ಕಥೆ-1039
ಪರೋಪಕಾರ
ರಾಮಕೃಷ್ಣ ಪರಮಹಂಸರು ‘ಪರೋಪಕಾರ’ ಅನ್ನುವ ಪದ ಬಳಕೆಯನ್ನೇ ವಿರೋಧಿಸುತ್ತಿದ್ದರು. ನಾವು ಮತ್ತೊಬ್ಬರಿಗಾಗಿ ಏನನ್ನಾದರೂ ಮಾಡುವುದರಿಂದ ನಮಗೆ ನಾವೆ ಉಪಕರಿಸಿಕೊಳ್ಳುತ್ತೇವೆ. ಉಪಕಾರ ಅಂದರೆ ಉಪಕಾರ ಅಷ್ಟೇ, ಅದು ಮತ್ತೊಬ್ಬರಿಗೆ ಮಾಡುವುದಲ್ಲ, ನಮಗೆ ನಾವೇ ಮಾಡಿಕೊಳ್ಳುವುದು ಅನ್ನುತ್ತಿದ್ದರು. ಉಪಕಾರ ನಮ್ಮಲ್ಲಿ ಸ್ವಾರ್ಥ ಲೋಭ ಮೋಹಗಳು ತಲೆ ಎತ್ತದಂತೆ ಮಾಡುತ್ತವೆ. ನಮ್ಮನ್ನು ಸಾತ್ವಿಕರನ್ನಾಗಿಸುತ್ತದೆ. ನಮ್ಮ ಬದುಕಿಗೆ ಶಾಂತಿ – ನೆಮ್ಮದಿ ನೀಡುತ್ತವೆ. ಆದ್ದರಿಂದ, ಉಪಕಾರ ಮಾಡುವ ಅವಕಾಶ ಸಿಕ್ಕರೆ, ಅದಕ್ಕಾಗಿ ನಾವು ಋಣಿಯಾಗಿರಬೇಕೆಂದು ಅವರು ಹೇಳುತ್ತಿದ್ದರು.
ಸೃಷ್ಟಿಯ ಪ್ರತಿಯೊಂದೂ ಮತ್ತೊಂದಕ್ಕೆ ಪ್ರಯೋಜನಕಾರಿ ಆಗಿರುತ್ತದೆ. ಅದು ಅತ್ಯಂತ ಸಹಜ ಸಂಗತಿ. ಯಾವ ನದಿಯೂ ನೆಲದ ಒಡಲಿಂದ ಚಿಮ್ಮುವಾಗ ನಾನು ಜೀವರಾಶಿಯ ಪ್ರಯೋಜನಕ್ಕೆ ಬರಬೇಕೆಂದು ಚಿಮ್ಮೋದಿಲ್ಲ. ಅದೊಂದು ಪ್ರಾಕೃತಿಕ ಘಟನೆಯಷ್ಟೇ. ಆದರೆ ಮನುಷ್ಯರೂ ಸೇರಿದಂತೆ ಎಲ್ಲ ಜೀವರಾಶಿಗಳೂ ನದಿಯ ನೀರಿನ ಪ್ರಯೋಜನ ಪಡೆಯುತ್ತವೆ. ಯಾವ ಮರವೂ ಜನ ಹಣ್ಣು ತಿನ್ನಲೆಂದು ಫಲಿಸೋದಿಲ್ಲ. ಅದರ ಸಂತಾನೋತ್ಪತ್ತಿ ಚಕ್ರದ ಒಂದು ಹಂತವು ಮನುಷ್ಯರು ಮತ್ತಿತರ ಪ್ರಾಣಿ – ಪಕ್ಷಿಗಳಿಗೆ ಒದಗುತ್ತವೆ. ಅದೇ ರೀತಿ ಮನುಷ್ಯರೂ ಸೇರಿದಂತೆ ಎಲ್ಲ ಜೀವರಾಶಿಗಳೂ ಒಂದಲ್ಲ ಒಂದು ರೀತಿಯಲ್ಲಿ ಒಂದರಿಂದ ಮತ್ತೊಂದು ಪ್ರಯೋಜನ ಪಡೆಯುತ್ತಲೇ ಇರುತ್ತವೆ.
ಆದ್ದರಿಂದ, ಪರೋಪಕಾರವನ್ನು ಸಾಧನೆಯಾಗಿ ನೋಡಬೇಕಿಲ್ಲ, ಅದೊಂದು ಅತ್ಯಂತ ಸಹಜ ಮತ್ತು ಪ್ರಾಕೃತಿಕ ಘಟನೆಯನ್ನಾಗಿ ನೋಡಬೇಕು. ನಮ್ಮಿಂದ ಮತ್ತೊಬ್ಬರು ಪ್ರಯೋಜನ ಪಡೆಯಲು ಅನುವು ಮಾಡಿಕೊಡಬೇಕು. ನಮ್ಮಿಂದ ಮತ್ತೊಬ್ಬರು ಏನಾದರೂ ಪಡೆಯುವಂತಿದ್ದರೆ, ಕನಿಷ್ಠ ಅದಕ್ಕೆ ಅವಕಾಶ ಕೊಡಬೇಕು. ಆಗ ಮಾತ್ರ ಈ ಸೃಷ್ಟಿಯಲ್ಲಿ ನಾವು ಪಡೆಯುತ್ತಿರುವ ಸಮಾಜದ ಪಾಲಿಗೆ ನ್ಯಾಯ ಸಲ್ಲಿಸಿದಂತೆ ಆಗುವುದು.
- ಕೃಪೆ ಅಂತರ್ಜಾಲ
No comments:
Post a Comment