Wednesday, January 10, 2024

ಕಥೆ-270 

ಆತ ಗುರುವೇ ಇಲ್ಲದೆ ಚಾಂಪಿಯನ್ ಆಗಿದ್ದು ಹೇಗೆ?



1896ರ ಹೊತ್ತಿನಲ್ಲಿ ಅಮೆರಿಕದಲ್ಲಿ ಬಾಕ್ಸಿಂಗ್ ಕ್ರೀಡೆ ಜನಪ್ರಿಯತೆಯ ತುತ್ತ ತುದಿಯಲ್ಲಿತ್ತು. ಈಗ ನಾವು ಸಿನಿ ತಾರೆಗಳನ್ನು, ಕ್ರಿಕೆಟ್ ಆಟಗಾರರನ್ನು ಆರಾಧಿಸುತ್ತೇವಲ್ಲ, ಹಾಗೆಯೇ ಆಗ ಅಲ್ಲಿ ಬಾಕ್ಸರ್‌ಗಳಿಗೆ ಬಹಳ ಮರ್ಯಾದೆ, ಮಾಧ್ಯಮಗಳಿಂದ ಮನ್ನಣೆ ಸಿಗುತ್ತಿದ್ದ ಕಾಲ. ಅದೊಂಥರ ಲಾಭದಾಯಕ ಕ್ರೀಡೆ ಕೂಡ ಆಗಿತ್ತು. ಆದರೆ ಬಾಕ್ಸಿಂಗ್ ಕಲಿಯುವುದು, ಪ್ರಸಿದ್ಧ ಬಾಕ್ಸರ್ ಆಗುವುದು ಅಷ್ಟೊಂದು ಸುಲಭದ ಹಾದಿಯೂ ಆಗಿರಲಿಲ್ಲ.

ಜ್ಯಾಕ್ ಜಾನ್ಸನ್ ಎಂಬ ಬಿಸಿರಕ್ತದ ಯುವಕನಿಗೆ ತಾನೊಬ್ಬ ಪ್ರಸಿದ್ಧ ಬಾಕ್ಸರ್ ಆಗಬೇಕೆಂಬ ಆಸೆಯಿತ್ತು. ಆದರೆ ಅವನ ಕನಸಿನ ಹಾದಿಗೆ ಒಂದು ದೊಡ್ಡ ಅಡೆತಡೆಯಿತ್ತು. ಅದೇ ಅವನ ಬಣ್ಣ! ಬಣ್ಣಕ್ಕೂ ಬಾಕ್ಸಿಂಗ್‌ಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರ? ಆತ ಇತರ ಅಮೆರಿಕನ್ನರಂತೆ ಬಿಳಿ ಚರ್ಮದವನಲ್ಲ. ಆತನ ಬಣ್ಣ ಕಪ್ಪು. ಆಗ ಅಮೆರಿಕದಲ್ಲಿ ಕಪ್ಪು ವರ್ಣದವರಿಗೆ ಮನ್ನಣೆ, ಸಮಾನ ಅವಕಾಶ ಸಿಗುತ್ತಿರಲಿಲ್ಲ. ಅವರನ್ನು ಮನುಷ್ಯರಂತೆಯೂ ನಡೆಸಿಕೊಳ್ಳುತ್ತಿರಲಿಲ್ಲ. ಹಾಗಿರುವಾಗ ಬಾಕ್ಸಿಂಗ್ ಕಲಿಯುವ ಅವಕಾಶ ಜ್ಯಾಕ್‌ಗೆ ಸಿಗುವುದಾದರೂ ಹೇಗೆ?

ಜ್ಯಾಕ್‌ಗೆ ಬಾಕ್ಸಿಂಗ್ ಅಕಾಡೆಮಿಗಳಿಗೆ ಪ್ರವೇಶಾವಕಾಶ ಸಿಗಲಿಲ್ಲ. ಆತ ಶಾಸ್ತ್ರಬದ್ಧ ಬಾಕ್ಸಿಂಗ್ ಕಲಿಕೆಯಿಂದ ವಂಚಿತನಾದ. ಆದರೆ ಬಾಕ್ಸಿಂಗ್ ಪಂದ್ಯಾವಳಿಗಳಲ್ಲಿ ಸ್ಪರ್ಧಿಸಲು ಕಪ್ಪು ವರ್ಣದವರಿಗೂ ಅವಕಾಶವಿತ್ತು. ತರಬೇತಿ ಪಡೆಯಲು ಬಿಡುವುದಿಲ್ಲ, ಆದರೆ ಸ್ಪರ್ಧೆಗೆ ಅವಕಾಶವೇ?

ಹೌದು, ತರಬೇತಿಯಿಲ್ಲದ ಕಪ್ಪು ಬಣ್ಣದವರನ್ನು ಬಾಕ್ಸಿಂಗ್ ರಿಂಗ್‌ನಲ್ಲಿ ಹೀನಾಮಾನವಾಗಿ ಹೊಡೆದು ಉರುಳಿಸಲಾಗುತ್ತಿತ್ತು. ಕಪ್ಪು ಬಣ್ಣದವರನ್ನು ಪಂದ್ಯಾವಳಿಗಳಲ್ಲಿ ಬಿಳಿಯರು ಪಂಚಿಂಗ್ ಬ್ಯಾಗ್‌ಗಳಂತೆ ಉಪಯೋಗಿಸುತ್ತಿದ್ದರು. ಬಾಕ್ಸಿಂಗ್‌ನ ಪಟ್ಟುಗಳನ್ನು ಸರಿಯಾಗಿ ಕಲಿಯದ ಕಪ್ಪುವರ್ಣೀಯರು ಬಿಳಿಯರನ್ನು ಎದುರಿಸಲಾಗದೆ ಒದ್ದಾಡುವುದನ್ನು ನೋಡುವುದೇ ಅಲ್ಲಿ ನೆರೆದ ಜನಸ್ತೋಮಕ್ಕೆ ತಮಾಷೆಯ, ಮೋಜಿನ ಸಂಗತಿ. ಬಿಳಿಯ ಬಾಕ್ಸರ್‌ಗಳಿಗೆ ಇದೊಂಥರಾ ಪ್ರತಿಷ್ಠೆ ವಿಷಯ. ‘ಆ ಕರಿಯನನ್ನು ಹೊಡೆದುರುಳಿಸಿ’ ಎಂದು ಬಿಳಿಯ ಪ್ರೇಕ್ಷಕರು ಕೇಕೆ ಹಾಕಿದರೆ ಬಾಕ್ಸರ್‌ಗಳ ಅಹಂಕಾರ ಇನ್ನೂ ಹೆಚ್ಚುತ್ತಿತ್ತು. ಹಾಗಾಗಿ ಹೆಚ್ಚಿನ ಕಪ್ಪುವರ್ಣೀಯರು ಬಾಕ್ಸಿಂಗ್‌ನಿಂದ ದೂರವೇ ಉಳಿಯುತ್ತಿದ್ದರು.

ಆದರೆ ಜ್ಯಾಕ್ ಬೇರೆಯವರಂತೆ ಕನಸು ಕಾಣುತ್ತಾ ಸುಮ್ಮನೆ ಕೂರುವ ಆಸಾಮಿಯಲ್ಲ. ಬಾಕ್ಸಿಂಗ್ ಅಕಾಡೆಮಿಗಳಿಂದ ತಿರಸ್ಕೃತನಾದ ಅವನು ಮೊದಲು ಬಹಳ ಬೇಸರಪಟ್ಟುಕೊಂಡ. ಆದರೂ ತನ್ನ ಕನಸನ್ನು ಮಣ್ಣು ಮಾಡಲಿಲ್ಲ. ಬೇರೆಯವರು ನನಗೆ ಕಲಿಸದಿದ್ದರೇನಂತೆ ನಾನಾಗಿಯೇ ಬಾಕ್ಸಿಂಗ್ ಕಲಿಯುತ್ತೇನೆ ಎಂದು ನಿರ್ಧರಿಸಿದ. ‘ನಾನು ಬಾಕ್ಸರ್ ಆದೆ’ ಎಂದು ಯಾವಾಗ ನನಗನ್ನಿಸುತ್ತದೆಯೋ ಆಗ ನಾನು ಬಾಕ್ಸರ್ ಆಗುತ್ತೇನೆಯೇ ಹೊರತು, ಯಾರೋ ಒಬ್ಬರು ‘ನೀನು ಬಾಕ್ಸರ್ ಆಗಿದ್ದೀಯ’ ಎಂದು ಕೊಡುವ ಸರ್ಟಿಫಿಕೇಟ್‌ಗಳಿಂದ ನಾನು ಬಾಕ್ಸರ್ ಆಗುವುದಿಲ್ಲ. ಹಾಗಿದ್ದ ಮೇಲೆ ನಾನು ಬಾಕ್ಸಿಂಗ್ ಕಲಿಯಲು ಅಕಾಡೆಮಿಗಳನ್ನು ಆಶ್ರಯಿಸುವುದೇಕೆ ಎಂದು ಪ್ರಶ್ನಿಸಿಕೊಂಡ.

ಅಂದಿನಿಂದ ಅವನ ಕನಸಿಗೆ ಬಣ್ಣ ಹಚ್ಚುವ ಕೆಲಸ ಶುರುವಾಯಿತು. ಇಲ್ಲಿಯವರೆಗೆ ಅವನ ಬಣ್ಣದವರು ಮಾಡದ ಕೆಲಸವನ್ನು, ತೋರಿಸದ ಧೈರ್ಯವನ್ನು ಅವನು ತೋರಿಸಿದ. ಆತ ಬಾಕ್ಸಿಂಗ್ ತರಬೇತಿ ಪಡೆಯಲು ಮಾಡಿದ್ದೇನು ಗೊತ್ತೇ? ದೊಡ್ಡ ದೊಡ್ಡ ಬಾಕ್ಸಿಂಗ್ ಪಂದ್ಯಾವಳಿಗಳಿಗೆ ತನ್ನ ಹೆಸರನ್ನು ನೋಂದಾಯಿಸಿದ್ದು!

ಅದು ಈಜು ಬರದವನೊಬ್ಬ ಸೀದಾ ಸಮುದ್ರಕ್ಕೆ ಧುಮುಕಿದಂತೆ. ಪಂದ್ಯಾವಳಿಗಳಲ್ಲಿ ಅವನಿಗೆ ಚೆನ್ನಾಗಿ ಒದೆ ಬೀಳುತ್ತಿತ್ತು. ಬಿಳಿಯ ಬಾಕ್ಸರ್‌ಗಳು ಅವನನ್ನು ಚೆನ್ನಾಗಿ ಹೊಡೆದು ಹಣ್ಣುಗಾಯಿ, ನೀರುಗಾಯಿ ಮಾಡುತ್ತಿದ್ದರು. ಹೀಗೆ ಪೆಟ್ಟು ತಿನ್ನುವುದರಿಂದ ಮಾತ್ರ ತಾನು ಬಾಕ್ಸಿಂಗ್ ಕಲಿಯಲು ಸಾಧ್ಯ ಎಂಬುದು ಜ್ಯಾಕ್‌ನ ಅಭಿಪ್ರಾಯ. ಬೇರೆಯವರು ಗೆಲ್ಲುವುದನ್ನು ನೋಡುತ್ತಾ, ನೋಡುತ್ತಾ ಕಲಿಯುವುದೇ ಅವನ ತರಬೇತಿ.

ಆರಂಭದ ದಿನಗಳಲ್ಲಿ ಇವನು ಮೊದಲ ಸುತ್ತಿನಲ್ಲೇ ಸ್ಪರ್ಧೆಯಿಂದ ಹೊರಬಿದ್ದ. ಹೀಗೆ ಬೇಗ ಪಂದ್ಯಾವಳಿಯಿಂದ ದೂರ ಸರಿಯುತ್ತಿದ್ದುದರಿಂದ ತನಗೆ ಏನೂ ಕಲಿಯಾಗುತ್ತಿಲ್ಲ ಎಂಬುದು ಜ್ಯಾಕ್‌ಗೆ ಅರಿವಾಯಿತು. ತಾನು ಇನ್ನೂ ಹೆಚ್ಚು ಫೈಟ್ ಮಾಡಬೇಕು, ಹೆಚ್ಚು ಪೆಟ್ಟುಗಳನ್ನು ತಿಂದು ಜಾಸ್ತಿ ಹೊತ್ತು ಬಾಕ್ಸಿಂಗ್ ರಿಂಗ್‌ನಲ್ಲಿ ಉಳಿಯಬೇಕು ಎಂಬ ಛಲ ಅವನಲ್ಲಿ ಉಕ್ಕಿತು. ಅವನು ಪೆಟ್ಟುಗಳನ್ನು ತಿನ್ನುತ್ತಲೇ ಹೋದ, ನೋವುಗಳನ್ನು ನುಂಗಿಕೊಂಡ. ‘ಆ ಕರಿಯನನ್ನು ಹೊಡೆದು ಹಾಕು, ಅವನನ್ನು ಚಚ್ಚು..’ ಇತ್ಯಾದಿ ಅವಮಾನಗಳಿಗೆ ಅವನು ಕಿವುಡನಂತೆ ವರ್ತಿಸಿದ. ಅವನು ಪೆಟ್ಟು ತಿನ್ನುವುದನ್ನು ನೋಡಲೆಂದೇ ಜನರು ಸೇರುತ್ತಿದ್ದರು!

ಈಗ ಅವನು 20ರಿಂದ 25 ಸುತ್ತುಗಳಲ್ಲಿ ಸ್ಪರ್ಧಿಸುವಷ್ಟು ಗಟ್ಟಿಗನಾಗಿದ್ದ, ಬಾಕ್ಸಿಂಗ್‌ನ ಪಟ್ಟುಗಳನ್ನು ಕಲಿತಿದ್ದ. ಇಷ್ಟನ್ನು ಕಲಿಯಲು ಅವನು ಹಲವಾರು ವರ್ಷಗಳನ್ನು ತೆಗೆದುಕೊಂಡ! ಜ್ಯಾಕ್ ಕೇವಲ ಒಂದೆರಡು ವಾರ, ತಿಂಗಳು ಮಾತ್ರ ನೋವು ನುಂಗಿದ್ದಲ್ಲ. ವರ್ಷಾನುಗಟ್ಟಲೆ ನೋವು ನುಂಗಿ ಆ ಹಂತ ತಲುಪಿದ್ದ. ಜ್ಯಾಕ್‌ನ ಪ್ರಯತ್ನವನ್ನು ಗಮನಿಸಿದ ಕೆಲವರು ಅವನನ್ನು ಪ್ರಶಂಸಿಸಿದರು. ‘ಅಯ್ಯೋ ಇವನೊಬ್ಬ ಹುಚ್ಚ. ