ಕಥೆ-868
ಅಪಾತ್ರರಿಗೆ ಉಪಕಾರ ಸ್ಮರಣೆ ಇರುವುದಿಲ್ಲ
https://basapurs.blogspot.com
ಮಹಾಭಾರತದಲ್ಲಿ ವೇದವ್ಯಾಸರು ಹೇಳಿರುವ ಕಥೆ. ಇದನ್ನು ಶಾಂತಿಪರ್ವದಲ್ಲಿ ಪಿತಾಮಹ ಭೀಷ್ಮರು ಧರ್ಮರಾಜನಿಗೆ ಹೇಳುತ್ತಾರೆ. ಇದೊಂದು ಕಥೆ ಇರಬಹುದು, ಮೂಲಗುಣಗಳು ಸತ್ಯ..
ಒಂದು ಕಾಡಿನಲ್ಲಿ ಒಬ್ಬ ಋಷಿ ಇದ್ದನು. ಆತನು ಕಂದಮೂಲಗಳನ್ನು ತಿಂದು ಬದುಕುತ್ತಿದ್ದರಿಂದ, ಇಂದ್ರಿಯ ನಿಗ್ರಹ ಹೊಂದಿದ್ದನು. ವ್ರತ ಉಪವಾಸಗಳ ಆಚರಣೆಗಳಿಂದ ಆತನು ಪರಿಶುದ್ಧ ಮನಸ್ಸಿನವನಾಗಿದ್ದನು. ಅಂದಿನ ದಿನಗಳಲ್ಲಿ ಋಷಿಮುನಿಗಳಿಗೆಲ್ಲ ಅರಣ್ಯವು ಬಹಳ ಇಷ್ಟವಾದ ತಾಣವಾಗಿತ್ತು. ಅವರಿಗೆ ಪ್ರಾಣಿ -ಪಕ್ಷಿಗಳೆಂದರೆ ತುಂಬಾ ಅಕ್ಕರೆ. ಆಶ್ರಮದಲ್ಲಿ ಜಿಂಕೆ ,ಮೊಲ, ಅಳಿಲು, ಹಸು-ಕರು, ಮುಂತಾದ ಪ್ರಾಣಿಗಳ ಜೊತೆ ಗಿಳಿ, ಗುಬ್ಬಿ, ಮೈನಾ, ಪಕ್ಷಿಗಳು ಇದ್ದು ಪ್ರೀತಿಯಿಂದ ಸಲಹುತ್ತಿದ್ದನು. ಬಿಡುವಿನ ಸಮಯದಲ್ಲಿ ಪ್ರಾಣಿ-ಪಕ್ಷಿಗಳ ಜೊತೆ ಸಂತೋಷದಿಂದ ಕಾಲ ಕಳೆಯುತ್ತಿದ್ದನು. ಪ್ರಾಣಿಗಳು ಸಹ ಅವನೊಂದಿಗೆ ಸಂತೋಷದಿಂದ ಇರುತ್ತಿದ್ದವು. ಕಾಡಿನ ಕ್ರೂರ ಪ್ರಾಣಿಗಳಾದ ಹುಲಿ, ಸಿಂಹ, ಕರಡಿ, ಮತ್ತು ಆನೆಗಳು ಋಷಿ ಇದ್ದಲ್ಲಿಗೆ ಬಂದು ವಿಧೇಯ ಶಿಷ್ಯರಂತೆ ಇದ್ದು ಹೋಗುತ್ತಿದ್ದವು.
ಇವುಗಳ ಜೊತೆ ಋಷಿಯ ಹತ್ತಿರ ಒಂದು ನಾಯಿ ಇತ್ತು. ಇದು ಆಶ್ರಮದ ಪದ್ಧತಿಯಂತೆ ಮಾಂಸಾಹಾರವನ್ನು ಸೇವಿಸದೆ ಋಷಿಯು ಹಾಕುವ ಕಂದ ಮೂಲಗಳನ್ನೇ ಸೇವಿಸುತ್ತಿತ್ತು. ಏಕಾದಶಿ ವ್ರತ ನಿಯಮಗಳ ದಿನಗಳಲ್ಲಿ ನಾಯಿಯು ಉಪವಾಸವೇ ಇರುತ್ತಿತ್ತು. ಹೀಗಾಗಿ ಅದು ಬಡಕಲು ನಾಯಿ ಆಗಿತ್ತು. ಒಂದು ದಿನ ಅಶ್ರಮದ ಹತ್ತಿರ ಒಂದು ಹಸಿದ 'ಚಿರತೆ'ಯು ನುಗ್ಗಿ ನಾಯಿಯನ್ನು ಕಬಳಿಸಲು ಬಂದಿತು. ಹೆದರಿದ ನಾಯಿ ರಕ್ಷಣೆಗಾಗಿ ಖುಷಿ ಹತ್ತಿರ ಹೋಯಿತು. ಋಷಿಯು ನಾಯಿಯ ಮೇಲಿನ ಕರುಣೆ ಯಿಂದಾಗಿ ತನ್ನ ತಪಃಶಕ್ತಿಯಿಂದ ಅಲ್ಲಿಗೆ ಬಂದ ಚಿರತೆಗಿಂತ ಬಲವಾದ ಚಿರತೆಯನ್ನಾಗಿ ಮಾರ್ಪಡಿಸಿದನು.
ನಾಯಿ ಮೇಲೆ ಎರಗಲು ಬಂದಿದ್ದ ಚಿರತೆಯು ಇದನ್ನು ನೋಡಿ ಹೆದರಿ ಓಡಿ ಹೋಯಿತು. ಚಿರತೆ ಯಾಗಿದ್ದ ನಾಯಿ ನಿಶ್ಚಿಂತೆಯಿಂದ ಓಡಾಡಿಕೊಂಡಿತ್ತು. ಸ್ವಲ್ಪ ಕಾಲದ ನಂತರ. ಒಂದು ದಿನ ಭಯಂಕರವಾದ ಹುಲಿಯು ಚಿರತೆಯ ಮೇಲೆ ಎರಗಲು ಬಂದಿತು. ಹೆದರಿದ ಚಿರತೆಯು ಮತ್ತೆ ಋಷಿಯ ಹತ್ತಿರ ಹೋಗಿ ರಕ್ಷಣೆಯನ್ನು ಕೇಳಿತು. ಈಗ ಖುಷಿಯು ನಾಯಿಚಿರತೆಯನ್ನು ದೊಡ್ಡ ಹುಲಿಯನ್ನಾಗಿ ಮಾರ್ಪಡಿಸಿದನು. ಮಾರ್ಪಾಡಾದ ಹುಲಿಯನ್ನು ನೋಡಿ ನಿಜವಾದ ಹುಲಿಯು ಹಾಗೆಯೇ ಹಿಂತಿರುಗಿತು. ಹುಲಿಯಾದ ನಾಯಿ ತನ್ನ ಮೊದಲಿನ ಸಾತ್ವಿಕ ಆಹಾರವಾಗಿದ್ದ ಕಾಡಿನ ಗೆಡ್ಡೆಗೆಣಸುಗಳನ್ನು ತೊರೆದು ಕಾಡಿನಲ್ಲಿರುವ ಬೇರೆ ಬೇರೆ ಪ್ರಾಣಿಗಳನ್ನು ಹಿಡಿದುಕೊಂದು ತಿನ್ನ ತೊಡಗಿತು. ಪ್ರಾಣಿಗಳ ಬೇಟೆಯಾಡಲು, ನಿರ್ಭೀತಿಯಿಂದ ಓಡಾಡುತ್ತಾ ಕಾಡಿನ ತುಂಬಾ ಅಡ್ಡಾಡಿ ಕೊಂದಿತ್ತು.
ವನ ರಾಜನಂತೆ ಮೆರೆದು ಓಡಾಡುತ್ತಿದ್ದ ಹುಲಿಯ ಮೇಲೆರಗಲು ದೊಡ್ಡಗಾತ್ರದ ಆನೆ ಬಂದಿತು. ನೋಡಿ ಹೆದರಿದ ಹುಲಿಯು ಋಷಿಗಳ ಆಶ್ರಯಕ್ಕೆ ಹೋಗಿ ಜೀವರಕ್ಷಣೆ ಬೇಡಿತು. ಮತ್ತೆ ಋಷಿಯು ತಪಃಶಕ್ತಿಯಿಂದ ಹುಲಿಯನ್ನು ದೊಡ್ಡ ಆನೆಯಾಗಿ ಮಾರ್ಪಡಿಸಿದನು. ಇದನ್ನು ನೋಡಿ ನಿಜವಾದ ಆನೆಯು ಓಡಿಹೋಯಿತು. ಕಾಡಿನ ತುಂಬಾ ಸೊಪ್ಪು-ಸದೆ ತಿಂದುಕೊಂಡು, ಕಾಡನ್ನೆಲ್ಲ ತುಳಿದು, ಮುರಿದು ,ಹಾಳು ಮಾಡುತ್ತಾ, ಭಯವಿಲ್ಲದೆ ಓಡಾಡಿಕೊಂಡಿತ್ತು, ಒಂದು ದಿನ ದೊಡ್ಡ ಸಿಂಹ ಬಂದು ಅದರ ಮೇಲೆ ಎಗರಲು ನೋಡಿತು. ಹೆದರಿದ ಆನೆಯು ರಕ್ಷಣೆಗಾಗಿ ಋಷಿಯ ಹತ್ತಿರ ಬಂದಿತು. ಈಗ ಋಷಿಯು ನಿಜವಾದ ಸಿಂಹಕ್ಕಿಂತ ದೊಡ್ಡ ಸಿಂಹವಾಗಿ ಪರಿವರ್ತಿಸಿದನು. ನಾಯಿ ಯಾಗಿದ್ದ ತನಗೆ ಇಷ್ಟೊಂದು ರೂಪಗಳನ್ನು ಋಷಿಯ ಕೃಪೆಯಿಂದ ಸಿಗುತ್ತಿರುವುದು ಬಹಳ ನಾಯಿಗೆ ಸಂತೋಷವಾಗಿತ್ತು. ಬಹಳ ಬೀಗುತ್ತಾ ಕಾಡಿನ ರಾಜನಂತೆ ಓಡಾಡಿಕೊಂಡಿತ್ತು. ಒಂದು ದಿನ ಶರಭ ಎಂಬ ದೈತ್ಯ ಕಾರದ ಪ್ರಾಣಿಯೊಂದು ಸಿಂಹದ ಮೇಲೇರಿ ತಿನ್ನಲು ಬಂದಿತು.
'ಶರಭ' ಕ್ಕೆ ಎಂಟು ಕಾಲುಗಳು, ಹಣೆಯ ಮೇಲೆ ಭಯಂಕರ ಕಣ್ಣು ಇದ್ದು, ಇದಕ್ಕಿಂತ ದೊಡ್ಡ ಪ್ರಾಣಿ ಕಾಡಿನಲ್ಲಿ ಇರಲಿಲ್ಲ. ಇಂಥ ಶರಭ ಬಂದಿದ್ದನ್ನು ನೋಡಿದ ಸಿಂಹವು ಭಯದಿಂದ ನಡುಗಿ ಋಷಿಯ ಹತ್ತಿರ ಮುದುರಿ ಕುಳಿತು ಮತ್ತೆ ಬೇಡಿಕೊಂಡಿತು. ಕನಿಕರದಿಂದ ಋಷಿಯು ಪರಿವರ್ತಿತ 'ನಾಯಿಸಿಂಹವನ್ನು ದೊಡ್ಡ ಶರಭವನ್ನಾಗಿ ಮಾರ್ಪಡಿಸಿದನು. ಭಾರಿ ಗಾತ್ರದ ನಾಯಿ ಶರಭ'ನನ್ನು ನೋಡಿ ನಿಜವಾದ ಶರಭವು ಓಡಿಹೋಯಿತು. ಈಗ ಶರಭನನ್ನು ಕೇಳುವವರೇ ಇಲ್ಲ. ಇಡೀ ಕಾಡಿಗೆ ಅದೇ ದೈತ್ಯಾಕಾರವಾಗಿ ಓಡಾಡಿಕೊಂಡು ಕಾಡಿನಲ್ಲಿರುವ ಎಲ್ಲಾ ಪ್ರಾಣಿಗಳನ್ನು ತಿಂದು, ಅವುಗಳನ್ನು ಹೆದರಿಸುತ್ತಾ, ಹಿಂಸೆ ಮಾಡಿ ಕೊಂದು ಬಿಸಾಕುತ್ತಿತ್ತು.
ಭಯಭೀತಗೊಂಡ ಉಳಿದ ಪ್ರಾಣಿಗಳು ಆ ಕಾಡಿನಿಂದ ಬಿಟ್ಟು ಬೇರೆ ಕಾಡಿಗೆ ಓಡಿಹೋದವು. ಶರಭ ಒಂದು ದಿನ ಯೋಚಿಸಿತು. ಮೊದಲು ನಾನು ನಾಯಿಯಾಗಿ ಹೆದರಿಕೊಂಡು ಬಿದ್ದಿದ್ದೆ, ಋಷಿ ಹೇಗೂ ನನ್ನನ್ನು ಶರಭನನ್ನಾಗಿ ಮಾಡಿದ್ದಾನೆ. ನನಗಿಂತ ದೊಡ್ಡ ಪ್ರಾಣಿ ಕಾಡಿನಲ್ಲಿ ಇನ್ನೆಲ್ಲೂ ಇಲ್ಲ ನಾನೇ ಬಲಶಾಲಿ. ಈಗ ನನಗೆ ಶತ್ರು ಅಂದ್ರೆ ಯಾರಿರಬಹುದು ? ಈ ಋಷಿಯೇ ನನಗೆ ಶತ್ರು ಯಾಕೆಂದರೆ, ನಾಯಿ ಯಾಗಿದ್ದ ನನ್ನನ್ನು ಚಿರತೆ, ಹುಲಿ, ಸಿಂಹ, ಆನೆ ಮತ್ತು ಶರಭನನ್ನಾಗಿ ಮಾಡಿದ್ದಾನೆ. ಮುಂದೆ ಕಾಡಿನಲ್ಲಿರುವ ಸಣ್ಣ ಸಣ್ಣ ಪ್ರಾಣಿಗಳನ್ನೆಲ್ಲಾ ಶರಭವನ್ನಾಗಿ ಪರಿವರ್ತಿಸಿದರೆ, ಎಲ್ಲರೂ ನನ್ನಷ್ಟೇ ಶಕ್ತಿಶಾಲಿ ಪ್ರಾಣಿಗಳಾಗಿ ಬಿಡುತ್ತವೆ. ಹಾಗಾಗಲು ಬಿಡಬಾರದು, ಯಾರೂ ನನ್ನಷ್ಟು ಬಲಿಷ್ಠ ಪ್ರಾಣಿಯಾಗಬಾರದು ನನಗೆ ಹೆದರಿಕೊಂಡು ಬಿದ್ದಿರಬೇಕು. ಇದೆಲ್ಲಾ, ಆಗಬೇಕಾದರೆ ನಾನು ಋಷಿಯನ್ನು ಕೊಂದುಬಿಡಬೇಕು ಎಂದು ಆಲೋಚಿಸಿ ಋಷಿ ಹತ್ತಿರ ಬರುತ್ತಿತ್ತು. ಋಷಿಗೆ, ಇದರ ದುಷ್ಟ ಆಲೋಚನೆ ಅರ್ಥವಾಯಿತು. ಇದು ನಾಯಿ ಆಶ್ರಮದ ಪ್ರಭಾವ ಇದ್ದರೂ, ಅದರ ಸ್ವಭಾವ ಎಂದಿಗೂ ಬದಲಾಗಲ್ಲ ನಾಯಿ ಗುಣ ಬಿಡುವುದಿಲ್ಲ ಎಂದು 'ನಾಯಿಶರಭ' ಬರುತ್ತಿದ್ದಂತೆ ಮೊದಲಿನ ಹಾಗೆ ನಾಯಿಯನ್ನಾಗಿ ಮಾರ್ಪಡಿಸಿದನು.
" ಕರ್ಪೂರಧೂಲಿ ರಚಿತಾಲವಾಲ, ಕಸ್ತೂರಿ ಕಾಪಂಕನಿಮಗ್ನನಾಲ,
ಗಂಗಾಜಲೈ ಸಿಕ್ತಸಮೂಲವಾಲ, ಸ್ವೀಯಂ ಗುಣಂ ಮುಂಚತಿ ಕಿಂ ಪಲಾಂಡು"
ಕರ್ಪೂರದ ಆಸನವನ್ನು ಮಾಡಿ ಕಸ್ತೂರಿ ಮಣ್ಣನ್ನು ಹಾಕಿ ಗಂಗಾಜಲದಿಂದ ಪೋಷಿಸಿ ಬೆಳೆದರೂ ಈರುಳ್ಳಿಯು ತನ್ನ ತೀಕ್ಷ್ಣ ವಾಸನೆಯನ್ನು ಬಿಡಲಾರದು.
ಕೃಪೆ,ಬರಹ:- ಆಶಾ ನಾಗಭೂಷಣ.
No comments:
Post a Comment