ಕಥೆ-999
ಸಾಧನೆಗೆ ಸಾಧನ ಸಲಕರಣೆಗಳು ಬೇಕೇ ಬೇಕು.
ನಾವು ಜೀವನದಲ್ಲಿ ಏನನ್ನೇ ಸಾಧಿಸಬೇಕಾದರೂ ಕೆಲವು ಸಂಗತಿಗಳು
ತೀರಾ ಅವಶ್ಯ. ಅವುಗಳಿಗೆ ಸಾಧನ ಸಲಕರಣೆಗಳು ಎನ್ನುತ್ತಾರೆ. ನಮ್ಮ ಸಾಧನೆಯು ಲೌಕಿಕವಾಗಿರಬಹುದು ಅಥವಾ ಅಲೌಕಿಕವಾಗಿರಬಹುದು, ಸಾಧನ ಸಲಕರಣೆಗಳು ಬೇಕೇ ಬೇಕು. ನಾವು ಜೀವನದಲ್ಲಿ ಏನನ್ನು ಸಾಧಿಸಬೇಕು ಎನ್ನುತ್ತೇವೆಯೋ ಅದನ್ನು ಧ್ಯೇಯ ಅಥವಾ ಗುರಿ ಎಂದು ಕರೆಯುತ್ತಾರೆ. ಆ ಗುರಿಯ, ಧ್ಯೇಯದ ಅರಿವು ನಮಗೆ ಸ್ಪಷ್ಟವಾಗಿ ಇರಬೇಕು. ಇದು ಮೊದಲನೆಯ ಸಾಧನ ಸಲಕರಣೆ. ಇನ್ನು ಆ ಗುರಿಗೆ ತಕ್ಕ ಪರಿಶ್ರಮ ಪ್ರಯತ್ನ ನಿರಂತರವಾಗಿ ನಡೆಯಬೇಕು ಇದು ಎರಡನೆಯ ಸಾಧನ ಸಲಕರಣೆ. ಆ ಗುರಿಯನ್ನು ನಾನು ಸಾಧಿಸಲೇಬೇಕು ಸಾಧಿಸುತ್ತೇನೆ ಎಂಬ ತೀವ್ರವಾದ ಇಚ್ಛಾಶಕ್ತಿ ಇರಬೇಕು. ಇದನ್ನು ದೃಢಸಂಕಲ್ಪ ಎನ್ನುತ್ತಾರೆ.
ಇದು ಮೂರನೆಯ ಸಾಧನ ಸಲಕರಣೆ. ಜೀವನದಲ್ಲಿ ಗುರಿಯನ್ನು ತಲುಪುವುದು ಸಾಮಾನ್ಯವಾದುದಲ್ಲ. ಅದಕ್ಕೆ ಈ ತ್ರಿವಿಧ ಸಾಧನ ಸಲಕರಣೆಗಳ ಸಮರ್ಪಕ ಬಳಕೆ ಅತ್ಯವಶ್ಯ.
ಒಂದು ಸಸಿಯು ಬೆಳೆದು ಹೆಮ್ಮರವಾಗಿ ನೆರಳು, ನೆರವು, ಹಣ್ಣು-ಹಂಪಲ ಕೊಡಬೇಕಾದರೆ ಅದಕ್ಕೆ ಹದವಾದ ಭೂಮಿ, ನೀರು, ಗೊಬ್ಬರ, ಗಾಳಿ, ಬೆಳಕು ಎಲ್ಲವೂ ಬೇಕು. ವರುಷ ವರುಷಗಳವರೆಗೆ ಸಸಿಯ
ಸಂರಕ್ಷಣೆಯಾಗಬೇಕು. ಹಾಗಾದರೆ ಮಾತ್ರ ಆ ಮರವು ನಮಗೆ ಫಲ-ಪುಷ್ಪ, ನೆರಳು-ನೆರವು ನೀಡುತ್ತದೆ. ನಾವು ಜೀವನದಲ್ಲಿ ಒಳ್ಳೆಯ ಕನಸು ಕಾಣಬಾರದು ಎಂದಲ್ಲ. ಆದರೆ ಆ ಕನಸು ನನಸಾಗಬೇಕಾದರೆ ಇಷ್ಟೆಲ್ಲ ಸಾಧನ- ಸಲಕರಣೆ ಬೇಕು. ನಮ್ಮ ಕಂಡ ಕನಸಿನ ಅಥವಾ ಗುರಿಯ ಅರಿವು,ಆ ಗುರಿಗೆ ತಕ್ಕ ಪರಿಶ್ರಮ ಹಾಗೂ ಗುರಿಯನ್ನು ನಾನು ತಲುಪುತ್ತೇನೆ ಎಂಬ ದೃಢಸಂಕಲ್ಪ ಈ ತ್ರಿವಿಧ ಸಾಧನ ಸಲಕರಣೆಗಳು ಇರುವುದಾದರೆ
ನಾವು ಖಂಡಿತವಾಗಿ ಗುರಿಯನ್ನು ತಲುಪುತ್ತೇವೆ. ಜೀವನದಲ್ಲಿ ಯಶಸ್ಸನ್ನು
ಪಡೆಯುತ್ತೇವೆ.
- ಶ್ರೀ ಸಿದ್ಧೇಶ್ವರ ಸ್ವಾಮಿಜಿ
No comments:
Post a Comment