ಕಥೆ-927
ನಿಷ್ಕಾಮ ಕರ್ಮದ ಸಂದೇಶ
https://basapurs.blogspot.com/
ಕಾನ್‌ಫೂಸಿಯಸ್ ಮಹಾನ್ ಸಂತ. ಹತ್ತಾರು ವರ್ಷ ದೇಶವನ್ನೆಲ್ಲ ಸುತ್ತಾಡಿ ಸತ್ಯ-ಸಂದೇಶ ಸಾರಿದ. ಆತನ ಕಠಿಣ ಪರಿಶ್ರಮದಿಂದ ದೇಶದ ಜನರೆಲ್ಲ ನೀತಿವಂತರು, ಪ್ರಾಮಾಣಿಕರು, ಶಾಂತಿಪ್ರಿಯರು ಆದರು.ಕಾನ್‌ಫೂಸಿಯಸ್‌ನಿಗೆ ಹಿಡಿಸಲಾರದಷ್ಟು ಸಂತೋಷ! ಮುಂದೆ ಕೆಲವೇ ದಿನಗಳು ಹೋಗಲಿಲ್ಲ. ಮತ್ತೆ ದೇಶ ಮೊದಲಗಿಂತಲೂ ಹೆಚ್ಚು ಅಧಃಪತನವಾಯಿತು ! ಕಾನ್‌ಫೂಸಿಯಸ್ ಚಿಂತಾಕ್ರಾಂತನಾದ ಒಂದು ದಿನ ಕಾನ್‌ಫೂಸಿಯಸ್‌ಗೆ ಲಾವೋತ್ಸೆಯವರ ಭೇಟಿಯಾಯಿತು.
ಲಾವೋತ್ಸೆ ಕೇಳಿದರು- “ಅದೇಕೆ ನೀವು ಚಿಂತಾಕ್ರಾಂತರಾಗಿ ಇರುವಿರಲ್ಲ?
ಕಾನ್‌ಫೂಸಿಯಸ್ ಹೇಳಿದ. "ಏನು ಮಾಡಲಿ, ಎಷ್ಟೋ ವರ್ಷ ಕಷ್ಟಪಟ್ಟು ರಾಜಾಶ್ರಯ ಪಡೆದು, ದೇಶವನ್ನೆಲ್ಲ ಸುಶೀಲವನ್ನಾಗಿಸಿದ್ದೆ. ಆದರೆ ಈಗ ದೇಶ ಮೊದಲಿಗಿಂತ ಕೆಟ್ಟು ಹೋಗಿದೆ. ನನ್ನ ಶ್ರಮವೆಲ್ಲ ವ್ಯರ್ಥವಾಗಿದೆ!”
ಲಾವೋತ್ಸೆ ಹೇಳಿದರು- “ಈ ಜಗತ್ತು ಹೀಗೆಯೇ ಇರೋದು. ನಮ್ಮ ಕೈಲಾದಷ್ಟು ಸೇವೆ ಮಾಡಿ ಸುಮ್ಮನಿರಬೇಕು. ಪ್ರತಿಫಲದ ಚಿಂತೆ ನಮಗೇಕೆ?” ಈ ಮಾತನ್ನು ಕೇಳುತ್ತಲೇ ಕಾನ್‌ಫೂಶಿಯಸ್‌ನ ಹೃದಯದಲ್ಲಿ ಶಾಂತಿ ಚಂದ್ರನುದಯಸಿದ್ದ. ಮುಖದಲ್ಲಿ ನಿಷ್ಕಾಮತ್ವದ ನಗೆ ಹೂವು
ಅರಳಿತ್ತು!!
ಕಸಬರಿಗೆಯು ಮನೆ-ಮಾರು, ಊರು-ಕೇರಿ, ದೇಶ-ಕೋಶ ಎಲ್ಲವನ್ನೂ ಗುಡಿಸಿ ಸ್ವಚ್ಛ ಮಾಡುತ್ತದೆ. ಮರುದಿನ ಮತ್ತೆ ಕಸ ಬೀಳುತ್ತದೆ.ಕಸಬರಿಗೆ ಒಂದಿಷ್ಟೂ ಬೇಸರಿಸದೆ ಮತ್ತೆ ಗುಡಿಸುತ್ತದೆ, ಮತ್ತೆ ಕಸಬೀಳುತ್ತದೆ.
ಕಸಬರಿಗೆಯು ಹಾಗೆಯೇ ಕಸಗುಡಿಸುತ್ತಲೇ ಇರುತ್ತದೆ. ಅದಕ್ಕೆ ಆಸರಿಕೆ ಬೇಸರಿಕೆ ಎಂಬುದೇ ಇಲ್ಲ ! ಅಂತೆಯೇ ನಮ್ಮ ಮನೆ-ಮಾರು ನಿತ್ಯ ನೂತನವಾಗಿರುತ್ತವೆ. ಕಸಬರಿಗೆಯು ಈ ಜಗತ್ತಿಗೆ ನಿಷ್ಕಾಮ ಕರ್ಮದ ಸಂದೇಶ ಸಾರುತ್ತದೆ !
ಶ್ರೀ *ಸಿದ್ಧೇಶ್ವರ ಸ್ವಾಮೀಜಿ*