ಜ್ಞಾನ ಮನುಷ್ಯನ ಅಮೂಲ್ಯ ಸಿರಿ.
ಜ್ಞಾನವು ಅಮೂಲ್ಯ ಸಿರಿ. ಅದರಿಂದ ಜೀವನದಲ್ಲಿ ಸುಖ, ಶಾಂತಿ. ವಿಕಾಸವಾದ ಸಿದ್ಧಾಂತದ ಪ್ರಕಾರ ಕಾಲ ಕಾಲಕ್ಕೆ ಮಾನವನ ದೇಹವಷ್ಟೇ ವಿಕಾಸವಾಗಲಿಲ್ಲ. ಅದರೊಂದಿಗೆ ಜ್ಞಾನವೂ ವಿಕಾಸವಾಯಿತು.ತನು, ಮನ, ಬುದ್ಧಿ ಇವು ನಮ್ಮಲ್ಲಿರುವ ಜ್ಞಾನಸಾಧನಗಳು. ಅವುಗಳನ್ನು ನಾವು ಲೌಕಿಕ ಸಿರಿ ಸಂಪದದ ಗಳಿಕೆಗಾಗಿ ಬಳಸುತ್ತೇವೆ. ಹಗಲು ರಾತ್ರಿ ಪ್ರಾಪಂಚಿಕ ಸುಖಕ್ಕಾಗಿಯೇ ದುಡಿಯುತ್ತೇವೆ. ಆದರೆ ಮಹಾತ್ಮರು ಸತ್ಯದ ಸಂಶೋಧನೆಗಾಗಿ ಹಗಲು ರಾತ್ರಿ ಶ್ರಮಿಸುತ್ತಾರೆ. ಅವರ ಪರಿಶ್ರಮದಿಂದ ಪ್ರಪಂಚವೇ ಸಂಪದ್ಭರಿತವಾಯಿತು.
ಮೇಡಂ ಕ್ಯೂರಿ ಮಹಾವಿಜ್ಞಾನಿ. ಆದರೆ ಮೈತುಂಬ ಬಟ್ಟೆ, ಹೊಟ್ಟೆ ತುಂಬ ಊಟವೂ ಒಮ್ಮೊಮ್ಮೆ ಇರುತ್ತಿರಲಿಲ್ಲ. ಅಂಥ ಬಡತನದಲ್ಲಿಯೇ ಅವಳು ಅದೆಷ್ಟು ನಿಷ್ಠೆಯಿಂದ ಸತ್ಯದ ಸಂಶೋಧನೆಗೆ ತೊಡಗಿದಳು! ಅದರಿಂದ ಅವರ ಮನೆತನಕ್ಕೆ ಐದು ನೊಬೆಲ್ ಪಾರಿತೋಷಕ, ಪುರಸ್ಕಾರಗಳು ದೊರೆತವು. ಅವಳಿಗೆ ಎರಡು, ಗಂಡನಿಗೆ ಒಂದು, ಮಗಳಿಗೆ ಒಂದು, ಅಳಿಯನಿಗೂ ಒಂದು. ಬಹುಶಃ ಪ್ರಪಂಚದಲ್ಲಿಯೇ ಇದೊಂದು ಅಪರೂಪದ ಘಟನೆ. ಒಂದು ದಿನ ಹಿರಿಯ ಪತ್ರಕರ್ತರು ಅವಳನ್ನು ಕಾಣಲು ಬಂದರು. ಮೇರಿ ತನ್ನ ಮನೆಯ ಮುಂದಿನ ಕೈತೋಟದಲ್ಲಿ ಕಳೆ ತೆಗೆಯುತ್ತ ಕುಳಿತಿದ್ದಳು. 'ಮೇಡಂ ಕ್ಯೂರಿ ಎಲ್ಲಿ?' ಎಂದು ಆ ಪತ್ರಕರ್ತರು ಕ್ಯೂರಿಗೆ ಕೇಳಿದರು. 'ಕ್ಯೂರಿ ಮನೆಯ ಒಳಗಿಲ್ಲ. ನೀವು ಬಂದರೆ ನಿಮಗೆ ಸಂದೇಶ ಕೊಡಲು ಹೇಳಿದ್ದಾಳೆ' ಎಂದು ಒಂದು ಸಂದೇಶ ಬರೆದುಕೊಟ್ಟಳು. 'ವ್ಯಕ್ತಿಗಿಂತ ವಿಶ್ವದಲ್ಲಿ ಆಸಕ್ತಿ ತಾಳಿರಿ' ಎಂಬುದೇ ಅವಳ ಸಂದೇಶವಾಗಿತ್ತು !
ನಮ್ಮೊಳಗಿರುವ ಅಂತರಾತ್ಮನಿಗೆ ಸಾಕ್ಷಿಯಾಗಿ ನಾವು ಈ ಪ್ರಪಂಚದಲ್ಲಿ ಬದುಕಬೇಕೆಂದು ಅನುಭಾವಿ ಕವಿ ಸರ್ಪಭೂಷಣ ಶಿವಯೋಗಿಗಳು ತಮ್ಮ ಪದ್ಯದಲ್ಲಿ ಹೇಳುತ್ತಾರೆ. 'ಮನಕಂಜಿ ನಡೆಯದೆ ಜನಕಂಜಿ ನಡೆದರೆ, ಮನದಾಣ್ಮ ಗುರುಸಿದ್ಧ ಮರೆಯಾಗುವನಲ್ಲ' ನಾವು ಒಳ್ಳೆಯವರು ಹೌದೋ ಅಲ್ಲವೋ ಎನ್ನುವುದು ನಮ್ಮ ಒಳ ಧ್ವನಿ ಅಥವಾ ವಿವೇಕ ಧ್ವನಿ ಹೇಳಬೇಕು ವಿನಃ ಅನ್ಯ ಜನರಲ್ಲ. ಜನರು ನಮಗೆ ಕೊಡುವ ಪ್ರಶಸ್ತಿಗಳು ಸತ್ಯದ ಒರೆಗಲ್ಲು ಹೇಗಾಗುತ್ತವೆ?
ನೊಬೆಲ್ ಪಡೆದ ಮೊದಲ ಮಹಿಳೆ ಹಾಗೂ ವಿಭಿನ್ನ ಕ್ಷೇತ್ರಗಳಲ್ಲಿ ಸಂಶೋಧನೆಗಾಗಿ ಎರಡು ನೊಬೆಲ್ ಪಡೆದ ಏಕೈಕ ವಿಜ್ಞಾನಿ ಮೇರಿ ಕ್ಯೂರಿ,ಇಡೀ ಸಮುದಾಯಕ್ಕೆ ಪ್ರೇರಣೆಯಾಗಿದ್ದ ಮೇರಿ ತಮ್ಮ ಬಡತನವನ್ನು ಮೀರಿ, ವಿಜ್ಞಾನ ಕ್ಷೇತ್ರದಲ್ಲಿ ಮಿನುಗಿದ ಅರುಂಧತಿ ನಕ್ಷತ್ರ.
ಬೇಕ್ವೆರಲ್ ಅವರ ಕೆಲಸದಿಂದ ಆಕರ್ಷಿತರಾದ ಮೇರಿ ಕ್ಯೂರಿ, ಈ ಸಂಶೋಧನೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದರು. ಯುರೇನಿಯಂ ಕಿರಣಗಳ ಮೇಲೆ ತಮ್ಮದೇ ಆದ ಸ್ವಂತ ಪ್ರಯೋಗಗಳನ್ನು ನಡೆಸಿ, ಯುರೇನಿಯಂ ಯಾವುದೇ ರೂಪದಲ್ಲಿದ್ದರೂ ಮತ್ತು ಯಾವುದೇ ಸ್ಥಿತಿಯಲ್ಲಿದ್ದರೂ ಅದರ ಕಿರಣಗಳು ಸ್ಥಿರವಾಗಿರುವುದನ್ನು ಕಂಡುಕೊಂಡರು. ಈ ಹೊಸ ಹೊಳಹು ಅಣು ಭೌತವಿಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಯಿತು. ಮೇರಿ ಕ್ಯೂರಿ ಅವರು ಇದಕ್ಕೆ ‘ರೆಡಿಯೋ ಆ್ಯಕ್ಟಿವಿಟಿ’ (ವಿಕಿರಣಶೀಲತೆ) ಎಂದು ಹೆಸರಿಟ್ಟರು. ಈ ದಂಪತಿ 1898ರಲ್ಲಿ ವಿಕಿರಣಶೀಲ ಹೊಸ ಮೂಲಧಾತುವನ್ನು ಕಂಡು ಹಿಡಿದರು. ಇದನ್ನು ಸ್ವದೇಶವಾದ ಪೋಲ್ಯಾಂಡಿನ ನೆನಪಿಗಾಗಿ “ ಪೋಲೋನಿಯಂ ” ಎಂದು ಕರೆದರು .ಹೊಸ ಧಾತುವಿಗೆ ಪೊಲೋನಿಯಂ ಎಂದು ಹೆಸರಿಟ್ಟರು. 1902ರ ಹೊತ್ತಿಗೆ ಮತ್ತೊಂದು ವಿಕಿರಣಶೀಲ ಗುಣ ಹೊಂದಿದ್ದ ಖನಿಜವನ್ನು ಸಂಶೋಧಿಸಿ ಅದಕ್ಕೆ ‘ರೇಡಿಯಂ’ ಎಂದು ಹೆಸರಿಟ್ಟರು
ವಿಪರ್ಯಾಸ ಎಂದರೆ, ಯಾವುದನ್ನು ಸಂಶೋಧಿಸಿದರೋ ಅದರ ಪರಿಣಾಮಕ್ಕೇ ಮೇರಿ ಕ್ಯೂರಿ ಬಲಿಯಾಗಬೇಕಾಯಿತು. ಅಂದರೆ, ಪ್ರಯೋಗಾಲಯದಲ್ಲಿ ದೀರ್ಘಕಾಲದ ವಿಕಿರಣಶೀಲತೆಗೆ ಒಳಗಾದ್ದರಿಂದ ಮೇರಿ ಕ್ಯೂರಿ ಅವರಿಗೆ ಅಪ್ಲಾಸ್ಟಿಕ್ ಅನೀಮಿಯಾ ಉಂಟಾಯಿತು. ಇದರಿಂದಾಗಿ ಅವರು 1934 ಜುಲೈ 4ರಂದು ಇಹಲೋಕ ತ್ಯಜಿಸಿದರು.
ಮೇರಿ ಕ್ಯೂರಿ ಅವರು ತಮ್ಮ ಜೀವಮಾನದಲ್ಲಿ ಅನೇಕ ಹೊಸ ಹೊಸ ಸಂಗತಿಗಳನ್ನು ಹೊರ ಜಗತ್ತಿಗೆ ತೋರಿಸಿಕೊಟ್ಟರು. ಮಹಿಳೆಯರ ರೋಲ್ ಮಾಡೆಲ್ ಆಗಿದ್ದ ಮೇರಿ ಅವರಿಗೆ ಮರಣದ ಬಳಿಕವೂ ಅನೇಕ ಸನ್ಮಾನ, ಗೌರವಗಳು ಹುಡುಕಿಕೊಂಡು ಬಂದವು. ಅನೇಕ ಶೈಕ್ಷಣಿಕ ಮತ್ತು ವೈದ್ಯಕೀಯ ಕೇಂದ್ರಗಳಿಗೆ ಮೇರಿ ಕ್ಯೂರಿ ಅವರ ಹೆಸರನ್ನಿಡಲಾಯಿತು. ಮರಣದ ಬಳಿಕವೂ ಇಂದಿಗೂ ಜನರಮನಸ್ಸಿನ ಸ್ಥಾಯಿಯಾಗಿ ಉಳಿದಿರುವುದು ಅವರ ಸಾಧನೆಗೆ ಹಿಡಿದ ಕನ್ನಡಿಯಾಗಿದೆ.
ಮೇರಿಕ್ಯೂರಿ ಎಂಬ ಮಹಾನ್ ಪ್ರತಿಭೆ ಕಣ್ಮರೆಯಾದರೂ ಅವರ ಆವಿಷ್ಕಾರವು ಇಂದಿಗೂ ಹಲವು ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಕ್ಯಾನ್ಸರ್‌ನಂತಹ ಮಾರಕ ರೋಗಗಳ ಚಿಕಿತ್ಸೆಯೂ ಮೇರಿಕ್ಯೂರಿ ಅವರ ಸಂಶೋಧನೆಯ ಫಲವಾಗಿ ಸಾದ್ಯವಾಗುತ್ತಿದೆ. ಮಾನವನ ಕುತೂಹಲವೇ ಮನುಕುಲದ ಉನ್ನತಿಗೆ ಬುನಾದಿ. ಮೇರಿಕ್ಯೂರಿ ಅವರಂತಹ ಮೇರು ಪ್ರತಿಭೆಗಳ ಅನನ್ಯ ಆವಿಷ್ಕಾರಗಳು ವಿಜ್ಞಾನ ಕ್ಷೇತ್ರದಲ್ಲಿ ಸದಾ ಉದಯಿಸಲಿ
No comments:
Post a Comment