Monday, December 4, 2023

  ಕಥೆ 233.. . 

ಸೈಕಲ್ ಹಳೆಯದಾದರೇನು? ಬೀಗ ನವನವೀನ..

ಮನುಷ್ಯರು ಹಳತಾದಷ್ಟು ಅವರು ಹೇಳಿಕೊಳ್ಳುವ ಕತೆಗಳು ಹೆಚ್ಚಾಗುತ್ತವೆ! ಕೆಲವು ಹಳೆಯದೂ ಆಗುತ್ತವೆ! ಆದರೆ ಹಳೆಯ ಸೈಕಲ್ಲಿನ ಹೊಸ ಕತೆಯೊಂದು ಇಲ್ಲಿದೆ. ಒಂದೂರಿನಲ್ಲಿ ಒಬ್ಬ ನೌಕರರಿದ್ದರು. ಕಚೇರಿಗೆ ಹೋಗಿ ಬರಲು ಬಸ್ಸನ್ನೇ ಅವಲಂಬಿಸಬೇಕಿತ್ತು. ಅನಾನುಕೂಲವಾಗುತ್ತಿತ್ತು. ಹಾಗಾಗಿ ಅವರು ಕಷ್ಟಪಟ್ಟು ಹಣ ಕೂಡಿಟ್ಟು ಒಂದು ಹಳೆಯ ಸೈಕಲ್ಲನ್ನು ಕೊಂಡುಕೊಂಡರು.(ಮಾರಿದವರಿಗೆ ಹಳೆಯ ಸೈಕಲ್ಲು. ಆದರೆ ಇವರಿಗೆ ಹೊಸ ಸೈಕಲ್!) ಈಗ ಅವರಿಗೆ ಹಣವೂ ಉಳಿತಾಯವಾಗುತ್ತಿತ್ತು. ಸಮಯವೂ ಉಳಿತಾಯವಾಗುತ್ತಿತ್ತು. ಮನೆಯೊಳಗೆ ಸೈಕಲ್ ಇಟ್ಟುಕೊಳ್ಳಲು ಸ್ಥಳಾವಕಾಶ ಇಲ್ಲದಿದ್ದುದರಿಂದ ಅವರು ಸೈಕಲ್ಲನ್ನು ಮನೆಯ ಹೊರಗಡೆಯೇ ಬಿಡುತ್ತಿದ್ದರು. ಒಂದೆರಡು ತಿಂಗಳು ಕಳೆದವು.

ಒಂದು ದಿನ ಅವರು ಮನೆಯಿಂದ ಹೊರಕ್ಕೆ ಬಂದು ನೋಡಿದಾಗ ಸೈಕಲ್ ಕಣ್ಮರೆಯಾಗಿತ್ತು. ಗಾಬರಿಗೊಂಡ ಅವರು ಬಹಳ ಹುಡುಕಿದರು. ಸೈಕಲ್ ಕಾಣಲಿಲ್ಲ. ಅಕ್ಕಪಕ್ಕದವರನ್ನೆಲ್ಲ ಕೇಳಿ ನೋಡಿ, ಗೊತ್ತಿಲ್ಲ ಎನಿಸಿಕೊಂಡರು. ಕಷ್ಟಪಟ್ಟು ಕೊಂಡುಕೊಂಡಿದ್ದ ಹಳೆಯ ಸೈಕಲ್ಲೂ ಕಳೆದುಹೋಗಿದ್ದರಿಂದ ಬಹಳ ಬೇಸರಗೊಂಡ ಅವರು ನೆರೆಹೊರೆಯವರನ್ನು ದೂಶಿಸಿದರು. (ಮನಸ್ಸಿನಲ್ಲೇ ನಿಂದಿಸಿದರು) ಅನಿವಾರ್ಯವಾಗಿ ಸುಮ್ಮನಾದರು. ಅಂದು ಮತ್ತೆ ಬಸ್ಸಿನಲ್ಲೇ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ. ಮರುದಿನ ಮುಂಜಾನೆ ಅವರು ನೋಡಿದಾಗ ಅವರ ಹಳೆಯ ಸೈಕಲ್ ಮನೆಯ ಮುಂದೆಯೇ ನಿಂತಿತ್ತು. ಅವರಿಗೆ ಆಶ್ಚರ್ಯವೋ ಆಶ್ಚರ್ಯ! ಸಂತೋಷವೋ ಸಂತೋಷ! ನನ್ನ ಸೈಕಲ್ ಸಿಕ್ಕಿಬಿಟ್ಟಿತು. ನಾನು ಸುಮ್ಮಸುಮ್ಮನೆ ನೆರೆಹೊರೆಯವರನ್ನು ದೂಷಿಸಿದೆ. ನೆರೆಹೊರೆಯವರನ್ನು ನಿಂದಿಸಿದೆ ಎಂದೆಲ್ಲ ಪಶ್ಚಾತ್ತಾಪ ಪಟ್ಟುಕೊಂಡರು.

ಸೈಕಲನ್ನು ಪ್ರೀತಿಯಿಂದ ಸವರಿದರು. ಆಗ ಅವರಿಗೆ ಸೈಕಲ್ಲಿನ ಹ್ಯಾಂಡಲ್ಲಿಗೆ ಸಿಗಿಸಿದ್ದ ಒಂದು ಕಾಗದ ಸಿಕ್ಕಿತು. ಕುತೂಹಲದಿಂದ ಕಾಗದವನ್ನು ಕೈಗೆತ್ತಿಕೊಂಡು ಓದಿದರು. ಅದರಲ್ಲಿ ಹೀಗೆ ಬರೆದಿತ್ತು. ‘ದಯವಿಟ್ಟು ಕ್ಷಮಿಸಿ. ನನಗೆ ನಿನ್ನೆ ತುರ್ತಾಗಿ ಒಂದು ಕೆಲಸಕ್ಕೆ ಹೋಗಬೇಕಾಗಿ ಬಂದಿತ್ತು. ಬಸ್ಸು ಸಿಗಲಿಲ್ಲ. ನಿಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಹಳೆಯ ಸೈಕಲ್ ಕಂಡಿತು. ಬೀಗ ಹಾಕಿರಲಿಲ್ಲ. ಅದನ್ನು ತೆಗೆದುಕೊಂಡು ಹೊರಟುಹೋದೆ. ನಿಮ್ಮ ಅನುಮತಿ ಕೇಳುವಷ್ಟು ಸಮಯವೂ ಇರಲಿಲ್ಲ. (ಅನುಮತಿ ಕೇಳಿದ್ದರೆ, ನೀವು ಕೊಡುತ್ತಿದ್ದಿರೋ ಇಲ್ಲವೋ? ಅದು ಬೇರೆ ಮಾತು.) ಸಂತೋಷದ ವಿಷಯವೆಂದರೆ ನಿಮ್ಮ ಸೈಕಲ್ಲಿನಿಂದಾಗಿ ನಾನು ನನ್ನ ಕಾರ್ಯಕ್ಕೆ ಸಕಾಲದಲ್ಲಿ ಹೋಗುವಂತಾಯಿತು. ನನ್ನ ಕಾರ್ಯವೂ ಯಶಸ್ವಿಯಾಯಿತು.

ನಾನು ಅಲ್ಲಿಂದ ಬರುವಷ್ಟರಲ್ಲಿ ನೀವು ಮಲಗಿ ಬಿಟ್ಟಿದ್ದಿರಿ. ಹಾಗಾಗಿ ನಿಮ್ಮನ್ನು ಎಬ್ಬಿಸಲಿಲ್ಲ. (ನಿಮ್ಮನ್ನು ಎಬ್ಬಿಸಿ ನಡೆದದ್ದನ್ನೆಲ್ಲ ತಿಳಿಸಿದ್ದರೆ, ನೀವು ನನ್ನನ್ನು ಬಯ್ಯುತ್ತಿದ್ದಿರೋ ಅಥವಾ ಬಡಿಯುತ್ತಿದ್ದಿರೋ? ನನಗೇನು ಗೊತ್ತು?) ಈಗ ನಿಮ್ಮ ಹಳೆಯ ಸೈಕಲನ್ನು ನಿಮ್ಮ ಮನೆಯ ಮುಂದೆಯೇ ಬಿಟ್ಟು ಹೋಗುತ್ತಿದ್ದೇನೆ. ಒಂದು ದಿನ ನಿಮ್ಮ ಸೈಕಲ್ಲನ್ನು ಬಳಸಿಕೊಂಡಿದ್ದಕ್ಕೆ, ಬಾಡಿಗೆ ಕೊಡುವುದರ ಬದಲಾಗಿ, ನಿಮ್ಮ ಹಳೆಯ ಸೈಕಲ್ಲಿಗೆ ಹೊಸದೊಂದು ಬೀಗ ಹಾಕಿಸಿ ಕೊಟ್ಟಿದ್ದೇನೆ. ಅದು ನನ್ನ ಕಾಣಿಕೆ. ಇನ್ನು ಮುಂದೆ ಸೈಕಲ್ ಹಳೆಯದಾದರೇನು? ಬೀಗ ಹಾಕಿಡುವುದು ಒಳ್ಳೆಯದು. ನಿಮಗೆ ಧನ್ಯವಾದಗಳು. ನೀವು ನನ್ನನ್ನು ಕ್ಷಮಿಸುತ್ತೀರೆಂದು ನಂಬುತ್ತೇನೆ. ಇತಿ ನಿಮ್ಮವ’ ಎಂದು ಬರೆದಿತ್ತು.

ಕಾಗದವನ್ನು ಓದಿದ ಹೊಸ ಬೀಗದ ಹಳೆಯ ಸೈಕಲ್ಲಿನ ಮಾಲೀಕರಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಸೈಕಲ್ಲು ಹಿಂತಿರುಗಿಸಿದ ಅಜ್ಞಾತ ವ್ಯಕ್ತಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ನಿನ್ನೆ ದೂಷಿಸಿದ ದೂಷಿಸಿದವರ ಕ್ಷಮೆಯನ್ನು ಬೇಡಿದರು. ಅಕ್ಕಪಕ್ಕದವರನ್ನೆಲ್ಲ ಸಿಕ್ಕಾಪಟ್ಟೆ ಮನಸ್ಸಿನಲ್ಲೇ ಬೈದುಕೊಂಡಿದ್ದಕ್ಕೂ ಬೇಸರಪಟ್ಟುಕೊಂಡರು. ಆದರೆ ಸಂತೋಷದಿಂದ ಸೈಕಲ್ ತುಳಿಯುತ್ತಾ ಕಚೇರಿಗೆ ಹೋದರು. ನಾವು ನಂಬುವ ನಮ್ಮ ನೆರೆಹೊರೆಯವರು ಎಷ್ಟೇ ನಂಬಿಕಸ್ಥರಿರಲಿ. ನಮ್ಮ ಬೆಲೆಬಾಳುವ ವಸ್ತುಗಳಿಗೆ ನಾವೇ ಬೀಗ ಹಾಕಿಟ್ಟುಕೊಳ್ಳುವುದು ಒಳ್ಳೆಯದಲ್ಲವೇ? ಕಳೆದುಕೊಂಡ ಮೇಲೆ ದೂಷಿಸುವುದಕ್ಕಿಂತ ಬೀಗ ಹಾಕುವುದು ಲೇಸು..

ಸೈಕಲ್ಲು ಹಳೆಯದಾದರೇನು? ಬೀಗ ನವನವೀನ ಆಗಿರಬೇಕಲ್ಲವೇ?..

ಕೃಪೆ :ವಿಶ್ವವಾಣಿ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು