Friday, September 13, 2024

 ಕಥೆ-517

ಅರಸನ ಆಯ್ಕೆ


 ಒಬ್ಬ ರಾಜ ತುಂಬಾ ಚತುರ, ಪ್ರಾಮಾಣಿಕ ಹಾಗೂ ಧೈರ್ಯಶಾಲಿಯಾಗಿದ್ದನು. ಅವನ ಆಡಳಿತ ಕಾಲದಲ್ಲಿ ಪ್ರಜೆಗಳೆಲ್ಲರೂ ಕ್ಷೇಮದಿಂದಿದ್ದರು. ಹಾಗಾಗಿ ಆಸ್ಥಾನಿಕರು ಮತ್ತು ಪ್ರಜೆಗಳೆಲ್ಲರೂ ಅವನನ್ನು ತುಂಬಾ ಪ್ರೀತಿಸುತ್ತಿದ್ದರು ಹಾಗೂ ಗೌರವಿಸುತ್ತಿದ್ದರು. ಒಮ್ಮೆ ರಾಜನಿಗೆ ಒಂದು ಆಲೋಚನೆ ಉಂಟಾಯಿತು. ಇದುವರೆಗೂ ನನ್ನ ಪ್ರಜೆಗಳು ನನ್ನ ಆಡಳಿತದಿಂದ ಸುಖವಾಗಿದ್ದಾರೆ. ಈಗ ನನಗೆ ವೃದ್ಧಾಪ್ಯ ಸಮೀಪಿಸುತ್ತಿದೆ. ನನ್ನ ನಂತರದಲ್ಲಿ ಈ ಸಿಂಹಾಸನವನ್ನು ಏರುವವನು ಪ್ರಾಮಾಣಿಕವಾದ ಆಡಳಿತ ನಡೆಸಿ, ಪ್ರಜೆಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅದಕ್ಕಾಗಿ ಕೇವಲ ತನ್ನವರಿಗಲ್ಲದೆ ತನ್ನ ಪ್ರಾಂತ್ಯದ ಎಲ್ಲಾ ಯುವಕರಿಗೂ ಒಂದು ಅವಕಾಶ ಕೊಡಬೇಕೆಂದು, ಅದಕ್ಕಾಗಿ ಒಂದು ಸಣ್ಣ ಪರೀಕ್ಷೆ ಮಾಡಬೇಕೆಂದು ಯೋಚಿಸಿ ಈ ವಿಚಾರವನ್ನು ತನ್ನ ಆಪ್ತಸಲಹೆಗಾರನಿಗೆ ತಿಳಿಸಿದನು.


ಮಂತ್ರಿಯು ಅವನ ಯೋಚನೆಯನ್ನು ಪ್ರೋತ್ಸಾಹಿಸಿ ಒಂದು ನಿಗದಿತ ಪ್ರಾಂತ್ಯದ ಎಲ್ಲಾ ತರುಣರಿಗೂ ರಾಜನ ಆಸ್ಥಾನಕ್ಕೆ ಬರಲು ಡಂಗೂರ ಸಾರಿಸಿದನು. ಎಲ್ಲಾ ತರುಣರಿಗೂ ತಮಗೆ ಆಸ್ಥಾನದಿಂದ ಬಂದ ಕರೆಗೆ ಆಶ್ಚರ್ಯ ಹಾಗೂ ಕುತೂಹಲ ಉಂಟಾಯಿತು. ಅಂದು ಎಲ್ಲರೂ ಶಿಸ್ತಿನಿಂದ ರಾಜನ ಮುಂದೆ ಹಾಜರಿದ್ದರು. ರಾಜ ಎಲ್ಲರ ಕೈಯಲ್ಲೂ ಒಂದೊಂದು ಬೀಜವನ್ನಿಟ್ಟು ಈ ಬೀಜವನ್ನು ಚೆನ್ನಾಗಿ ಪೋಷಿಸಿ ಆರು ತಿಂಗಳ ನಂತರ ತಂದು ತೋರಿಸುವಂತೆ ಹೇಳಿದನು. ತರುಣರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಕುಂಡದಲ್ಲಿ ಫಲವತ್ತಾದ ಮಣ್ಣು ಮತ್ತು ಗೊಬ್ಬರ ಹಾಕಿ ಪೋಷಿಸತೊಡಗಿದರು. ಅದು ಸುಂದರವಾದ ಹೂವಿನ ಗಿಡವಾಗಿ ಬೆಳೆಯಿತು. ಒಂದೊಂದು ಕುಂಡದಲ್ಲಿಯೂ ಬೆಳೆದ ಹೂಗಳು ಅತ್ಯಾಕರ್ಷಕವಾಗಿದ್ದವು. ಎಲ್ಲರಿಗೂ ತಮ್ಮ ಪರಿಶ್ರಮದ ಮೇಲೆ ಅಪಾರ ನಂಬಿಕೆ ಇತ್ತು.


