ಕಥೆ-914
ಸಂಪತ್ತಿನ ಆಪತ್ತು
ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ತಮ್ಮ ಪ್ರವಚನದಲ್ಲಿ ಹೇಳಿದಂತಹ ಒಂದು ಕಥೆ..
ಒಂದು ಕೋಳಿಯು ಶ್ರೀಮಂತರ ತಿಪ್ಪೆಯನ್ನು ಕೆದರುತ್ತಿತ್ತು. ಅದನ್ನು ನೋಡಿದ ಒಬ್ಬ ಮನುಷ್ಯ ಕೋಳಿಗೆ “ಕಸ ಕಡ್ಡಿಯಿಂದ
ಕೂಡಿದ ಈ ತಿಪ್ಪೆಯನ್ನು ಏಕೆ ಕೆದರುತ್ತಿರುವಿ ಇದರಲ್ಲಿ ನಿನಗೇನು
ಸಿಗುತ್ತದೆ?” ಎಂದ. ಕೋಳಿ ಹೇಳಿತು “ನೋಡುತ್ತಿರು ಏನು ಸಿಗುತ್ತದೆ”ಸ್ವಲ್ಪ ಸಮಯದಲ್ಲಿ ಕೋಳಿಗೆ ಒಂದು ರತ್ನದ ಹರಳು ಸಿಕ್ಕಿತು. ಕೋಳಿಯು ಆ ರತ್ನದ ಹರಳನ್ನು ಆ ಮನುಷ್ಯನ ಹತ್ತಿರ ಚೆಲ್ಲಿತು.ಮನುಷ್ಯ ಅದನ್ನು ಆಸೆಯಿಂದ ಎತ್ತಿಕೊಂಡು ಕಿಸೆಗೆ ಹಾಕಿಕೊಂಡ. ಕೋಳಿ ಮತ್ತೆ ತಿಪ್ಪೆ ಕೆದರುತ್ತಿರುವುದನ್ನು ಕಂಡು ಆ ಮನುಷ್ಯ ಕೋಳಿಗೆ ಕೇಳಿದ “ಬೆಲೆ ಬಾಳುವ ರತ್ನವನ್ನು ಚೆಲ್ಲಿ ಸುಮ್ಮನೆ ತಿಪ್ಪೆಯನ್ನು ಕೆದರುತ್ತಿರುವೆಯಲ್ಲ; ನೀನೆಂಥ ಹುಚ್ಚು ಕೋಳಿ” ಆಗ ಕೋಳಿ ಹೇಳಿತು. “ನೋಡುತ್ತಿರು ಯಾರು ಹುಚ್ಚರು ನಂತರ ಗೊತ್ತಾಗುತ್ತದೆ.” ಸ್ವಲ್ಪೇ ಸಮಯದಲ್ಲಿ ಆ ಕೋಳಿಗೆ ಒಂದು ಜೋಳದ ಕಾಳು ಸಿಕ್ಕಿತು. ಆಗ ಆ ಕೋಳಿಯು ಸಂತಸದಿಂದ ಹಾಡುತ್ತ ಕುಣಿಯುತ್ತ ಕಾಳನ್ನು ತಿಂದು ಮುಂದೆ ಹೋಗುತ್ತಿತ್ತು. ಅಷ್ಟರಲ್ಲಿ ದೂರದಲ್ಲಿ ನಿಂತು ನೋಡುತ್ತಿದ್ದ ನಾಲ್ಕು ಜನ ಬಂದು ಆ ಮನುಷ್ಯನಿಗೆ ಚೆನ್ನಾಗಿ ಬಡಿದು ಅವನ
ಕಿಸೆಯಲ್ಲಿ ಇದ್ದ ರತ್ನವನ್ನು ಕಸಿದುಕೊಂಡು ಹೋದರು. ಕೋಳಿ ಕೇಳಿತು “ಮನುಷ್ಯನೇ ಈಗ ಹೇಳು ಹುಚ್ಚರು ಯಾರು? ನೀನೋ ನಾನೋ?” ಮನುಷ್ಯನು ಏನೂ ಮಾತನಾಡದೆ ತಲೆತಗ್ಗಿಸಿ ಕೊಂಡು ಹೋದ. ಆಪತ್ತು ತರುವುದು ಸಂಪತ್ತು; ಹಸಿವೆಯನ್ನು ಹಿಂಗಿಸಿ ಜೀವವನ್ನು ರಕ್ಷಿಸುವ ಜೋಳದ ಕಾಳು ನಿಜವಾದ ಸಂಪತ್ತು ಎನ್ನುವದು ಮನುಷ್ಯನಿಗೆ ಈಗ ಹೊಳೆದಿತ್ತು. ಆದರೆ ಕಾಲ ಮಿಂಚಿತ್ತು.
ಜನರ ಮುಂದೆ ಆಡಂಬರಕ್ಕಾಗಿ ಧರಿಸುವ ಆಭರಣಗಳು ಸ್ವಲ್ಪ ಹೊತ್ತು ಖುಷಿ ನೀಡಿ ನಂತರ ಅಷ್ಟೇ ಅಪಾಯಕಾರಿಯಾಗಿರುತ್ತವೆ.. ನಮ್ಮ ಮೈ ಮೇಲಿನ ಆಭರಣಗಳ ಸಂಪತ್ತು ನಮಗೆ ಎಷ್ಟೋ ಸಾರಿ ಆಪತ್ತನ್ನು ತಂದು ಒಡ್ಡುತ್ತವೆ, ಆದರೂ ಅವುಗಳ ಮೇಲಿನ ವ್ಯಾಮೋಹ ನಮಗೆ ಕಡಿಮೆಯಾಗಿಲ್ಲ. ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತವೆ.. ಅದೇ ರೀತಿ ಕಳ್ಳರಿಂದ ಆಪತ್ತನ್ನು ತಲುಪುತ್ತವೆ.. ಅದರಲ್ಲೂ ಹಳದಿ ಲೋಹ(ಚಿನ್ನ) ಮತ್ತು ಬಿಳಿ ಲೋಹ( ಬೆಳ್ಳಿ) ಗಳ ವ್ಯಾಮೋಹ ಬಹಳ... ಹೀಗಾಗಿ ಅವುಗಳ ಬೆಲೆ (ಚಿನ್ನ-₹1,36,000), ( ಬೆಳ್ಳಿ-₹2,06,000) ದಿನಾಲು ಏರುತ್ತಲೇ ಇವೆ... ಸಾಂಪ್ರದಾಯಕ ಮದುವೆಯಂತಹ ಕಾರ್ಯಕ್ರಮಗಳು ಬಂಗಾರ, ಬೆಳ್ಳಿಯಿಲ್ಲದೆ ನಡೆಯುವುದಿಲ್ಲ... ಬಡವರು ಬಂಗಾರ ಖರೀದಿ ಮಾಡಿ ಅಳಿಯನಿಗೆ ಹಾಕುವಷ್ಟರಲ್ಲಿ, ಮತ್ತಷ್ಟು ಬಡವರಾಗುತ್ತಾರೆ.. ನಾವು ನಿಧಾನವಾಗಿ ಆಭರಣದ ವ್ಯಾಮೋಹದಿಂದ, ನಿರಾಭರಣದ ಕಡೆಗೆ ಸಾಗಬೇಕಿದೆ.. ಆಡಂಬರದ ಜೀವನಕ್ಕಿಂತ ಅದೊಂದು ಸರಳತೆಯ ಆದರ್ಶ ಜೀವನವು ಆಗುತ್ತದೆ.. ನಮಗೆ ಆಪತ್ತು ಕಡಿಮೆಯಾಗುತ್ತದೆ...
ಸಂಗ್ರಹ: ಶಂಕರಗೌಡ ಬಸಾಪುರ
No comments:
Post a Comment