ಕಥೆ-679
ಒಳ್ಳೆಯತನ ಇದೆ, ಅದಕ್ಕೆ ಅತ್ಯುತ್ತಮ ಬೆಲೆನೂ ಇದೆ
ಫ್ರಾನ್ಸಿನ ಈ ಮೂವತ್ತೊಂಬತ್ತು ವರ್ಷದ ವ್ಯಕ್ತಿಯ ತಂದೆ ಫ್ರಾನ್ಸ್‌ನಲ್ಲಿ ನೆಲೆನಿಲ್ಲುವ ಮೊದಲು ಐವರಿ ಕೋಸ್ಟ್ ಅನ್ನುವ ದೇಶದಲ್ಲಿ ಕೆಲಸ ಮಾಡುತ್ತಿದ್ದರಂತೆ. ಅಲ್ಲಿ ಈ ವ್ಯಕ್ತಿ ಪುಟ್ಟ ಮಗುವಾಗಿದ್ದಾಗ ಆತನನ್ನು ನೋಡಿಕೊಳ್ಳುತ್ತಿದ್ದ ನ್ಯಾನಿ ಈಕೆ. ಮೂವತ್ತೆಂಟು ವರ್ಷದ ಹಿಂದೆ ತನ್ನನ್ನು ನೋಡಿಕೊಳ್ಳುತ್ತಿದ್ದ ನ್ಯಾನಿಯನ್ನು ಭೇಟಿ ಮಾಡಲು 6000 ಚಿಲ್ಲರೆ ಕಿಲೋಮೀಟರ್ ದೂರದ ಐವರಿ ಕೋಸ್ಟ್ ಗೆ ಹೋಗಿ ಆಕೆಯನ್ನು ಭೇಟಿಯಾಗಿದ್ದಾನೆ ಈ ವ್ಯಕ್ತಿ. ಆಕೆಯನ್ನು ನೋಡಿ ಆತನ ಖುಶಿಗೂ ಅಂತೆಯೇ ಅನಿರೀಕ್ಷಿತವಾಗಿ ಬಂದ ಈ ವ್ಯಕ್ತಿಯನ್ನು ನೋಡಿ ಆಕೆಯ ಖುಶಿಗೂ ಎಲ್ಲೆ ಇರಲಿಲ್ಲ. ಆಕೆಗೆ ಹತ್ತು ಮಿಲಿಯನ್ ಫ್ರ್ಯಾಂಕ್ ಹಣ ಕೊಟ್ಟು ಮೇಲಾಗಿ ಪ್ರತೀ ತಿಂಗಳೂ ಹಣ ಕೊಡುವ ವ್ಯವಸ್ಥೆ ಮಾಡಿದ್ದಾನೆ ಈ ಹೃದಯವಂತ. ಒಳ್ಳೆಯತನ ಕಳೆದುಹೋಗಿದೆ ಎಂದು ಗೋಳಾಡುತ್ತಿರುತ್ತೇವೆ. ಒಳ್ಳೆಯತನ ಇದೆ, ಆದರೆ ನಾವು ನೆಗೆಟಿವ್ ಸಂಗತಿಗಳನ್ನು ವೈರಲ್ ಮಾಡುತ್ತಿದ್ದೇವೆ ಅಷ್ಟೇ. ನಿಜ, ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ.
-ದೀಪಾಹಿರೇಗುತ್ತಿ
