ಕಥೆ-672
ಸ್ಥಿತಪ್ರಜ್ಞರು ಅಂದುಕೊಂಡದ್ದನ್ನು ಸಾಧಿಸದೆ ಅವರು ವಿರಮಿಸೋದಿಲ್ಲ
ಕಿತ್ತಳೆ ಮಾರುವ ಹಾಜಬ್ಬ ಅದ್ಯಾವ ಮಟ್ಟಕ್ಕೆ ಬೆಳೆದರು ಅಂದ್ರೆ ಅವರ ಜೀವನವೇ ಮೂರು ಯೂನಿವರ್ಸಿಟಿಯ ವಿಧ್ಯಾರ್ಥಿಗಳಿಗೆ ಪಾಠವಾಗಿಬಿಟ್ಟಿತು.
ಶಾಲೆಗೆ ಜಾಗ, ಕಟ್ಟಡ, ಬಾವಿ, ವಿದ್ಯುತ್,ಪಂಪು, ಹೈಸ್ಕೂಲು, ಹೀಗೆ ಒಂದೊಂದರ ಹಿಂದೆಯೂ ಈ ಹಾಜಬ್ಬನ ಬೆವರಿನ ಶ್ರಮವಿದೆ. ಮಂಗಳೂರಿನ ಹರೇಕಳದ ಪಡ್ಪುವಿನಲ್ಲಿ ಒಬ್ಬ ಬರಿಗಾಲ ಪಕೀರ ಸರಕಾರಿ ಶಾಲೆ ತರಲು ಈ ಪಾಟಿ ಬಡಿದಾಡುತ್ತಿದ್ದರೂ ಹೊರಜಗತ್ತಿಗೆ ಮಾತ್ರ ಇದರ ಬಗ್ಗೆ ಎಳ್ಳಷ್ಟೂ ಅರಿವಿರಲಿಲ್ಲ. ಈ ಅಕ್ಷರಸಂತನನ್ನು ಮೊತ್ತಮೊದಲು ಬೆಳಕಿಗೆ ತಂದವರು ಹೊಸದಿಗಂತ ಪತ್ರಿಕೆಯ ಗುರುವಪ್ಪ ಬಾಳೆ ಪುಣಿಯವರು. ಅವರ ವರದಿಯ ಬಳಿಕ ಹಲವಾರು ಜನರು ಹರೇಕಳ ಹಾಜಬ್ಬರ ಬಗ್ಗೆ ಬರೆದರು.
ರಾಜ್ಯದ ಹೆಚ್ಚಿನ ಎಲ್ಲಾ ಪ್ರತಿಷ್ಟಿತ ಪ್ರಶಸ್ತಿಗಳು ಹಾಜಬ್ಬ ಅವರಿಗೆ ಸಂದಿತು. ಹಾಜಬ್ಬ ಅವರ ಪರಿಶ್ರಮಕ್ಕೆ ಮೆಚ್ಚಿ ಲಕ್ಷಾಂತರ ರೂಪಾಯಿ ಹಣ ನ್ಯೂ ಪಟ್ಪುವಿನ ಈ ಶಾಲೆಗೆ ಹರಿದು ಬಂತು. ತನಗೆ ದಕ್ಕಿದ ಎಲ್ಲಾ ಹಣವನ್ನು ಮನೆ,ಮಕ್ಕಳಿಗೆ ನೀಡದೆ ಹಾಜಬ್ಬ ಈ ಶಾಲೆಗೆ ಧಾರೆ ಎರೆದರು. ಪ್ರತಿಷ್ಟಿತ ಅಂತರಾಷ್ಟ್ರೀಯ ಸುದ್ದಿವಾಹಿನಿಯೊಂದು ಒಟ್ಟು 20 ರಿಯಲ್ ಹಿರೋಸ್ ಗಳನ್ನು ಘೋಷಿಸಿ ಪ್ರಶಸ್ತಿ ನೀಡಿದೆ. ಆ ಪ್ರಶಸ್ತಿಗಳಲ್ಲಿ ಒಂದು ಹಾಜಬ್ಬರ ಮನೆಯಲ್ಲಿದೆ.
ಒಮ್ಮೆ ದುಬಾಯಿಯಲ್ಲಿ ಒಂದು ಸಂಘಟನೆಯವರು ಹಾಜಬ್ಬರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರಂತೆ. ಅಲ್ಲಿನ ವಿಮಾನ ನಿಲ್ದಾಣದಲ್ಲಿ ಹಾಜಬ್ಬ ತನ್ನ ಅದೇ ಹಳೆ ಅಂಗಿ ಲುಂಗಿ ತೊಟ್ಟು ಕೊಂಡು ಒಂದು ಪ್ಲಾಸ್ಟಿಕ್ ತೊಟ್ಟೆಯನ್ನು ಮಡಚಿ ಬಗಲಲ್ಲಿ ಇಟ್ಟುಕೊಂಡು ಇಮಿಗ್ರೇಶನ್ ಹತ್ತಿರ ನಿಂತುಕೊಂಡಿದ್ದರಂತೆ. ಆ ಅಧಿಕಾರಿಗೆ ಈ ಆಕೃತಿಯನ್ನು ನೋಡಿ ಶಾಕ್ ಆಯ್ತು. ಇವನ್ಯಾರೋ ನೈಜೀರಿಯಾದ ನಿರಾಶ್ರಿತ ಇದ್ದಂಗಿದ್ದಾನಲ್ಲಪ್ಪಾ..? ಅಂತ ಅನುಮಾನ ಬಂದು ಮುಂದೆ ಹೋಗಲು ಬಿಡದೆ ಪಕ್ಕದಲ್ಲಿ ನಿಲ್ಲಿಸಿ ಬಿಟ್ಟ. ಎಲ್ಲರ ಚೆಕಪ್ ಮುಗಿಯೋವರೆಗೆ ಇವರನ್ನ ಬಿಡಲೇ ಇಲ್ಲ.
ತಾನು ಯಾರು ..ಏನು.. ಎಲ್ಲಿಗೆ ಹೋಗುತ್ತಿದ್ದೇನೆ ಅನ್ನೋದನ್ನ ಹೇಳೋದಿಕ್ಕೆ ಇವರಿಗೆ ಭಾಷೆ ಬೇರೆ ಬರೋದಿಲ್ಲ. ಒಂದೆರಡು ಗಂಟೆಯ ಬಳಿಕ ಹಾಜಬ್ಬರಿಗೆ ಅದು ಹೇಗೋ ತಲೆ ಕೆಲಸ ಮಾಡಿತು. ತನ್ನ ಹರಕಲು ತೊಟ್ಟೆಯಿಂದ ಒಂದಷ್ಟು ಪೇಪರ್ ಕಟಿಂಗ್ಸನ್ನು ತೆಗೆದು ಆ ಅಧಿಕಾರಿಯ ಎದುರು ಹಿಡಿದರು. ಅಂತರಾಷ್ಟ್ರೀಯ ಮಟ್ಟದ ಆಂಗ್ಲ ಪತ್ರಿಕೆಗಳು ಹಾಜಬ್ಬ ಅವರ ಬಗ್ಗೆ ಚಿತ್ರ ಸಹಿತವಾಗಿ ಮಾಡಿದ್ದ ವರದಿಗಳು ಅಲ್ಲಿದ್ದವು. ಆ ಅಧಿಕಾರಿಗೆ ತನ್ನ ಎದುರಿಗೆ ನಿಂತಿರುವವನು ಎಂಥಾ ದೊಡ್ಡ ಸಾಧಕ ಅನ್ನೋದು ತಿಳಿದು ತನ್ನ ತಪ್ಪಿನ ಅರಿವಾಗಿ ಹಾಜಬ್ಬರ ಬಳಿ ಕ್ಷಮೆ ಕೇಳಿ ಅವರಿಗೆ ತಾನೇ ಮಾರ್ಗದರ್ಶನ ಮಾಡಿ ವಿಮಾನ ನಿಲ್ದಾಣದಿಂದ ಹೊರ ಗೇಟಿನ ತನಕ ಕಳುಹಿಸಿ ಕೊಟ್ಟನಂತೆ..!!
ಈ ರೀತಿಯ ನೂರಾರು ಕತೆಗಳು ಹಾಜಬ್ಬರ ಬಗಲಿನಲ್ಲಿರುವ ತೊಟ್ಟೆಯಲ್ಲಿ ಬೆಚ್ಚಗೆ ಕುಳಿತಿವೆ.
ಗುರುವಪ್ಪ ಬಾಳೆಪುಣಿಯವರು ಹೇಳುವಂತೆ ಇಷ್ಟೆಲ್ಲಾ ಪ್ರಶಸ್ತಿಗಳು ಬಂದರೂ ಸಾವಿರಾರು ವೇದಿಕೆಗಳನ್ನು ಹತ್ತಿ ಇಳಿದರೂ ಹಾಜಬ್ಬ ಇಂದಿಗೂ ಬದಲಾಗಿಲ್ಲ. ಎಂಥೆಂಥಾ ಅಂತರಾಷ್ಟ್ರೀಯ ಪ್ರತಿಷ್ಟಿತ ವೇದಿಕೆಗಳನ್ನೂ ಹಾಜಬ್ಬ ಅವರು ಇದೇ ವೇಷದಲ್ಲಿ ಹತ್ತಿ ಇಳಿದಿದ್ದಾರೆ. ಈವತ್ತಿಗೂ ಅವರ ಅಂಗಿಯ ಮೇಲಿನ ಎರಡು ಬಟನ್ ಗಳನ್ನು ಹಾಕಿಸೋದು ಯಾರಿಂದಲೂ ಸಾಧ್ಯವಾಗಿಲ್ಲ.
ಪುಟ್ಟ ಮಕ್ಕಳಿಗಿರುವ ಮೊಂಡು ಹಠ ಈ ಮನುಷ್ಯನಿಗಿದೆ. ಇಂದಿಗೂ ಅದೇ ಭಾಷೆ, ಅದೇ ಸಣ್ಣ ಮಗುವಿನಂತ ಮುಗ್ಧತೆ, ಹಠಮಾರಿತನ, ಯಾರನ್ನೂ ನೋಯಿಸದ ನೋಯಿಸಲಾರದ ಸೌಮ್ಯ ವ್ಯಕ್ತಿತ್ವ. ಅದೇ ಹವಾಯಿ ಚಪ್ಪಲು. ಅದೇ ಕಿತ್ತಾಳೆಯ ಬುಟ್ಟಿ... ಹಾಜಬ್ಬ ಯಾವತ್ತಿಗೂ ಬದಲಾಗೋದಿಲ್ಲ. ಹೆಣ್ಣು ಮಕ್ಕಳು ಮದುವೆಯ ಪ್ರಾಯಕ್ಕೆ ಬಂದಿದ್ದಾರೆ. ಮಗ ಪೈಂಟಿಂಗ್ ಕೆಲಸಕ್ಕೆ ಹೋಗುತ್ತಾನೆ. ಮನೆ ಬಹಳ ಕಷ್ಟದಲ್ಲಿ ನಡೀತಿದೆ. ಆದರೆ ಹಾಜಬ್ಬನಿಗೆ ಮಾತ್ರ ಹೈಸ್ಕೂಲ್ ಪಕ್ಕದಲ್ಲೇ ಕಾಲೇಜೂ ಆಗಬೇಕು ಎನ್ನುವ ಹುಚ್ಚು.....
ಹುಚ್ಚು ನಮ್ಮಲ್ಲೂ ಇದೆ. ನಮ್ಮದು ದಿನಕ್ಕೊಂದು ಹುಚ್ಚು. ನಮ್ಮ ಹುಚ್ಚು ದಿನಾ ಹುಟ್ಟುತ್ತದೆ ದಿನಾ ಸಾಯುತ್ತದೆ. ಅರ್ಥವಿಲ್ಲದ ಹುಚ್ಚುಗಳ ಹುಟ್ಟು ಸಾವಿನ ಸಂತೆಯೇ ನಮ್ಮ ಜೀವನ. ಆದರೆ ಈ ಸಾಧಕರ ಬದುಕು ಹಾಗಲ್ಲ ಅವರು ಸ್ಥಿತಪ್ರಜ್ಞರು ಅಂದುಕೊಂಡದ್ದನ್ನು ಸಾಧಿಸದೆ ಅವರು ವಿರಮಿಸೋದಿಲ್ಲ. ಜಗತ್ತು ಅವರಿಗೆ ಏನೇ ಅನ್ನಲಿ. ಅದನ್ನು ಕಟ್ಟಿಕೊಂಡು ಅವರಿಗೆ ಆಗಬೇಕಿರುವುದು ಏನೂ ಇಲ್ಲ. ಹಾಜಬ್ಬರಿಗೆ ಒಂದೇ ಹುಚ್ಚು ಅಡರಿತ್ತು. ಅದನ್ನೇ ಬೆನ್ನು ಬಿದ್ದು ಸಾಧಿಸಿದರು.
ಈ ಮಹಾನ್ ವ್ಯಕ್ತಿಗೆ ಭಾರತ ಸರ್ಕಾರ 2020ರಲ್ಲಿ ಪ್ರತಿಷ್ಟಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
No comments:
Post a Comment