ಕಥೆ-490
ಕಲ್ಲಪ್ಪ ಹಿರಿಯ
2013ರಲ್ಲಿ ಹಿರಿಮ್ಯಾಗೇರಿ ಪ್ರೌಢಶಾಲೆಗೆ ಹಾಜರಾದಾಗ ತಲೆ ಮೇಲೆ ಗಾಂಧಿ ಟೋಪಿ, ಬಿಳಿ ಶರ್ಟು ಮತ್ತು ಧೋತಿ ತೊಟ್ಟ ಅಜ್ಜರನ್ನು ಕಂಡೆ, ಅಜ್ಜರ ಅಂದೆ, ಶಾಲಾ ಸಿಬ್ಬಂದಿ ಅಜ್ಜ ಅನ್ನಬೇಡಿ ಅವರಿಗೆ ಕಲ್ಲಪ್ಪ ಹಿರಿಯಾ ಅನ್ರಿ ಇಲ್ಲಂದ್ರ ಹಿರಿಯಾ ಅನ್ರಿ ಅಜ್ಜರ ಅಂದ್ರೆ ಓ ಅನ್ನಲ್ಲ ಅಂದ್ರು. ನಿಜ ಅಜ್ಜರ ಅಂದಾಗ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಹಿರೇರ ಅಂದಾಗ ಏನ್ ಸರ್ ಅಂದ್ರು. ಅಜ್ಜ ವಯಸ್ಸಾಗಿದ್ದರೂ ಅಜ್ಜಯೆನಿಸಿಕೊಳ್ಳಲು ಅವರ ಮನಸ್ಸು ಒಪ್ಪುತ್ತಿಲ್ಲ. ಆಗ ಗೊತ್ತಾಯ್ತು ಅವರು ಶಾಲೆಯ ಪರಿಚಾರಕರು ಎಂದು.PWD ಯಲ್ಲಿ Roadman ಆಗಿ ದಿನಗೂಲಿ ನೌಕರರಾಗಿ ಕಾರ್ಯ ಆರಂಭಿಸಿ, ಹತ್ತು ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ನಂತರ ಖಾಯಂ ನೌಕರಿ ಹೊಂದಿ ಹಿರೇಮ್ಯಾಗೇರಿ ಪ್ರೌಢಶಾಲೆಗೆ ಪರಿಚಾರಕರಾಗಿ ಹಾಜರಾಗಿದ್ದರು. ಪರಿಚಾರಕರನ್ನು ಕೈಯಾನ ಕೆಲಸ ಮಾಡೋ ಆಳು ಎಂಬ ಪ್ರವೃತ್ತಿ ಇರುತ್ತದೆ. ಆದರೆ ಈ ಶಾಲೆಯಲ್ಲಿ ಆತ್ಮೀಯತೆಯ ಭಾವ, ಎಲ್ಲರೂ ಕೂಡಿ ಊಟ ಮಾಡುವ ಪ್ರವೃತ್ತಿ ಇತ್ತು. ಅವರಿಗೆ ಹಿರಿಯರು ಎನ್ನುವ ಗೌರವ ಇತ್ತು. ಕೊನಸಾಗರದಿಂದ ಹಿರೇಮ್ಯಾಗೇರಿಗೆ ಲೂನಾ ತೊಗೊಂಡು ದಿನ ಬರೋರು. ಹೆಣ್ಣು ಮಕ್ಕಳನ್ನು ಗೌಡಶ್ಯಾನಿ ಎಂದು ಮಾತನಾಡಿಸೋರು. ನೇರ ಮಾತು, ಒಲ್ಲೆ ಅಂದ್ರೆ ಹೊರಳಿ ನೋಡದ ಗುಣ. ನನಗೆ ಸಿಬ್ಬಂದಿಯ ಆತ್ಮೀಯತೆ ಜೊತೆಗೆ ಕಲ್ಲಪ್ಪ ಹಿರಿಯನ ಆತ್ಮೀಯತೆ ಬೆಳೆದಿತ್ತು. ತೀರಿಕೊಂಡ ನನ್ನ ಹೆಣ್ಣಜ್ಜನನ್ನು ಅವರಲ್ಲಿ ಕಂಡಿದ್ದೆ. ಹಿರಿಯರಾಗಿದ್ದರೂ ಶಿಕ್ಷಕರಿಗೆ ಗೌರವದಿಂದ ಮಾತನಾಡುತ್ತಿದ್ದರು. ನನ್ನ ಜೊತೆ ಆಗಾಗ ಮನೆಯಲ್ಲಿನ ಘಟನೆಗಳನ್ನು ಹೇಳಿ ಬೇಸರ ವ್ಯಕ್ತಪಡಿಸುತ್ತಿದ್ದರು. ನನ್ನಿಂದ ಸಾಧ್ಯವಾದ ಧೈರ್ಯ ಮತ್ತು ಸಾಂತ್ವನದ ಮಾತು ಅವರಿಗೆ ಸಮಾಧಾನ ನೀಡುತ್ತಿತ್ತು. ಒಮ್ಮೆ ಶಾಲೆಯಲ್ಲಿ ಊಟ ಮಾಡುವಾಗ ಹುಣಸಿ ಚಟ್ನಿ ಯಾರ್ದಿದು ಚೆನ್ನಾಗಿದೆ ಅಂದಿದ್ದಕ್ಕೆ, ವರ್ಷಕ್ಕಾಗುವಷ್ಟು ಹುಣಸೆ ಚಟ್ನಿಯನ್ನು ಮನೆಗೆ ತಂದು ಕೊಟ್ಟಿದ್ದ. ಕಲ್ಲಪ್ಪ ಹಿರಿಯ ಶಾಲೆಗೆ ಬರಲು ಆಗದಿದ್ದಾಗ ಮಗ ಶಿವಪ್ಪನನ್ನು ಕೆಲಸಕ್ಕಾಗಿ ಶಾಲೆಗೆ ಕಳಿಸುತ್ತಿದ್ದ. ಶಿವಪ್ಪ ನಮ್ಮ ವಯಸ್ಸಿನ ದಾಡಸಿ ವ್ಯಕ್ತಿ, ಮದುವೆಯಾಗಿತ್ತು ನಾಲ್ಕು ಮಕ್ಕಳನ್ನು ಹೊಂದಿದ್ದ, ಆದರೆ ಮೈಗಳ್ಳತನ ರೂಡಿಸಿಕೊಂಡಿದ್ದ. ಮನೆಯಲ್ಲಿ ಆಗಾಗ ಬೇಸರವಾಗುತ್ತಿರುವದು ಶಿವಪ್ಪ ನಿಂದಾಗಿ, ಶಿವಪ್ಪನಿಗೆ ನೀವೇನಾದರೂ ಉದ್ಯೋಗ ಹಚ್ಚಿ ಕೊಡಬೇಕು ಅಂದಾಗ, ತೋಟ ಮಾಡಿಕೊಟ್ಟೀನಿ, ದುಡಿಯಾವಲ್ಲ ಸರ್ ಅನ್ನೋರು. ಕೊನೆಗೆ ಒಂದು ಕಿರಾಣಿ ಅಂಗಡಿ ಹಾಕಿ ಕೊಟ್ಟಾಗ ಮನೆ ಸಂತಸಗೊಂಡಿತ್ತು. ಕಲ್ಲಪ್ಪ ಹಿರಿಯ ಖುಷಿಯಾಗಿದ್ದ. 2017ರಲ್ಲಿ ಶಾಲೆಯಿಂದ ವಯೋನಿವೃತ್ತಿ ಹೊಂದಿದ ನಂತರ ಮನೆ ಕಟ್ಟಿಸಿ ಸುಖವಾದ ನಿವೃತ್ತಿ ಜೀವನ ನಡೆಸುತ್ತಿದ್ದ, ಆದರೆ ಕರೋನಾ ನಂತರದ ಸಂದರ್ಭದಲ್ಲಿ ಹೆಂಡ್ತಿ ತೀರಿಕೊಂಡಿದ್ದು ಕಲ್ಲಪ್ಪ ಹಿರಿಯನ ಕುಟುಂಬಕ್ಕೆ ದೊಡ್ಡ ಪೆಟ್ಟು ಕಲ್ಲಪ್ಪ ಮಾನಸಿಕವಾಗಿ ಕುಗ್ಗಿ ಹೋದ. ಮಗ ಮಾತು ಮೀರಲು ಶುರು ಮಾಡಿದ. ತನಗಾದ ನೋವನ್ನು ಫೋನ್ ಮೂಲಕ ಹಂಚಿಕೊಳ್ಳುತ್ತಿದ್ದ. ಅವರ ನಿವೃತ್ತಿ ವೇತನದಲ್ಲಿ ಹೆಚ್ಚುವರಿ ವೇತನ ಬಡ್ತಿ ಸರ್ಕಾರದಿಂದ ಮಂಜೂರಾಗಿದ್ದಿಲ್ಲ. ಅವರ ಮಂಜೂರಾತಿಗಾಗಿ ಒಂದು ಫೈಲ್ ಅನ್ನು ಮುಖ್ಯೋಪಾಧ್ಯಾಯರ ಸಹಕಾರದಿಂದ ತಯಾರಿಸಿಕೊಟ್ಟೆವು. ಅದು ಎರಡು ವರ್ಷದ ನಂತರ ಮಂಜೂರಾಗಿ ಬಂದಾಗ ಫೋನ್ ಮಾಡಿ ಧನ್ಯವಾದ ತಿಳಿಸಿದ್ದ ನಮ್ಮ ಕಲ್ಲಪ್ಪ ಹಿರಿಯ. ಆಗಾಗ ಕರೆ ಮಾಡಿ ನೋವು ನಲಿವುಗಳನ್ನು ಹಂಚಿಕೊಳ್ಳುತ್ತಿದ್ದ. 65ನೇ ವಯಸ್ಸಿನಲ್ಲೂ ಲೂನ ತೆಗೆದುಕೊಂಡು ಶ್ರೀಶೈಲಕ್ಕೆ ಹೋಗಿ ಬಂದ ವಿಷಯವನ್ನು ಹಂಚಿಕೊಂಡಿದ್ದ. ಹಿರಿಯ ಜೀವಕ್ಕೆ ಸಾಂತ್ವನದ ಮಾತುಗಳು ಬೇಕೆಂದು ಗೊತ್ತಾಯ್ತು. ಹೆಂಡ್ತಿ ನೋವಿಂದ ಹೊರಬರಲು ಪ್ರಯತ್ನಿಸುತ್ತಿದ್ದ, ಆಗ ಮತ್ತೊಂದು ಆಘಾತವೆಂದರೆ ದುಡಿತ ಬಿಟ್ಟು ಕುಡಿತ ಹಿಡಿದ ಶಿವಪ್ಪನ ಕಾಟ, ನಮ್ಮ ಸಿಬ್ಬಂದಿ ಶಿವಪ್ಪ ಕುಡಿತದಿಂದ ಹೊರಬರಲು ಪ್ರಯತ್ನಿಸಿದರಾದರು,ಶಿವಪ್ಪ ಕುಡಿತ ಬಿಡಲೇ ಇಲ್ಲ.. ಕುಡಿತದಿಂದಾದ ಶಿವಪ್ಪನ ಸಾವು ಕಲ್ಲಪ್ಪ ಅರಗಿಸಿಕೊಳ್ಳಲು ಆಗಲಿಲ್ಲ. ಪುತ್ರ ಶೋಕಂ ನಿರಂತರಂ. (ಪುತ್ರನ ಶೋಕವು ನಿರಂತರ) ಎಂಬುದು ಸತ್ಯ. ನನಗೆ ಆಶ್ಚರ್ಯವಾಗಿದ್ದು ಇನ್ನೊಂದು ಸಾವಿನ ಸುದ್ದಿ ಅದು ಕಲ್ಲಪ್ಪ ಹಿರಿಯರ ಸಾವು. (ದಿನಾಂಕ 13.8.2024 ರಂದು) ನನಗೆ ನೋವಿನ ಸಂಗತಿಯಾಗಿತ್ತು, ಅಂತಿಮ ನಮನ ಸಲ್ಲಿಸಿದೇವಾದರೂ ಹೆಣ್ಣಜ್ಜನನ್ನು ಕಳೆದುಕೊಂಡ ಭಾವ ನನ್ನಲ್ಲಿತ್ತು. ಅವರ ಸಾವಿಗೆ ಧೂಮಪಾನ ಕಾರಣವಾಗಿತ್ತು. ಬದುಕಿ ಬಾಳಬೇಕಾದ
ಶಿವಪ್ಪನ ಸಾವಿಗೆ ಮದ್ಯಪಾನ ಕಾರಣವಾದರೆ, ಆಲದಮರವಾದ ಕಲ್ಲಪ್ಪ ಹಿರಿಯ ಧೂಮಪಾನಕ್ಕೆ ಬಲಿಯಾಗಿದ್ದ.
ಚಟ ಚಟ್ಟ ಏರಲು,
ಚಿಂತೆ ಚಿತೆ ಏರಲು.....
ನಾವೇ ಅನುಭವಿಸಿ ಪಾಠ ಕಲಿಯುವಷ್ಟು ಸಮಯ ನಮ್ಮ ಜೀವನದಲ್ಲಿ ಇಲ್ಲ. ಇನ್ನೊಬ್ಬರ ಅನುಭವಗಳನ್ನು ನೋಡಿ ನಮ್ಮ ಜೀವನವನ್ನು ಸುಧಾರಿಸಿಕೊಳ್ಳಬೇಕಿದೆ, ಈಗಿನ ಯುವ ಪಡೆ ಸಾಕಷ್ಟು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಇದು ಒಂದು ದೊಡ್ಡ ದುರಂತ, ಯುವ ಮಿತ್ರರೆಲ್ಲರೂ ಇದರಿಂದ ಹೊರಬರಬೇಕಾಗಿದೆ ಇಲ್ಲದಿದ್ರೆ ನಾಲ್ಕು ದಿನದ ಬದುಕು ನಾಲ್ಕು ನಿಮಿಷದಲ್ಲಿ ಮುಗಿದು ಹೋಗಬಹುದು. ಕೆಟ್ಟ ಚಟಗಳನ್ನು ಬಿಡಬೇಕಾದರೆ ಒಂದೇ ಮಾರ್ಗ ಅದು ಕೇವಲ ಗಟ್ಟಿ ಮನಸ್ಸು ಮಾಡುವುದರಿಂದ. ಗಟ್ಟಿ ಮನಸ್ಸು ಮಾಡೋಣ ದುಶ್ಚಟಗಳಿಂದ ದೂರವಿರೋಣ.
Shankargouda Basapur.
AM
GHS Hiremyageri
No comments:
Post a Comment