"Use Heart, Know Heart, Save Heart Save save life"
ಸೆ.29 ನಿನ್ನೆ ದಿನ ವಿಶ್ವ ಹೃದಯ ದಿನ.
ಹೃದಯವು ಮುಷ್ಟಿಯ ಗಾತ್ರದ ಅಂಗವಾಗಿದ್ದು ಅದು ನಿಮ್ಮ ದೇಹದಾದ್ಯಂತ ರಕ್ತವನ್ನು ಪಂಪ್ ಮಾಡುತ್ತದೆ. ಇದು ನಮ್ಮ ರಕ್ತಪರಿಚಲನಾ ವ್ಯವಸ್ಥೆಯ ಪ್ರಾಥಮಿಕ ಅಂಗವಾಗಿದೆ. ನಿಮ್ಮ ಹೃದಯವು ನಾಲ್ಕು ಮುಖ್ಯ ವಿಭಾಗಗಳನ್ನು (ಕೋಣೆಗಳು) ಸ್ನಾಯುಗಳಿಂದ ಮಾಡಲ್ಪಟ್ಟಿದೆ ಮತ್ತು ವಿದ್ಯುತ್ ಪ್ರಚೋದನೆಗಳಿಂದ ನಡೆಸಲ್ಪಡುತ್ತದೆ. ನಿಮ್ಮ ಮೆದುಳು ಮತ್ತು ನರಮಂಡಲವು ನಿಮ್ಮ ಹೃದಯದ ಕಾರ್ಯವನ್ನು ನಿರ್ದೇಶಿಸುತ್ತದೆ.
"Use Heart, Know Heart"-ಈ ವರ್ಷದ ಘೋಷಣೆಯಾಗಿದೆ. ಹೃದಯದ ಕಾಳಜಿ ಅವಶ್ಯಕ. ಏಕೆಂದರೆ
ಹೃದಯ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಪ್ರತೀ ವರ್ಷ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಬಲುಮುಖ್ಯ ಕಾರಣಗಳೆಂದರೆ ಬದಲಾದ ಜೀವನಶೈಲಿ, ಒತ್ತಡದ ಬದುಕು, ವಾತಾವರಣದಲ್ಲಿನ ಮಾಲಿನ್ಯ, ಧೂಮಪಾನ, ತಂಬಾಕು ಮತ್ತು ಮಾದಕ ವಸ್ತುಗಳ ಸೇವನೆಯಂತಹ ದುಶ್ಚಟಗಳಿಗೆ ಮಾನವರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ಬಲುಮುಖ್ಯ ಕಾರಣವಾಗಿದೆ. ಅನುವಂಶೀಯತೆಯೂ ಒಂದು ಕಾರಣವಾಗಿದೆ. ಒಟ್ಟಾರೆ ಇಂದಿನ ಯಾಂತ್ರಿಕ ಬದುಕಿನಲ್ಲಿ ಸಹಜತೆ ದೂರ ಸರಿಯುತ್ತಿರುವುದರಿಂದ ಮಾನವನನ್ನು ಹತ್ತು ಹಲವು ಕಾಯಿಲೆಗಳು ಕಾಡುತ್ತಿವೆ. ಇದು ಕೂಡ ಹೃದಯ ಸಂಬಂಧಿ ಸಮಸ್ಯೆಗೆ ಆಸ್ಪದ ನೀಡುತ್ತಿದೆ. ಮತ್ತೆ ಫಿಟನೆಸ್ ಕಾಯ್ದುಕೊಳ್ಳುವ ಅತಿಯಾದ ಹುಚ್ಚಿನಿಂದ ವಿಪರೀತ ದೇಹದಂಡನೆ ಮಾಡುವುದರಿಂದಲೂ ಹೃದಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಇವೆಲ್ಲದರ ಬಗ್ಗೆ ವಿಶ್ವ ಹೃದಯ ದಿನದಂದು ಜನರಿಗೆ ಅರಿವು ಮೂಡಿಸಬೇಕಿದೆ.
ಹೃದಯ ಒಂದು ವ್ಯಕ್ತಿಯ ಜೀವ ನಡೆಸುವ ಯಂತ್ರದಂತಿದ್ದು ಆ ವ್ಯಕ್ತಿ ಜೀವಂತ ಇರುವವರೆಗೆ ಪ್ರತೀ ಸೆಕೆಂಡ್ ದೇಹದ ಎಲ್ಲ ಜೀವಕೋಶಗಳಿಗೆ ನಿರಂತರವಾಗಿ ರಕ್ತವನ್ನು ಪಂಪ್ ಮಾಡಿ ಆಮ್ಲಜನಕ, ಪೋಷಕಾಂಶ ಸರಬರಾಜು ಮಾಡುತ್ತಿರುತ್ತದೆ ಮತ್ತು ರಕ್ತ ಶುದ್ಧೀಕರಣ ಮಾಡುತ್ತಿರುತ್ತದೆ. ಈ ಯಂತ್ರವು ಪ್ರತೀ ನಿಮಿಷಕ್ಕೆ ಐದು ಲೀಟರ್‌ನಂತೆ ದಿನವೊಂದಕ್ಕೆ ಸರಿಸುಮಾರು 7-8 ಸಾವಿರ ಲೀಟರ್‌ಗಳಷ್ಟು ರಕ್ತವನ್ನು ಪಂಪ್ ಮಾಡುತ್ತಿರುತ್ತದೆ.
ಮಾನವನನ್ನು ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಈಗ ಪ್ರಮುಖವಾದದ್ದು. ಹೃದಯಕ್ಕೆ ಸಂಬಂಧಿಸಿದ ಅನೇಕ ಬಗೆಯ ವ್ಯತ್ಯಯಗಳನ್ನು ಒಟ್ಟಾಗಿ ಹೃದಯ ಸಂಬಂಧಿ ರೋಗ ಎಂದು ಕರೆಯುತ್ತೇವೆ. ಇವುಗಳಲ್ಲಿ ಹೃದಯಕ್ಕೆ ರಕ್ತ ಪೂರೈಸುವ ರಕ್ತನಾಳಗಳ ತೊಂದರೆಗಳು (CAD), ಎದೆ ಶೂಲೆ (Angina), ಹೃದಯ ಸ್ನಾಯುಗಳ ತೊಂದರೆ, ಕವಾಟಗಳ ತೊಂದರೆ, ಹೃದಯಾಘಾತ, ಹೃದಯ ತಡೆ, ಹೃದಯ ಸ್ತಂಭನ, ಹೃದಯ ಸೋಲುವಿಕೆ ಪ್ರಮುಖವಾದವುಗಳು.
ಕಾರಣಗಳು ಹಲವು
ಹೆಚ್ಚಿನ ಜನರಿಗೆ ಅವರ ಜೀವನಶೈಲಿಯಲ್ಲಿರುವ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಅಪಾಯಕಾರಿ ಅಂಶಗಳ ಬಗ್ಗೆ ಅರಿವು ಇರುವುದಿಲ್ಲ. ಅವುಗಳ ಬಗ್ಗೆ ತಿಳಿವಳಿಕೆ ಮೂಡಿಸಲು ಪ್ರತೀ ವರ್ಷ ಸೆಪ್ಟಂಬರ್ 29 ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾ ಗುತ್ತದೆ. ಕಳೆದ 4-5 ದಶಕಗಳಲ್ಲಿ ಜನರ ಜೀವನದ ಶೈಲಿ, ಆಹಾರ ಪದ್ಧತಿ, ಬದುಕುತ್ತಿರುವ ಪರಿಸರ, ವಾತಾವರಣದಲ್ಲಿ ಆಗುತ್ತಿರುವ ಅಗಾಧ ವ್ಯತ್ಯಾಸಗಳು ಅವರ ಆರೋಗ್ಯದ ಮೇಲೆ ತೀವ್ರವಾದ ಪರಿಣಾ ಮಗಳನ್ನು ಉಂಟುಮಾಡುತ್ತಿದೆ. ಜನರು ಅಂದಿನ ಶ್ರಮದಾಯಕ ವೃತ್ತಿಗಳಿಂದ ಮುಕ್ತವಾಗುತ್ತ ಶ್ರಮರಹಿತ ಆದರೆ ಹೆಚ್ಚು ಮಾನಸಿಕ ಒತ್ತಡ ಹೊಂದಿರುವ ಜಡತ್ವದ ಜೀವನಶೈಲಿಗೆ ಬದಲಾಗುತ್ತಿದ್ದಾರೆ. ಸ್ಪರ್ಧಾತ್ಮಕ ಒತ್ತಡದಿಂದ ಕೂಡಿದ ಬದುಕು, ಬದಲಾದ ಆಹಾರ ಪದ್ಧತಿ- ಸಂಸ್ಕರಿಸದ ಸಕ್ಕರೆ, ಹೆಚ್ಚು ಕಾರ್ಬೋಹೈಡ್ರೇಟ್, ಕೊಬ್ಬು ಇರುವ ಆಹಾರ ಪದಾರ್ಥಗಳು ಈ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದೆ.
ನಗರೀಕರಣ, ಕೈಗಾರೀಕರಣ, ಯಾಂತ್ರಿಕ ಜೀವನ, ಬದಲಾದ ಜೀವನಶೈಲಿಯಿಂದಾಗಿ ಹೃದಯ ರೋಗಗಳು, ಕ್ಯಾನ್ಸರ್, ಡಯಾಬಿಟಿಸ್‌ನಿಂದ ಬಳಲುತ್ತಿರುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಬೇರೆ ಬೇರೆ ಕಾರಣಗಳಿಂದ ಜನರು ತಂಬಾಕು, ಮದ್ಯಪಾನ, ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದು ಸಹ ಹೃದಯ ಸಂಬಂಧಿ ರೋಗಗಳ ಹೆಚ್ಚಳಕ್ಕೆ ಕಾರಣವಾಗಿದೆ. ಈ ಎಲ್ಲ ಬದಲಾವಣೆಗಳಿಂದ ಹೃದಯದ, ರಕ್ತನಾಳಗಳ ಸಮಸ್ಯೆಗಳು 30 ವರ್ಷದ ಒಳಗಿನ ಯುವಜನರಲ್ಲಿ ಸಹ ಈಗ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಯಾಗಿದೆ. ಈಗ ಮಹಿಳೆಯರೂ ಸಹ ವೃತ್ತಿಪರರಾಗಿ ಸ್ಪರ್ಧಾತ್ಮಕ ಜೀವನ ನಡೆಸುವುದರಿಂದ, 45 ವರ್ಷದ ಅನಂತರ ಮಹಿಳೆಯರಲ್ಲಿ ಹಾರ್ಮೋನ್‌ಗಳ ವ್ಯತ್ಯಾಸ ದಿಂದ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗು ವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ.
ಯಾವುದೇ ಕಾಯಿಲೆ ನಿಯಂತ್ರಣದಲ್ಲಿ ಮೂರು ಹಂತಗಳಿರುತ್ತವೆ. ಮೊದಲನೇ ಹಂತದಲ್ಲಿ ಕಾಯಿಲೆ ಬಾರದಂತೆ ತಡೆಯುವುದು-ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳುವುದು, ನಿರ್ದಿಷ್ಟ ಪ್ರತಿರಕ್ಷಣೆ ಪಡೆದು ಕೊಳ್ಳುವುದು. ಎರಡನೇ ಹಂತದಲ್ಲಿ ಕಾಯಿಲೆಯನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಅದಕ್ಕೆ ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವುದು. ಮೂರನೇ ಹಂತದಲ್ಲಿ ಕಾಯಿಲೆಯ ಪರಿಣಾಮವನ್ನು ಕಡಿಮೆ ಮಾಡುವುದು ಹಾಗೂ ಕಾಯಿಲೆ ಯಿಂದ ಈಗಾಗಲೇ ಆಗಿರುವ ಶಾರೀರಿಕ ತೊಂದರೆಗಳನ್ನು ನಿಧಾನ ವಾಗಿ ಕಡಿಮೆಗೊಳಿಸುವುದು ಮತ್ತು ಕ್ರಮೇಣ ಇಲ್ಲವಾಗಿಸುವುದು.
ನಿದ್ರೆಯೊಂದಿಗೆ ಮಧ್ಯಾಹ್ನ ಸಹ ಊಟದ ಅನಂತರ 15-30 ನಿಮಿಷಗಳ ಪವರ್ ನ್ಯಾಪ್( ಶಕ್ತಿ ನಿದ್ದೆ) ದೈನಂದಿನ ಕೆಲಸಗಳಲ್ಲಿ ತಾಜಾತನ, ಶಕ್ತಿ ನೀಡುವುದಲ್ಲದೆ ಹೃದಯಾಘಾತದ ಅಪಾಯ ಕಡಿಮೆ ಮಾಡುವುದು.
ಕೆಲವೊಮ್ಮೆ ಈ ಎದೆನೋವನ್ನು ಹೊಟ್ಟೆ ನೋವು/ಆ್ಯಸಿಡಿಟಿ ಎಂದು ನಿರ್ಲಕ್ಷ್ಯ ಮಾಡುವ ಸಂಭವ ಇರುತ್ತದೆ. ಹೃದಯಾಘಾತ ಉಂಟಾದ ಬಳಿಕ ಮೊದಲ ಒಂದು ಗಂಟೆ ಗೋಲ್ಡನ್ ಅವರ್ ಎಂದು ಕರೆಯ ಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಇ.ಸಿ.ಜಿ. ಮತ್ತಿತರ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಸರಿಯಾದ ಸಮಯದಲ್ಲಿ ಪಡೆದು ಕೊಳ್ಳುವುದು ಅಗತ್ಯವಾಗಿರುತ್ತದೆ. ಅಲ್ಲದೇ 35 ವರ್ಷದ ಅನಂತರ ಪುರುಷರು ಹಾಗೂ 45 ವರ್ಷ ಮೀರಿದ ಮಹಿಳೆಯರು ವರ್ಷಕ್ಕೊಮ್ಮೆ ಹೃದಯ ಸಂಬಂಧಿ ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ.
-ಡಾ| ಅಶ್ವಿನಿ ಕುಮಾರ ಗೋಪಾಡಿ
No comments:
Post a Comment