Saturday, October 14, 2023

 ಯಜಮಾನನ ಗುಣ ಶಿಷ್ಯನಲ್ಲಿ

ಬಹಳ ವರ್ಷಗಳ ಹಿಂದೆ ಕಾಶಿಯ ರಾಜ ಬ್ರಹ್ಮದತ್ತನಾಗಿದ್ದ. ಆತ ತಾರುಣ್ಯ­ದಲ್ಲೇ ಪಟ್ಟಕ್ಕೇರಿದವನು. ಆತ ಧರ್ಮಜ್ಞ. ಅವನಿಗೆ ಸಕಲ ವಿದ್ಯೆಗಳೂ ಕರ­ತ­ಲಾಮಲಕವಾಗಿದ್ದವು. ಆತನ. ಮಾತು, ನಡೆ ಅತ್ಯಂತ ನಯ. ಅವನ ಬಾಯಿಯಿಂದ ತಪ್ಪು ಮಾತುಗಳು ಬರುವುದೇ ಸಾಧ್ಯವಿರಲಿಲ್ಲ. ಅವನ ಕರುಣೆ, ನ್ಯಾಯಪರತೆ, ಜನಪ್ರೀತಿ ದಂತಕಥೆಗಳೇ ಆಗಿದ್ದವು. ಅವನ ರಾಜ್ಯದಲ್ಲಿ ಕಳವು, ಅಪರಾಧಿಗಳೇ ಇರಲಿಲ್ಲ. ನ್ಯಾಯಾಧೀಶರಿಗೆ, ಶಿಸ್ತು­ಪಾಲನೆ ಮಾಡುವ ಸೈನಿಕರಿಗೆ ಯಾವ ಕೆಲಸವೂ ಇರಲಿಲ್ಲ. ಸಮಾಜದಲ್ಲಿ ಅತ್ಯಂತ ಶಾಂತಿ ಇತ್ತು.ಬ್ರಹ್ಮದತ್ತ ಇಷ್ಟಾದರೂ ತನ್ನಲ್ಲಿ ಯಾವುದಾದರೂ ದುರ್ಗುಣವಿದೆಯೇ ಎಂದು ಪರೀಕ್ಷಿಸಿ­ಕೊಳ್ಳುತ್ತಿದ್ದ. ಆಸ್ಥಾನದಲ್ಲಿ ಯಾರನ್ನು ಕೇಳಿದರೂ ಅವರು ಅವನಲ್ಲಿ ಒಂದು ಕೆಟ್ಟಗುಣವನ್ನೂ ಹೇಳಲಿಲ್ಲ. ಅವರು ಹೆದರಿಕೆಯಿಂದ ಹೇಳಿರಲಿ­ಕ್ಕಿಲ್ಲ­ವೆಂದುಕೊಂಡು ವೇಷ ಮರೆಸಿಕೊಂಡು ತನ್ನ ದೇಶದ ಹಳ್ಳಿಹಳ್ಳಿಗಳಲ್ಲಿ ಸಂಚರಿ­ಸಿದ.

ಅಲ್ಲಿಯೂ ಸಾಮಾನ್ಯರನ್ನು ಪ್ರಶ್ನಿಸಿದ. ಅವರಲ್ಲಿ ಒಬ್ಬರೂ ರಾಜನ ಒಂದು ದುರ್ಗುಣವನ್ನೂ ಹೇಳಲಿಲ್ಲ. ಬದಲಾಗಿ ಅವನನ್ನು ದೇವರೆಂದೇ ಭಾವಿಸುವು-ದಾಗಿ ಹೇಳಿದರು. ಬ್ರಹ್ಮದತ್ತ ಅಂದಿನ ಕಾಲದ ಮಹಾಜ್ಞಾನಿ ಎಂದು ಹೆಸರಾದ ವಿಷ್ಣುಗೋಪನನ್ನು ಕಂಡು ತನ್ನಲ್ಲಿ ಯಾವುದಾದರೂ ದೋಷವಿದ್ದರೆ ತಿಳಿಸಿ ಅದನ್ನು ಕಳೆದುಕೊಳ್ಳುವ ವಿಧಾನ­ವನ್ನು ಹೇಳಲು ಕೇಳಿಕೊಂಡ. ಇದೇ ರೀತಿಯ ಪರಿಸ್ಥಿತಿ ಕೋಸಲ ದೇಶದ ರಾಜನಾದ ಮಲಿಕಸಿಂಹನಿಗೂ ಬಂದಿತ್ತು. ಅವನನ್ನು ಜನ ದೇವರೆಂದೇ ನಂಬುತ್ತಿದ್ದರು. ಅವನ ರಾಜ್ಯದಲ್ಲೂ ಒಂದೇ ಒಂದು ಕಳವು, ಅನ್ಯಾಯದ ಪ್ರಸಂಗ­­ಗಳು ನಡೆಯುತ್ತಿರಲಿಲ್ಲ. ಅವನೂ ಕೂಡ ವಿಷ್ಣುಗೋಪನನ್ನು ಕಂಡು ತನ್ನ ದುರ್ಗುಣಗಳನ್ನು ಕಂಡು ಹಿಡಿಯಲು ಬೇಡಿಕೊಂಡಿದ್ದ. ವಿಷ್ಣು­ಗೋಪ ಇಬ್ಬರೂ ರಾಜರ ವಿವರಗಳನ್ನೆಲ್ಲ ತರಿಸಿಕೊಂಡ. ಆಶ್ಚರ್ಯವೆಂದರೆ ಇಬ್ಬರೂ ಒಂದೇ ವಯಸ್ಸಿನವರು. ಅವರ ರಾಜ್ಯದ ವಿಸ್ತಾರ, ಐಶ್ವರ್ಯ, ಸೈನ್ಯದ ಶಕ್ತಿ, ಅವರು ಪಡೆದ ಯಶಸ್ಸು ಎಲ್ಲವೂ ಸಮನಾಗಿಯೇ ಇದ್ದವು. ಎರಡೂ ದೇಶದ ಜನರು ತಮ್ಮ ತಮ್ಮ ರಾಜನಲ್ಲಿ ಒಂದೇ ಒಂದು ತಪ್ಪನ್ನು ಕಂಡುಹಿಡಿ­ಯಲು ಅಸಮರ್ಥ­ರಾಗಿದ್ದರು. ಇಬ್ಬ­ರಲ್ಲಿ ಯಾರು ಹೆಚ್ಚು ಒಳ್ಳೆಯವರು ಎಂಬು­ದನ್ನು ಗುರುತಿಸುವುದು ಹೇಗೆ ಎಂಬುದು ವಿಷ್ಣುಗೋಪನಿಗೆ ಸವಾಲಾ­ಯಿತು.

ಆಗ ಒಂದು ದಿನ ಯೋಚನೆ ಮಾಡಿ ಇಬ್ಬರೂ ರಾಜರ ರಥಗಳನ್ನು ಒಂದೆಡೆಗೆ ಕಳುಹಿಸುವಂತೆ ಸೂಚನೆ ನೀಡಿದ. ರಾಜರ ಸಾರಥಿಗಳು ತಮ್ಮ ರಥಗಳನ್ನು ತೆಗೆದುಕೊಂಡು ತಿಳಿಸಿದ ಸ್ಥಳಕ್ಕೆ ಹೊರಟರು. ಅವರಿಬ್ಬರ ರಥಗಳೂ ಒಂದು ಇಕ್ಕಟ್ಟಾದ ಸೇತುವೆಯ ಮೇಲೆ ಬರುವಂತೆ ವಿಷ್ಣುಗೋಪ ನೋಡಿ­ಕೊಂಡ. ಸೇತುವೆಯ ಮಧ್ಯದಲ್ಲಿ ಎರಡೂ ರಥಗಳು ಮುಖಾಮುಖಿ­ಯಾಗಿ ನಿಂತವು. ಈಗ ಯಾವು­ದಾದರೂ ಒಂದು ರಥ ಹಿಂದೆ ಹೋಗದೇ ಗತಿಯಲ್ಲ! ಆದರೆ ಹಿಂದೆ ಹೋಗು­ವವರು ಯಾರು? ವಿಷ್ಣುಗೋಪ ಇಬ್ಬರೂ ಸಾರಥಿಗಳ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ. ಸ್ವಲ್ಪ ಸಮಯದ ಮೇಲೆ ಬ್ರಹ್ಮದತ್ತನ ಸಾರಥಿ ರಥವನ್ನು ಹಿಂದೆ ತೆಗೆದುಕೊಂಡು ಹೋದ.

ಮಲಿಕಸಿಂಹನ ಸಾರಥಿ ಸಂತೋಷದಿಂದ ರಥ ಓಡಿಸಿಕೊಂಡು ನಡೆದ. ನಂತರ ವಿಷ್ಣುಗೋಪ ಇಬ್ಬರೂ ರಾಜರನ್ನು ಒಟ್ಟಿಗೇ ಕರೆದು ಹೇಳಿದ, ‘ನೀವಿಬ್ಬರೂ ಒಳ್ಳೆಯ ರಾಜರೇ, ಅಸಾಮಾನ್ಯ ಗುಣಗಳನ್ನು ಹೊಂದಿದ್ದೀರಿ. ಆದರೆ, ಮಲಿಕಸಿಂಹನಿಗೆ ಇನ್ನೂ ಸ್ವಲ್ಪ ದರ್ಪ, ಅಹಂಕಾರವಿದೆ. ಅದು ಕರಗಬೇಕು. ಯಾಕೆಂದರೆ ನಿಮ್ಮ ಸಾರಥಿ ಆ ದರ್ಪ­ವನ್ನು ತೋರಿಸಿದ. ಆದರೆ ಬ್ರಹ್ಮದತ್ತನ ಸಾರಥಿ ನಗು ಮುಖದಿಂದ ರಥವನ್ನು ಹಿಂದೆ ತೆಗೆದ. ಯಜಮಾನನ ದರ್ಪ ಸೇವಕನಿಗೂ ತಟ್ಟುತ್ತದೆ’ ಮಲಿಕಸಿಂಹ ಈ ಮಾತು ಒಪ್ಪಿದ ಹಾಗೂ ಇನ್ನೂ ವಿನಯಶೀಲನಾಗಲು ಪ್ರಯತ್ನಿಸಿ ಯಶಸ್ವಿ­ಯಾದ. ಯಜ-ಮಾನನ ಗುಣ, ದುರ್ಗುಣಗಳು ಅವನ ಹಿಂಬಾಲಕರಿಗೂ ಅಂಟಿಕೊಳ್ಳುತ್ತವೆ. ಮೌಲ್ಯಗಳು ಮೇಲಿ­ನಿಂದ ಕೆಳಕ್ಕೆ ಇಳಿಯುತ್ತವೆ. ಯಜಮಾನ ಹೇಗಿದ್ದಾನೆ ಎಂದು ತಿಳಿಯಲು ಅವನನ್ನೇ ನೋಡಬೇಕಿಲ್ಲ, ಅವನೊಂದಿಗೇ ಇರುವ ಸಹಚರರನ್ನು ಗಮನಿಸಿದರೆ ಸಾಕು. ಸಜ್ಜನ­ನಾದ ಯಜಮಾನ ತನ್ನೊಂದಿಗೆ ಇರುವವರನ್ನೂ ಸಜ್ಜನರನ್ನಾಗಿ ಮಾಡು­ತ್ತಾನೆ. ಕೃಪೆ :ನೆಟ್.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು