ಕಥೆ-603
ಪ್ರಯತ್ನದ ಬೀಜ ಬಿತ್ತುತ್ತಿರಬೇಕು!
ನಡೆಯುವಾಗ ಎಡವುದು ಪ್ರಕೃತಿ ಸಹಜ ಕ್ರಿಯೆ, ಮಗು ಅಂಬೆಗಾಲಿಡುತ್ತ ನಡೆಯಲು ಪ್ರಾರಂಭಿಸಿದಾಗ ಅನೇಕ ಬಾರಿ ಎಡವಿ ಬೀಳುತ್ತದೆ. ಹಾಗಂತ ನಡೆಯುವುದನ್ನು ನಿಲ್ಲಿಸಲು ಹೇಳುತ್ತೇವೆಯೇ? ಹಾಗೆಯೇ, ನಮ್ಮ ಜೀವನವೆಂಬ ಬಂಡಿ ಸಾಗುವಾಗ ಕೆಟ್ಟ ರಸ್ತೆಗಳು, ಕಲ್ಲು ಬಂಡೆಗಳು, ಮುಳ್ಳು ಕಂಟಿಗಳು ಎದುರಾಗಿ ತೊಡ ಕುಂಟು ಮಾಡುತ್ತಿರುತ್ತವೆ. ಅವುಗಳನ್ನು ದೂಷಿಸಿ ಸುಮ್ಮನೆ ಕುಳಿತು ಬಿಟ್ಟರೆ ಗುರಿ ತಲುಪಲು ಸಾಧ್ಯವಿಲ್ಲ. ಪರ್ಯಾಯ ಮಾರ್ಗದಲ್ಲಿ ಸಾಗಿದಾಗ ಗುರಿ ತಲುಪಲು ಸಾಧ್ಯ. ಒಂದು ವೇಳೆ ಅದೇ ಮಾರ್ಗದಲ್ಲಿಯೇ ಸಾಗಬೇಕೆಂದು ಬಯಸಿದರೆ ಆ ಮಾರ್ಗದಲ್ಲಿನ ಕಲ್ಲು ಮುಳ್ಳುಗಳೆಂಬ ಸಂಕಷ್ಟಗಳನ್ನು ಮೆಟ್ಟಿ ನಿಲ್ಲಬೇಕಾಗುತ್ತದೆ. ಈ ಜೀವನದ ಪಯಣದಲ್ಲಿ, ಅಪಮಾನ, ನಿಂದನೆಗಳು, ಸಂಕಷ್ಟಗಳು ಎದುರಾದಾಗ ಅವುಗಳ ಬಗ್ಗೆ ಬೇಸರಪಟ್ಟುಕೊಳ್ಳದೇ, ನಿರ್ಲಕ್ಷಿಸಿ, ನಿರಂತರ ಪರಿಶ್ರಮ ತೋರಬೇಕು, ಯಶಸ್ಸು ಗಳಿಸುವತ್ತ ಮನವನ್ನು ತೊಡಗಿಸಿಕೊಳ್ಳಬೇಕು. ಕಬಡ್ಡಿ ಆಟದಲ್ಲಿನ ಎದುರಾಳಿ ಆಟಗಾರರು ಕಾಲೆಳೆದು ಕೆಡವಲು ಕಾದಿರುತ್ತಾರೆ ವಿನಃ ನಿಮ್ಮನ್ನು ಬಾಚಿ ತಬ್ಬಿಕೊಂಡು ಬೀಳ್ಕೊಡುವುದಕ್ಕಲ್ಲ. ಹಾಗಂತ ಅವರು ಕೆಟ್ಟವರಲ್ಲ. ಅವರೂ ಕೂಡ ಆಟದ ಧರ್ಮ ಪಾಲಿಸಿ ಗೆಲುವಿಗಾಗಿ ಕಾಯುತ್ತಿರುತ್ತಾರೆ. ಇಂದಿನ ಸ್ಪರ್ಧಾ ಜಗತ್ತಿನಲ್ಲಿರುವವರೆಲ್ಲ ಗೆಲ್ಲಲೇಬೇಕೆಂದು ಬಂದವರಾಗಿದ್ದು ಅಷ್ಟು ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಕಷ್ಟಪಟ್ಟು ಉನ್ನತ ಸ್ಥಾನಕ್ಕೆ ಬಂದವರು ಎಂದಿಗೂ ಜೀವನದಲ್ಲಿ ಸೋಲುವುದಿಲ್ಲ. ಒಂದು ವೇಳೆ ಸೋತರೆ ಅದೃಷ್ಟ ಕೈಕೊಟ್ಟು ಸೋತಿರುತ್ತಾರೆಯೇ ಹೊರತು ಪ್ರಯತ್ನದಿಂದಲ್ಲ. ಯಾವುದೇ ಪ್ರಯತ್ನವನ್ನೇ ಮಾಡದೇ, ಗೆಲುವು ಸಿಗಲಿಲ್ಲವೆಂದು ಸಿಟ್ಟಾಗಿ ಲೋಕ ಸರಿಯಿಲ್ಲವೆಂದು ನರಳುತ್ತ ಬದುಕಿದರೆ, ಆ ಬದುಕಿಗೆ ಯಾವುದೇ ಅರ್ಥವಿಲ್ಲ. ಪ್ರಯತ್ನ ಎಂಬುದು ಬೀಜದ ಹಾಗೆ. ಬಿತ್ತುತ್ತಲೇ ಇರಿ. ಒಂದಲ್ಲ ಒಂದು ದಿನ ಮರವಾಗಿ ಫಲ ಕೊಟ್ಟೇ ಕೊಡುತ್ತದೆ.
ರವಿ ಕಂಗಳ ಕೊಂಕಣಕೊಪ್ಪ
No comments:
Post a Comment