ಕಥೆ-1035
ನೋಡುವ ದೃಷ್ಟಿ ಬಹುಮುಖ್ಯ
ಒಮ್ಮೆ ಸಾಕ್ರಟೀಸ್‌ನ ಹತ್ತಿರ ಒಬ್ಬ ಯುವಕ ಬಂದು ಕೇಳಿದ, 'ಗುರುಗಳೇ ನಾನು ಲಗ್ನವಾಗಿ ನಾಲ್ಕು ವರುಷವಾಯಿತು. ಮೊದಲು ಇಷ್ಟಪಟ್ಟೆ ಮದುವೆಯಾದೆ, ಆದರೆ, ಈಗ ಗೊತ್ತಾಯ್ತು ನನ್ನ ಹೆಂಡತಿ ಅತ್ಯಂತ ಕುರೂಪಿ ಎಂದು. ನಾನು ಸಣ್ಣವ. 50-60 ವರ್ಷಗಳ ಕಾಲ ಆ ಕುರೂಪಿ ಹೆಂಡತಿಯೊಡನೆ ಬದುಕುವುದೆಂತು?
ನನ್ನ ಪೂರ್ಣ ಬದುಕೇ ಹಾಳಾಯಿತು! ಏನಾದರೂ ಉಪಾಯ ಹೇಳಿ!
ಸಾಕ್ರೆಟಿಸ್ ಹೇಳಿದ, ''ಅದಕ್ಕೇಕೆ ಚಿಂತಿಸುವಿ? ಅದು ಸುಲಭವಾಗಿ ಬಿಡಿಸಬಹುದಾದ ಸಮಸ್ಯೆ. ಇದಕ್ಕೆಲ್ಲ ಕಾರಣ ನಿನ್ನ ದೃಷ್ಟಿ ... ಮೊದಲು ಯಾವ ದೃಷ್ಟಿಯಿಂದ ನೋಡಿ ಲಗ್ನವಾದಿಯಲ್ಲ ಆ ದೃಷ್ಟಿಗೆ ಕುರೂಪ ಕಾಣದು, ಕಂಡಿಲ್ಲ, ಅಂದು ಇದೇ ಹೆಂಡತಿಯಲ್ಲಿ ಮೋಹಕ ಸೌಂದರ್ಯ ಕಂಡಿತ್ತು. ಅದನ್ನು ಕಂಡು ನೀ ಹುಚ್ಚನಾದೆ! ಅಷ್ಟು ಸೌಂದರ್ಯ, ಆ ಪ್ರೇಮದೃಷ್ಟಿಯಿಂದ ಮತ್ತೆ ಆಕೆಯತ್ತ ನೋಡಲು ಪ್ರಾರಂಭಿಸು, ಅದೇ ಹೆಂಡತಿ ಸುಂದರಳಾಗಿ ಅಪ್ರತಿಮ ರೂಪವತಿಯಾಗಿ ಕಾಣುತ್ತಾಳೆ. ದೃಷ್ಟಿ ತೆರೆ, ನಿನ್ನ ಬದುಕು ಸ್ವರ್ಗಸಮವಾಗುತ್ತದೆ!''
ಸಾಕ್ರಟೀಸ್‌ನ ಹೆಂಡತಿಯೂ ಒರಟು, ಛಲವಾದಿ, ಬಿರುಸಾದ ಭಾಷೆ ಆಕೆಯದು. ಸದಾ ಬೈಗುಳ, ಜಗಳ ಮಾಡುವುದರಲ್ಲಿ ಆಕೆಗೆ ಸಮರಿಲ್ಲ ಎನ್ನಿ. ಆದರೇನು? ಸಾಕ್ರಟೀಸ್ ಅವಳನ್ನು ಪ್ರೇಮದೃಷ್ಟಿಯಿಂದ ನೋಡಿದ. ಅಂಥ ಹೆಂಡತಿಯೊಂದಿಗಿದ್ದರೂ ಅವರ ಮನೆ ಸೌಖ್ಯಮಂದಿರವಾಗಿತ್ತು.
ಮಧುರತೆ ಹೃದಯದಲ್ಲಿ, ಸೌಂದರ್ಯ ನೋಟದಲ್ಲಿ ಇದ್ದರೆ ಜಗತ್ತು ಜನಾಂಗ ಹೇಗಿದ್ದರೂ ಅದು ಅಂದವಾಗಿ ಚಂದವಾಗಿ ಕಾಣುತ್ತದೆ. ಆಗ ಒಂದು ಬ್ರೆಡ್ಡಿನ ತುಣುಕೂ ಮೃಷ್ಟಾನ್ನವೇ. ಅನ್ನದ ಗಂಜಿ ಅಮೃತ. ಪುಟ್ಟ ಮನೆಯು ಮಹಲೆ! ಬದುಕು ಆನಂದದಾಯಕವಾಗಿ ಬಿಡುತ್ತದೆ..
ಕೃಪೆ ಅಂತರ್ಜಾಲ
No comments:
Post a Comment