ಆರು ತಿಂಗಳ ನಂತರ ರಾಜನ ಆಜ್ಞೆಯ ಮೇರೆಗೆ ಎಲ್ಲರೂ ತಾವು ಬೆಳೆದ ಹೂ ಕುಂಡಗಳನ್ನು ಅತಿ ಹೆಮ್ಮೆಯಿಂದ ರಾಜನ ಆಸ್ಥಾನಕ್ಕೆ ತಂದಿರಿಸಿದರು, ಕ್ರಮಬದ್ಧವಾಗಿ ಜೋಡಿಸಿದ ಆ ಕುಂಡಗಳು ಆಸ್ಥಾನವನ್ನು ಒಂದು ಸುಂದರ ಉದ್ಯಾನವನ್ನಾಗಿ ಮಾಡಿತ್ತು. ಆಸ್ಥಾನದಲ್ಲಿರುವವರಿಗೆ ತಾವು ಸ್ವರ್ಗದಲ್ಲಿರುವಂತೆ ಭಾಸವಾಯಿತು. ರಾಜನು ತುಂಬಾ ಸಂತೋಷಗೊಂಡು ಒಬ್ಬೊಬ್ಬರನ್ನೇ ಕರೆದು ಅವರು ಬೆಳೆಸಿದ ರೀತಿಯನ್ನು ಸಮಾಧಾನದಿಂದ ಕೇಳಿ, ಪರಿಶ್ರಮವನ್ನು ಶ್ಲಾಘಿಸಿ ಬೆನ್ನು ತಟ್ಟಿ ಹುರಿದುಂಬಿಸಿದನು. ಆದರೂ ಅವರಾರಿಗೂ ರಾಜನ ಉದ್ದೇಶ ಅರ್ಥವಾಗಲಿಲ್ಲ.


ಕೊನೆಯಲ್ಲೊಬ್ಬ ಮಣ್ಣು ತುಂಬಿದ ಕುಂಡವನ್ನು ತನ್ನ ಮುಂದೆ ಇಟ್ಟುಕೊಂಡು ನಾಚಿಕೆಯಿಂದ ತಲೆತಗ್ಗಿಸಿ ನಿಂತಿದ್ದನು. ಅವನೊಬ್ಬ ಬಡಹುಡುಗ. ಹೆಸರು ಲಾವ್. ರಾಜನು ಅವನನ್ನು ತನ್ನ ಬಳಿಗೆ ಕರೆದಾಗ ಬಡಪಾಯಿ ಲಾವ್ ಹೆದರಿಕೊಂಡು ರಾಜನ ಮುಂದೆ ಬಂದು ತಲೆಬಾಗಿ ನಿಂತನು. ಉಳಿದವರು ಗಿಡವಿಲ್ಲದ ಕುಂಡವನ್ನು ನೋಡಿ ಅಪಹಾಸ್ಯ ಮಾಡಿ ನಕ್ಕರು. ರಾಜನು ಆತನನ್ನು ಕರೆದು ಕುಂಡದ ಈ ಸ್ಥಿತಿಗೆ ಕಾರಣ ಕೇಳಿದಾಗ, ಆ ತರುಣ ಹೇಳಿದ, "ಕ್ಷಮಿಸಿ ಮಹಾರಾಜ ನಾನು ಎಲ್ಲರಂತೆ ಫಲವತ್ತಾದ ಮಣ್ಣು ಮತ್ತು ಗೊಬ್ಬರವನ್ನು ಹಾಕಿ ಕಾಲ ಕಾಲಕ್ಕೆ ನೀರನ್ನು ಹಾಕಿದ್ದೇನೆ. ಆದರೂ ತಾವು ಕೊಟ್ಟಿ ಬೀಜ ಮೊಳಕೆಯೊಡೆಯಲಿಲ್ಲ. ಹಾಗಾಗಿ ಬರಿದಾದ ಕುಂಡವನ್ನು ತಂದಿದ್ದೇನೆ. ಇದಕ್ಕಾಗಿ ನೀವು ವಿಧಿಸುವ ಶಿಕ್ಷೆಗೆ ನಾನು ಸಿದ್ಧನಿದ್ದೇನೆ" ಎಂದು ವಿನಮ್ರನಾಗಿ ಕೈಕಟ್ಟಿ ನಿಂತ. ತಕ್ಷಣ ರಾಜ ಸಿಂಹಾಸನದಿಂದ ಎದ್ದು ಬಂದು ಆನಂದದಿಂದ ಲಾವ್ ನನ್ನು ಬಾಚಿ ಅಲಂಗಿಸಿಕೊಂಡನು. ಅಲ್ಲಿದ್ದವರಿಗೆ ರಾಜನ ವರ್ತನೆಯಿಂದ ಆಶ್ಚರ್ಯವಾಯಿತು.


ನಂತರ ರಾಜ ಸಭೆಯನ್ನು ಉದ್ದೇಶಿಸಿ ಹೇಳಿದ, "ಸಭಿಕರೇ, ನನ್ನ ನಂತರ ರಾಜ್ಯದ ಆಡಳಿತವನ್ನು ನೋಡಿಕೊಳ್ಳಲು ಒಬ್ಬ ಸಮರ್ಥ ಯುವಕ ಬೇಕೆಂದು ಒಂದು ಪರೀಕ್ಷೆ ಮಾಡಿದೆ. ಅದರಲ್ಲಿ ಲಾವ್ ಉತ್ತೀರ್ಣನಾಗಿದ್ದಾನೆ. ನಾನು ಕೊಟ್ಟ ಬೀಜಗಳು ಬೆಂದ ಕಾಳುಗಳು. ಬೆಂದ ಕಾಳುಗಳು ಎಂದಿಗೂ ಬೆಳೆಯುವುದಿಲ್ಲ. ಎಲ್ಲರೂ ಕಾಳನ್ನು ಬದಲಿಸಿ ಸುಂದರವಾಗ ಹೂಗಿಡಗಳನ್ನು ಬೆಳೆಸಿ ನನ್ನ ಮೆಚ್ಚುಗೆ ಗಳಿಸಲು ಯತ್ನಿಸಿದಿರಿ. ಆದರೆ ಲಾವ್ ತನ್ನ ಪ್ರಾಮಾಣಿಕತೆ ಹಾಗೂ ಧೈರ್ಯದಿಂದ ನಿಜ ಸಂಗತಿಯನ್ನು ತಿಳಿಸಿದ್ದಾನೆ. ಉತ್ತಮ ರಾಜನಾಗುವ ಎಲ್ಲಾ ಅರ್ಹತೆ ಇವನಲ್ಲಿರುವ ಕಾರಣ ಇಂದಿನಿಂದ ಇವನೇ ಈ ರಾಜ್ಯದ ಉತ್ತರಾಧಿಕಾರಿಯಾಗುತ್ತಾನೆ" ಎಂದು ಘೋಸಿದ. ಮಂತ್ರಿಗಳು ಹರ್ಷದಿಂದ ರಾಜನಿಗೆ ಜೈಕಾರ ಹಾಕಿದರು. ಉಳಿದ ತರುಣರು ನಾಚಿಕೆಯಿಂದ ತಲೆತಗ್ಗಿಸಿತು.

ಕೃಪೆ :ಕಿಶೋರ್.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು