ಕಥೆ-950
*ದ್ರಾಕ್ಷಿಯಲ್ಲಿನ ಹುಳಿ ಸಹ್ಯ.. ಪ್ರೀತಿ, ಪ್ರೇಮ, ವಿಶ್ವಾಸದಲ್ಲಿನ ಹುಳಿ ಅಸಹ್ಯ..*
ಅದೊಂದು ದಿನ ಗುರುಗಳೋರ್ವರ ಬಳಿ ಬಡವನೊಬ್ಫ ಬಂದು ದ್ರಾಕ್ಷಿಹಣ್ಣಿನ ಗೊಂಚಲೊಂದನ್ನು ಅವರ ಕೈಗೆ ಕೊಟ್ಟು ಅದನ್ನು ಸ್ವೀಕರಿಸಬೇಕೆಂದು ವಿನಂತಿಸಿಕೊಂಡನು. ತಾನು ತಂದ ದ್ರಾಕ್ಷಿ ಹಣ್ಣಿನ ರುಚಿಯನ್ನು ಆಸ್ವಾದಿಸಿ ಗುರುಗಳು ತನ್ನನ್ನು ಕೃತಕೃತ್ಯನನ್ನಾಗಿಸಬೇಕೆಂದು ಆತ ಕೋರಿಕೊಂಡನು.
"ಆಯ್ತು.. ಆಗಬಹುದು. ನಾನು ತುಂಬಾ ಸಂತೋಷದಿಂದ ನೀನು ಪ್ರೀತಿಯಿಂದ ತಂದುಕೊಟ್ಟಿರುವ ಈ ಹಣ್ಣನ್ನು ಸ್ವೀಕರಿಸುತ್ತೇನೆ" ಎಂದು ನುಡಿದ ಗುರುಗಳು, ಒಂದೊಂದೇ ಹಣ್ಣುಗಳನ್ನು ಬಿಡಿಸಿಕೊಂಡು ತಿನ್ನಲು ತೊಡಗಿದರು. ಅಕ್ಕಪಕ್ಕದಲ್ಲಿದ್ದ ಶಿಷ್ಯರು ಅವರು ಗೊಂಚಲಿನಿಂದ ಹಣ್ಣುಗಳನ್ನು ಬಿಡಿಸಿಕೊಂಡು ತಿನ್ನುವುದನ್ನು ಗಮನಿಸತೊಡಗಿದರು.
ಗುರುಗಳು ಯಾರಿಗೂ ಕೂಡ ಒಂದು ಹಣ್ಣನ್ನೂ ಕೊಡದ ಹಾಗೆ ದ್ರಾಕ್ಷಿಗೊಂಚಲಿನಲ್ಲಿದ್ದ ಎಲ್ಲ ಹಣ್ಣುಗಳನ್ನೂ, ಒಂದನ್ನೂ ಬಿಡದ ಹಾಗೆ ತಿಂದು ಮುಗಿಸಿದರು. ಇದು ಅಕ್ಕಪಕ್ಕದಲ್ಲಿದ್ದ ಶಿಷ್ಯರಿಗೆ ವಿಚಿತ್ರವೆನಿಸಿತು. ಒಂದು ಹಣ್ಣನ್ನೂ ಬೇರೆಯವರಿಗೆ ಕೊಡದೆ ತಿಂದ ಗುರುಗಳ ಪರಿ ಕಂಡು ಆಶ್ಚರ್ಯವೂ ಆಯಿತು. ದ್ರಾಕ್ಷಿ ಹಣ್ಣಿನ ಗೊಂಚಲು ತಂದಿದ್ದ ಬಡವನಿಗೆ ಖುಷಿಯೋ ಖುಷಿ!. ಆತನಿಗೆ ಸ್ವರ್ಗ ಮೂರೇ ಗೇಣಿನಲ್ಲಿವಂತೆ ಭಾಸವಾಯಿತು. ಆತನ ಕಣ್ಣುಗಳಲ್ಲಿ ಧನ್ಯತೆಯ ಭಾವ ತುಂಬಿಕೊಂಡಿತು.
ಆತ "ಈ ಬಡವ ತಂದುಕೊಟ್ಟ ಹಣ್ಣುಗಳನ್ನು ತಾವು ಪ್ರೀತಿಯಿಂದ ಸ್ವೀಕರಿಸಿ ಆಸ್ವಾದಿಸುವ ಮೂಲಕ ನನ್ನನ್ನು ಧನ್ಯನನ್ನಾಗಿಸಿದಿರಿ. ನಿಜಕ್ಕೂ ನನ್ನ ಜೀವನದಲ್ಲಿ ಇದೊಂದು ರಸಘಳಿಗೆ! ಈ ರಸಘಳಿಗೆಯನ್ನು ನಾನು ನನ್ನ ಜೀವನದಲ್ಲಿ ಮರೆಯುವುದಿಲ್ಲ. ತಮಗೆ ಅನಂತ ಧನ್ಯವಾದಗಳು" ಎಂದು ಗುರುಗಳಿಗೆ ನಮಿಸಿದನು. ಗುರುಗಳು ಪ್ರಸನ್ನವದನದಿಂದ ಆತನನ್ನು ನೋಡಿದರು. ಧನ್ಯತಾಭಾವದಿಂದ ಆತ ಅಲ್ಲಿಂದ ನಿರ್ಗಮಿಸಿದನು.
ತಮ್ಮನ್ನು ಆಶ್ಚರ್ಯಭಾವದಿಂದ ನೋಡುತ್ತಿದ್ಧ ಶಿಷ್ಯರನ್ನು ಕುರಿತು ಗುರುಗಳು ನುಡಿದರು, "ನಾನು ಯಾರಿಗೂ ಹಣ್ಣುಗಳನ್ನು ನೀಡದೆ ಒಬ್ಬನೇ ತಿಂದಿದ್ದು ನಿಮಗೆಲ್ಲರಿಗೂ ಆಶ್ಚರ್ಯ ತಂದಿರಬೇಕಲ್ಲವೇ? ಆ ವ್ಯಕ್ತಿಯು ಪ್ರೀತಿಯಿಂದ ಹಣ್ಣುಗಳನೇನೋ ತಂದುಕೊಟ್ಟ, ಆದರೆ ಆತ ತಂದ ಆ ಗೊಂಚಲಿನಲ್ಲಿದ್ದ ಎಲ್ಲ ಹಣ್ಣುಗಳೂ ತುಂಬಾ ಹುಳಿಯಾಗಿದ್ದವು. ನಾನೇನಾದರೂ ಆ ಹಣ್ಣುಗಳು ಹುಳಿ ಇವೆ ಎಂದು ಹೇಳಿದ್ದರೆ ಅಥವಾ ತಿಲ ಮಾತ್ರದಷ್ಟು ಮುಖದಲ್ಲಿ ಬೇಸರದ ಭಾವನೆಯನ್ನು ವ್ಯಕ್ತಪಡಿಸಿದ್ದರೆ, ಆತ ನೊಂದುಕೊಳ್ಳುತ್ತಿದ್ದ. ತಾನು ಹುಳಿ ಹಣ್ಣು ತಂದುಕೊಟ್ಟೆನಲ್ಲಾ ಎಂಬ ಅಪರಾಧಿಪ್ರಜ್ಞೆ ಕಾಡುತ್ತಿತ್ತು. ಈಗ ನೀವೇ ನೋಡಿದಿರಿ.. ನಾನು ಎಲ್ಲ ಹಣ್ಣುಗಳನ್ನು ತಿಂದು ಬಿಟ್ಟೆ ಎಂದು ಆತ ಅದೆಷ್ಟು ಸಂತೋಷದಿಂದ ಇಲ್ಲಿಂದ ನಿರ್ಗಮಿಸಿದ. ಅದೊಂದು ವೇಳೆ ನಾನೇನಾದರೂ ನಿಮಗೆ ಆ ಹಣ್ಣುಗಳನ್ನು ನೀಡಿದ್ದರೆ, ಅವುಗಳನ್ನು ಬಾಯಿಗೆ ಹಾಕಿ ಕೊಳ್ಳುತ್ತಲೇ ಮುಖವನ್ನು ಹಿಂಡಿಬಿಡುತ್ತಿದ್ದಿರಿ. ಅಷ್ಟು ಮಾತ್ರವಲ್ಲದೆ ಅವುಗಳನ್ನು ಉಗಿದು ಬಿಡುವ ಸಾಧ್ಯತೆಯೂ ಇತ್ತು. ಆಗ ತಾನು ಗುರುಗಳಿಗೆ ಹುಳಿಹಣ್ಣುಗಳನ್ನು ತಂದುಕೊಟ್ಟೆನಲ್ಲಾ ಎಂದು ಆ ಬಡಪಾಯಿ ನೊಂದುಕೊಂಡು ಧರೆಗಿಳಿದುಹೋಗುತ್ತಿದ್ದ. ಆ ಹುಳಿ ಹಣ್ಣುಗಳನ್ನು ತಿಂದವನು ಪ್ರತಿಕ್ರಿಯೆ ನೀಡದೆ ಇರಲು ಆಗುತ್ತಿರಲಿಲ್ಲ. ನಾನು ಮಾತ್ರ ಆತನಿಗೆ ನೋವಾಗಬಾರದೆಂದು ಪ್ರತಿಕ್ರಿಯೆ ನೀಡದೆ ನಿಯಂತ್ರಿಸಿಕೊಂಡೆ. ನನಗೆ ದ್ರಾಕ್ಷಿಹಣ್ಣಿನ ಹುಳಿಗಿಂತ ಆತನ ಮುಖದಲ್ಲಿನ ಸಂತೋಷ ಮುಖ್ಯ. ಹಣ್ಣಿನಲ್ಲಿರುವ ಹುಳಿಯನ್ನು ಸಹಿಸಿಕೊಳ್ಳಬಹುದು, ಆದರೆ ಆತನ ಪ್ರೀತಿಯಲ್ಲಿ ಹುಳಿ ಇರಲಿಲ್ಲ. ಆತನ ವಾತ್ಸಲ್ಯದಲ್ಲಿ ನನಗೆ ಅ ದ್ರಾಕ್ಷಿಯದು ಹುಳಿ ಅನ್ನಿಸಲೇ ಇಲ್ಲ. ದ್ರಾಕ್ಷಿಯಲ್ಲಿ ಹುಳಿ ಇದ್ದರೆ ಪರವಾಗಿಲ್ಲ. ಅದನ್ನು ಜೀರ್ಣಿಸಿಕೊಳ್ಳಬಹುದು, ಪ್ರೀತಿ, ಪ್ರೇಮ, ವಿಶ್ವಾಸದಲ್ಲಿ ಹುಳಿ ಇರಬಾರದು" ಎಂದರು.
ಗುರುಗಳ ಮಾತುಗಳನ್ನು ಕೇಳಿ ಅಲ್ಲಿದ್ದ ಎಲ್ಲರೂ ಮೂಕವಿಸ್ಮಿತರಾದರು. ನಮ್ಮ-ನಿಮ್ಮ ನಡುವೆ ನಮ್ಮರಿವಿಗೆ ಬಾರದ ಹಾಗೆ ಹಾಸುಹೊಕ್ಕಾಗಿರುವ ಮಹಾಪುರುಷರು, ಮಹಾನುಭಾವರು, ಅಲೌಕಿಕರು, ಯತಿಗಳು, ಸಾಮಾನ್ಯರ ಹಾಗೆ ಯೋಚಿಸುವುದಿಲ್ಲ.........
ಅಂತರಂಗದ ಕರ್ಮದ ಹುಳಿ ಕಣ್ಮರೆಯಾಗಿ ವ್ಯಕ್ತಿತ್ವದಲ್ಲಿ ಸದಾ ಮಧುರತೆ, ಮುದಭರಿತ ದಿನಚರಿ ನಮ್ಮದಾಗುತ್ತದೆ.
ಕೃಪೆ:ನಿತ್ಯ ಸತ್ಯ.
No comments:
Post a Comment