ನಿನ್ನ ಹೃದಯವನ್ನು ತಿನ್ನಬಯಸಿದ್ದಾಳೆ, ಅದಕ್ಕೇ ಕಾಯ್ದು ಕುಳಿತಿದ್ದೇನೆ’. ‘ಅಯ್ಯೋ ಪಾಪ! ನಿನ್ನ ಹೆಂಡತಿ ಅಷ್ಟೊಂದು ಅಪೇಕ್ಷೆ ಪಟ್ಟಾಗ ಇಲ್ಲವೆ­ನ್ನುವುದು ಹೇಗೆ? ನೀನು ಅಗಲವಾಗಿ ಬಾಯಿ ತೆರೆದುಕೊಂಡು ಕುಳಿತಿರು. ನಾನು ಹಾರಿ ಬಾಯಿಯಲ್ಲೇ ಬೀಳುತ್ತೇನೆ’ ಎಂದಿತು ಕೋತಿ. ದಡ್ಡ ಮೊಸಳೆ ಅಗಲವಾಗಿ ಬಾಯಿತೆರೆಯಿತು.

ಮೊಸಳೆ ಅಷ್ಟಗಲ ಬಾಯಿ ತೆರೆದಾಗ ಅದರ ಕಣ್ಣು ಮುಚ್ಚಿಕೊಳ್ಳುತ್ತವೆ, ಏನೂ ಕಾಣುವುದಿಲ್ಲ. ಇದು ಕೋತಿಗೆ ಗೊತ್ತಿತ್ತು. ಆಗ ಕೋತಿ ಠಣ್ಣನೇ ಹಾರಿ ಮೊಸಳೆಯ ತಲೆಯ ಮೇಲೆ ಕಾಲಿಟ್ಟು ಕ್ಷಣಾರ್ಧದಲ್ಲಿ ಮತ್ತೆ ಜಿಗಿದು ದಡ ಸೇರಿಬಿಟ್ಟಿತು. ಮೊಸಳೆ ಕೋತಿಯ ಹಾಗೆ ಮುಖ ಮಾಡಿತು. ಸಮಸ್ಯೆ ಎದುರಾ­ದಾಗ ಬುದ್ಧಿವಂತಿಕೆ ಬಳಸಬೇಕು. ನಿಮ್ಮ ಶಕ್ತಿಯ ಅರಿವಿರಬೇಕು ಮತ್ತು ಎದುರಾಳಿಯ ಅಶಕ್ತತೆಯ ತಿಳಿವಿರ­ಬೇಕು. ಈ ಸಾಮಗ್ರಿಗಳು ನಮ್ಮಲ್ಲಿದ್ದರೆ ಎಂಥ ಸಮಸ್ಯೆಯನ್ನೂ ಎದುರಿಸ­ಬಹುದು.      

ಕೃಪೆ : ಮುಖ ಪುಸ್ತಕ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು