ಶಿಕ್ಷಣರಂಗದಲ್ಲಿ ಹೊಸರೀತಿಯ ಗಾಳಿ ಬೀಸುತ್ತಿದೆ. ತಜ್ಞರ ಅನುಭವದ ಆಧಾರದ ಮೇಲೆ ಮಕ್ಕಳ ಕಲಿಕೆಗೆ ವಿನೂತನ ಯೋಜನೆಗಳು ಜಾರಿಯಾಗುತ್ತಿವೆ. ಶಾಲೆಗಳು ಸುಂದರ ಗೊಳ್ಳುತ್ತಿವೆ. ಕಲಿಕೆಗೆ ಪೂರಕವಾದ ಸಾಮಗ್ರಿಗಳು ತರಗತಿ ಕೊಠಡಿಯನ್ನು ಪ್ರವೇಶಿಸುತ್ತಿವೆ. ಇಂತಹ ಉಪಕರಣಗಳಲ್ಲಿ ಮಕ್ಕಳ ಪ್ರತ್ಯಕ್ಷ ಕಲಿಕೆಯನ್ನು ಗಟ್ಟಿಗೊಳಿಸುವ ವಿಜ್ಞಾನ ಉಪಕರಣಗಳೂ ಇವೆ. ಈ ವಿಜ್ಞಾನ ಸಾಧನಗಳನ್ನು ಸಕರ್ಾರಿ ಶಾಲೆಯಾದಿಯಾಗಿ ಎಲ್ಲಾ ಶಾಲೆಗಳಲ್ಲಿ ಬಳಸಲು ವಿಜ್ಞಾನ ಪ್ರಯೋಗಾಲಯಗಳು ಪ್ರಾರಂಭಗೊಂಡಿವೆ.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಪ್ರಯೋಗಗಳನ್ನು ಮಾಡುವ ಕೌಶಲ ವೃದ್ಧಿಸಲು ಈ ಪ್ರಯೋಗಾಲಯಗಳು ನೆರವಾಗುತ್ತವೆ. ನಮ್ಮಲ್ಲಿ ಅನೇಕ ವಿಜ್ಞಾನ ಶಿಕ್ಷಕರಿಗೆ ಪ್ರಯೋಗಾಲಯದ ಉಪಕರಣಗಳನ್ನು ವ್ಯವಸ್ಥಿತವಾಗಿ ಜೋಡಿಸಿ, ಸಮಯಕ್ಕೆ ಸರಿಯಾಗಿ ಬಳಕೆಯಾಗುವಂತೆ ಮಾಡಿಕೊಳ್ಳುವುದು ಸವಾಲಿನ ಕೆಲಸ. ವಿಜ್ಞಾನ ಪ್ರಯೋಗಾಲಯ ಪ್ರಾರಂಭಿಸಿದರೆ ಹೆಚ್ಚು ಲಾಭವಿಲ್ಲ. ಅದರ ಬದಲಾಗಿ ಅದು ಸದ್ಬಳಕೆಯಾಗಿ ವಿದ್ಯಾರ್ಥಿಗಳ ಜ್ಞಾನತೃಷೆಯನ್ನು ತಣಿಸಲು ನೆರವಾದಲ್ಲಿ ಹೆಚ್ಚು ಪರಿಣಾಮಕಾರಿಯಾಗುತ್ತದೆ. ವಿಜ್ಞಾನ ಪ್ರಯೋಗಾಲಯದ ಯಶಸ್ವಿ ಬಳಕೆಗೆ ಕೆಲವು ಅಂಶಗಳತ್ತ ವಿಜ್ಞಾನ ಶಿಕ್ಷಕರು ಕಾಳಜಿವಹಿಸಲೇಬೇಕು. ಅವುಗಳಲ್ಲಿ ಅತ್ಯಂತ ಮಹತ್ವದ ಹತ್ತು ಅಂಶಗಳನ್ನು ಗುರುತಿಸಲಾಗಿದೆ.
ಸುರಕ್ಷತೆ:- ಅನೇಕ ಪ್ರಯೋಗಾಲಯಗಳಲ್ಲಿ ಅದರಲ್ಲೂ ರಸಾಯನ ಶಾಸ್ತ್ರಕ್ಕೆ ಸಂಬಂಧಿಸಿದ ನಿಧಾನವಾಗಿ-ಅರಿವಿಲ್ಲದಂತೆ ಅಪಾಯವನ್ನು ಬೀರುವ ಸಾಮಥ್ರ್ಯವುಳ್ಳ ರಾಸಾಯನಿಕಗಳಿರುತ್ತವೆ. ಹಾಗಾಗಿ ಪ್ರಯೋಗಾಲಯಗಳಲ್ಲಿ ಅವುಗಳ ಸುರಕ್ಷತೆಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಂಡಿರಬೇಕು. ಶಿಕ್ಷಕರು ಅಂಥವುಗಳಿಂದಾಗುವ ಎಲ್ಲ ಪರಿಣಾಮಗಳ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿರಬೇಕು. ಅದರಂತೆ ಪ್ರಯೋಗಗಳು ನಡೆವ ಸಮಯದಲ್ಲಿ ಎಲ್ಲ ಚಟುವಟಿಕೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸುತ್ತಿರಬೇಕು. ಕೆಲ ಅಗತ್ಯವಾದ ಮಾರ್ಗದರ್ಶನವನ್ನು ಮಕ್ಕಳಿಗೆ ನೀಡುತ್ತಿರಬೇಕು. ಇಲ್ಲದಿದ್ದಲ್ಲಿ ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲರಿಗೂ ಅಪಾಯ ಎದುರಾಗಬಹುದು. ಹಾಗಾಗಿ ಅಂಥವುಗಳ ಬಗ್ಗೆ ಸಾಕಷ್ಟು ಮುಂಜಾಗ್ರತೆ ವಹಿಸಿ ಸುರಕ್ಷತೆಗೆ ಗಮನ ನೀಡಬೇಕು.
ಗೊಂದಲ ವಿಷಯಗಳ ನಿರ್ವಹಣೆ:- ವಿಜ್ಞಾನದಲ್ಲಿ ಗೊಂದಲದ ವಿಷಯಗಳು ಸಾಕಷ್ಟಿವೆ. ಅದಕ್ಕೆ ಶಿಕ್ಷಕರು ನೂತನ ಆವಿಷ್ಕಾರಗಳನ್ನು ಗಮನಿಸುತ್ತಿರಬೇಕು. ಪಠ್ಯಕ್ರಮದಲ್ಲಿ ನೀಡಿರುವ ಮಾಹಿತಿಗಳನ್ನು ಅನುಸರಿಸಿ ಯೋಜನೆಗಳನ್ನು ಸಿದ್ಧಪಡಿಸಿ, ಅದಕ್ಕನುಗುಣವಾಗಿ ಪ್ರಯೋಗಗಳನ್ನು ರೂಪಿಸಬೇಕು. ಮುಂದೆ ಪರೀಕ್ಷೆಗಳಲ್ಲಿ ಹೆಚ್ಚು ನೆರವಾಗುವುದನ್ನು ಶಿಕ್ಷಕರು ಗಮನದಲ್ಲಿಟ್ಟಿರಬೇಕು. ಆದಷ್ಟು ಮಕ್ಕಳಿಗೆ ಗೊಂದಲವುಂಟುಮಾಡಬಾರದು. ವಿಷಯವೇ ಗೊಂದಲವಾದಲ್ಲಿ ಪ್ರಯೋಗಗಳ ಖಚಿತ ಫಲಿತಾಂಶ ಪಡೆಯಲು ಸಾಧ್ಯವಿಲ್ಲ.
ಜ್ಞಾನ ಮತ್ತು ತಿಳುವಳಿಕೆ:- ವಿಜ್ಞಾನದ ಪಠ್ಯಕ್ರಮದಲ್ಲಿರುವ ಅನೇಕ ಅಂಶಗಳು ಸಾಕಷ್ಟು ಆಳ ಮತ್ತು ವಿಶಾಲತೆಯನ್ನು ಪಡೆದಿವೆ. ಅವುಗಳ ಕುರಿತು ಸಂಪೂರ್ಣವಾಗಿ ಮತ್ತು ಪ್ರತ್ಯೇಕವಾಗಿ ತಿಳುವಳಿಕೆ ನೀಡಲು ಸಮಯ ಸಾಕಾಗುವುದಿಲ್ಲ. ಶಿಕ್ಷಕರಿಗೆ ಪಠ್ಯಕ್ರಮದ ಕುರಿತು ಯಾವಾಗಲೂ ಸಂಘರ್ಷವಿರುತ್ತದೆ. ಸಮಯದ ಅಭಾವದಂತಹ ಯಾವುದೋ ಕಾರಣದಿಂದಾಗಿ ಸಂಪೂರ್ಣ ಕಲಿಕೆಗೆ ಅಡ್ಡಿಯಾಗಿರುತ್ತವೆ. ಹಾಗಾಗಿ ಅಂಥ ಸಂದರ್ಭದಲ್ಲಿ ಆಳವಾದ ಜ್ಞಾನ ನೀಡುವ ಬದಲು ಶಿಕ್ಷಕರು ತಿಳುವಳಿಕೆಗೆ ಬೇಕಾದಷ್ಟನ್ನು ಹೇಳುತ್ತಾರೆ. ಅಂತಹ ಅಂಶಗಳಿಗೆ ಪೂರಕವಾದ ಪ್ರಯೋಗಗಳನ್ನು ಪ್ರದರ್ಶನ ಮಾಡಿದಲ್ಲಿ ಸಫಲತೆ ಪಡೆಯಬಹುದು.
ಸಮಯದ ಸದ್ಬಳಕೆ:- ಪ್ರಯೋಗಾಲ ಯಗಳಲ್ಲಿ ಪ್ರತಿ ಕ್ಷಣವನ್ನೂ ಉಪಯೋಗ ಮಾಡಿಕೊಳ್ಳಬೇಕು. ಆದರೂ ಕೆಲವು ಸಾರಿ ಪ್ರಯೋಗಗಳನ್ನು ಸಿದ್ಧಪಡಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಆ ಸಮಯವನ್ನು ತರಗತಿಯ ಅವಧಿ ಯಲ್ಲಿ ಬಳಸಿಕೊಂಡರೆ ಎಲ್ಲ ಮಕ್ಕಳ ಅಮೂಲ್ಯ ವೇಳೆಯನ್ನು ಹಾಳು ಮಾಡಿ ದಂತೆ. ಹಾಗಾಗಿ ಶಾಲಾ ಆರಂಭಕ್ಕಿಂತ ಮುಂಚೆ ಇಲ್ಲವೇ ಶಾಲೆ ಮುಗಿದ ಮೇಲೆ ಸಿದ್ಧತೆಗಾಗಿ ಸಮಯವನ್ನು ಬಳಸಿಕೊಳ್ಳುವುದು ಉತ್ತಮ.
ಅವಧಿಗಳ ಹೊಂದಾಣಿಕೆ:- ಶಾಲೆಗಳಲ್ಲಿ ವಿಜ್ಞಾನ ಸೇರಿದಂತೆ ಎಲ್ಲಾ ವಿಷಯಗಳಿಗೂ ಪಿರಿಯಡ್ಗಳು ನಿಗದಿಯಾಗಿರುತ್ತವೆ. ಕೆಲವು ಸಾರಿ ಒಂದು ಅವಧಿಗೆ ಪ್ರಯೋಗವನ್ನು ಸಂಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಅದನ್ನು ಮರುದಿನಕ್ಕೆ ಮುಂದೂಡಲೂ ಬರುವಂತಿದ್ದರೆ ಮುಂದೂಡಬಹುದು. ಆದರೆ ರಾಸಾಯನಿಕ ಪ್ರಯೋಗಗಳ ಪರಿಣಾಮಗಳನ್ನು ಆಗಲೇ ಪರೀಕ್ಷಿಸಬೇಕಾಗಿರುತ್ತದೆ. ಅದಕ್ಕೆ ಹೆಚ್ಚು ಸಮಯ ಸಿಗುವ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅವಧಿ ಹಾಗೂ ಪ್ರಯೋಗಗಳ ಹೊಂದಾಣಿಕೆ ಆ ಶಿಕ್ಷಕರ ಜಾಣ್ಮೆಯನ್ನು ಅವಲಂಬಿಸಿದೆ.
ಹಣದ ಅಭಾವ:- ವಿಜ್ಞಾನ ಪ್ರಯೋಗಾಲಯಕ್ಕೆ ಮತ್ತು ಅಗತ್ಯ ಉಪಕರಣಗಳಿಗೆ ಹಣದ ಅಗತ್ಯವಿದೆ. ಅದರಿಂದ ಅನೇಕ ಶಿಕ್ಷಕರು ಪ್ರಯೋಗಗಳನ್ನು ಮಾಡಿದರೆ ಖರ್ಚು ಮೈಮೇಲೆ ಬರುತ್ತದೆಂದು ಪ್ರಯೋಗಗಳಿಗೆ ಕೈ ಹಾಕುವುದಿಲ್ಲ. ಅದಕ್ಕೆ ಸಾಧ್ಯವಾದಷ್ಟು ಶಾಲೆಯ ಬೇರೆ ನಿಧಿ, ದಾನಿಗಳು ಸೇರಿದಂತೆ ಇತರೆ ಮೂಲಗಳನ್ನು ಹುಡುಕಿ ಸಾಮಗ್ರಿಗಳನ್ನು ಖರೀದಿಸಬೇಕಾಗುತ್ತದೆ. ಪ್ರಯೋಗ ಮಾಡಲು ಶಿಕ್ಷಕರ ಮನೋಭಾವದಲ್ಲಿ ಬದಲಾವಣೆ ಆಗಬೇಕಿದೆ.
ಸೌಲಭ್ಯಗಳ ಕೊರತೆ:- ನಮ್ಮ ಪ್ರತಿ ಶಾಲೆಯಲ್ಲೂ ಪ್ರಯೋಗಾಲದ ಅಗತ್ಯವಿದೆ. ಕೆಲೇ ಶಾಲೆಗಳಲ್ಲಿ ಪ್ರಯೋಗಾಲಯವಿದೆಯಾದರೂ ಸಾಕಾಗುವಷ್ಟು ಸಾಮಗ್ರಿಗಳಿರುವುದಿಲ್ಲ. ಇದ್ದರೂ ಅವು ಕೆಲವೇ ಇರುತ್ತವೆ. ಇದರಿಂದ ಒಂದು ಪ್ರಯೋಗವನ್ನು ಎಲ್ಲಾ ಮಕ್ಕಳೂ ಒಂದೇ ಸಾರಿಗೆ ಮಾಡಲು ಬೇಕಾದ ಸಾಮಗ್ರಿಗಳು ದೊರೆಯುವುದಿಲ್ಲ. ಅದಕ್ಕೆ ಶಿಕ್ಷಕರು ಗುಂಪುಗಳನ್ನು ಮಾಡಿ ಕಲಿಸಿದರೆ ಹೆಚ್ಚು ಅನುಕೂಲ.
ಪೂರ್ವಭಾವಿ ಮಾಹಿತಿ ನೀಡಬೇಕು:- ಪ್ರಯೋಗಗಳನ್ನು ನಡೆಸುವುದಕ್ಕಿಂತ ಮುಂಚೆ ಮಕ್ಕಳಿಗೆ ಆ ವಿಷಯ ಹಾಗೂ ಪ್ರಯೋಗದ ವಿವರಗಳನ್ನು ಸಂಪೂರ್ಣವಾಗಿ ನೀಡಬೇಕು. ಅವುಗಳ ಸ್ಪಷ್ಟ ಕಲ್ಪನೆ ಇಲ್ಲದೆ ಇದ್ದಲ್ಲಿ ಪ್ರಯೋಗ ಅರ್ಥವಾಗದು.
ಗ್ರೇಡ್ ನೀಡುವಿಕೆ:- ನಮ್ಮಲ್ಲಿ ಸಾಮಾನ್ಯವಾಗಿ ಪ್ರಯೋಗಾಲಯಗಳಲ್ಲಿ ಗುಂಪು ಕಲಿಕೆ ಮಾಡಿಸುತ್ತೇವೆ. ಇದು ಒಂದು ಕಡೆ ಒಳ್ಳೆಯದಾದರೆ ಮತ್ತೊಂದೆಡೆ ಶಿಕ್ಷಕರಿಗೆ ಗ್ರೇಡ್ ನೀಡುವಿಕೆಯಲ್ಲಿ ಸಮಸ್ಯೆಯಾಗುತ್ತದೆ. ಅಂದರೆ ಪ್ರಯೋಗಾಲಕ್ಕೆ ಸಂಬಂಧಿಸಿದಂತೆ ಮಕ್ಕಳ ವೈಯಕ್ತಿಕ ಗ್ರೇಡ್ ನೀಡುವುದು ಸವಾಲಿನ ಕೆಲಸವಾಗುತ್ತದೆ. ಪ್ರತಿ ಮಕ್ಕಳ ಕಲಿಕೆಯನ್ನು ಗಮನಿಸಿ ಗ್ರೇಡ್ ನೀಡಬೇಕಾಗಿರುತ್ತದೆ. ಶಿಕ್ಷಕರು ಮಕ್ಕಳ ಆಸಕ್ತಿ, ಕುತೂಹಲ, ಅಸೈನ್ಮೆಂಟ್ಗಳನ್ನು ಅವಲೋಕಿಸಿದಲ್ಲಿ ಗ್ರೇಡ್ ನೀಡುವುದು ಸುಲಭವಾಗುತ್ತದೆ.
ಗೈರು ಹಾಜರಿ :- ತರಗತಿಗಳಿಗೆ ಮಕ್ಕಳು ಗೈರು ಹಾಜರಾಗುತ್ತಿರುತ್ತಾರೆ. ಅಂತಹ ಮಕ್ಕಳು ಪ್ರಯೋಗವನ್ನು ಸರಿಯಾಗಿ ತಿಳಿದುಕೊಳ್ಳಲಾರರು. ಅವರಿಗೆ ಪರ್ಯಾಯ ಮಾರ್ಗಗಳೂ ಇಲ್ಲ. ಮತ್ತೆ ಆ ಪ್ರಯೋಗವನ್ನು ಮಾಡಿ ತೋರಿಸುವುದು ಸುಲಭವಲ್ಲ. ಆ ಸಮಯವನ್ನು ಮತ್ತೆ ಹೊಂದಿಸಿಕೊಳ್ಳುವುದು ಕಷ್ಟ. ಅದರಿಂದ ಅವರು ಕಲಿಕೆಯಲ್ಲಿ ಹಿಂದುಳಿಯುತ್ತಾರೆ. ಸಾಧ್ಯವಾದಷ್ಟು ಹೆಚ್ಚು ಮಕ್ಕಳು ಶಾಲೆಯಲ್ಲಿರುವಾಗ ಪ್ರಯೋಗಗಳನ್ನು ನೆಡೆಸುವುದು ಒಳ್ಳೆಯದು. ಆದರೆ ಇದು ಎಲ್ಲ ಸಮಯಕ್ಕೂ ಅನ್ವಯವಾಗುತ್ತದೆಂದು ಹೇಳುವುದು ಕಷ್ಟ. ಹಾಗಾಗಿ ಶಿಕ್ಷಕರು ಮುಂಚಿತವಾಗಿ ಮಕ್ಕಳಿಗೆ ತಿಳಿಸಿ ಗೈರುಹಾಜರಿಯಾಗದಂತೆ ನೋಡಿಕೊಳ್ಳುವುದೇ ಸೂಕ್ತ. ವಿಜ್ಞಾನ ಶಿಕ್ಷಕರು ತಮ್ಮ ಪ್ರಯೋಗಾಲಯಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲು ಇವು ಕೆಲವು ಸಲಹೆಗಳು. ಇವುಗಳ ಹೊರತಾಗಿ ಬೇರೆ ಸಮಸ್ಯೆ- ಪರಿಹಾರಗಳಿರಬಹುದು. ಅವುಗಳನ್ನೂ ಶಿಕ್ಷಕರು ಅಳವಡಿಸಿಕೊಳ್ಳಬೇಕು. ಪ್ರಸ್ತುತವಾಗಿ ಪ್ರಯೋಗಗಳಿಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಉದಾಹರಣೆಗೆ ಅರವಿಂದ ಗುಪ್ತಾ ಅವರ ಬರೆದಿರುವ 'ಆಹಾ! ಎಷ್ಟೊಂದು ಚಟುವಟಿಕೆಗಳು ಮತ್ತು ಮಾಡಿಕಲಿ'. ಭಾರತ ಜ್ಞಾನ ವಿಜ್ಞಾನ ಸಮಿತಿ ಪ್ರಕಟಿಸಿರುವ 'ಪ್ರಯೋಗಗಳನ್ನು ನೀವೆ ಮಾಡಿ ನೋಡಿ' . ಬೇದ್ರೆ ಮಂಜುನಾಥ ಅವರ 'ಶೈಕ್ಷಣಿಕ ಪ್ರಯೋಗಗಳು'. ಇತ್ತೀಚೆಗೆ ನವರ್ನಾಟಕ
ಪ್ರಕಾಶನದವರು ಹೊರತಂದಿರುವ ಸರಳ ವಿಜ್ಞಾನ ಪರಿಚಯಿಸುವ ಸರಣಿ ಕೃತಿಗಳು. ಈ ತರಹದ ಪುಸ್ತಕಗಳನ್ನು ಓದುವುದರಿಂದ ಶಿಕ್ಷಕರು ಅಪ್ಡೇಟ್ ಆಗುತ್ತಾರೆ. ಅದರ ಉಪಯೋಗವನ್ನು ಪ್ರಯೋಗಾಲಯ ದಲ್ಲಿ ಕಾಣಬಹುದು. ಅದೇ ಅಲ್ಲವೇ ಎಲ್ಲರ
ಹೆಬ್ಬಯಕೆ !
No comments:
Post a Comment