ದೇಹ ನಶ್ವರ, ಆತ್ಮ ಅಮರ
ಬದುಕಿನ ಜಂಜಾಟದಿಂದ ಬೇಸತ್ತ ಯುವಕನೊಬ್ಬ ಬುದ್ಧನ ಬಳಿ ಬಂದು ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸುವಂತೆ ಕೇಳಿಕೊಂಡ. ಸ್ಮಶಾನದಲ್ಲಿ ಒಂದು ಹಗಲು ಒಂದು ರಾತ್ರಿ ಕಳೆದು ಬಂದರೆ ಇದು ಸಾಧ್ಯವೆಂದು ಬುದ್ಧ ಷರತ್ತು ವಿಧಿಸಿದ. ಯುವಕ ಹಾಗೆಯೇ ಮಾಡಿ ಬಂದಾಗ, ‘ಅಲ್ಲಿ ನೀನು ಕಂಡದ್ದೇನು, ಆದ ಅನುಭವವೇನು?’ ಎಂದು ಬುದ್ಧ ಪ್ರಶ್ನಿಸಿದ. ‘ಹಗಲಲ್ಲಿ ಎರಡು ಶವಗಳು ಅಂತಿಮ ಸಂಸ್ಕಾರಕ್ಕಾಗಿ ಬಂದಿದ್ದವು, ಒಂದು ಧನಿಕನದ್ದು ಮತ್ತೊಂದು ಬಡವನದ್ದು’ ಎಂದ ಯುವಕ. ‘ಆ ಎರಡೂ ಚಿತೆಗಳ ಬೆಂಕಿಯಲ್ಲಿ ಏನಾದರೂ ವ್ಯತ್ಯಾಸವಿತ್ತೇ?’ ಎಂದು ಬುದ್ಧ ಮರುಪ್ರಶ್ನಿಸಿದಾಗ, ‘ಇಲ್ಲ, ಎರಡೂ ಸಮನಾಗಿ ಉರಿದು ಬೂದಿಯಾದವು’ ಎಂದ ಯುವಕ. ‘ರಾತ್ರಿಯಲ್ಲಿ ಏನು ಕಂಡೆ?’ ಎಂಬ ಬುದ್ಧನ ಪ್ರಶ್ನೆಗೆ ‘ರಾತ್ರಿಯಿಡೀ ಚಿಕ್ಕ ಸದ್ದಾದರೂ ಬೆಚ್ಚಿಬೀಳುತ್ತಿದ್ದೆ, ಅಂಗೈಲಿ ಜೀವಹಿಡಿದು ಬೆಳಗ್ಗೆ ಎದ್ದುಬಂದೆ’ ಎಂದು ಯುವಕ ಉತ್ತರಿಸಿದ.
‘ನೀನು ಇನ್ನೂ ಒಂದು ಹಗಲು-ರಾತ್ರಿ ಅಲ್ಲೇ ಕಳೆಯಬೇಕು’ ಎಂದು ಬುದ್ಧ ಆದೇಶಿಸಿದಾಗ, ‘ಈಗಾಗಲೇ ಭಯಗ್ರಸ್ತನಾಗಿರುವ ನನ್ನನ್ನು ಅಲ್ಲಿಗೇ ಮತ್ತೆ ಕಳಿಸುವ ಉದ್ದೇಶವೇನು?’ ಎಂದು ಯುವಕ ದಿಗಿಲಾದ. ತನ್ನ ಉದ್ದೇಶ ಈಡೇರದ ಕಾರಣ ಮತ್ತೆ ಕಳಿಸುತ್ತಿರುವುದಾಗಿ ಬುದ್ಧ ಹೇಳಿದ. ಹೀಗೆ ಸ್ಮಶಾನದಲ್ಲಿ ಮತ್ತೊಂದು ದಿನ-ರಾತ್ರಿ ಕಳೆದು ವಾಪಸಾದ ಯುವಕನಿಗಾದ ಅನುಭವದ ಕುರಿತು ಬುದ್ಧ ಕೇಳಿದಾಗ, ‘ಒಂದು ವಿಸ್ಮಯ ಕಂಡೆ. ಉರಿಯುವ ಚಿತೆಯನ್ನೇ ದಿಟ್ಟಿಸುತ್ತ ಕುಳಿತಿದ್ದ ನನಗೆ, ಇದ್ದಕ್ಕಿದ್ದಂತೆ ನನ್ನ ಹೆಣವನ್ನೇ ಅಲ್ಲಿಗೆ ಹೊತ್ತು ತಂದಂತಾಯ್ತು. ಸುತ್ತ ನೆರೆದಿದ್ದ ತಂದೆ, ಅಣ್ಣ, ಬಂಧು-ಮಿತ್ರರು ಅಳುತ್ತಿದ್ದರೂ, ಅವರಲ್ಲಿ ಕೆಲವರದ್ದು ತೋರಿಕೆಯ ಅಳುವಾಗಿತ್ತು. ಕೆಲವರು ‘ನೀನೇ ಮುಂದಿನ ಏಕೈಕ ವಾರಸುದಾರ’ ಎಂದು ಅಣ್ಣನಿಗೆ ಹೇಳುತ್ತಿದ್ದರೆ, ಮತ್ತೆ ಕೆಲವರಂತೂ ‘ಈತ ನಿಷ್ಪ್ರಯೋಜಕ ಸತ್ತಿದ್ದೇ ಒಳ್ಳೆಯದಾಯಿತು’ ಎನ್ನುತ್ತಿದ್ದರು. ನನ್ನ ಚಿತೆಗೆ ಅಗ್ನಿಸ್ಪರ್ಶವಾಗಿ, ದೇಹ ಬೂದಿಯಾಯಿತು. ನನ್ನಾತ್ಮ ದೂರದಿಂದಲೇ ಎಲ್ಲವನ್ನೂ ನೋಡುತ್ತಿತ್ತು. ರಾತ್ರಿಯೆಲ್ಲ ಒಂದಿನಿತೂ ಭಯವಿಲ್ಲದೆ ಉರಿಯುವ ನನ್ನ ಚಿತೆಯನ್ನೇ ನೋಡುತ್ತಿದ್ದೆ’ ಎಂದುತ್ತರಿಸಿದ ಯುವಕ. ಆಗ ಬುದ್ಧ, ‘ಈ ದೇಹ ನಶ್ವರ, ಆದರೆ ಆತ್ಮವು ಎಂದಿಗೂ ಅಮರ ಎನ್ನುವ ಸತ್ಯ ನಿನಗೆ ತಿಳಿದಂತಾಯಿತು. ನೀನೀಗ ನನ್ನ ಶಿಷ್ಯನಾಗಬಹುದು’ ಎನ್ನುತ್ತ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ. ಪಂಚಭೂತಗಳಿಂದ ಬಂದ ಮಾನವ ಶರೀರ ಅಂತಿಮವಾಗಿ ಲೀನವಾಗುವುದು ಅವುಗಳಲ್ಲೇ. ಇದು ಗೊತ್ತಿದ್ದೂ ಬಹಳಷ್ಟು ಮಂದಿ ಬದುಕಿನುದ್ದಕ್ಕೂ ಹಣ-ಆಸ್ತಿ-ಅಂತಸ್ತು-ಪ್ರತಿಷ್ಠೆಯ ಹಿಂದೆಯೇ ಓಡುತ್ತಾರೆ. ತೊಟ್ಟಿಲಲ್ಲಿ ಆಡಿದ ಎಲ್ಲರೂ ಒಂದು ದಿನ ಸ್ಮಶಾನಕ್ಕೆ ಹೋಗಲೇಬೇಕು ಎಂಬ ಅರಿವಿದ್ದರೂ ಅಧರ್ಮದ ಹಾದಿ ಹಿಡಿಯುತ್ತಾರೆ, ಕ್ರೌರ್ಯ-ಹಿಂಸೆ-ಹೊಡೆದಾಟಗಳಲ್ಲಿ ವ್ಯಸ್ತರಾಗುತ್ತಾರೆ. ಅದರ ಬದಲು, ಅಂತರಂಗ ಮೆಚ್ಚುವಂಥ ಕೆಲಸ ಮಾಡಿ, ನ್ಯಾಯ-ನೀತಿ-ಧರ್ಮದ ಮಾರ್ಗದಲ್ಲಿ ನಡೆದರೆ ಆತ್ಮಕ್ಕೂ ಒಂದು ಸಾರ್ಥಕ ದಕ್ಕುವುದಲ್ಲವೇ?
ಕೃಪೆ: ರಾಗಿಣಿ
No comments:
Post a Comment