Saturday, August 12, 2023

 ನಂಬಿ ಕೆಟ್ಟವರಿಲ್ಲವೋ…!*

ಚಿನ್ನದ ವ್ಯಾಪಾರಿಯೊಬ್ಬರು ರಾಯರ ನಂಬಿಕಸ್ತ ಮಿತ್ರರಾಗಿದ್ದರು. ಒಮ್ಮೆ ಹೆಗಲಿಗೆ ಚೀಲವೊಂದನ್ನು ತೂಗಿಹಾಕಿಕೊಂಡು ಮನೆಗೆ ಬಂದ ಅವರು ಉಭಯ ಕುಶಲೋಪರಿ ಬಳಿಕ, ‘ರಾಯರೇ, ಈ ಚೀಲದೊಳಗೆ ಬೆಲೆಬಾಳುವ ವಸ್ತುವಿದೆ. ಇದು ನಿಮ್ಮ ಬಳಿಯಿರಲಿ. ಕೆಲಕಾಲದ ನಂತರ ತೆಗೆದುಕೊಂಡು ಹೋಗುತ್ತೇನೆ’ ಎನ್ನುತ್ತ ಭಾರವಾದ ಆ ಚೀಲವನ್ನು  ರಾಯರ ಕೈಗೊಪ್ಪಿಸಿ ತೆರಳಿದರು. ಆಗ ರಾಯರ ಮಗನೂ ಇದ್ದ. ರಾಯರು ಮಗನನ್ನು ಅಟ್ಟದ ಮೇಲೆ ಕರಕೊಂಡು ಹೋಗಿ ಅಲ್ಲಿಟ್ಟಿದ್ದ ಮರದ ಪೆಟ್ಟಿಗೆಯಲ್ಲಿ ಈ ಚೀಲವನ್ನಿಡಲು ಮುಂದಾದರು. ಆದರೆ, ‘ಅದರೊಳಗೆ ಏನಿರಬಹುದು?’ ಎಂಬ ಕುತೂಹಲ ಮಗನಿಗೆ; ತೋರಿಸುವಂತೆ ಕೇಳಿಯೇಬಿಟ್ಟ. ‘ಅದಕ್ಕೇನಂತೆ…?’ ಎಂದ ಅಪ್ಪ ಚೀಲದೊಳಗಿನ ವಸ್ತುಗಳನ್ನು ಸುರಿಯಲಾಗಿ, ನೋಡಿದರೆ, ಅವು ಲಕ್ಷಾಂತರ ರೂಪಾಯಿ ಬೆಲೆಬಾಳುವ ಥಳಥಳಿಸುವ 8 ಚಿನ್ನದ ಗಟ್ಟಿಗಳಾಗಿದ್ದವು. ‘ನೋಡಿದ್ದಾಯ್ತಲ್ಲಾ….’ ಎನ್ನುತ್ತ ಅಪ್ಪ ಅವನ್ನು ಚೀಲಕ್ಕೆ ತುಂಬಿ ಕೊರಳದಾರ ಬಿಗಿದು ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿದರು.

ಅಚ್ಚರಿಗೊಂಡ ಮಗ ಅಪ್ಪನನ್ನು ಕೇಳಿದ- ‘ಅವರು ಈ ಗಟ್ಟಿಗಳನ್ನು ನಿಮ್ಮೆದುರು ಎಣಿಸಿಕೊಡಲಿಲ್ಲ, ನೀವೂ ಎಣಿಸಿ ತೆಗೆದುಕೊಳ್ಳಲಿಲ್ಲ. ಮೇಲಾಗಿ, ಅವರು ಕೊಟ್ಟಿದ್ದಕ್ಕೆ, ನೀವು ಸ್ವೀಕರಿಸಿದ್ದಕ್ಕೆ ಯಾವ ಪತ್ರ-ಪುರಾವೆಗಳಿಲ್ಲ. ನಾವೇನಾದರೂ ಒಂದು ಗಟ್ಟಿಯನ್ನು ಗಿಟ್ಟಿಸಿದರೂ ಸಾಕು, ದಾಖಲಾತಿಗಳಿಲ್ಲದ ಅವರಿಂದ ಏನೂ ಮಾಡಲು ಸಾಧ್ಯವಿಲ್ಲವಷ್ಟೇ?’. ಅದಕ್ಕೆ ಅಪ್ಪ ಉತ್ತರಿಸಿದ್ದು ಹೀಗೆ- ‘ನಂಬಿಕೆಗಿಂತ ಮಿಗಿಲಾದ ದಾಖಲಾತಿ ಬೇರೆ ಬೇಕಾ ಮಗಾ? ಅವರು ನನ್ನಲ್ಲಿ ನಂಬಿಕೆಯಿಟ್ಟು ಕೊಟ್ಟುಹೋಗಿದ್ದಾರೆ. ನಂಬಿಕೆದ್ರೋಹ ನಾನು ಕನಸಲ್ಲೂ ಎಣಿಸದ ವಿಚಾರ. ಇನ್ನೊಂದು ಮಾತು- ಈ ವಿಷಯ ನಿನಗೂ ಗೊತ್ತಿರಲೆಂದು ನಿನ್ನನ್ನೂ ಜತೆಗೆ ಕರೆದೆ. ನಾನೇನಾದರೂ ಸತ್ತುಹೋದರೆ, ಕೊಟ್ಟ ರೀತಿಯಲ್ಲೇ ಈ ಚೀಲವನ್ನು ಅವರಿಗೆ ಹಿಂದಿರುಗಿಸುವ ಜವಾಬ್ದಾರಿ ನಿನ್ನದು. ನಿನ್ನನ್ನು ನಂಬಿದ್ದೇನೆ…’. ಈ ಮಾತಿಗೆ ಮಗನ ಕಣ್ಣು ತುಂಬಿಬಂದವು. ‘ಅವರು ನಿಮ್ಮ ಮೇಲೆ, ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಮೋಸಮಾಡಲಾರೆ’ ಎಂದು ಅಪ್ಪನಿಗೆ ಭಾಷೆ ಕೊಟ್ಟ.

ಹಾಗೆ ನೋಡಿದರೆ, ಈ ಜಗತ್ತಿನ ಎಲ್ಲ ವ್ಯವಹಾರಗಳು, ಸಂಬಂಧಗಳು ‘ನಂಬಿಕೆ’ಯ ಆಧಾರದ ಮೇಲೆಯೇ ನಡೆಯುತ್ತವೆ. ಹೆತ್ತವರು ಕೈಬಿಡಲಾರರು ಎಂಬುದು ಮಕ್ಕಳ ನಂಬಿಕೆಯಾದರೆ, ವೃದ್ಧಾಪ್ಯದಲ್ಲಿ ಮಕ್ಕಳು ಕೈಬಿಡಲಾರರು ಎಂಬುದು ಹೆತ್ತವರ ನಂಬಿಕೆ. ನಂಬಿಕೆಯೇ ಸುಖಿದಾಂಪತ್ಯದ ಸೂತ್ರವೂ ಹೌದು. ತಮ್ಮ ಜೀವವನ್ನೇ ವೈದ್ಯರ ಕೈಗೆ ನೀಡುವ ರೋಗಿಗಳಿಗೆ ವೈದ್ಯರ ಮೇಲೆ ನಂಬಿಕೆ. ಕೋರ್ಟು-ಕಚೇರಿಗಳಲ್ಲಿ ಕಕ್ಷಿಗಾರರಿಗೆ ತಮ್ಮ ಪರವಾಗಿ ವಾದಿಸುವ ವಕೀಲರ ಮೇಲೆ, ವಕೀಲರಿಗೆ ನ್ಯಾಯಾಧೀಶರ ಮೇಲೆ ನಂಬಿಕೆ. ದಿನನಿತ್ಯದ ವ್ಯವಹಾರಗಳಲ್ಲೂ ನಾವು ಎಲ್ಲರನ್ನೂ ನಂಬುತ್ತೇವೆ- ವ್ಯಾಪಾರಿಗಳನ್ನು, ಮನೆಕೆಲಸದವರನ್ನು, ಚಾಲಕರನ್ನು- ಹೀಗೆ ನಂಬಿಕೆಯ ಮೇಲೆ ಜಗತ್ತೇ ನಡೆಯುತ್ತಿರುತ್ತದೆ. ನಂಬಿಕೆಯ ಕಂಬಗಳು ಅಲುಗಾಡಿದಾಗ, ವ್ಯವಹಾರಗಳು ಕುಸಿದುಬೀಳುತ್ತವೆ. ಸಂಬಂಧಗಳು ಕೆಟ್ಟುಹೋಗುತ್ತವೆ. ಅದರಲ್ಲೂ ನಂಬಿದವರನ್ನೇ ಶಂಕಿಸಬೇಕಾದ ಪರಿಸ್ಥಿತಿ ಬಂದಾಗ, ಅದು ತುಂಬ ನೋವುಂಟುಮಾಡುತ್ತದೆ. ಹೀಗಾಗದಿರಲಿ!

ನಂಬಿ ಕೆಟ್ಟವರಿಲ್ಲ.....

ಕೃಪೆ:ಡಾ.ಕೆ.ಪಿ.ಪುತ್ತೂರಾಯ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು