Wednesday, October 9, 2024

 ಕಥೆ-543

ಮೊಟ್ಟೆ ಮೊದಲಾ ಕೋಳಿ ಮೊದಲಾ?

ಒಂದೂರಿನಲ್ಲಿ ಅಗಧ ಎಂಬ ಮುಂಗೋಪಿ ಮಹಾರಾಜನಿದ್ದ. ಒಂದು ದಿನ ಭೋಜನ ತಯಾರಿಸುವ ಮನೆಯಲ್ಲಿ ಮಾಧ ಎಂಬ ಒಬ್ಬ ಅಡುಗೆ ಭಟ್ಟ ಎರಡು ಮೊಟ್ಟೆಗಳನ್ನು ಕದ್ದ. ಅದ್ಹೇಗೊ ಭೋಜನ ಕೂಟದ ಮೇಲ್ವಿಚಾರಕನಿಗೆ ತಿಳಿಯಿತು. ನಂತರ ಅವನನ್ನು ಸಭೆಯಲ್ಲಿ ಮಹಾರಾಜನ ಮುಂದೆ ವಿಚಾರಣೆಗೆ ಹಾಜರು ಪಡಿಸಿದರು.


ಮಹಾರಾಜನು ಅವನನ್ನು, ನೀನು ಮೊಟ್ಟೆ ಕದ್ದದ್ದು ನಿಜವಾ ಎಂದು ಪ್ರಶ್ನಿಸಿದನು. ಮಾಧ ತಾನು ಕದ್ದದ್ದು ನಿಜ ಎಂದು ಒಪ್ಪಿಕೊಂಡ. ರಾಜ ಅವನನ್ನು ಪರೀಕ್ಷಿಸಿ ಒಂದು ಸವಾಲನ್ನು ಕದ್ದ ಭಟನಿಗೆ ಹಾಕಿದ. 'ಮೊಟ್ಟೆ ಮೊದಲಾ ಕೋಳಿ ಮೊದಲಾ ಎಂಬುದನ್ನು ಹೇಳಬೇಕು, ಇಲ್ಲದಿದ್ದರೆ ನಿನಗೆ ಶಿರಚ್ಛೇದನದ ಶಿಕ್ಷೆ ನೀಡಲಾಗುತ್ತದೆ' ಎಂದನು ರಾಜ.


ಮಾಧನಿಗೆ ಏನು ಮಾಡುವುದೆಂದು ತಿಳಿಯಲಿಲ್ಲ. ತಲೆ ತಗ್ಗಿಸಿದ. ಆ ಆಸ್ಥಾನದಲ್ಲಿ ಒಬ್ಬ ಚತುರ ಮಂತ್ರಿ ಇದ್ದ. ಅವನ ಹೆಸರು ಮಾಣಿಕ್ಯ ಎಂದು. ಅವನು ಎದ್ದು ಎರಡು ಕೈಗಳನ್ನು ಜೋಡಿಸಿ, 'ಮಹಾಪ್ರಭು, ಅವನಿಗೆ ಸ್ವಲ್ಪ ಕಾಲಾವಕಾಶ ನೀಡಿದರೆ ಒಳ್ಳೆಯದು' ಎಂದು ಗೋಗರೆದ. ಅದಕ್ಕೆ ಮಹಾರಾಜ, 'ಆಗಲಿ, ಅವನು ಒಂದು ವೇಳೆ ಉತ್ತರಿಸದಿದ್ದರೆ ನಿನಗೆ ಆ ಶಿಕ್ಷೆಯನ್ನು ವರ್ಗಾಯಿಸುತ್ತೇವೆ. ಇದಕ್ಕೆ ನಿನ್ನ ಸಮ್ಮತಿ ಇದೆಯಾ' ಎಂದು ಕೇಳಿದ. ಮಾಣಿಕ್ಯ ಮಂತ್ರಿ ಯೋಚಿಸದೆ ಆಗಲಿ ಮಹಾಸ್ವಾಮಿ ಎಂದು ಅವರ ಸವಾಲನ್ನು ಸ್ವೀಕರಿಸಿದ.


ಮರುದಿನ ಅದೇ ಸಮಯಕ್ಕೆ ಮಾಣಿಕ್ಯನನ್ನು ಬಿಟ್ಟು ಎಲ್ಲರೂ ಸಭೆಯಲ್ಲಿ ಹಾಜರಿದ್ದರು. ಹತ್ತು ನಿಮಿಷವಾಯಿತು. ಅರ್ಧ ಗಂಟೆ ಕಳೆಯಿತು, ಮಂತ್ರಿಯ ಸುಳಿವಿಲ್ಲ. ಅಲ್ಲಿ ನೆರೆದಿದ್ದ ಜನರೆಲ್ಲರೂ ಅವನಿಗೆ ಉತ್ತರ ದೊರೆತಿಲ್ಲ, ಪ್ರಾಣ ಭಯದಿಂದ ಸಭೆಗೆ ಹಾಜರಾಗಿಲ್ಲ ಎಂದು ತಿಳಿದುಕೊಂಡು ಕುಚೇಷ್ಟೆ ಮಾಡಿದರು. ರಾಜನು ಹಾಗೆ ಭಾವಿಸಿ ಭಟನಿಗೆ ಶಿಕ್ಷೆ ವಿಧಿಸಿ ಸಭೆಯನ್ನು ವಿಸರ್ಜಿಸಲು ತೀರ್ಮಾನಿಸಿದ.


ಅಷ್ಟರಲ್ಲಿ ಮಂತ್ರಿ ಸಭೆಗೆ ಬಂದ. ಅವನ ಜೊತೆ ಒಬ್ಬ ಅಪರಿಚಿತ ವ್ಯಕ್ತಿಯಿದ್ದ. ಮಹಾರಾಜ ಸಿಟ್ಟಾಗಿ 'ಇದೇನು ನೀನು ಸಭೆಗೆ ನೀಡುವ ಮರ್ಯಾದೆ? ಇಷ್ಟು ತಡವಾಗಿ ಬಂದದಕ್ಕೆ ನಿನಗೆ ಶಿಕ್ಷೆ ವಿಧಿಸಲಾಗುತ್ತದೆ' ಎಂದ. ದಯವಿಟ್ಟು ನಾನು ಹೇಳುವುದನ್ನು ಸಾವಧಾನವಾಗಿ ಕೇಳಿ ಮಹಾಪ್ರಭು, 'ನಾನು ಸರಿಯಾದ ಸಮಯಕ್ಕೆ ಬರುತ್ತಿದ್ದೆ. ದಾರಿಯಲ್ಲಿ ನಡೆದು ಬರುತ್ತಿರಬೇಕಾದರೆ ಈ ವ್ಯಕ್ತಿ(ಅಪರಿಚಿತನೆಡೆಗೆ ಕೈ ತೋರಿಸಿ) ಎದುರಾಗಿ ಒಂದು ಪ್ರಶ್ನೆಯನ್ನು ಕೇಳಿದ. ಎಷ್ಟು ಹೊತ್ತು ಕುಳಿತು ಯೋಚಿಸಿದರೂ ನನಗೆ ಉತ್ತರ ದೊರೆಯಲಿಲ್ಲ. ನಮ್ಮ ಮಹಾರಾಜರು ಬುದ್ಧಿವಂತರು ಉತ್ತರಿಸುತ್ತಾರೆ ಎಂದು ಕರೆ ತಂದೆ. ಅದಕ್ಕೆ ತಡವಾಯಿತು ಕ್ಷಮಿಸಿ' ಎಂದ ಮಂತ್ರಿ.


ರಾಜ ಆಗಲಿ ಅದೇನು ಪ್ರಶ್ನೆ ಕೇಳು ಎನ್ನುವಂತೆ ಕೈ ಆಡಿಸಿದ. 'ರಾಜರೇ, ಸೂರ್ಯ ಉದಯಿಸಿದಾಗ ಹಗಲು, ನಿರ್ಗಮಿಸಿದಾಗ ರಾತ್ರಿ ಎನ್ನುತ್ತೇವೆ. ಹಾಗಾದರೆ ಹಗಲು ಮೊದಲಾ? ಇರುಳು ಮೊದಲಾ?' ಎಂದ. ನಂತರ ರಾಜ ಯೋಚಿಸಿದ. ನಿಧಾನವಾಗಿ ವಿಷಯ ಅರ್ಥವಾದ ಮೇಲೆ ಕೋಪ ಕಡಿಮೆಯಾಗಿ 'ಭಲೇ ಮಂತ್ರಿ, ಇದು ನೀನು ಹೂಡಿರುವ ಉಪಾಯವೇ ಸರಿ. ಈಗ ಹೇಳು ನಾನೇನು ಮಾಡಬೇಕು. ಆ ಭಟನನ್ನು ಶಿಕ್ಷೆಯಿಂದ ಮುಕ್ತಿಗೊಳಿಸಿದ್ದೇನೆ' ಎಂದನು.


'ಮಹಾರಾಜರೆ, ನೀವು ಊಹಿಸಿದಂತೆ ನಾನು ಹೂಡಿದ್ದು ಉಪಾಯವೇ. ರಾಜರಿಗೆ ಪ್ರಜೆಗಳ ಸುಖ- ದುಃಖ ಎರಡೂ ತಿಳಿಯುವಂತಿರಬೇಕು. ಕದ್ದವನನ್ನು ಶಿಕ್ಷಿಸುವ ಮೊದಲು ಸಕಾರಣವನ್ನು ತಿಳಿಯಬೇಕು. ಅವನು ಕದ್ದದ್ದು ಚಿನ್ನವನ್ನೋ ವಜ್ರವನ್ನೋ ಅಲ್ಲವಲ್ಲ? ಹೊಟ್ಟೆ ತುಂಬುವ ಸಲುವಾಗಿ ಮೊಟ್ಟೆ ಕದ್ದನೆಂದರೆ ಅದು ಅವನ ಬಡತನವನ್ನು ಸೂಚಿಸುತ್ತದೆ' ಎಂದ.


ರಾಜನಿಗೆ ತನ್ನ ತಪ್ಪಿನ ಅರಿವಾಯಿತು. ಮಾಧನನ್ನು ಅವನ ಹೆಂಡತಿ ಮಕ್ಕಳನ್ನು ಕರೆಸಿ ಬೇಕಾದ ಆಹಾರ ಸಾಮಗ್ರಿಗಳನ್ನು ನೀಡಿ ಕಳುಹಿಸಿದ. ನಂತರ ಮಂತ್ರಿಯನ್ನು ಕರೆದು, 'ನೀನು ನನಗೆ ಬುದ್ಧಿ ಹೇಳುವ ಹಾಗೆ ನಡೆದುಕೊಂಡಿದ್ದಕ್ಕೆ ಇಂದಿನಿಂದ ಪ್ರತಿದಿನ ನೂರೊಂದು ಮೊಟ್ಟೆಯನ್ನು ತಿನ್ನಬೇಕು' ಎಂದ. ರಾಜನ ಈ ವಿನೋದವನ್ನು ಕೇಳಿ ಸಭೆಯಲ್ಲಿ ನೆರೆದಿದ್ದವರೆಲ್ಲ ಗೊಳ್ಳೆಂದು ನಕ್ಕರು.


ಆಧಾರ : ವಿಜಯ ಕರ್ನಾಟಕ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು