ಕಥೆ-472
ತನುವಿನಲ್ಲಿ ಗುರಿಯ ಮನವಿರಲಿ
ಮನೆಗೊಬ್ಬಳು ಮನುವಿರಲಿ...
ಯಾವುದೇ ಖಿನ್ನತೆಯನ್ನು, ಸೋಲನ್ನು ಸುಲಭವಾಗಿ ಹೇಗೆ ಶೂಟ್ ಮಾಡಬೇಕು ಎನ್ನುವುದನ್ನು ನಾವು ಮನು ಭಾಕರ್ ನೋಡಿ ಕಲಿಯಬೇಕು. 2021ರ ಟೋಕಿಯೊ ಒಲಿಂಪಿಕ್ಸ್ ವೇಳೆ ಆಕೆ ಜಗತ್ತಿನ ನಂ.1 ಶೂಟರ್. ಆದಾಗ್ಯೂ, ಅರ್ಹತಾ ಸುತ್ತಿನಲ್ಲಿದ್ದಾಗ 55 ನಿಮಿಷಗಳಲ್ಲಿ 44 ಶಾಟ್‌ಗಳ ಅಗತ್ಯವಿತ್ತು. ಆದರೆ, ಏರ್ ಪಿಸ್ತೂಲ್‌ಗೆ ಹಾನಿಯಾಗಿ 20 ನಿಮಿಷ ಆಕೆಗೆ ಗುರಿ ಇಡಲು ಸಾಧ್ಯವಾಗಲೇ ಇಲ್ಲ. ಪಿಸ್ತೂಲ್ ರಿಪೇರಿ ನಂತರವೂ ಮನು ಹಾರಿಸಿದ್ದು ಕೇವಲ 14 ಗುಂಡುಗಳನ್ನಷ್ಟೇ. ಪದಕ ಗೆಲ್ಲಬೇಕಿದ್ದ ಹುಡುಗಿ, ದುಃಖದಿಂದ ಗನ್ನನ್ನು ಬ್ಯಾಗಿಗೇರಿಸಿಕೊಂಡು ಮರಳಿದ್ದಳು.
ಮನೆಗೆ ಬಂದ ಮೇಲೆ ಆಕೆ ಬೇಸರದಲ್ಲಿ ಪಿಸ್ತೂಲನ್ನೇ ಮುಟ್ಟಲಿಲ್ಲ. ಸೋಲಿನ ಕಹಿಗಳು ಮರುಕಳಿಸಿ ದಿನದಿಂದ ದಿನಕ್ಕೆ ಖಿನ್ನತೆಗೆ ಜಾರುತ್ತಿದ್ದ ಮನು, “ನಾನು ಇಲ್ಲಿರೋದಿಲ್ಲ ಅಮ್ಮಾ.. ಮತ್ತೆ ಮತ್ತೆ ಒಲಿಂಪಿಕ್ಸಿನ ಸೋಲೇ ನೆನಪಾಗ್ತಿದೆ. ಫಾರಿನ್ನಿಗೆ ಹೋಗಿ ಫ್ಯಾಷನ್ ಡಿಸೈನಿಂಗ್ ಮತ್ತು ಮಾರ್ಕೆಟಿಂಗ್ ಕೋರ್ಸ್ ಮಾಡ್ತೀನಿ, ಸಾಕು ನಂಗೆ ಶೂಟಿಂಗ್" ಎಂದುಬಿಟ್ಟಳು. ಮಗಳು ಹೇಗಾದರೂ ಆಘಾತದಿಂದ ಹೊರಬಂದರೆ ಸಾಕು ಎಂದು ತಾಯಿಗೆ ಅನ್ನಿಸಿ, “ಸರಿ. ನಿನಗೆ ಅನ್ನಿಸಿದ್ದು ಮಾಡಮ್ಮಾ...," ಎಂದು ಒಪ್ಪಿದರು. ಅವಳಿಗೆ ಈ ಪರಿ ದುಃಖ ಕೊಟ್ಟ ಪಿಸ್ತೂಲ್ ಅವಳ ಕಣ್ಣೆದುರೇಕೆ? ಅಮ್ಮ ಆ ಪಿಸ್ತೂಲುಗಳನ್ನೇ ಕಬೋರ್ಡ್‌ನಲ್ಲಿ ಬಚ್ಚಿಟ್ಟರು. ಕನಿಷ್ಠ ಒಂದು ವರ್ಷ ಮಗಳನ್ನು ಆ ದುಃಖದಿಂದ ಹೊರತರಲು ಸಾಧ್ಯವಾಗಲೇ ಇಲ್ಲ. ಭಗವದ್ಗೀತೆ ವಿಚಾರಗಳು ಮನುವಿನ ಮನಸ್ಸು ಪ್ರವೇಶಿಸಿದ್ದೂ ಇದೇ ಹೊತ್ತಿನಲ್ಲಿಯೇ. ಇಷ್ಟು ಕಾಲ ಧ್ಯಾನಿಸಿದ ಶೂಟಿಂಗ್ ಕ್ರೀಡೆಯಿಂದ ಮಗಳನ್ನು ದೂರವುಳಿಸಲು ತಾಯಿಗೆ ಯಾಕೋ ಮನಸ್ಸಾಗಲೇ ಇಲ್ಲ. ಮಗಳಿಗೆ ಧೈರ್ಯ ಹೇಳಿ, ಮತ್ತೆ ಅಭ್ಯಾಸಕ್ಕೆ ಹೊರಡಲು ಹೇಳಿದರು. ತಾಯಿ ಅಂದು ಹೇಳಿದ ಸಾಂತ್ವನ, ಸಮಾಧಾನದ ಮಾತುಗಳೇ ಈಗ ಕಂಚಿನ ಪದಕವಾಗಿ ಮನುವಿನ ಕೊರಳೊಳಗೆ, ಭಾರತಮಾತೆಯ ಕೊರಳಾಗಿ ಮಿನುಗುತ್ತಿದೆ!
ಮೇಷ್ಟ್ರ ಮಕ್ಕಳ ಪಾಡು ಭಾರೀ ಕಷ್ಟ. ಬೀದಿಗಳಲ್ಲಿ ಆಡ್ತಾ ಇದ್ರೆ ಜನ, “ಏಯ್ ಮೇಷ್ಟ್ರ ಮಗ ಅಲ್ವನೋ ನೀನು... ಅಪ್ಪ ನೋಡಿದ್ರೆ ಅಷ್ಟೇ ಬುದ್ವಂತ. ನೀ ನೋಡಿದ್ರೆ ಆಡ್ತಿದ್ಯಾ, ಹೋಗು ಮನೆಗೆ...” ಎನ್ನುತ್ತಾರೆ. ಇವರು ಒಳ್ಳೆಯ ಮಾರ್ಕ್ಸ್ ತೆಗೆದ್ರೆ, “ಅವನಿಗೇನು ಬಿಡ್ರಿ, ಮೇಷ್ಟ್ರ ಮಗ. ಎಲ್ಲಾ ಅಪ್ಪ ಹೇಳ್ಕೊಟ್ಟಿರ್ತಾರೆ,” ಅಂತ ತೀರ್ಪು ಕೊಡುತ್ತಾರೆ. ಅಪ್ಪ- ಅಮ್ಮ ಮೇಷ್ಟ್ರೋ-ಟೀಚರೋ ಆಗಿಬಿಟ್ಟರೆ ಅಂಥ ಊರುಗಳಲ್ಲಿ ಮಕ್ಕಳು ಆ ಪ್ರಭಾವದ ನೆರಳಿನಿಂದ ಹೊರಬಂದು ಸ್ವಂತ ವ್ಯಕ್ತಿತ್ವ ಕಟ್ಟಿಕೊಳ್ಳೋದು ದೊಡ್ಡ ಸವಾಲೇ. ಭಾರತಕ್ಕೆ ಚೊಚ್ಚಲ ಪದಕ ತಂದುಕೊಟ್ಟ ಮನು ಭಾಕರ್ ಬಾಲ್ಯ ಇಂಥ ಉಭಯ ಸಂಕಟಗಳಿಗೆ ಮುಖಾಮುಖಿ ಆಗುತ್ತಲೇ ಇತ್ತು. ಕಾರಣ, ಅಮ್ಮ ಡಾ. ಸುಮೇಧಾ ಹರ್ಯಾಣದ ಜಜ್ಜರ್ ನ ಯೂನಿವರ್ಸಲ್ ಶಾಲೆಯ ಮುಖ್ಯ ಶಿಕ್ಷಕಿ. ಮಗಳನ್ನು ಚೆನ್ನಾಗಿ ಓದಿಸಿ ಡಾಕ್ಟ್ರು ಮಾಡಬೇಕು ಅನ್ನೋ ಆಸೆ ಅಮ್ಮನಿಗೆ. ಆದರೆ, ಅಪ್ಪನಿಗೆ ಮಗಳನ್ನು ಸ್ಟ್ರಾಂಗ್ ಮಾಡಿ, ದೊಡ್ಡ ಬಾಕ್ಸರ್ ಆಗಿ ರೂಪಿಸಬೇಕೆಂಬ ಕನಸು! ಎರಡೂ ಆಸೆಗಳದ್ದೂ ವಿರುದ್ಧ ದಿಕ್ಕಿನ ಪಯಣ. ಆ ಹೊತ್ತಿಗೆ ಮನುವಿನ ಅಣ್ಣ ಕೂಡ ಬಾಕ್ಸಿಂಗ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಪದಕ ಗೆದ್ದಿದ್ದ. ಡಾಕ್ಟರ್ ಆಗಿಸಬೇಕೆನ್ನುವ ಪತ್ನಿಯ ಇಚ್ಛೆಯನ್ನು ಕಡೆಗಣಿಸಿ ಮಗಳನ್ನೂ ಅಪ್ಪ ಬಾಕ್ಸಿಂಗ್ ರಿಂಗ್‌ನೊಳಗೆ ಕಳುಹಿಸಿದ. ಅಭ್ಯಾಸ ಪಂದ್ಯದ ವೇಳೆ ಮನುವಿನ ಕಣ್ಣಿಗೆ ತೀವ್ರ ಗಾಯವಾಗಿ ಊದಿಕೊಂಡಿತು. "ನಾನು ಬಾಕ್ಸಿಂಗ್‌ಗೆ ಹೋಗಲ್ಲ ಅಮ್ಮಾ...,” ಎಂದು ಮಗಳು ಅಳುತ್ತಾ ಹೇಳಿದಾಗ ತಾಯಿಗೆ ಬೆಂಬಲ ಸಿಕ್ಕಿತು. "ಓದೋ ಹುಡುಗಿನಾ ತಗೊಂಡೋಗಿ, ಆಟಕ್ಕೆ ಕಳಿಸಿದ್ರೆ ಅವಳು ಹೇಗೆತಾನೆ ಆಡ್ತಾಳೆ,” ಅಮ್ಮನ ವರಾತ ಶುರು. ಆದರೂ ಅಪ್ಪನಿಗೆ ಸಮಾಧಾನ ಆಗಲಿಲ್ಲ. ಮಗಳು ಸಾಹಸ ಕ್ರೀಡೆಯಲ್ಲಿ ಮಿಂಚಬೇಕೆಂದು ಮಾರ್ಷಲ್ ಆರ್ಟ್ಸ್ ಗೆ ಹಾಕಿದ.ಅಲ್ಲಿನ ಮೋಸ ತಂತ್ರಗಳನ್ನು ಕಂಡು ಮನು ಅದರಿಂದಲೂ ದೂರ ಉಳಿದುಬಿಟ್ಟಳು. ಮಗಳ ಕೈಗೆ ಬಿಲ್ಲುಬಾಣ ಕೊಟ್ಟು ಆರ್ಚರಿಗೆ ಹಾಕಿದ. ಮನುಗೆ ಅದೂ ಆಪ್ತವಾಗಲಿಲ್ಲ. ಅಪ್ಪ ಟೆನಿಸ್ ಕೋರ್ಟ್‌ಗೆ ಕಳುಹಿಸಿದ. ಮಗಳ ಕಾಲಿಗೆ ಸ್ಕೆಟಿಂಗ್ ಕಟ್ಟಿದ. ಮನುವಿನ ಆಸಕ್ತಿ ಯಾವೊಂದು ಕ್ರೀಡೆಯಲ್ಲೂ ಸ್ಥಿರವಾಗಿ నిల్లలిల్ల.
ಇಷ್ಟೆಲ್ಲದರ ನಡುವೆಯೂ, ತಾಯಿಯು ಮಗಳನ್ನು ಓದಿನಲ್ಲಿ ಮುಂದೆ ತರುತ್ತಲೇ ಇದ್ದಳು. ಜೀವಶಾಸ್ತ್ರದಲ್ಲಿ ಮನುವಿಗೆ ಆಸಕ್ತಿ ತುಂಬುವ ಎಲ್ಲ ಕೆಲಸವನ್ನೂ ಮಾಡುತ್ತಲೇ ಇದ್ದಳು. ಮಗಳನ್ನು ಡಾಕ್ಟರ್ ಆಗಿಸಲು ಕೋಚಿಂಗ್ ಸೆಂಟರುಗಳಿಗೆಲ್ಲ ಅಲೆದಿದ್ದಳು. ಅದೊಂದು ದಿನ ಅಮ್ಮನ ಯೂನಿವರ್ಸಲ್ ಶಾಲೆಯಲ್ಲಿ ಶೂಟಿಂಗ್‌ಗಾಗಿ ಮನು ಪಿಸ್ತೂಲ್ ಹಿಡಿದಿದ್ದಳು. ನಿಖರವಾಗಿ ಗುರಿಯಿಡುತ್ತಿದ್ದ ಮನುವಿನ ಏಕಾಗ್ರತೆ ಗಮನಿಸಿ, ಪಿಟಿ ಮೇಷ್ಟ್ರು ಅನಿಲ್ ಜಾಖರ್ "ಇವಳನ್ನು ಏನೇನೋ ಆಗಿಸುವ ಪ್ರಯತ್ನ ಬಿಡಿ, ದಿನಾ ಶೂಟಿಂಗ್‌ಗೆ ಕಳುಹಿಸಿ. ಇವಳು ಪದಕ ತರುವ ಹುಡುಗಿ," ಎಂದು ಖಚಿತವಾಗಿ ಹೇಳಿದ್ದರಂತೆ. ಬಹುಶಃ ಪಿಟಿ ಶಿಕ್ಷಕರು ಆ ಮಾತು ಹೇಳದೇ ಇದ್ದರೆ, ಇಂದು ಭಾರತಕ್ಕೆ ಚೊಚ್ಚಲ ಪದಕ ತಪ್ಪುತ್ತಿತ್ತು!
ಪ್ರಪಂಚದಲ್ಲಿ ಭಾರತ ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನ ಆದರೆ ಒಲಂಪಿಕ್ಸ್ ಪದಕ ಪಡೆಯುವಲ್ಲಿ ಈ ದಿನ 24 ನೇ ಸ್ಥಾನ.. ದಕ್ಷಿಣ ಕೊರಿಯಾ ಮತ್ತು ಜಪಾನ್ ನಂತಹ ಚಿಕ್ಕ ದೇಶಗಳು ಪ್ರಥಮ ಜಿತಿಯ ಸ್ಥಾನದಲ್ಲಿ ಒಲಂಪಿಕ್ ನಲ್ಲಿ ಪೈಪೋಟಿ ನೀಡುತ್ತಿವೆ. ಬಹುಶಃ ಭಾರತದ ಮನೆಗಳಲ್ಲಿ ಹುಡುಕಿದರೆ ಮನುವಿನಂಥ ಅಸಂಖ್ಯ ಮನಸ್ಸುಗಳು ಕಾಣಸಿಗಬಹುದು. ಮಕ್ಕಳು ಆ ಕ್ಷೇತ್ರದಲ್ಲಿ ಬೆಳೆಯಬಹುದಾ, ಈ ಕ್ಷೇತ್ರದಲ್ಲಿ ಬೆಳೆಯಬಹುದಾ ಎಂಬ ಆಸೆಯಿಂದ ಅಪ್ಪ-ಅಮ್ಮ ಅವರ ಬಾಲ್ಯವನ್ನು ಪ್ರಯೋಗಶಾಲೆಯೊಳಗೆ ತಳ್ಳುವಲ್ಲಿ ನಾವು ನಿಸ್ಸಿಮರು. ಮಕ್ಕಳ ಆಸಕ್ತಿ ಮೊಗ್ಗಾಗುವ ತನಕ ಕಾದರೆ ಮನು ಭಾಕರ್ ನಂಥ ಹೆಮ್ಮೆಗಳು ಅರಳುತ್ತವೆ. ಮತ್ತೊಂದು ಶೂಟಿಂಗ್ ನಲ್ಲಿ ಅವಳು ಎರಡನೇ ಪದಕ ಪಡೆಯುವ ಅವಕಾಶ ನಾಳೆ ಮಂಗಳವಾರ ಒದಗಲಿದೆ. ಮತ್ತೊಂದು ಪದಕ ಪಡೆದರೆ ಎರಡು ಪದಕಗಳನ್ನು ಪಡೆದ ಭಾರತದ ಮೊದಲ ಮಹಿಳೆ ಆಗಲಿದ್ದಾಳೆ.. ಮನುಗೆ ಮಂಗಳವಾರದ ಸ್ಪರ್ಧೆಗೆ ಶುಭ ಕೋರುತ್ತಾ, ಉಳಿದಂತೆ ಭಾರತದ ಸ್ಪರ್ಧಾಳಗಳು ಒಲಂಪಿಕ್ಸ್ ಪದಕಗಳನ್ನು ಗೆದ್ದು ಭಾರತ ಹೆಮ್ಮೆ ಪಡುವಂತೆ ಮಾಡಲಿ ಎಂದು ಶುಭ ಹಾರೈಸೋಣ..
No comments:
Post a Comment