Friday, August 30, 2024

 ಕಥೆ-503

ಪ್ರಯತ್ನ 

ಪುಟ್ಟನಿಗೆ ಬೆಕ್ಕು ನಾಯಿಗಳೆಂದರೆ ತುಂಬಾ ಇಷ್ಟ. ಪುಟ್ಟನ ಮನೆಯಲ್ಲಿ ಇಲಿಗಳ ಕಾಟ ತುಂಬಾ ಜೋರಾಗಿಬಿಟ್ಟಿತ್ತು. ಮನೆಯಲ್ಲಿದ್ದ ದವಸಧಾನ್ಯಗಳನ್ನು ತಿನ್ನುವುದು, ಬಟ್ಟೆಗಳನ್ನೆಲ್ಲ ಕಡಿಯುವುದು, ಅಡಿಗೆ ಮನೆಯಲ್ಲಿದ್ದ ತೆಂಗಿನ ಕಾಯಿಗಳನ್ನು ತಿನ್ನುವುದು ಇವೆಲ್ಲ ಹೆಚ್ಚಾಗಿಬಿಟ್ಟಿದ್ದವು. ಇಲಿಯ ಕಾಟ ತಪ್ಪಿಸಲು ಸರಿಯಾದ ಮಾರ್ಗವೆಂದು ಬೆಕ್ಕಿನ ಮರಿಯನ್ನು ತಂದು ಸಾಕಿದ.

ಪುಟ್ಟನಿಗಂತೂ ಖುಷಿಯೋ ಖುಷಿ. ದಿನಾಲೂ ಮನೆಯಲ್ಲಿ ಇದ್ದ ಸಮಯದಲ್ಲೆಲ್ಲ ಬೆಕ್ಕಿನ ಜೊತೆಯೇ ಆಟ. ಓದುವಾಗಲೂ, ಊಟ ತಿಂಡಿಯ ವೇಳೆಯಲ್ಲೂ ಬೆಕ್ಕಿನ ಮರಿ ಅವನ ಹತ್ತಿರವೇ ಇರುತ್ತಿತ್ತು. ರಾತ್ರಿ ಮಲಗುವಾಗಲಂತೂ ತನ್ನ ಹಾಸಿಗೆಯಲ್ಲೇ ಮಲಗಿಸಿಕೊಂಡು ನಿದ್ದೆ ಮಾಡಿಸುತ್ತಿದ್ದ. ಪುಟ್ಟನಿಗೋ ಆ ಬೆಕ್ಕಿನ ಮರಿಯನ್ನು ಚೆನ್ನಾಗಿ ಸಾಕಬೇಕು. ಅದು ದಷ್ಟಪುಷ್ಟವಾಗಿ ಬೆಳೆಯಬೇಕು.. ಆಮೇಲೆ ತನ್ನ ಗೆಳೆಯರಿಗೆಲ್ಲ ಅದನ್ನು ತೋರಿಸಬೇಕು, ಪೋಟೋ ತೆಗೆದು ಫೇಸ್ಬುಕ್‌ನಲ್ಲಿ ಹಾಕಬೇಕು ಎಂದು ಏನೆಲ್ಲಾ ಆಸೆಗಳು. ಪ್ರತಿದಿನವೂ ಅವನೇ ಹಾಲು- ಅನ್ನ ಹಾಕುವುದು. ಅದಕ್ಕೆಂದೇ ಸುಂದರವಾದ ಪ್ಲೇಟನ್ನು ಪೇಟೆಯಿಂದ ತಂದಿದ್ದ. ಬೆಕ್ಕಿನ ಮರಿಗೆಂದೇ ಸ್ಪೆಷಲ್ ಬಿಸ್ಕಿಟ್‌ಗಳನ್ನೂ ತಂದಿಟ್ಟಿದ್ದ. ಈ ಬೆಕ್ಕೋ ತಾಸು ತಾಸಿಗೆ ಮಿಯಾಂ.. ಮಿಯಾಂ.. ಎಂದು ಕರೆದು ಹಾಲು ಹಾಕಿಸಿಕೊಳ್ಳುತ್ತಿತ್ತು. ಪುಟ್ಟ ತಾನಿಲ್ಲದಿದ್ದರೆ ಅಮ್ಮನ ಹತ್ತಿರ ಹೇಳಿ ಹೋಗುತ್ತಿದ್ದ. ಪುಟ್ಟ ಬಂದ ಕೂಡಲೇ ಬಿಸ್ಕಿಟ್ ಡಬ್ಬದ ಬಳಿ ಹೋಗಿ ಜಂಪ್ ಮಾಡಿ ತೋರಿಸಿ ಹಾಕು ಎನ್ನುತ್ತಿತ್ತು. ಪುಟ್ಟನಿಗೆ ಬೆಕ್ಕಿನ ಈ ರೀತಿ ತುಂಬಾ ಮಜಾ ಕೊಡುತ್ತಿತ್ತು. ಆತನ ಬಳಿ ಮತ್ತೆ ಮತ್ತೆ ಅದನ್ನೇ ಕೇಳಿ ತಿನ್ನುತ್ತಿತ್ತು. ಇದು ಪ್ರತಿದಿನವೂ ಹಾಲು, ಬಿಸ್ಕಿಟ್ಟು ಎಂದು ಮೇಲಿಂದ ಮೇಲೆ ತಿನ್ನುವುದು ಮಲಗುವುದು ಮಾಡುತ್ತಿತ್ತು. ಹೀಗೇ ತಿಂದೂ ತಿಂದು ದಪ್ಪ ದಪ್ಪವಾಗಿ ಸುಂದರವಾಗಿ ಬೆಳೆದಿತ್ತು. ಆದರೆ ಅದು ಬೆಳೆದು ದೊಡ್ಡದಾದರೂ ಒಂದು ದಿನವೂ ಇಲಿ ಹಿಡಿಯುವ ಪ್ರಯತ್ನವನ್ನು ಮಾಡಲೇ ಇಲ್ಲ. ಬಂದವರೆಲ್ಲ ಎಷ್ಟು ಚೆನ್ನಾಗಿದೆ ನಿಮ್ಮ ಮನೆಯ ಬೆಕ್ಕು.. ಎಂದು ಮುದ್ದು ಮಾಡಿ ಹೊಗಳಿ ಹೋಗುತ್ತಿದ್ದರು. ಆದರೆ ಪುಟ್ಟನ ಅಮ್ಮ ಮಾತ್ರ 'ಅದೇನು ಬೆಕ್ಕು ಸಾಕಿದ್ದು ಚೆಂದಕ್ಕಾ.. ಇಲಿಗಳ ಕಾಟ ಹಾಗೇ ಇದೆ. ಇನ್ನೊಂದು ದಿನ ಆ ಇಲಿಗಳೆಲ್ಲಾ ಸೇರಿ ನಮ್ಮನ್ನೂ ಒಯ್ಯುತಾವು' ಎಂದು ಹುಸಿ ಕೋಪ ತೋರಿಸಿ ಬೈಯ್ಯುತ್ತಿದ್ದರು. ಅಲ್ಲದೇ ಈ ಬೆಕ್ಕಿನ ಎದುರೇ ಇಲಿಗಳು ಹರಿದಾಡುತ್ತಿದ್ದರೂ ಬೆಕ್ಕು ಇಲಿಗಳಿಗೆ ಹೆದರಿ ಓಡುತ್ತಿತ್ತು. ಬೆಕ್ಕು ಇಲಿಗಳನ್ನು ಹಿಡಿಯುವುದು ಹಿಂದಿನಿಂದಲೂ ರೂಢಿಯಲ್ಲಿ ಬಂದಿದ್ದು. ಅದರ ಮೂಲ ಸ್ವಭಾವವೇ ಇಲಿಗಳ ಬೇಟೆಯಾಡಿ ತಿನ್ನುವುದು. ಆದರೆ ಈ ಬೆಕ್ಕು ಒಂದು ದಿನವೂ ಇಲಿಯನ್ನು ಬೇಟೆಯಾಡುವ ಪ್ರಯತ್ನವನ್ನೂ ಮಾಡುವುದಿಲ್ಲವಲ್ಲ.. ಎಂದು ಅನುಮಾನ ಮಾಡಿದರು.


ಒಂದು ದಿನ ಪುಟ್ಟನ ಅಜ್ಜ ಅವರ ಮನೆಗೆ ಬಂದಿದ್ದರು. ಅವರು ಪುಟ್ಟನ ಬೆಕ್ಕು ಬೇಕಾದಷ್ಟು ತಿಂದುಂಡು ಆಮೇಲೆ ಸೋಫಾದ ಮೇಲೆ ಮಲಗುವುದನ್ನು ನೋಡಿದರು. ಎಲ್ಲವೂ ಕುಂತಲ್ಲೇ ಸಿಕ್ಕಿದರೆ ನಾವು ಯಾವುದಕ್ಕೂ ಪ್ರಯತ್ನವನ್ನೇ ಮಾಡುವುದಿಲ್ಲ. ಹಾಗೇ ಈ ಬೆಕ್ಕಿನ ಮರಿಯೂ ಕೂಡ ಎಂದೆನಿಸಿ ಅವರು ಪುಟ್ಟನನ್ನು ಕರೆದು 'ಪುಟ್ಟಾ, ನಿನ್ನ ಬೆಕ್ಕಿನ ಮರಿಗೆ ಹೀಗೇ ಆಗಾಗ ಆಹಾರ ಕೊಡುವುದರಿಂದ ಆಲಸ್ಯ ಬೆಳೆದು ಬೇಟೆಯಾಡುವ ಪ್ರಯತ್ನವನ್ನೇ ಮಾಡಲಾರದು. ಅದಕ್ಕೇ ಬೆಕ್ಕಿನ ಮರಿಗೆ ದಿನಾಲು ಮೂರು ವೇಳೆ ಮಾತ್ರ ಆಹಾರ ಕೊಡುವ ರೂಢಿ ಮಾಡಿಸು. ಆಗ ಅದು ಇಲಿಗಳನ್ನು ಬೇಟೆಯಾಡುವುದನ್ನು ಕಲಿಯುತ್ತದೆ' ಎಂದರು. ಅಂದಿನಿಂದ ಪುಟ್ಟು ಎಲ್ಲಾ ವೇಳೆಯಲ್ಲಿ ತಿಂಡಿ ಹಾಕುವುದನ್ನು ಬಿಟ್ಟನು. ಮಾರನೇ ದಿನವೇ ಪುಟ್ಟನ ಬೆಕ್ಕು ಇಲಿ ಹಿಡಿಯುವುದನ್ನು ಕಲಿಯುವುದಕ್ಕೆ ಶುರು ಮಾಡಿತು. ಮನುಷ್ಯರಿಗಾಗಲಿ ಪ್ರಾಣಿಗಳಿಗಾಗಲಿ ಕುಳಿತಲ್ಲೇ ಎಲ್ಲಾ ತಂದು ಕೊಟ್ಟರೆ ಅವು ದುಡಿಯುವ ಪ್ರಯತ್ನವನ್ನು ಮಾಡುವುದಿಲ್ಲ. ಆಲಸ್ಯ ರೂಢಿಸಿಕೊಳ್ಳುತ್ತವೆ. ಈಗಿನ ತಂದೆ ತಾಯಿಂದಿರು ಮಕ್ಕಳಿಗೆ ಕೇಳಿದ ತಕ್ಷಣ ಎಲ್ಲಾ ಕೊಡಿಸುತ್ತಾರೆ. ಹೀಗಾಗಿ ಆ ವಸ್ತುಗಳ ಬೆಲೆ ಆಗಲಿ ಅದರ ಇಂದಿನ ಶ್ರಮವಾಗಲಿ ಗೊತ್ತಾಗುವುದಿಲ್ಲ. ಅನಿವಾರ್ಯ ವಸ್ತುಗಳನ್ನು ಕೊಡಿಸೋಣ ಅನವಶ್ಯಕ ವಸ್ತುಗಳನ್ನಲ್ಲ. ಮಕ್ಕಳಿಗೆ/ವಿದ್ಯಾರ್ಥಿಗಳಿಗೆ ಒಂದು ನಿರ್ದಿಷ್ಟ ಗುರಿ ಕೊಟ್ಟು ಅದರಲ್ಲಿ ಯಶಸ್ಸು ಪಡೆದಾಗ ಗಿಫ್ಟ್ ರೂಪದಲ್ಲಿ ಅವಶ್ಯ ವಸ್ತುವನ್ನು ಕೊಡಿಸುವದು ಒಳ್ಳೆಯ ರೂಡಿ. ಕೊರತೆಗಳಿದ್ದಾಗ ಮನುಷ್ಯ ದುಡಿಯುವ ಕೆಲಸ ಮಾಡುತ್ತಾನೆ. ಈಗಿನ ವಿದ್ಯಾರ್ಥಿಗಳು ಸಹ ನನಗೆ ಅದು ಕೊರತೆ ಇದೆ, ಇದು ಕೊರತೆ ಇದೆ, ಎನ್ನುವುದರ ಬದಲಾಗಿ, ಇದ್ದಂತಹ ಸೌಲಭ್ಯಗಳನ್ನೇ ಬಳಸಿ ಮೇಲೆ ಬರುವ ಪ್ರಯತ್ನ ಮಾಡಬೇಕು.

👍

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು