ಕಥೆ-453
ಮಾಯೆ
ಒಬ್ಬ ಮನುಷ್ಯನು ದೇಹ ಬಿಟ್ಟಿದ್ದ. ಶವ ಸಂಸ್ಕಾರಕ್ಕೆ ಅವನ ಗೆಳೆಯನು ಸ್ಮಶಾನಕ್ಕೆ ಹೋಗಿದ್ದ. ಅಲ್ಲಿ ತನ್ನ ಗೆಳೆಯನ ದೇಹವು ಅಗ್ನಿಗೆ ಆಹುತಿಯಾಗುವುದನ್ನು ಕಣ್ಣಾರೆ ಕಂಡ. ಜೀವನವು ಎಷ್ಟು ಅಸ್ಥಿರ, ನಶ್ವರ ಎನಿಸಿತು. 'ಮನುಷ್ಯನು ಈ ನಶ್ವರ ಜೀವನಕ್ಕಾಗಿ, ಸಂಸ್ಕಾರಕ್ಕಾಗಿ ಆಶೆಪಡಬಾರದು, ಹೋರಾಡಬಾರದು !' ಎಂದು ಅಲ್ಲಿರುವವರಿಗೆ ಈತ ಹೇಳಿದ. ಜನರು ಈತನ ಉಪದೇಶಕ್ಕೆ ಮೌನವಾಗಿ ಸಮ್ಮತಿಸಿ ಮನೆಗೆ ಹೊರಟರು. ಅಷ್ಟರಲ್ಲಿ ಯಾರೋ ಈತನ ಕಾಲಮೇಲೆ ಕಾಲಿಟ್ಟಿದ್ದರಿಂದ ಇವನ ಹಳೆ ಚಪ್ಪಲಿ ಹರಿಯಿತು. 'ಕಣ್ಣು ಕಾಣುವುದಿಲ್ಲವೆ ? ಹೇಗೆ ನಡೆಯುತ್ತೀರಿ ?' ಎಂದು ಅವರೊಂದಿಗೆ ಈತ ವಾದವಿವಾದಕ್ಕೆ ಇಳಿದು ಹೋರಾಡತೊಡಗಿದ . ಅಲ್ಲಿದ್ದ ಜನರೆಲ್ಲ ಈತನಿಗೆ ಸಮಾಧಾನ ಹೇಳಿ ಆಗಬಹುದಾಗಿದ್ದ ಅನಾಹುತ ತಪ್ಪಿಸಿದರು. ಒಂದು ಕ್ಷಣದ ಹಿಂದೆಯೇ 'ಮಾನವ ಜೀವನ ಅಸ್ಥಿರ-ನಶ್ವರ' ಎಂದು ಹೇಳಿದವನೇ ತನ್ನ ಹಳೆಯ ಚಪ್ಪಲಿಗಳಿಗಾಗಿ ವಾದಿಸಿದ ! ಇದೇ ಮಾಯೆ, ಮೋಹ!. ಕೃಪೆ: ಸಿದ್ದೇಶ್ವರ ಸ್ವಾಮೀಜಿಗಳು.
No comments:
Post a Comment