ಅನಗತ್ಯ ಭಯವೇಕೆ?*
ಬೇಟೆಗಾರನೊಬ್ಬ ಕಾಡಿನಲ್ಲಿ ಅಲೆದಲೆದು ಸುಸ್ತಾಗಿ ಮರವೊಂದರ ಬುಡದಲ್ಲಿ ವಿಶ್ರಾಂತಿಗಾಗಿ ಮಲಗಿದ. ಗಾಢ ನಿದ್ರೆ ಆವರಿಸಿತು. ಮರದ ಪಕ್ಕದಲ್ಲಿಯೇ ಎರಡು ಬಿಲಗಳಿದ್ದವು. ಒಂದರಲ್ಲಿ ಇಲಿ, ಇನ್ನೊಂದರಲ್ಲಿ ವಿಷರಹಿತ ಹಾವು ವಾಸವಾಗಿದ್ದವು. ಇಲಿಯ ವಾಸನೆಯನ್ನು ಅನುಸರಿಸಿ ಮೇಲೆದ್ದು ಬಂದ ಹಾವು, ಬೇಟೆಗಾರನ ಪಕ್ಕದಲ್ಲಿ ಹಾದುಹೋಗುವಾಗ ಅವನ ಕಾಲನ್ನು ಕಚ್ಚಿ ತಕ್ಷಣದಲ್ಲಿ ಬಿಲ ಸೇರಿಕೊಂಡಿತು.
ಎಚ್ಚರಗೊಂಡ ಬೇಟೆಗಾರ, ‘ಏನೋ ಕಚ್ಚಿತಲ್ಲ!’ ಎಂದು ಗಾಯವನ್ನು ನೋಡಿಕೊಂಡ. ರಕ್ತ ಜಿನುಗುತ್ತಿತ್ತು. ಅತ್ತಿತ್ತ ಕಣ್ಣುಹಾಯಿಸಿದರೂ ಏನೂ ಕಾಣಲಿಲ್ಲ. ಒಂದು ಬಿಲದ ಕಡೆ ಅವನ ದೃಷ್ಟಿ ಹೊರಳಿದಾಗ ಇಲಿ ನಡುಗುತ್ತ ಕುಳಿತಿರುವುದು ಕಂಡಿತು. ‘ಓ, ಕಚ್ಚಿದ್ದು ಇಲಿಯೇ? ಹಾಗಿದ್ದರೆ ಏನೂ ಆಗದು’ ಎಂದು ಹೇಳಿಕೊಳ್ಳುತ್ತ ಮತ್ತೆ ನಿದ್ರೆಗೆ ಜಾರಿದ. ಕೆಲಹೊತ್ತಿನ ನಂತರ, ಹಾವಿನಿಂದ ತಪ್ಪಿಸಿಕೊಂಡು ನಿರಾಳವಾಗಿದ್ದ ಇಲಿ ಅತ್ತಿತ್ತ ಸುಳಿಯುತ್ತ ಬೇಟೆಗಾರನ ಸಮೀಪ ಬಂತು, ಸುಮ್ಮನಿರಲಾರದೆ ಅವನ ಕಾಲುಕಚ್ಚಿ ಓಡಿಹೋಯಿತು. ಮತ್ತೆ ಎಚ್ಚರಗೊಂಡ ಬೇಟೆಗಾರನಿಗೆ ಇನ್ನೊಂದು ಬಿಲದತ್ತ ಕಣ್ಣುಹಾಯಿಸಿದಾಗ, ಹಾವು ಮೇಲೆದ್ದು ಬರುವುದು ಕಾಣಿಸಿ ಗಾಬರಿಗೊಂಡ. ‘ಅಯ್ಯೋ, ಹಾವು ಕಚ್ಚಿಬಿಟ್ಟಿದೆ, ನಾನಿನ್ನು ಬದುಕುಳಿಯಲಾರೆ. ಕಾಡಿನಲ್ಲಿ ಸಿಕ್ಕಿಕೊಂಡಿರುವ ನನ್ನನ್ನು ಆ ದೇವರೂ ಕಾಪಾಡಲಾರ’ ಎಂದು ಹಲುಬತೊಡಗಿದ. ಅವನ ದೇಹದ ಕಣಕಣದಲ್ಲೂ ಸಾವಿನ ಭೀತಿ ಆವರಿಸಿತು. ಹೀಗಾಗಿ ಕೆಲಕ್ಷಣದಲ್ಲೇ ಸತ್ತೂ ಹೋದ. ಬೇಟೆಗಾರನನ್ನು ಕೊಂದಿದ್ದು ಯಾರು? ಇಲಿಯೋ, ಹಾವೋ? ಎರಡೂ ಅಲ್ಲ. ಸಾವು ಬಂದೇಬಿಟ್ಟಿತಲ್ಲ ಎಂಬ ಅವನೊಳಗಿನ ಭಯವೇ ಅವನನ್ನು ಕೊಂದಿತು. ವಿಷವಿಲ್ಲದ ಹಾವು ಕಡಿದರೆ ಸಾಯುವುದಿಲ್ಲ, ಇಲಿಯೇ ಕಡಿದರೂ ಸಾವಂತೂ ಬರುವುದಿಲ್ಲ; ಆದರೆ ಅದು ವಿಷದ ಹಾವೇ ಇರಬೇಕೆಂಬ ಭ್ರಮೆಯೇ ಅವನನ್ನು ಕೊಂದಿತು.
ಇಲ್ಲಸಲ್ಲದ ರೋಗ-ಭಯಗಳನ್ನು ಕಲ್ಪಿಸಿಕೊಂಡು ಬೆಚ್ಚಿಬೀಳುವುದು, ಕ್ಷಣಕ್ಷಣವೂ ಸಾಯುವುದು ಕೆಲವರ ಜಾಯಮಾನ. ನಮ್ಮ ಬದುಕಿನ ಎಲ್ಲ ಆಗುಹೋಗುಗಳಿಗೆ ಮನಸ್ಸೇ ಕಾರಣ. ಇಂಥ ಭಯ ಅತಿರೇಕಕ್ಕೆ ಹೋದಾಗ ಘೋರವಿಷಕ್ಕಿಂತ ತೀಕ್ಷ್ಣವಾಗಿ ಪರಿಣಮಿಸಿ, ಅಸ್ತಿತ್ವಕ್ಕೇ ಸಂಚಕಾರ ಉಂಟುಮಾಡುತ್ತದೆ. ಅರಿವಿನ ಕೊರತೆ ಮತ್ತು ಅಜ್ಞಾನ ಕೆಲವೊಮ್ಮೆ ಭಯಕ್ಕೆ ಕಾರಣವಾಗುತ್ತವೆ. ಸಂಕಷ್ಟ ಒದಗಿದಾಗ ಧೈರ್ಯಗೆಡದೆ, ಅದರಿಂದ ಪಾರಾಗುವ ಕುರಿತು ಆಲೋಚಿಸುವಂತಾಗಬೇಕು. ಇದು ನೆರವೇರಬೇಕೆಂದರೆ ಮನಸ್ಸು ತಿಳಿಯಾಗಬೇಕು. ಅಂಥದೊಂದು ಸಾಮರ್ಥ್ಯ ನಮ್ಮಲ್ಲಿ ಬರಬೇಕು...
ಕೃಪೆ:ಡಾ.ಗಣಪತಿ ಹೆಗಡೆ.
No comments:
Post a Comment