ಎಂದೂ ಆಡದ ಆಟವಾಡಿ ಗೆದ್ದವರ ಆಟದ ಸೂತ್ರಗಳು!
ಹಾಗೆ ಗೆದ್ದ ಮಹಾನುಭಾವರು ಸ್ವಾಮಿ ವಿವೇಕಾನಂದರು (1863-1902). ಅವರ ಬದುಕಿನ ಒಂದು ಕುತೂಹಲಕಾರಿ ನೈಜ ಘಟನೆ ಇಲ್ಲಿದೆ. ಅವರು 1895ರಲ್ಲಿ ಅಮೆರಿಕಾದಲ್ಲಿ ಪ್ರವಾಸ ಮಾಡುತ್ತಿದ್ದ ಸಂದರ್ಭ. ಲೆಗೆಟ್ ಎಂಬ ಶ್ರೀಮಂತರೊಬ್ಬರು ಸ್ವಾಮೀಜಿಯವರನ್ನು ತಮ್ಮ ಹಳ್ಳಿಯ ಮನೆಗೆ ಕರೆದುಕೊಂಡು ಹೋಗಿದ್ದರು. ಅದು ಪ್ರಕೃತಿ ಸೌಂದರ್ಯದಿಂದ ತುಂಬಿ ತುಳುಕುತ್ತಿದ್ದ ಪ್ರದೇಶ.
ಅವರ ಮನೆಗೆ ಸೇರಿದಂತೆ ವಿಶಾಲವಾದ ಹಸಿರು ಹುಲ್ಲುಮೈದಾನದಲ್ಲಿ ಗಾಲ್ಫ್ ಆಟದ ಕ್ರೀಡಾಂಗಣವಿತ್ತು. ಎಂದೂ ಗಾಲ್ಫ್ ಆಟ ಆಡಿದವರಲ್ಲ. ಅದರ ರೀತಿ ರಿವಾಜುಗಳನ್ನು ಅರಿತವರಲ್ಲ ವಿವೇಕಾನಂದರು. ಆದರೆ ಮನಮೋಹಕವಾದ ಹುಲ್ಲುಗಾವಲು ಅವರನ್ನು ಆಕರ್ಷಿಸಿತು. ಅಲ್ಲಿ ಸುತ್ತಾಡುತ್ತಾ, ಆಟಗಾರರ ಆಟವನ್ನು ಗಮನಿಸುತ್ತಿದ್ದರು. ಆಟದ ಮೈದಾನದಲ್ಲಿ ಅನೇಕ ಬದ್ದುಗಳು ಅಂದರೆ ಸಣ್ಣ ಸಣ್ಣ ಗುಳಿಗಳಿರುತ್ತಿದ್ದವು. ಆಟಗಾರರು ತಮ್ಮ ಕೈಯಲ್ಲಿ ಹಿಡಿದ ದಾಂಡನ್ನು, ನೆಲದ ಮೇಲಿಟ್ಟಿರುವ ಚೆಂಡಿಗೆ ಬೀಸಿ ಹೊಡೆಯುತ್ತಿದ್ದರು. ಚೆಂಡು ಗುಳಿಯೊಳಕ್ಕೆ ಸರಿಯಾಗಿ ಹೋಗಿ ಬಿದ್ದರೆ ಆಟಗಾರರಿಗೆ ಅಂಕಗಳು ಸಿಗುತ್ತಿದ್ದವು. ವಿಶಾಲವಾದ ಹುಲ್ಲುಗಾವಲಿನಲ್ಲಿ ಅಲ್ಲಲ್ಲಿ ಇರುವ ಗುಳಿಗಳನ್ನು ಬಾವುಟಗಳನ್ನು ನೆಟ್ಟಿದ್ದರು. ಲೆಗೆಟ್ಟರ ಅತಿಥಿಯಾಗಿ ಬಂದಿದ್ದ ಯುವಕನೊಬ್ಬ ಅಲ್ಲಿ ಆಟವಾಡುತ್ತಿದ್ದ.
ದೂರದಲ್ಲಿ ಇದ್ದ ಗುಳಿಯೊಂದಕ್ಕೆ ಚೆಂಡನ್ನು ಹೊಡೆಯಲು ಸನ್ನದ್ಧನಾಗುತ್ತಿದ್ದ. ಆಗ ಸ್ವಾಮೀಜಿಯವರು ನಾನು ಈಗ ಚೆಂಡನ್ನು ಆ ಗುಳಿಯೊಳಕ್ಕೆ ಹೋಗುವಂತೆ ಒಂದೇ ಹೊಡೆತದಲ್ಲಿ ಹೊಡೆಯಬಲ್ಲೆ ಎಂದರು. ಆ ಯುವಕ ಸ್ವಾಮೀಜಿಯವರತ್ತ ಸಹಾನುಭೂತಿಯ ದೃಷ್ಟಿ ಬೀರುತ್ತ ಅದು ಅಷ್ಟು ಸುಲಭವಲ್ಲ ಎಂದ. ಸ್ವಾಮೀಜಿ ಮುಗುಳ್ನಗುತ್ತ ನೀನು ಪಂಥ ಕಟ್ಟುವುದಾದರೆ ನಾನು ಚೆಂಡನ್ನು ಹೊಡೆಯುತ್ತೇನೆ ಎಂದಾಗ ಆತ ಅರ್ಧ ಡಾಲರ್ ಪಂಥ ಮುಂದಾದ. ಅದೇ ಸಮಯಕ್ಕೆ ಅಲ್ಲಿಗೆ ಶ್ರೀಮಂತ ಲೆಗೆಟ್ಟರು ಬಂದರು.
ಅಲ್ಲಿ ನಡೆಯುತ್ತಿದ್ದ ಪಂಥದ ಮಾತು ಕೇಳಿದ ಅವರು ಸ್ವಾಮೀಜಿ, ಒಂದೇ ಹೊಡೆತಕ್ಕೆ ಅಷ್ಟು ದೂರದಲ್ಲಿರುವ ಗುಳಿಗೆ ಚೆಂಡನ್ನು ಹೊಡೆಯುವುದು ಅನುಭವೀ ಆಟಗಾರರಿಗೂ ಸಾಧ್ಯವಿಲ್ಲ ಎಂದರು. ಸ್ವಾಮೀಜಿ ತಕ್ಷಣ ಗಂಭೀರವದನರಾಗಿ ನಾನು ಅದನ್ನು ಮಾಡಿ ತೋರಿಸಿದರೆ ನೀವೆಷ್ಟು ಪಂಥ ಕಟ್ಟುತ್ತೀರಿ ಎಂದು ಕೇಳಿದರು. ಲೆಗೆಟ್ಟರು ಹತ್ತು ಡಾಲರ್ ಪಂಥ ಕಟ್ಟಲು ನಾನು ಸಿದ್ಧ ಎಂದರು! ಆಗಿನ ಕಾಲಕ್ಕೂ ಹತ್ತು ಡಾಲರ್ ದೊಡ್ಡ ಮೊತ್ತವಾಗಿತ್ತು!
ಸ್ವಾಮೀಜಿಯವರು ದೂರದಲ್ಲಿದ್ದ ಗುಳಿಯ ಬಳಿ ಆ ಯುವಕನನ್ನು ನಿಲ್ಲುವಂತೆ ಹೇಳಿದರು. ತಮ್ಮ ಅಂಗಿಯ ತೋಳನ್ನು ಮೇಲಕ್ಕೇರಿಸಿ ಕೈಯಲ್ಲಿ ದಾಂಡು ಹಿಡಿದರು. ಆ ಗುಳಿಯತ್ತಲೇ ಕೆಲವು ನಿಮಿಷಗಳ ಕಾಲ ದಿಟ್ಟಿಸಿ ನೋಡಿದರು. ನಂತರ ಜೋರಾಗಿ ದಾಂಡನ್ನು ಬೀಸಿ ಚೆಂಡಿಗೆ ಹೊಡೆದರು. ಓಹ್! ನೇರವಾಗಿ ಚೆಂಡು ಹೋಗಿ ಗುಳಿಯಲ್ಲಿ ಬಿತ್ತು!
ದಂಗು ಬಡಿದವರಂತೆ ನೋಡುತ್ತ ನಿಂತ ಲೆಗೆಟ್ಟರು ‘ಸ್ವಾಮೀಜಿ! ಅತ್ಯಾಶ್ಚರ್ಯ! ನಿಮಗೆ ಇದು ಹೇಗೆ ಸಾಧ್ಯವಾಯಿತು? ಯೋಗವನ್ನು ಬಳಸಿ ಈ ಮಾಡಿದಿರಾ?’ ಎಂದು ಕೇಳಿದಾಗ, ಸ್ವಾಮೀಜಿಯವರು ಮತ್ತೆ ಹಸನ್ಮುಖರಾಗಿ ಇಂಥಾ ಸಣ್ಣಪುಟ್ಟ ವಿಷಯಕ್ಕೆಲ್ಲ ಯೋಗ ಬಳಸುವುದಿಲ್ಲ. ಈ ಸಾಧನೆಗೆ ನಾಲ್ಕು ಕಾರಣಗಳನ್ನು ಕೊಡಬಲ್ಲೆ. ಮೊದಲನೆಯದ್ದು ಗುರಿಯ ಸ್ಪಷ್ಟ ಕಲ್ಪನೆ, ನನ್ನ ತೋಳಬಲದಲ್ಲಿ ನಂಬಿಕೆ ಮತ್ತು ಸದ್ಬಳಕೆ. ಕೊನೆಯದಾಗಿ ಗುರಿ ಮುಟ್ಟಿಸಿದರೆ ಸಿಗುವ ಹತ್ತು ಡಾಲರ್ ನನಗೆ ಅವಶ್ಯಕವಾಗಿ ಬೇಕಿತ್ತು ಎಂದರಂತೆ.
ಎಂದೂ ಆಡದ ಗಾಲ್ಫ್ ಆಟವನ್ನು ಪ್ರಪ್ರಥಮ ಬಾರಿಗೆ ಆಡಿ ಗೆದ್ದ ಸ್ವಾಮೀಜಿಯವರ ಸಫಲತೆಯ ಸೂತ್ರ ಬಹಳ ಸರಳವಾಗಿದೆಯಲ್ಲವೇ? ಗುರಿಯ ಕಲ್ಪನೆ, ನಮ್ಮ ತೋಳಬಲದಲ್ಲಿ ನಂಬಿಕೆ ಮತ್ತು ಸದ್ಬಳಕೆ ಮತ್ತು ಫಲಿತಾಂಶವನ್ನು ಪಡೆಯಲೇಬೇಕಾದ ಅವಶ್ಯಕತೆ! ಅವರ ಸಫಲತೆಯ ಸೂತ್ರವು ನಮಗೂ ಉಪಯೋಗಕಾರಿಯಾಗಬಹುದೇ?
No comments:
Post a Comment