ಕಥೆ-224 ಗಿಡದ ಯಾವ ಭಾಗವಾಗಲು ಇಷ್ಟಪಡ್ತೀರಾ
ನೀವು ಗಿಡದ ಯಾವ ಭಾಗವಾಗಲು ಇಷ್ಟಪಡ್ತೀರಾ ? ಮತ್ತು ಏಕೆ ? - ಮೇಷ್ಟ್ರು ಕೇಳಿದ್ರು
ಒಬ್ಬ ಹುಡುಗ ಎದ್ದು ನಿಂತು ಹೇಳ್ದ - ಸರ್ ನಾನು ಎಲೆಯಾಗೋಗೆ ಇಷ್ಟಪಡ್ತೀನಿ .. ಏಕೆಂದರೆ ಎಲೆ ದಣಿದು ಬಂದವರಿಗೆ ನೆರಳಾಗುತ್ತೆ , ಎಲ್ಲಾ ಜೀವಿಗಳಿಗೂ ಉಸಿರು ನೀಡುತ್ತೆ , ಹಣ್ಣಾಗಿ ಉದುರಿದರೆ ಕೊಳೆತು ಗೊಬ್ಬರವಾಗುತ್ತೆ .
ಮೇಷ್ಟ್ರು - ಶಭಾಷ್ , ಕೂತ್ಕೋ ..
ಮತ್ತೊಬ್ಬ ವಿದ್ಯಾರ್ಥಿಯನ್ನು ನೀನು ಹೇಳು ಏನಾಗ್ತಿಯಾ ?
ಆ ಹುಡುಗ - ಸರ್ ನಾನು ಹೂವಾಗ್ತೀನಿ , ಏಕೆಂದರೆ ಹೂವನ್ನು ಎಲ್ಲರೂ ಮೆಚ್ತಾರೆ , ಅದು ಬೀರುವ ಸುಗಂಧವನ್ನು ಎಲ್ಲರೂ ಇಷ್ಡಪಡ್ತಾರೆ .. ದೇವರಿಗೂ ಕೂಡಾ ಹೂವಿನಿಂದಲೇ ಅಲಂಕಾರ ಮಾಡ್ತಾರೆ ..
ಮೇಷ್ಟ್ರು - ಗುಡ್
ಮತ್ತೊಬ್ಬ ವಿದ್ಯಾರ್ಥಿಯನ್ನು , ನೀನ್ ಏನಾಗ್ತೀಯೋ?
ಸರ್ ಹಣ್ಣಾಗಲು ಬಯಸ್ತೀನಿ . ಏಕೆಂದರೆ ಹಣ್ಣು ರುಚಿರುಚಿಯಾಗಿರುತ್ತೆ, ಚಿಕ್ಕಮಕ್ಳು ದೊಡ್ಡವ್ರು ಎಲ್ರೂ ಇಷ್ಟಪಡ್ತಾರೆ , ಹಸಿದವರಿಗೆ ಆಹಾರವಾಗುತ್ತೆ, ಮಾರಿದರೆ ದುಡ್ಡು ಸಿಗುತ್ತೆ . ಕಷ್ಟದಲ್ಲಿ ಸಹಾಯವಾಗುತ್ತೆ
ಮೇಷ್ಟ್ರು - ವೆರಿಗುಡ್ .
ಮುಂದಿನವ್ನು , ನೀನು ಏನಾಗ್ತೀಯೋ ?
ಹುಡುಗ - ಸರ್ ರೆಂಬೆಯಾಗೋಕೆ ಇಷ್ಟಪಡ್ತೀನಿ , ಏಕೆಂದರೆ ರೆಂಬೆಗಳಲ್ಲಿ ಪಕ್ಷಿಗಳೆಲ್ಲ ಕೂತು ವಿಶ್ರಾಂತಿ ಪಡ್ಕೊತವೆ , ಗೂಡುಗಳನ್ನು ಕಟ್ಟಿ ಮರಿಗಳನ್ನು ಸಾಕ್ತವೆ , ರೆಂಬೆ ಒಣಗಿ ಬಿದ್ದರೆ ಅದನ್ನೇ ಒಲೆಗೆ ಒಟ್ಟೋದಿಕ್ಕೂ ಬಳಸ್ತೀವಿ .
ಮೇಷ್ಟ್ರು - ಫೈನ್, ಕೂತ್ಕೋ .
ಕೈ ಎತ್ತಿದ್ದೀಯಲ್ಲ , ನೀನು ಏನು ಆಗೋಕೆ ಇಷ್ಟಪಡ್ತೀಯಾ ?
ಕೈ ಎತ್ತಿದವನು ಸಂಕೋಚದಿಂದ ಎದ್ದು ನಿಂತು - ಸರ್ ನಾನು ಬೇರಾಗಲು ಇಷ್ಟಪಡ್ತೀನಿ ..
ಬೇರು ಭೂಮಿಯೊಳಗಡೆ ಗಟ್ಟಿ ಮಣ್ಣನ್ನು ಸೀಳ್ಕೊಂಡು ಕಷ್ಟದಿಂದ ಬೆಳೆಯುತ್ತೆ .. ಬೇರಿಗೆ ಬೆಟ್ಟಗುಡ್ಡ ಸೂರ್ಯ ಚಂದ್ರ ನಕ್ಷತ್ರಗಳು ಮನುಷ್ಯರು ಪ್ರಾಣಿಪಕ್ಷಿಗಳು ಮನೆಗಳು ಒಂದೂ ಕಾಣಿಸಲ್ವಂತೆ , ಆದ್ರೂ ಅದು ಕೊರಗದೆ ತನ್ನ ಪಾಡಿಗೆ ಸತ್ವ ಹೀರಿ ಗಿಡವನ್ನು ಬೆಳೆಸುತ್ತಂತೆ .... ನಾನೂ ಕೂಡಾ ಪ್ರಪಂಚ ನೋಡಿಲ್ಲ , ಬೇರೂ ಕೂಡ ಪ್ರಪಂಚ ನೋಡಿಲ್ಲ.. ಬೇರು ಕತ್ತಲಿನಲ್ಲೇ ಹುಟ್ಟಿ ಕತ್ತಲಿನಲ್ಲೇ ಕಮರಿ ಹೋಗುತ್ತೆ .. ಬೇರಿನಂತೆ ನಾನೂ ಕೂಡಾ ಅಡೆತಡೆಗಳನ್ನು ಎದುರಿಸಿ ಬೇಳೀಬೇಕು ..ದುಃಖವಾದಾಗಲೆಲ್ಲಾ ಬೇರನ್ನು ನೆನೆದು ಸಮಾಧಾನ ಮಾಡ್ಕೊತಿನಿ...
ಮೇಷ್ಟ್ರು ಅತ್ಯಾನಂದದಿಂದ ಆ ಹುಡುಗನ ಕೆನ್ನೆಗಳನ್ನು ಚಿವುಟಿ ಮುದ್ದಿಸಿ ಭಾವುಕರಾದರು.
ಕೆಲವರು ಸ್ವಲ್ಪ ಕೆಲಸ ಮಾಡಿ ಬಹಳಷ್ಟು ಜಂಬ ಕೊಚ್ಚಿಕೊಳ್ಳುತ್ತಾರೆ, ಕೆಲವರು ಕೆಲಸ ಮಾಡಿದಷ್ಟು ಜಂಬ ಕೊಚ್ಚಿಕೊಳ್ಳುತ್ತಾರೆ ಕೆಲವರು ಕೆಲಸ ಮಾಡಿ ಏನೂ ಮಾಡದಂಗೆ ಇರುತ್ತಾರೆ..
ಇದೆ ಅಲ್ವಾ ಕಣ್ಣಿಗೆ ಕಾಣದೆ ತಮ್ಮ ಕೆಲಸ ತಾವು ಮಾಡ್ತಾ ಇರೋರು..
ಎಷ್ಟೋ ಕಾಣದ ಕೈಗಳು ನಮಗೆ ಸಹಾಯ ಮಾಡಿರುತ್ತವೆ.. ಅದನ್ನು ಎಂದಿಗೂ ಮರೆಯಬಾರದು..
ಒಂದು ಮರದ ಬೇರು ನಮಗೆ ಮಾದರಿಯಾಗುತ್ತದೆ ಅನುಕರಣೀಯವಾಗುತ್ತದೆ..👍
🌱🌱🌱💐💐💐💐

No comments:
Post a Comment