Friday, August 2, 2024

 ಕಥೆ-474

ಸ್ವಂತ ಮಗುವನ್ನೇ ಕೊಲ್ಲಬಯಸಿದ ತಾಯಿ


ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಕಳೆದ ವರ್ಷ ಮಹಿಳಾ ಸಬಲೀಕರಣದ ಕಾರ್ಯಕ್ರಮದಲ್ಲಿ ಹೇಳಿದ ಘಟನೆ ಯಾರ ಹೃದಯವನ್ನೂ ಕರಗಿಸುವಂತಹದು.


ಸ್ಮೃತಿ ಅವರು ಆಗ ದೂರದರ್ಶನದ ಕಾರ್ಯಕ್ರಮಗಳಲ್ಲಿ ತುಂಬ ಸಕ್ರಿಯರಾಗಿದ್ದರು. ಮಹಿಳೆಯರ ಕಾರ್ಯಕ್ರಮದಲ್ಲಿ ಅವರು ನಿರೂಪಕಿಯಾಗಿ ಒಬ್ಬ ಮಹಿಳೆಯನ್ನು ಸಂದರ್ಶನ ಮಾಡಬೇಕಿತ್ತು. ಕೇಂದ್ರಕ್ಕೆ ಹೋಗಿ ಸಂದರ್ಶನ ಮಾಡಬೇಕಿದ್ದ ಮಹಿಳೆಯನ್ನು ಮಾತನಾಡಿಸಿದರು. ನಾನು ನಿಮ್ಮನ್ನು ಪರಿಚಯ ಮಾಡಬೇಕಲ್ಲ, ಅದಕ್ಕೆ ತಮ್ಮ ಬಗ್ಗೆ ಸ್ವಲ್ಪ ವಿಷಯ ತಿಳಿಸಿ ಎಂದು ಕೇಳಿದರು. ಆಗ ಆ ಮಹಿಳೆ, ನನ್ನನ್ನು ವಿಶೇಷವಾಗಿ ಪರಿಚಯಿಸುವುದು ಬೇಡ. ತನ್ನ ಸ್ವಂತ ಮಗಳನ್ನೆ ಕೊಲ್ಲಲು ಪ್ರಯತ್ನಿಸಿದ ಹೆಂಗಸು ಎಂದು ಹೇಳಿದರೆ ಸಾಕು ಎಂದಳು. ಇವರಿಗೆ ಗಾಬರಿ ಮತ್ತು ಆಶ್ಚರ್ಯ. ಏನು ನಿಮ್ಮನ್ನು ಹಾಗೆ ಪರಿಚಯಿಸುವುದೇ? ಇದು ತುಂಬ ಕ್ರೂರವಾದ ಮತ್ತು ಅಮಾನವೀಯವಾದ ಪರಿಚಯ ಎಂದರು ಸ್ಮೃತಿ.


ಆಕೆ ಹೇಳಿದಳು ನಾನು ಮಾಡಿದ್ದೇ ಅದು.ನನ್ನ ಮಗಳನ್ನೇ ಕೊಲ್ಲಲು ಪ್ರಯತ್ನಿಸಿದೆ ನಂತರ ಆಕೆ ನಡೆದ ಪ್ರಸಂಗವನ್ನು ವಿವರಿಸಿದಳು. ಆಕೆ ಮೂಲತಃ ಪಂಜಾಬಿನ ಒಂದು ಹಳ್ಳಿಗೆ ಸೇರಿದವಳು. ಆಕೆಗೆ ಒಂದಾದ ಮೇಲೊಂದರಂತೆ ಎರಡು ಹೆಣ್ಣುಮಕ್ಕಳು ಜನಿಸಿದವು. ಮೂರನೆಯ ಹೆರಿಗೆಗೆ ತವರು ಮನೆಗೆ ಹೊರಟಾಗ ಗಂಡ ಹೇಳಿದ, ಈ ಬಾರಿ ಗಂಡು ಮಗುವಾದರೆ ಮಾತ್ರ ನಮ್ಮ ಮನೆಗೆ ಮರಳಿ ಬರಬಹುದು. ಮತ್ತೆ ಹೆಣ್ಣಾದರೆ ನೀನು ಅಲ್ಲಿಯೇ ಇರಬೇಕಾಗುತ್ತದೆ. ಪಾಪ! ಆ ಮಹಿಳೆ ಏನು ಮಾಡಿಯಾಳು? ಆಕೆಯ ಕೈಯಲ್ಲಿ ಏನಿದೆ? ಈ ಬಾರಿಯೂ ಹೆಣ್ಣೇ ಆಯಿತು.


ತನ್ನ ಗಂಡ ನೀಡಿದ ಎಚ್ಚರಿಕೆಯನ್ನು ಆಕೆ ಮನೆಯವರಿಗೆ ಅಳುತ್ತ ತಿಳಿಸಿದಳು. ಆಗ ಆಕೆಯ ತಮ್ಮ ಭಾವನೊಂದಿಗೆ ಸಂಧಾನಮಾಡಿಕೊಂಡು ಬರಲು ಹೋದ. ಗಂಡ ನೇರವಾಗಿ ಹೇಳಿದ, ಮೂರನೇಯದೂ ಹೆಣ್ಣಾಗಿದೆ. ಅವಳು ಮರಳಿ ಬರುವುದೇ ಬೇಡ. ಆಕೆ ಬರಲೇಬೇಕೆಂದಿದ್ದರೆ ಒಂದು ಕೆಲಸ ಮಾಡಬೇಕು. ಆ ಹೆಣ್ಣು ಮಗು ಬದುಕಬಾರದು. ನನಗೆ ಮೂರನೇ ಮಗು ಗಂಡೇ ಆಗಬೇಕು. ಮಹಿಳೆಯ ತಮ್ಮ ಅಕ್ಕನ ಒಪ್ಪಿಗೆಯನ್ನು ಪಡೆಯದೇ ಹಾಗೆಯೇ ಆಗುತ್ತದೆ ಎಂದು ಮಾತುಕೊಟ್ಟು ಬಂದ. ಅಕ್ಕನಿಗೆ ಇದನ್ನು ಕಾರ್ಯಗತ ಮಾಡುವಂತೆ ತಿಳಿಸಿದ.


ಆಕೆ ಮೂರು ದಿನದ ಬಾಣಂತಿ. ತನ್ನ ಕರುಳ ಕುಡಿಯನ್ನು ಎದೆಗಪ್ಪಿಕೊಂಡು ಮನಸಾರೆ ಅತ್ತಳು. ಅದು ಡಿಸೆಂಬರ್ ತಿಂಗಳು. ಅಲ್ಲಿ ಕೊರೆಯುವ ಚಳಿ. ಆಕೆ ಒಂದು ತೀರ್ಮಾನಕ್ಕೆ ಬಂದಳು. ತಾನು ಮಗುವನ್ನು ಕೈಯಾರೆ ಕೊಲ್ಲುವುದು ಅಸಾಧ್ಯ. ಅದಕ್ಕೆ ಮಗುವನ್ನು ರಾತ್ರಿ ಮನೆಯ ಅಂಗಳದಲ್ಲಿ ಮೈಮೇಲೆ ಒಂದು ಚೂರೂ ಬಟ್ಟೆ ಇಲ್ಲದಂತೆ ಮಲಗಿಸಿದಳು. ರಾತ್ರಿಯೆಲ್ಲ ಆ ಚಳಿಗೆ ಮೂರು ದಿನದ ಕೂಸು ಬದುಕೀತೇ? ತಾನು ಮನೆಯೊಳಗೆ ಕುಳಿತಳು. ಮರುದಿನ ಬೆಳಿಗ್ಗೆ ಎದ್ದು ಮರಗಟ್ಟಿ ಸತ್ತು ಹೋದ ಮಗುವಿಗಾಗಿ ಹೇಗೆ ಅತ್ತು ಪೋಲೀಸರಿಗೆ ಅದು ಕೊಲೆಯಲ್ಲ ಎಂದೆನಿಸುವುದು ಎಂದು ಚಿಂತಿಸುತ್ತ ಕೊರಗಿದಳು. ಬೆಳಗಿನ ಜಾವ ನಿದ್ರೆ ಆವರಿಸಿತು.


ಎಚ್ಚರವಾದಾಗ ಬಿಸಿಲು ಬಂದಿದೆ. ಮಗುವಿನ ದೇಹ ನೋಡಲು ಅಂಗಳಕ್ಕೆ ಓಡಿದಳು ಹಸೀ ಬಾಣಂತಿ. ಮಗುವಿನ ದೇಹ ತಲೆಯಿಂದ ಕಾಲಿನ ಬೆರಳಿನವರೆಗೆ ಮರಗಟ್ಟಿ ನೀಲಿಯಾಗಿದೆ. ಆದರೆ ಜೀವವಿದೆ! ಮಗು ಉಸಿರಾಡುತ್ತಿದೆ!! ಅಳುತ್ತಲೇ ಅದನ್ನೆತ್ತಿಕೊಂಡು ಒಳಗೆ ಓಡಿದಳು, ಮೈ ಬೆಚ್ಚಗೆ ಮಾಡಿದಳು, ಹಾಲು ಕುಡಿಸಿದಳು. ಮಗು ಅಳಲಾರಂಭಿಸಿತು. ತನ್ನ ಮಗು ಅತ್ತಾಗ ತಾಯಿ ನಕ್ಕ್ಕಿದ್ದು ಇದೇ ಮೊದಲನೆ ಬಾರಿ. ಆಕೆ ತನಗೇ ಹೇಳಿಕೊಂಡಳು. ನನ್ನ ಮೂರು ದಿನದ ಕಂದ ಕೊರೆಯುವ ಚಳಿಯಲ್ಲಿ ಸಾವಿನೊಡನೆ ಹೋರಾಡಿ ಬದುಕುವ ಛಲ ತೋರಿಸಿದರೆ ತಾನು ತನ್ನ ಗಂಡನಿಗೆ, ಸಮಾಜಕ್ಕೆ ಹೆದರಿ ಏಕೆ ಮಗುವಿನ ಬಲಿ ಕೊಡಲಿ? ಛಲದಿಂದ ತನ್ನ ಹಕ್ಕಿಗೆ, ಹೆಣ್ಣು ಮಗುವಿನ ಬದುಕಿನ ಹಕ್ಕಿಗೆ ಹೋರಾಡಿ ಮುಂದೆ ಮಹಿಳಾ ಸಬಲೀಕರಣಕ್ಕೆ ಬಹುದೊಡ್ಡ ಧ್ವನಿಯಾದಳು.


ಇಪ್ಪತ್ತೊಂದನೇ ಶತಮಾನದಲ್ಲಿ ನಮಗೆಂಥ ಮೂರ್ಖತನ, ಅವಿವೇಕ ಕಾಡುತ್ತಿದೆ? ಹೆಣ್ಣಿಗಿಂತ ಗಂಡು ಮೇಲು ಎನ್ನುವ, ಗಂಡು ಮಗನಿಂದ ಮಾತ್ರ ವಂಶ ಬೆಳೆಯುತ್ತದೆ ಎಂಬ ಭ್ರಮೆ ನಮ್ಮನ್ನು ಇನ್ನೆಷ್ಟು ದಿನ ನರಳಿಸಬೇಕು? ಮಹಿಳೆಯರಿಗೆ ಗೌರವ ತೋರದ ಸ್ಥಳದಲ್ಲಿ ದೇವತೆಗಳೂ ಇರುವುದಿಲ್ಲ ಎಂದು ಬಡಬಡನೇ ಶ್ಲೋಕ ಹೇಳುತ್ತೇವೆ, ನಮ್ಮ ಜನ್ಮಭೂಮಿಯನ್ನು ತಾಯಿ ಎನ್ನುತ್ತೇವೆ, ತಾಯಿಯೇ ಮೊದಲ ಗುರು ಎಂದು ನುಡಿಯುತ್ತೇವೆ. ಆದರೆ ತಾಯಿಗೆ, ತಾಯಿಯಾಗುವವಳಿಗೆ, ಅಪಮಾನ ಮಾಡುತ್ತೇವೆ, ಹೆಣ್ಣು ಜೀವ ಭೂಮಿಗಿಳಿಯದಂತೆ ನೋಡಿಕೊಳ್ಳುತ್ತೇವೆ. ವಿವೇಕಾನಂದರ ಮಾತು ನಮ್ಮನ್ನು ಕೊರೆಯಬೇಕು. ಯಾವ ದೇಶದಲ್ಲಿ ಮಹಿಳೆಗೆ ಗೌರವವಿಲ್ಲವೋ, ಎಲ್ಲಿ ಮಹಿಳೆ ಕಣ್ಣೀರು ಹಾಕುತ್ತಾಳೋ ಆ ದೇಶ ಎಂದಿಗೂ ಶ್ರೇಷ್ಠದೇಶವಾಗಲಾರದು. ಕೃಪೆ : ನೆಟ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು