ಟೋಪಿ ಕಥೆ-226 ಟೋಪಿ ಪುರಾತನ, ಕೋತಿ ನವೀನ..
ಇದೊಂದು ಹಳೆಯ ಕಥೆ ಎನ್ನಬೇಡಿ. ಈ ಹಳೆಯ ಕತೆಗೆ ಹೊಸ ಭಾಗವೊಂದು ಸೇರ್ಪಡೆಯಾಗಿದೆ. ಕುತೂಹಲಕಾರಿಯಾಗಿದೆ!
ಒಬ್ಬ ಯುವಕ ಮನೆಯಲ್ಲೇ ಟೋಪಿಗಳನ್ನು ತಯಾರಿಸಿ, ಊರಿಂದೂರಿಗೆ ಹೋಗಿ ಅವನ್ನು ಮಾರುತ್ತಿದ್ದ. ಬೆಳಿಗ್ಗೆ ಮುಧೋಳದಲ್ಲಿದ್ದರೆ ಮಧ್ಯಾಹ್ನ ಹಿರೇಮ್ಯಾಗೇರಿಯಲ್ಲಿ, ಸಂಜೆ ಸಂಕನೂರಿನಲ್ಲಿರುತ್ತಿದ್ದ. ಒಂದು ಮಧ್ಯಾಹ್ನ ಹಿರೇಮ್ಯಾಗೇರಿಯಲ್ಲಿ ನಡೆದು ಹೋಗುತ್ತಿದ್ದ. ತಲೆಯ ಮೇಲೆ ಟೋಪಿಯಿದ್ದರೂ, ಬಿಸಿಲು ಹೆಚ್ಚಾಗಿದ್ದುದರಿಂದ ಸ್ವಲ್ಪ ವಿಶ್ರಾಂತಿ ಪಡೆಯೋಣ ವೆನಿಸಿತು. ಹಿರೇಮ್ಯಾಗೇರಿಯಲ್ಲಿ ಮರ ಒಂದನ್ನು ನೋಡಿದ
ಟೋಪಿಗಳಿದ್ದ ಚೀಲ ಪಕ್ಕದಲ್ಲಿಟ್ಟುಕೊಂಡು ಮರದ ನೆರಳಲ್ಲಿ ಮಲಗಿಬಿಟ್ಟ. ನಿದ್ದೆಯಿಂದೆದ್ದು ನೋಡಿದರೆ ಚೀಲದಲ್ಲಿ ಒಂದು ಟೋಪಿಯೂ ಇರಲಿಲ್ಲ.ಹಿರೇಮ್ಯಾಗೇರಿಯಲ್ಲಿ ಕೋತಿಗಳು ಬಹಳ, ಗಾಬರಿಗೊಂಡು ತಲೆಯೆತ್ತಿ ನೋಡಿದಾಗ ಮರದ ಮೇಲೆ ಹತ್ತಾರು ಕೋತಿಗಳು ಕುಳಿತಿದ್ದವು.ಎಲ್ಲ ಕೋತಿಗಳೂ ತಲೆಗೊಂದೊಂದು ಟೋಪಿಗಳನ್ನು ಹಾಕಿಕೊಂಡು ಕುಳಿತಿದ್ದವು. ಕೋತಿಗಳದ್ದು ಅನುಕರಣ ಬುದ್ಧಿಯೆಂಬುದು ಈತನಿಗೆ ಗೊತ್ತಿತ್ತು. ಆತ ತನ್ನ ಟೋಪಿಯನ್ನು ನೆಲಕ್ಕೆಸೆದ.
ಎಲ್ಲ ಕೋತಿಗಳು ತಮ್ಮ ಟೋಪಿಗಳನ್ನು ನೆಲಕ್ಕೆಸೆದವು. ಆತ ತಕ್ಷಣ ಎಲ್ಲ ಟೋಪಿಗಳನ್ನು ತನ್ನ ಚೀಲಕ್ಕೆ ತುಂಬಿಕೊಂಡು, ಮುಂದಿನೂರಿಗೆ ಓಡಿದ. ಅಂದು ಸಂಜೆ ತನ್ನ ಕತೆಯನ್ನು ಮಕ್ಕಳಿಗೆ ಮೊಮ್ಮಕ್ಕಳಿಗೆ ಹೇಳಿದ. ಎಲ್ಲರೂ ಹೊಟ್ಟೆ ಹುಣ್ಣಾಗುವ ಹಾಗೆ ನಕ್ಕರು. ಇದಿಷ್ಟು ಕತೆಯ ಹಳೆಯ ಭಾಗ.
ಈಗ ಹೊಸ ಭಾಗವನ್ನು ನೋಡಿ. ಐವತ್ತು ವರ್ಷಗಳ ನಂತರ ಆತನ ಮೊಮ್ಮಗನೂ ವಂಶಪಾರಂಪರೆಯ ವೃತ್ತಿಯಲ್ಲಿದ್ದ. ಟೋಪಿ ತಯಾರಿಸಿ, ಊರಿಂದೂರಿಗೆ ಅಲೆಯುತ್ತ ಟೋಪಿಗಳನ್ನು ಮಾರುತ್ತಿದ್ದ. ಒಂದು ದಿನ ತಾತನಿಗಾದ ಅನುಭವವೇ ಮೊಮ್ಮಗನಿಗೂ ಆಯಿತು. ಆತ ಬಿಸಿಲಿನಲ್ಲಿ ಬಳಲಿ ಅದೇ ಮರದ ಕೆಳಗೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ. ತಲೆಯ ಮೇಲೆ ಟೋಪಿ ಹಾಕಿಕೊಂಡಿದ್ದ. ಪಕ್ಕದಲ್ಲಿ ಟೋಪಿಗಳು ತುಂಬಿದ್ದ ಚೀಲವಿತ್ತು.
ವಿಶ್ರಾಂತಿಯ ನಂತರ ಎದ್ದು ನೋಡಿದಾಗ ಚೀಲದಲ್ಲಿ ಒಂದು ಟೋಪಿಯೂ ಇರಲಿಲ್ಲ. ಮರದ ಮೇಲಿದ್ದ ಕೋತಿಗಳೆಲ್ಲ ಆತನ ಚೀಲದಿಂದ ಒಂದು ಟೋಪಿಯೂ ಇರಲಿಲ್ಲ. ಮರದ ಮೇಲಿದ್ದ ಕೋತಿಗಳೆಲ್ಲ ಆತನ ಚೀಲದಿಂದ ಟೋಪಿಯನ್ನು ಹಾರಿಸಿಕೊಂಡು ಹೋಗಿ ತಲೆಯ ಮೇಲೇರಿಸಿಕೊಂಡು ನಲಿಯುತ್ತಿದ್ದವು. ತಕ್ಷಣ ಆತನಿಗೆ ತನ್ನ ತಾತ ಹೇಳುತ್ತಿದ್ದ ಕಥೆಯ ನೆನಪಾಯಿತು. ಆತ ಎದ್ದು ನಿಂತು ತನ್ನ ಬಲಗೈಯನ್ನು ಮೇಲಕ್ಕೆತ್ತಿದ. ಕೋತಿಗಳೂ ಬಲಗೈಯನ್ನು ಮೇಲಕ್ಕೆತ್ತಿವು. ಆತ ನಿಂತಲ್ಲಿಯೇ ಮೂರು ಸುತ್ತು ಸುತ್ತಿದ. ಕೋತಿಗಳೂ ಮೂರು ಸುತ್ತು ಸುತ್ತಿದವು. ಆತ ಏನೇನು ಮಾಡಿದನೋ ಕೋತಿಗಳೂ ಅದನ್ನೇ ಮಾಡಿದವು. ಕೊನೆಗೆ ಆತ ತನ್ನ ತಲೆಯಿಂದ ಟೋಪಿಯನ್ನು ತೆಗೆದು ನೆಲಕ್ಕೆಸೆದ. ಆದರೆ ಒಂದು ಕೋತಿಯೂ ಟೋಪಿಯನ್ನು ಕಿತ್ತೆಸೆಯಲಿಲ್ಲ. ಎಲ್ಲ ಗಂಭೀರವಾಗಿ ಕುಳಿತಿದ್ದವು. ಆತನಿಗೆ ದಿಕ್ಕೇ ತೋಚಲಿಲ್ಲ.
ಆಗ ಮರದ ಮೇಲಿಂದ ಒಂದು ಕೋತಿ ಕೇಳಗಿಳಿದು ಆತನ ಬಳಿ ಬಂದು ನಿನಗೊಬ್ಬನಿಗೇ ತಾತ ಇದ್ದಾನೆ ಎಂದುಕೊಂಡಿದ್ದೀಯ? ನಿಮ್ಮ ತಾತ ನಿನಗೆ ಕತೆ ಹೇಳಿದಂತೆ, ನಮ್ಮ ತಾತಂದಿರೂ ನಮಗೆ ಕತೆಗಳನ್ನು ಹೇಳಿದ್ದಾರೆ ಎಂದು ಹೇಳಿ ಮತ್ತೆ ಮರವನ್ನೇರಿ ಕುಳಿತುಕೊಂಡಿತು, ಟೋಪಿ ಎಸೆಯಲಿಲ್ಲ. ಪಾಪ! ಮೊಮ್ಮಗ ನಿರಾಶನಾಗಿ ಹೊರಟುಹೋದ.
ಬದಲಾವಣೆ ಜಗದ ನಿಯಮ ಹೋರಾಡುವುದೇ ಮನುಜನ ಧರ್ಮ...
ಜೀವವಿಕಾಸದಲ್ಲಿ ಪ್ರತಿಯೊಂದು ಜೀವಿಯು ಪೀಳಿಗೆಯಿಂದ ಪೀಳಿಗೆಗೆ ಅನೇಕ ಬದಲಾವಣೆಗಳನ್ನು ಹೊಂದಿರುತ್ತದೆ..
ಹಾಗೆ ಈಗಿನ ಪೀಳಿಗೆ ಮಕ್ಕಳು ಸಹ ಸಾಕಷ್ಟು ಬದಲಾವಣೆಗಳನ್ನ ಮತ್ತು ವಿಕಾಸವನ್ನು ಹೊಂದಿರುವ ಮಕ್ಕಳಾಗಿರುತ್ತಾರೆ..
ಹೀಗಾಗಿ ಪಾಲಕರಾದ ನಾವು ಮಕ್ಕಳೊಂದಿಗಿನ ವರ್ತನೆ ಬದಲಾಗಬೇಕಿದೆ..
ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವುದು ಮುಖ್ಯ. ಈ ಹಿಂದೆ ಅಜ್ಜ-ಅಜ್ಜಿಯರು ಮೊಮ್ಮಕ್ಕಳಿಗೆ ನೀತಿ ಕಥೆಗಳನ್ನು ಹೇಳುವ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿದ್ದರು.. ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ..
ಶಾಲೆಯಲ್ಲಿ ಪಠ್ಯಕ್ರಮದ ಒತ್ತಡದಿಂದಾಗಿ ಶಿಕ್ಷಕರು ಸಹ ನೀತಿ ಕಥೆಗಳನ್ನು ಹೇಳುತ್ತಿಲ್ಲ..
ಮಕ್ಕಳು ವಿಷಯದಲ್ಲಿ ಪರಿಣಿತರಾಗುತ್ತಿದ್ದಾರೆ ಆದರೆ ಮಾನವೀಯ ಮೌಲ್ಯಗಳಲ್ಲಿ ಹಿಂದೆ ಉಳಿಯುತ್ತಿದ್ದಾರೆ..
ಹೀಗಾಗಿ ಉತ್ತಮ ಮೌಲ್ಯಗಳಿಲ್ಲದ ಶಿಕ್ಷಣ ವ್ಯರ್ಥವಾಗುತ್ತದೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಮಾನವೀಯ ಮೌಲ್ಯಗಳಲ್ಲಿ ಅಡಗಿದೆ. ಮನಸ್ಸು ಮಲ್ಲಿಗೆಯಾದರೆ ಮಾತಲ್ಲಿ ಪರಿಮಳ ಬರುತ್ತದೆ.
ಸಮಾಜದಲ್ಲಿ ಇಂದು ಮೋಸ ವಂಚನೆ, ಅನ್ಯಾಯ ಅತ್ಯಾಚಾರಗಳಂತಹ ಅಮಾನವೀಯ ಕೃತ್ಯಗಳು ಉನ್ನತ ಶಿಕ್ಷಣ ಪಡೆದವರಿಂದಲೇ ನಡೆಯುತ್ತಿವೆ. ಅವರಲ್ಲಿನ ಉತ್ತಮ ಶಿಕ್ಷಣ ಮೌಲ್ಯಗಳ ಬಗೆಗಿನ ತಿಳಿವಳಿಕೆಯ ಕೊರತೆಯೇ ಕಾರಣ. ಹಾಗಾಗಿ ಆತ್ಮವಿಶ್ವಾಸ, ಧೈರ್ಯ, ಸವಿನಯತೆ, ವಿದ್ಯೆ, ಪ್ರಮಾಣಿಕತೆ, ಮಧುರವಾದ ಮಾತುಗಳಂಥ ಉತ್ತಮ ಶಿಕ್ಷಣದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ...
ಮಕ್ಕಳೂ ಸಹ ತಮ್ಮ ಸರಿಯಾದ ಬೆಳವಣಿಗೆಯ ಕ್ರೆಡಿಟ್ ಅನ್ನು ಪೋಷಕರಿಗೆ ನೀಡಬೇಕು. ಯಾರೂ ಇಲ್ಲದಿದ್ದಾಗ, ಯಾರೂ ನಿಮಗೆ ತಿಳಿದಿಲ್ಲದಿದ್ದಾಗ, ನಿಮ್ಮ ಎಲ್ಲಾ ಜವಾಬ್ದಾರಿಗಳನ್ನು ಪೂರೈಸಿದವರು ನಿಮ್ಮ ಹೆತ್ತವರು. ಆದ್ದರಿಂದ ಅವರಿಗೆ ನಿಜವಾಗಿಯೂ ವಿದೇಯರಾಗಿರುವುದು ಮತ್ತು ಋಣಿಯಾಗಿರುವುದು ಮಕ್ಕಳ ಕರ್ತವ್ಯವಾಗಿದೆ...

No comments:
Post a Comment