Wednesday, December 6, 2023

  ಕಥೆ-234.. 

ಕೆಲವೊಮ್ಮೆ ಕಿವುಡರಾಗಬೇಕು, ಕಣ್ಣನ್ನು ಗುರಿಯತ್ತ ನೆಟ್ಟು!*

ಆತ ಕೆಲಸಕ್ಕೆ ಸೇರಿ ಒಂದೆರಡು ತಿಂಗಳುಗಳಾಗಿದ್ದವಷ್ಟೆ. ಕಂಪನಿಗೆ ಹೊಸಬ. ಆದರೂ ಅಲ್ಲಿ ಏನೇನು ನಡೆಯುತ್ತಿದೆ ಎಂದು ಗೊತ್ತಾಗುತ್ತಿತ್ತು. ಆತನ ಹಿರಿಯ ಸಹೋದ್ಯೋಗಿಗಳಲ್ಲಿ ಅನೇಕರು ಯಾವಾಗಲೂ ಹರಟೆ, ಗಾಸಿಪ್‌ಗಳಲ್ಲಿ ಮುಳುಗಿರುತ್ತಿದ್ದರು. ಇದು ಅವನಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ಅವರು ಯಾರ್ಯಾರ ಬಗ್ಗೆ ಏನೇನು ಮಾತಾಡಿಕೊಳ್ಳುತ್ತಾರೆ ಎಂದು ಗಮನಕ್ಕೆ ಬರುತ್ತಿದ್ದುದರಿಂದ ಅವನೂ ಎಲ್ಲರ ಬಗ್ಗೆ ತನ್ನದೇ ಆದ ಒಂದು ಅಭಿಪ್ರಾಯ ರೂಪಿಸಿಕೊಂಡ. ಹೀಗೇ ಮತ್ತೆರಡು ತಿಂಗಳುಗಳು ಕಳೆದವು. ಕೊನೆಗೆ ಅವನಿಗೆ ಇವೆಲ್ಲವುಗಳಿಂದ ಸಾಕುಸಾಕಾಗಿ ಕೆಲಸ ಬಿಡಲು ನಿರ್ಧರಿಸಿದ.

ಆತ ರಾಜೀನಾಮೆ ಸಲ್ಲಿಸಿದಾಗ ಕಂಪನಿಯ ಮ್ಯಾನೇಜರ್‌ಗೆ ಬಹಳ ಆಶ್ಚರ್ಯವಾಯಿತು. ‘ಕೆಲಸಕ್ಕೆ ಸೇರಿ ಇನ್ನೂ ಸರಿಯಾಗಿ ಆರು ತಿಂಗಳು ಕಳೆದಿಲ್ಲ. ಈಗಲೇ ಕೆಲಸ ಬಿಡಲು ಕಾರಣವೇನು?’ ಎಂದು ಮ್ಯಾನೇಜರ್ ಪ್ರಶ್ನಿಸಿದರು. ‘ಸರ್ ಈ ಕಂಪನಿಯಲ್ಲಿ ಯಾರೂ ಸರಿಯಿಲ್ಲ. ನನ್ನ ಸೀನಿಯರ್‌ಗಳಿಗಂತೂ ಯಾವಾಗಲೂ ಬೇರೆಯವರ ಬಗ್ಗೆ ಗಾಸಿಪ್ ಮಾಡುವುದೇ ಕೆಲಸ. ಅದನ್ನು ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲ. ಇಂಥವರ ಜತೆ ನನಗೆ ಕೆಲಸ ಮಾಡಲು ಇಷ್ಟವಿಲ್ಲ’ ಎಂದ ಅಸಹನೆಯಿಂದ. ಸ್ವಲ್ಪ ಹೊತ್ತು ಗಂಭೀರವಾಗಿ ಆಲೋಚಿಸಿದ ಮ್ಯಾನೇಜರ್ ಕೊನೆಗೆ ಹೇಳಿದ -‘ಸರಿ ಹಾಗಾದರೆ. ಆದರೆ ನಾನೊಂದು ಕೆಲಸ ಹೇಳುತ್ತೇನೆ ಮಾಡುತ್ತೀರಾ?’ ‘ಸರಿ ಹೇಳಿ’ ಎಂದನಾತ. ಅಲ್ಲಿದ್ದ ಗಾಜಿನ ಲೋಟದ ತುಂಬ ನೀರು ಸುರಿದು, ಅದನ್ನು ಆತನ ಕೈಗೆ ಕೊಟ್ಟ ಮ್ಯಾನೇಜರ್, ‘ಲೋಟದಿಂದ ಒಂದು ಹನಿ ನೀರೂ ಹೊರಕ್ಕೆ ಚೆಲ್ಲದಂತೆ ಇಡೀ ಆಫೀಸಿನ ಒಳಗೆಲ್ಲಾ ಓಡಾಡಿ ಮೂರು ಸುತ್ತು ಹಾಕಿ ಬನ್ನಿ’ ಎಂದು ಹೇಳಿ ಕಳುಹಿಸಿದ.

ಆತ ಕೈಯಲ್ಲಿ ಗಾಜಿನ ಲೋಟವನ್ನು ಜೋಪಾನವಾಗಿ ಹಿಡಿದು, ನೀರು ಚೆಲ್ಲದಂತೆ ನಿಧಾನವಾಗಿ ಆಫೀಸಿನ ತುಂಬೆಲ್ಲಾ ಓಡಾಡಿದ, ಮೂರು ಸುತ್ತು ಹಾಕಿದ. ನಂತರ ತುಂಬಿದ ಲೋಟದೊಂದಿಗೆ ಮ್ಯಾನೇಜರ್‌ನ ಕ್ಯಾಬಿನ್‌ಗೆ ವಾಪಸಾದ. ‘ವೆರಿಗುಡ್, ನಾನು ಹೇಳಿದಂತೇ ಲೋಟದಿಂದ ನೀರು ಚೆಲ್ಲದಂತೆ ಜಾಗ್ರತೆ ವಹಿಸಿದ್ದೀರಿ. ನೀವು ಲೋಟ ಹಿಡಿದು ಓಡಾಡುತ್ತಿದ್ದಾಗ ನಿಮ್ಮ ಸೀನಿಯರ್‌ಗಳು ಏನು ಮಾತಾಡಿಕೊಳ್ಳುತ್ತಿದ್ದರು? ಅಲ್ಲಿ ಆ ಗುಮಾಸ್ತ, ಕ್ಯಾಶಿಯರ್‌ನ ಜತೆ ಏನೋ ಮಾತಾಡುತ್ತಿದ್ದ ಹಾಗಿತ್ತಲ್ಲ, ಏನದು?’ ಎಂದು ಕುತೂಹಲದಿಂದ ಕೇಳಿದರು ಮ್ಯಾನೇಜರ್. ‘ಅಯ್ಯೋ ನಾನದನ್ನು ಗಮನಿಸಲಿಲ್ಲ ಸರ್. ಎಲ್ಲಿ ನೀರು ಚೆಲ್ಲಿ ಬಿಡುತ್ತದೋ ಎಂದು ನನ್ನ ಗಮನವೆಲ್ಲ ಲೋಟದ ಮೇಲೆಯೇ ಇತ್ತು!’ ಎಂದ ಆತ. ಆಗ ಮ್ಯಾನೇಜರ್ ನಸುನಗುತ್ತ ಕೇಳಿದರು ‘ಈಗ ನೀವೇ ಯೋಚಿಸಿ, ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ನಾನು ನಿಮಗೆ ಕೊಟ್ಟ ಗಾಜಿನ ಲೋಟವನ್ನು ನಿಮ್ಮ ಗುರಿ ಎಂದು ಭಾವಿಸಿಕೊಳ್ಳಿ’. ನಿಮ್ಮ ಚಿತ್ತ ಗುರಿಯ ಕಡೆಗಿದ್ದಾಗ ನಿಮಗೆ ಬೇರೆ ಯಾವ ಸಂಗತಿಯೂ ಗಮನಕ್ಕೆ ಬರಲಿಲ್ಲ. ಎಲ್ಲಿ ನೀರು ಚೆಲ್ಲುತ್ತದೋ ಎಂದು ಜಾಗ್ರತೆಯಾಗಿದ್ದ ನಿಮಗೆ ಯಾರ ಮಾತುಗಳೂ ಕೇಳಿಸಲಿಲ್ಲ. ಹಾಗಾದರೆ ಇಷ್ಟು ದಿನ ನಿಮ್ಮ ಗಮನ ಎಲ್ಲಿತ್ತು?


ಆತ ತಲೆ ತಗ್ಗಿಸಿ ನಿಂತ. ಮ್ಯಾನೇಜರ್ ಮಾತು ಮುಂದುವರಿಸಿದ, ‘ಇಷ್ಟು ದಿನ ನಿಮ್ಮ ಗಮನ ಕೆಲಸದ ಕಡೆಗಿರಲಿಲ್ಲ. ಯಾರು ಏನು ಮಾತಾಡುತ್ತಾರೆ ಎಂಬ ಕೆಟ್ಟ ಕುತೂಹಲ ನಿಮಗಿತ್ತು. ಹಾಗಾಗಿ ನಿಮ್ಮ ಕಣ್ಣು, ಕಿವಿಗಳು ಕಚೇರಿಯ ಗಾಸಿಪ್‌ನ ಕಡೆಗೇ ಹೊರಳುತ್ತಿದ್ದವು. ನಾಳೆಯಿಂದ ನಿಮ್ಮ ಗುರಿಯನ್ನು ಕೈ, ಕಣ್ಣು, ಮನಸ್ಸಿನಲ್ಲಿ ತುಂಬಿಕೊಂಡು ಕಚೇರಿಗೆ ಬನ್ನಿ. ಗುರಿಯತ್ತ ಲಕ್ಷ್ಯವಿಟ್ಟರೆ, ಸಾವಿರ ಜನರು ಸಾವಿರ ಮಾತಾಡುತ್ತಿದ್ದರೂ ಅವು ನಿಮ್ಮನ್ನು ವಿಚಲಿತಗೊಳಿಸುವುದಿಲ್ಲ. ಅದಕ್ಕೊಂದು ಉದಾಹರಣೆ ಕೊಡುತ್ತೇನೆ. ನಾನು ನಿಮ್ಮಂತೆಯೇ ಈ ಕಚೇರಿಗೆ ಕೆಲಸಕ್ಕೆ ಬಂದವನು. ಆಗಲೂ ಇವರೆಲ್ಲ ಗಾಸಿಪ್ ಮಾಡುತ್ತಿದ್ದರು, ಈಗಲೂ ಮಾಡುತ್ತಿದ್ದಾರೆ. ಆಗ ಜ್ಯೂನಿಯರ್ ಆಗಿದ್ದ ನಾನು ಈಗ ಮ್ಯಾನೇಜರ್ ಆಗಿದ್ದೇನೆ. ಕೆಲವೊಮ್ಮೆ ಕಿವುಡರಂತೆ ಇರಬೇಕಾಗುತ್ತದೆ, ಕಣ್ಣನ್ನು ಗುರಿಯತ್ತ ನೆಟ್ಟು!’

ಕೃಪೆ :ವಿಶ್ವವಾಣಿ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು