Monday, January 19, 2026

 ಕಥೆ-1010

ಚಿಂತೆಗಳ ಹೊರೆ ಚಿತೆಗೆ ಸಮ


ಒಂದು ಊರಿನಲ್ಲಿ ಒಬ್ಬ ಯುವಕನಿದ್ದ, ಅವನು ಸಣ್ಣ ಪುಟ್ಟ ವಿಷಯಗಳನ್ನು ಯೋಚಿಸುತ್ತಾ ಮತ್ತಷ್ಟು ಚಿಂತೆಗಳನ್ನು ತುಂಬಿಸಿಕೊಂಡು ಹೊರೆ ತಾಳಲಾರದೆ ದಿನವಿಡೀ ಒದ್ದಾಡುತ್ತಿದ್ದನು. ಕೆಲವೊಮ್ಮೆ ಅವನನ್ನೆ ಅವನು ಬೈದುಕೊಳ್ಳುತ್ತಿದ್ದ ಯಾಕೆ ಹುಟ್ಟಿದೆ? ಯಾಕೆ ಇಂಥ ಕಷ್ಟ ಕೊಟ್ಟೆ ಎಂದು ದೇವರನ್ನು ಕೇಳುತ್ತಿದ್ದ.ತನ್ನ ಜಾತಕ, ರಾಶಿ, ನಕ್ಷತ್ರ, ಹುಟ್ಟಿದ ಘಳಿಗೆ, ಯಾವುದು ಸರಿ ಇಲ್ಲ, ಅದೃಷ್ಟವು ನನಗೆ ಸಮಯದಲ್ಲಿ ಕೈಕೊಡುತ್ತದೆ. ಹೀಗೆ ಹೇಳುತ್ತಲೇ ಮತ್ತೆ ಇದನ್ನೇ ಮನಸ್ಸಿನಲ್ಲಿ ಯೋಚಿಸುತ್ತಿದ್ದ. ಕೆಲವೊಮ್ಮೆ ಯಾರೋ ಆಡಿದ ವ್ಯಂಗ್ಯ ಮಾತು, ಮಾಡಿದ ಅವಮಾನ ಇವುಗಳ ಸುತ್ತಲೇ ಯೋಚನೆಯನ್ನು ಹರಿಬಿಡುತ್ತಾ ಅತಿಯಾಗಿ ಅವರ ಮೇಲೆ ದ್ವೇಷ ಬೆಳೆಸಿ ಸೇಡು ತೀರಿಸಿಕೊಳ್ಳುವುದು ಹೇಗೆಂದು ಮತ್ತೆ ಅದೇ ವಿಚಾರಗಳಿಗೆ ಹೊಸರೂಪ ಕೊಟ್ಟು ಮತ್ತಷ್ಟು ಹೆಚ್ಚು ಮಾಡಿಕೊಳ್ಳುತ್ತಿದ್ದ . ಹೀಗಾಗಿ ಅವನ ಹತ್ತಿರ ಉತ್ತಮವಾದ ಗೆಳೆಯರು ಇರಲಿಲ್ಲ, ಅವನಿಗೆ ಅ

ದರಲ್ಲಿ ಆಸಕ್ತಿಯು ಇರಲಿಲ್ಲ. ಒಟ್ಟಾರೆ ಆ ಯುವಕ ಊಟ, ತಿಂಡಿ, ನಿದ್ದೆಯ ಸಮಯದಲ್ಲೂ ತನ್ನ ಸಮಸ್ಯೆಗಳನ್ನು ಮತ್ತಷ್ಟು ಹೆಣೆಯುತ್ತಾ, ಚಿಂತೆಯೆಂಬ ಬಲೆಯನ್ನು ತಾನೇ ನೇಯ್ದುಕೊಂಡು ಅದರಲ್ಲೆ ಒದ್ದಾಡುತ್ತಿದ್ದನು. 


ಇವನ ಈ ದುಸ್ಥಿತಿಯನ್ನು ಕಂಡ ಒಬ್ಬನೇ ಗೆಳೆಯ, ಬೇಕಾದಷ್ಟು ಸಲ ಬುದ್ಧಿವಾದ ಹೇಳಿದ್ದನು. ಆದರೂ ಇದರಿಂದ ಅವನು ಹೊರಬಂದಿರಲಿಲ್ಲ. ಇವನು ಇದೇ ಸ್ಥಿತಿಯಲ್ಲಿ ಇದ್ದರೆ ಹುಚ್ಚನಾಗಿಬಿಡುತ್ತಾನೆ ಎಂದು ಯೋಚಿಸಿ, ಸ್ನೇಹಿತನಿಗೆ ಹೇಳಿದನು ಇಲ್ಲೇ ಪಕ್ಕದ ಗ್ರಾಮದಲ್ಲಿ ಒಬ್ಬ ಝೆನ್ ಗುರು ಇದ್ದಾರೆ ನೀನು ಅವರ ಬಳಿ ಹೋಗಿ ನಿನ್ನ ಎಲ್ಲಾ ಸಮಸ್ಯೆಗಳನ್ನು ಹೇಳಿಕೊ, ಅವರು ಖಂಡಿತ ಏನಾದರೂ ಪರಿಹಾರ ಹೇಳುತ್ತಾರೆ. ಆ ಯುವಕ ಪಕ್ಕದ ಗ್ರಾಮಕ್ಕೆ ಬಂದು ಹಳ್ಳಿಯಲ್ಲಿದ್ದ ಗುರುಗಳ ಮನೆಯನ್ನು ಹುಡುಕಿ ಕೊಂಡು ಅಲ್ಲಿಗೆ ಬಂದನು. ಗುರುಗಳಿಗೆ ನಮಸ್ಕರಿಸಿ, ನಾನು ಚಿಂತೆಗಳಿಂದ ಬಳಲಿದ್ದೇನೆ, ಕೂತರೂ, ನಿಂತರೂ, ಮಲಗಿದರೂ ಎಲ್ಲೇ ಹೋದರು, ಯಾರೊಡನೆ ಮಾತಾಡಿದರು, ಹೇಗೆ ಇದ್ದರೂ ನನಗೆ ಏನೇನು ಯೊಚನೆಗಳು ಬಂದು ಮತ್ತು ಅವು ಎಲ್ಲೂ ಹೋಗದೆ ಅಲ್ಲೇ ಉಳಿದು ಅವುಗಳಿಂದ ನನಗೆ ಮುಕ್ತಿಯೇ ಸಿಗುವುದಿಲ್ಲ. ಮತ್ತಷ್ಟು ಹೊಸ ಹೊಸ ತೊಂದರೆಗಳಲ್ಲಿ ಸಿಲುಕಿ ಚಿಂತೆಯ ಹೊರೆಯನ್ನೇ ನಾನು ಹೊತ್ತು ಕೊಂಡಿದ್ದೇನೆ ಇದರಿಂದ ನನ್ನ ತಲೆ ಭಾರವಾಗಿದೆ ತಲೆ ಸಿಡಿಯುತ್ತಿದೆ ಇದರಿಂದ ಹೇಗೆ ಹೊರಬರಲಿ ಗುರುಗಳೇ? ದಯವಿಟ್ಟು ಮಾರ್ಗ ತೋರಿ ಎಂದು ಕಾಲಿಗೆ ನಮಸ್ಕಾರ ಮಾಡಿದನು.‌ 


ಗುರುಗಳು ಅವನ ಸಮಸ್ಯೆ ಕೇಳಿ, ಏನು ಮಾತನಾಡದೆ ಹಾಗೆ ಹೋದರು. ಇವನಿಗೆ ಅವರ ರೀತಿ ವಿಚಿತ್ರ ಅನಿಸಿದರು ಅಲ್ಲೇ ಕುಳಿತಿದ್ದ. ಸ್ವಲ್ಪ ಹೊತ್ತಿನ ನಂತರ ಗುರುಗಳು ಒಂದು ಗಾಜಿನ ಲೋಟದಲ್ಲಿ ಅರ್ಧದಷ್ಟು ನೀರು ತುಂಬಿ ಅವನ ಮುಂದೆ ನಿಂತರು. ಯುವಕನು ಏನಿರಬಹುದೆಂದು ಆಶ್ಚರ್ಯದಿಂದ ಎದ್ದು ನಿಂತನು. ಕೈ ಉದ್ದ ಮಾಡಿ ಗಾಜಿನ ಲೋಟವನ್ನು ಯುವಕನ ಮುಂದೆ ಹಿಡಿದು, ಈ ಗಾಜಿನ ಲೋಟ ಎಷ್ಟು ಭಾರವಿರಬಹುದು ಎಂದು ಕೇಳಿದರು. ಸರಿಯಾಗಿ ಗೊತ್ತಿಲ್ಲ ಆದರೆ ಹೆಚ್ಚೇನು ಭಾರ ಇರುವುದಿಲ್ಲ ಅಂದನು. ಗುರುಗಳು,ಇದನ್ನು ಹೀಗೆಯೇ ಒಂದು ನಿಮಿಷ ಹಿಡಿದು ನಿಂತರೆ ಏನಾಗುತ್ತದೆ ಎಂದು ಕೇಳಿದರು. ಆ ಯುವಕ ತಕ್ಷಣ, ಒಂದು ನಿಮಿಷ ಹಿಡಿದು ನಿಂತರೆ ಏನೂ ಆಗುವುದಿಲ್ಲ ಎಂದನು. ಒಂದು ಗಂಟೆ ಹಿಡಿದು ನಿಂತರೆ ಎಂದು ಕೇಳಿದರು, ಸ್ವಲ್ಪ ಕೈ ತೋಳು ನೋವು ಬರುತ್ತದೆ ಅಂದನು. ಒಂದು ದಿನವಿಡಿ ಹೀಗೆ ಹಿಡಿದು ( ಕೈಯನ್ನು ಉದ್ದಕ್ಕೆ ಮುಂದೆ ಚಾಚಿ) ನಿಂತರೆ ಏನಾಗುತ್ತದೆ ಎಂದಾಗ, ಯುವಕ ಹೇಳಿದ ಕೈ ತುಂಬಾ ನೋವಾಗಿ ಮಾಂಸಖಂಡಗಳು ಮರಗಟ್ಟಬಹುದು ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರಿಗೆ ತೋರಿಸಬೇಕಾಗಿ ಬರುತ್ತದೆ ಎಂದನು. 


ನೀನು ಸರಿಯಾಗಿ ಹೇಳಿದೆ ಎಂದು ಹೇಳಿ, ಪುನಃ ಗುರುಗಳು ಕೇಳಿದರು ನಾವು ಗಾಜಿನ ಲೋಟ ಹಿಡಿದು ನಿಂತ ಇಷ್ಟೂ ಸಮಯದಲ್ಲಿ ಗಾಜಿನ ಲೋಟದ ತೂಕದಲ್ಲಿ ಏನಾದರೂ ವ್ಯತ್ಯಾಸ ಆಯಿತಾ? ಅವನು ಇಲ್ಲ ಎಂದನು. ಹಾಗಾದರೆ ನನ್ನ ಕೈಗೆ ಏಕೆ ನೋವಾಯಿತು ಎಂದು ಗುರುಗಳು ಕೇಳಿದರು? ಯುವಕ ಅದಕ್ಕೆ ಉತ್ತರ ಕೊಡದೆ ತಲೆ ತಗ್ಗಿಸಿ ನಿಂತನು. ಮತ್ತೆ ಮುಂದುವರಿಸಿ ಗಾಜಿನ ಲೋಟ ಹಿಡಿದು ನಿಂತ ನನಗೆ ಕೈ ನೋವು ಬಂದರೆ ಏನು ಮಾಡಬೇಕು? ಎಂದರು . ಕೊಂಚವು ಯೋಚಿಸದೆ ಯುವಕ, ಗಾಜಿನ ಲೋಟವನ್ನು ಕೆಳಗೆ ಕೆಳಗಿಡಬೇಕು ಅಷ್ಟೇ ಎಂದನು. 


ಗುರುಗಳು ಹೇಳಿದರು, ನೋಡಿದೆಯಾ? ನಮ್ಮ ಮನಸ್ಸಿನಲ್ಲಿ ಕೆಟ್ಟ ವಿಚಾರಗಳು, ತಪ್ಪುಗಳು, ಅಪರಾಧಿಭಾವ, ಬರುವುದು ತಪ್ಪಲ್ಲ. ಆದರೆ ಅದನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಅದರ ಕುರಿತಾಗಿಯೇ ಯೋಚಿಸುತ್ತಿದ್ದರೆ, ಮನಸ್ಸು ದುರ್ಬಲಗೊಳ್ಳುತ್ತದೆ. ಸಮಸ್ಯೆಗಳ ಕುರಿತು ಹೆಚ್ಚಾಗಿ ಚಿಂತಿಸದೆ, ಮಲಗುವ ಮುನ್ನ ಎಲ್ಲಾ ಚಿಂತೆಗಳನ್ನು ಹೊರಹಾಕಿ ಮಲಗಿದರೆ, ಹೊಸ ದಿನವನ್ನು ಹೊಸದಾಗಿ ಆರಂಭಿಸಬಹುದು. ಆಗ ದೇಹ ಮನಸ್ಸು ಎರಡೂ ಸ್ವಸ್ಥವಾಗಿರುತ್ತದೆ. 


 ಮನಸ್ಸೇ ಶತ್ರುವೂ ಆಗಿದೆ, ಬಂಧುವೂ ಆಗಿದೆ...  

ಚಿಂತೆಗಳ ಹೊರೆ ಚಿತೆಗೆ ಸಮ.. ಮನಸ್ಸಿನಿಂದಲೇ ಅವನತಿ, ಮನಸ್ಸಿನಿಂದಲೇ ಉನ್ನತಿ

- ಆಶಾ ನಾಗಭೂಷಣ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು