ಕಥೆ-241 ಸನ್ಯಾಸಿಗೆ ಒಂದಾಸೆ! ಸಂಸಾರಸ್ಥನಿಗೆ ನೂರಾರು ಆಸೆ!
ಆಸೆ ಎನ್ನುವುದು ಯಾರನ್ನೂ ಬಿಟ್ಟಿಲ್ಲ. ಕೆಲವರಿಗೆ ಸಣ್ಣಪುಟ್ಟ ಆಸೆ. ಮತ್ತೆ ಕೆಲವರಿಗೆ ದೊಡ್ಡ ದೊಡ್ಡ ಆಸೆ. ಆದರೆ ಅದನ್ನು ಈಡೇರಿಸಿಕೊಳ್ಳಲು ಯಾರ್ಯಾರು ಏನೇನು ಮಾಡುತ್ತಾರೆ ಎನ್ನುವುದನ್ನು ಈ ಕತೆ ತಿಳಿಸುತ್ತದೆ! ಒಬ್ಬ ಬಡ ಸಂಸಾರಸ್ಥ ನಿರ್ಜನವಾಗಿದ್ದ ರಸ್ತೆಯಲ್ಲಿ ಬರುತ್ತಿದ್ದ. ಬದಿಯ ಪೊದೆಯೊಳಗಿಂದ ಏನೋ ಸದ್ದು ಕೇಳಿ ಬಂತು. ಇಣುಕಿ ನೋಡಿದ. ಅಲ್ಲೊಬ್ಬ ಸನ್ಯಾಸಿ ತನ್ನ ಜೋಳಿಗೆಯಿಂದ ಬೆಳ್ಳಿಯ ನಾಣ್ಯಗಳನ್ನು ತೆಗೆದು ಎಣಿಸುತ್ತಿದ್ದ. ಸಂಸಾರಸ್ಥ ಕುತೂಹಲದಿಂದ ನೋಡುತ್ತ ನಿಂತ. ಸನ್ಯಾಸಿಯ ಬಳಿ ಒಂದು ನೂರ ಏಳು ನಾಣ್ಯಗಳಿದ್ದವು. ಎಣಿಸಿಯಾದ ನಂತರ ಆತ ಅದನ್ನು ಗಂಟು ಕಟ್ಟಿ ತನ್ನ ಜೋಳಿಗೆಗೆ ಹಾಕಿಕೊಂಡ. ಅದನ್ನು ನೋಡಿ ಸಂಸಾರಸ್ಥನಿಗೆ ಏನೋ ಹೊಳೆದಂತಾಯಿತು. ಮುಂದೆ ಹೋಗಿ ಸನ್ಯಾಸಿಗೆ ನಮಸ್ಕರಿಸಿ ಮನೆಗೆ ಭಿಕ್ಷಕ್ಕೆ ಬನ್ನಿರೆಂದು ಆಹ್ವಾನಿಸಿದ.
ಸನ್ಯಾಸಿಗಳು ಸಂಸಾರಸ್ಥರ ಮನೆಗೆ ಸಂಜೆಯ ಹೊತ್ತು ಹೋಗುವುದು ಸತ್ಸಂಪ್ರದಾಯವಲ್ಲವೆಂದು ನಿರಾಕರಿಸಿದರು. ಆದರೆ ಸಂಸಾರಸ್ಥ ‘ಭಿಕ್ಷಕ್ಕೆ ಬಂದರೆ ಭಿಕ್ಷೆಯ ಜತೆಗೆ ಒಂದು ಬೆಳ್ಳೆ ನಾಣ್ಯವನ್ನು ದಕ್ಷಿಣೆಯಾಗಿ ಕೊಡುತ್ತೇನೆ’ ಎಂದು ಒತ್ತಾಯ ಮಾಡಿದ. ಸರ್ವಸಂಗ ಪರಿತ್ಯಾಗಿಯಾದ ಸನ್ಯಾಸಿಯ ಮನಸ್ಸು ‘ಇನ್ನೊಂದು ನಾಣ್ಯ ಸಿಕ್ಕರೆ ನೂರೆಂಟು ನಾಣ್ಯಗಳಾಗುತ್ತವೆ’ ಎಂದು ಯೋಚಿಸಿತು. ಆತ ಸಂಸಾರಸ್ಥನ ಮನೆಗೆ ಹೋದ. ಅಲ್ಲಿ ಸನ್ಯಾಸಿಯನ್ನು ಸತ್ಕರಿಸಲಾಯಿತು. ಭೂರಿ ಭೋಜನವಿರಲಿಲ್ಲ. ಪೂರಿಭಾಜಿಯ ಊಟವಿತ್ತು. ಊಟವಾದ ನಂತರ ಸಂಸಾರಸ್ಥ ತನ್ನ ಸತಿಗೆ ‘ಒಳಗೆ ನಾಣ್ಯಗಳ ಗಂಟಿನಿಂದ ಒಂದು ನಾಣ್ಯ ತೆಗೆದುಕೊಂಡು ಬಾ. ಸನ್ಯಾಸಿಗಳಿಗೆ ದಕ್ಷಿಣೆ ಕೊಡಬೇಕು’ ಎಂದ. ಸತೀಮಣಿ ಇಲ್ಲಿ ಯಾವ ನಾಣ್ಯದ ಗಂಟೂ ಇಲ್ಲವೆಂದಳು. ಸಂಸಾರಸ್ಥ ಗಟ್ಟಿದನಿಯಲ್ಲಿ ‘ನಾಣ್ಯಗಳ ಗಂಟು ಅಲ್ಲೇ ಇಟ್ಟಿದ್ದೇನಲ್ಲ! ಏನಾಯ್ತು?’ ಎಂದು ಕಿರುಚಿದ.
ಆಕೆ ‘ಅದನ್ಯಾರು ಕದ್ದರೋ ನನಗೇನು ಗೊತ್ತು!’ ಎಂದು ಅರಚಿದಳು. ಸಂಸಾರಸ್ಥ ಇನ್ನೂ ಗಟ್ಟಿಯಾಗಿ ಕೂಗಾಡಿದ. ಕಿರುಚಾಟ ಕೇಳಿ ನೆರೆಮನೆಯವರೆಲ್ಲ ಧಾವಿಸಿ ಬಂದರು. ಮನೆಯೊಳಗಿದ್ದ ನೂರೇಳು ನಾಣ್ಯಗಳ ಗಂಟು ಕಾಣುತ್ತಿಲ್ಲವೆಂದು ಸಂಸಾರಸ್ಥ ದೂರಿದ. ಮನೆಗೆ ಯಾರಾದರೂ ಬಂದಿದ್ದಾರೆಯೇ ಎಂದು ನೆರೆಹೊರೆಯವರು ಪ್ರಶ್ನಿಸಿದರು. ಆಗ ಸನ್ಯಾಸಿಯನ್ನು ಹೊರತುಪಡಿಸಿದರೆ ಮತ್ಯಾರೂ ಬಂದಿಲ್ಲವೆಂಬುದು ತಿಳಿಯಿತು. ಅವರೆಲ್ಲ ಆತನನ್ನೇ ಅನುಮಾನಿಸಿದರು. ಆತನನ್ನು ಪರೀಕ್ಷೆಗೆ ಒಳಪಡಿಸಿದರು. ಆತನ ಜೋಳಿಗೆಯಲ್ಲಿ ಸರಿಯಾಗಿ ನೂರೇಳು ನಾಣ್ಯಗಳ ಗಂಟು ಸಿಕ್ಕಿತು. ಸರಿ, ನೆರೆಹೊರೆಯವರೆಲ್ಲ ಸನ್ಯಾಸಿಯೇ ಗಂಟನ್ನು ಕದ್ದ ಕಳ್ಳನೆಂದು ತೀರ್ಮಾನಿಸಿ ಆತನಿಂದ ನಾಣ್ಯಗಳನ್ನು ಕಿತ್ತುಕೊಂಡು ಸಂಸಾರಸ್ಥನಿಗೆ ಕೊಟ್ಟರು. ಸನ್ಯಾಸಿಗೆ ಹೊಡೆಯಲು ಹೋದಾಗ ಸಂಸಾರಸ್ಥ ‘ಸನ್ಯಾಸಿ ನನ್ನ ಅತಿಥಿ’ ಎಂದು ಹೇಳಿ ಹೊಡೆತಗಳನ್ನು ತಪ್ಪಿಸಿದ.
ಸನ್ಯಾಸಿ ತನ್ನಲ್ಲಿದ್ದ ನೂರೇಳು ನಾಣ್ಯಗಳನ್ನು ಕಳೆದುಕೊಂಡ ದುಃಖದಲ್ಲಿ ಹೋಗುತ್ತಿರುವಾಗ ಸಂಸಾರಸ್ಥ ಆತನಿಗೆ ನಮಸ್ಕರಿಸಿ ‘ನಾನು ಹೇಳಿದಂತೆ ನಿಮಗೆ ಭಿಕ್ಷೆಯಿತ್ತಿದ್ದೇನೆ. ಈಗ ಒಂದು ನಾಣ್ಯದ ದಕ್ಷಿಣೆ ಕೊಡುತ್ತಿದ್ದೇನೆ. ತೆಗೆದುಕೊಳ್ಳಿ. ತಾವು ಮತ್ತೆ ಇತ್ತ ಯಾವಾಗ ಬರುತ್ತೀರಿ?’ ಎಂದು ಉಪಚರಿಸಿದ. ಸನ್ಯಾಸಿ ‘ನನ್ನ ಬಳಿ ಮತ್ತೆ ನೂರೇಳು ನಾಣ್ಯಗಳ ಸಂಗ್ರಹವಾದಾಗ ಮತ್ತೆ ಬರುತ್ತೇನೆ’ ಎನ್ನುತ್ತಾ ಹೊರಟು ಹೋದ. ಈ ಕತೆಯನ್ನು ಪ್ರವಚನವೊಂದರಲ್ಲಿ ಹೇಳಿದವರು ಓಶೊ. ಅವರಿಗೆ ಪ್ರಣಾಮಗಳು. ಅವರು ‘ಒಂದು ನಾಣ್ಯಕ್ಕೆ ಆಸೆಪಟ್ಟು ಒಳ್ಳೆಯ ಒಳ್ಳೆಯ ಸಂಪ್ರದಾಯವನ್ನು ಬಿಟ್ಟದ್ದು ಸನ್ಯಾಸಿಯ ತಪ್ಪು. ನೂರೇಳು ನಾಣ್ಯಗಳ ದುರಾಸೆಯಿಂದ ಸನ್ಯಾಸಿಗೆ ಮೋಸ ಮಾಡಿದ್ದು ಸಂಸಾರಸ್ಥನ ತಪ್ಪು’ ಎಂದರು. ಸನ್ಯಾಸಿಯ ಸ್ಥಾನದಲ್ಲೋ ಸಂಸಾರಸ್ಥನ ಸ್ಥಾನದಲ್ಲೋ ನಾವು ಇದ್ದಿದ್ದರೆ ನಾವೇನು ಮಾಡುತ್ತಿದ್ದೆವು? ಯೋಚಿಸಿ ನೋಡಬಹುದಲ್ಲವೆ? ಕೃಪೆ :ವಿಶ್ವವಾಣಿ
No comments:
Post a Comment