ಕಥೆ-243
ನಮ್ಮ ಕಷ್ಟ ದೊಡ್ಡದೋ? ನಿಮ್ಮ ಕಷ್ಟ ದೊಡ್ಡದೋ?
ಈಗ ನೀವೇನಾದರೂ ಕಷ್ಟ ಅನುಭವಿಸುತ್ತಿದ್ದೀರಾ? ಹಾಗಿ ದ್ದರೆ ಈ ಸೂಫೀ ಕತೆ ಓದಿ ನೋಡಿ! ಅಲ್ಲಿ ಸ್ವಲ್ಪ ತಮಾಷೆ ಇದೆ. ಸ್ವಲ್ಪ ತತ್ತ್ವವೂ ಇದೆ. ಒಬ್ಬ ಸುಲ್ತಾನ ತನ್ನ ಆಸ್ಥಾನಿಕರೊಂದಿಗೆ ಹಡಗಿನಲ್ಲಿ ವಿಹಾರ ಹೊರಟನಂತೆ.
ಆಸ್ಥಾನಿಕರಲ್ಲಿ ಒಬ್ಬಾತನಿಗೆ ಅದು ಮೊಟ್ಟ ಮೊದಲ ಸಮುದ್ರಯಾನ. ಸುತ್ತಲೂ ಅಪರಿಮಿತವಾದ ನೀರು. ಹಡಗು ಸಮುದ್ರದ ನೀರಿನಲ್ಲಿ ತೇಲಾಡುತ್ತಿತ್ತು. ಅತ್ತಿತ್ತ ಹೊಯ್ದಾಡುತ್ತಿತ್ತು. ಹೊಯ್ದಾಡುವ ಹಡಗು ಮುಳುಗುತ್ತದೇನೋ ಎಂದು ಭಯವಾಯಿತು. ಆತ ಪ್ರಾಣಭಯದಿಂದ ಕಿರುಚತೊಡಗಿದ. ಇತರರು ಆತನನ್ನು ಸಮಾಧಾನಗೊಳಿಸಲು ಯತ್ನಿಸಿದರು. ಧೈರ್ಯ ಹೇಳಿದರು.
ಯಾರೇನು ಮಾಡಿದರೂ ಆತನ ಕಿರುಚಾಟ ನಿಲ್ಲಲಿಲ್ಲ. ಹೆಚ್ಚಾಗುತ್ತಲೇ ಹೋಯಿತು. ಅದು ಸುಲ್ತಾನನ ಕಿವಿಗೂ ಬಿತ್ತು. ಸುಲ್ತಾನನಿಗೆ ಸಿಟ್ಟು ಬಂತು. ಆತ ತನ್ನ ಮಂತ್ರಿಯನ್ನು ಕರೆದು ‘ಇವನ ಕಿರುಚಾಟ ವಿಹಾರದ ಆನಂದವನ್ನೇ ಹಾಳು ಮಾಡುತ್ತಿದೆ. ಅದನ್ನು ಹೇಗಾದರೂ ನಿಲ್ಲಿಸಿ’ಎಂದು ಆಜ್ಞಾಪಿಸಿದ.
ಮಂತ್ರಿ ‘ತಾವು ಅನುಮತಿ ಕೊಟ್ಟರೆ ನಾನೊಂದು ಪ್ರಯೋಗ ಮಾಡುತ್ತೇನೆ’ಎಂದು ಕೇಳಿಕೊಂಡ. ಅವನ ಕಿರುಚಾಟ ನಿಂತರೆ ಸಾಕೆಂದುಕೊಳ್ಳುತ್ತಿದ್ದ ಸುಲ್ತಾನ ತಕ್ಷಣ ಒಪ್ಪಿಗೆಯನ್ನಿತ್ತ. ಮಂತ್ರಿ ರಾಜಭಟರನ್ನು ಕರೆದು ಹೊಸಬನನ್ನು ಸಮುದ್ರಕ್ಕೆ ಎಸೆಯುವಂತೆ ಹೇಳಿದ. ಕಿರುಚಾಡುತ್ತಿದ್ದ ಅವನನ್ನು ರಾಜಭಟರು ಅನಾಮತ್ತಾಗಿ ಎತ್ತಿ ಸಮುದ್ರಕ್ಕೆಸೆದರು. ಆತ ಸಮುದ್ರದ ನೀರಿನಲ್ಲಿ ಧೊಪ್ಪೆಂದು ಬಿದ್ದ. ಆಗ ಆತ ಇನ್ನೂ ಗಾಬರಿಗೊಂಡ. ಉಪ್ಪುನೀರು ಕುಡಿಯುತ್ತಾ, ಉಸಿರಾಡಲೂ ಒದ್ದಾಡುತ್ತಾ, ನೀರಿನಲ್ಲಿ ಒಮ್ಮೆ ಮುಳುಗುತ್ತಾ, ಮತ್ತೊಮ್ಮೆ ತೇಲುತ್ತಾ ಇದ್ದ.
ಹೇಗೋ ಏನೋ ಮಾಡಿ ಹಡಗಿನ ಒಂದು ಗೋಡೆಯನ್ನು ಆಸರೆಯಾಗಿ ಹಿಡಿದು ಕೊಂಡು ‘ಇನ್ನು ಕಿರುಚುವುದಿಲ್ಲ, ನನ್ನನ್ನು ಕಾಪಾಡಿ, ನನ್ನನ್ನು ಮೇಲಕ್ಕೆತ್ತಿಕೊಳ್ಳಿ’ಎಂದು ಗೋಗರೆದ. ಮಂತ್ರಿಯ ಅನುಮತಿ ಪಡೆದು ರಾಜಭಟರು ಆತನನ್ನು ಮೇಲಕ್ಕೆತ್ತಿಕೊಂಡರು. ಹಡಗಿನೊಳಕ್ಕೆ ಬಂದ ಆತ ಒಂದು ಮೂಲೆ ಯಲ್ಲಿ ಗಂಭೀರವಾಗಿ ಕುಳಿತ. ಕೂಗಾಟವಿಲ್ಲ. ಕಿರುಚಾಟವಿಲ್ಲ. ಆಶ್ಚರ್ಯಗೊಂಡ ಸುಲ್ತಾನ ಮಂತ್ರಿಯನ್ನು ‘ನೀವು ಆತನನ್ನು ಸಮುದ್ರಕ್ಕೆ ಎಸೆದದ್ದೇಕೆ? ಈಗ ಆತ ಸುಮ್ಮನೆ ಕುಳಿತಿರುವುದೇಕೆ?’ಎಂದು ಪ್ರಶ್ನಿಸಿದ.
ಮಂತ್ರಿ ‘ಆತ ಹಡಗಿನಲ್ಲಿ ಪ್ರಯಾಣ ಮಾಡುತ್ತಿರುವುದು ಮೊದಲನೆಯ ಬಾರಿ. ಹಡಗಿನ ಹೊಯ್ದಾಟ ಆತನಿಗೆ ಗಾಬರಿಯುಂಟು ಮಾಡಿತ್ತು. ತನಗೆ ಏನೋ ದೊಡ್ಡ ಕಷ್ಟ ಬಂದೊದಗಿದೆಯೆಂದು ಆತ ಭಾವಿಸಿದ. ಸಮುದ್ರಕ್ಕೆಸೆದಾಗ ಆತ ನೀರಿನಲ್ಲಿ ಬಿದ್ದ. ಉಪ್ಪು ನೀರು ಕುಡಿದ. ಉಸಿರಾಟಕ್ಕೂ ಒದ್ದಾಡಿದ. ಹಡಗಿನಲ್ಲಿ ಹೊಯ್ದಾಟವಿತ್ತಾದರೂ ಉಸಿರಾಟಕ್ಕೆ ಪರದಾಟವಿರಲಿಲ್ಲ. ಮುಳುಗಿ ಹೋಗುವ ತಳಮಳವಿರಲಿಲ್ಲ. ಸಮುದ್ರದ ನೀರಿನಲ್ಲಿ ಬಿದ್ದು ಸಾಯುವುದಕ್ಕಿಂತ ಹಡಗಿನಲ್ಲಿದ್ದು ಹೊಯ್ದಾಡುತ್ತಿರುವುದೆಷ್ಟೋ ಒಳ್ಳೆಯದು ಎಂದು ಆತನಿಗೆ ಅನಿಸಿರಬೇಕು. ಹಾಗಾಗಿ ಸುಮ್ಮನೆ ಕುಳಿತಿದ್ದಾನೆ’ಎಂದ.
ಮಂತ್ರಿಯ ಮಾತಿನಲ್ಲಿನ ಸತ್ಯವನ್ನು ಅರ್ಥ ಮಾಡಿಕೊಂಡ ಸುಲ್ತಾನ ಮೆಚ್ಚಿ ತಲೆತೂಗಿದ. ನಾವು ಬದುಕಿನಲ್ಲಿ ಯಾವಾಗಲಾದರೊಮ್ಮೆ ಕಷ್ಟಕ್ಕೆ ಸಿಲುಕಿಕೊಂಡಾಗ ‘ಬೇರೆಯವರೆಲ್ಲ ಸುಖವಾಗಿದ್ದಾರೆ. ಅವರಿಗೆ ಕಷ್ಟಗಳೇ ಇಲ್ಲ. ಇದ್ದರೂ ಅವು ಸಣ್ಣಪುಟ್ಟ ಕಷ್ಟಗಳು. ನಮಗೆ ಬಂದೊದಗಿರುವ ಕಷ್ಟ ಮಾತ್ರ ಬಹಳ ದೊಡ್ಡದು. ನಮ್ಮ ಅದೃಷ್ಟವೇ ಸರಿಯಿಲ್ಲ. ದೇವರಿಗೆ ಕರುಣೆಯಿಲ್ಲ. ನಾವು ಇಲ್ಲಿಯೇ ಒದ್ದಾಡುತ್ತಿದ್ದೇವೆ’ಎಂದೆಲ್ಲ ಯೋಚಿಸುವುದು ಸಹಜ. ಆದರೆ ನಮಗಿಂತ ಕಷ್ಟದಲ್ಲಿರುವವರೊಂದಿಗೆ ಹೋಲಿಸಿಕೊಂಡು ಸಮಾಧಾನ ಮಾಡಿಕೊಳ್ಳುವುದು, ಈ ಕಷ್ಟದಿಂದ ಪಾರಾಗುವುದರ ಬಗ್ಗೆ ಯೋಚಿಸುವುದು ಉಚಿತವಲ್ಲವೇ? ‘ಮುಂಜಾನೆ ನನ್ನ ಕಾಲಿಗೆ ಪಾದರಕ್ಷೆಗಳನ್ನು ಇಲ್ಲದ್ದನ್ನು ನಾನು ಶಪಿಸಿದೆ! ಸಂಜೆ ರಸ್ತೆಯಲ್ಲಿ ಕಾಲೇ ಇಲ್ಲದವನನ್ನು ಕಂಡಾಗ ನಾನೇ ಉತ್ತಮ ಎಂದು ನನ್ನನ್ನು ಸಮಾಧಾನಪಡಿಸಿಕೊಂಡೆ
👍👍💐💐💐
ಕೃಪೆ :ಷಡಕ್ಷರಿ.
No comments:
Post a Comment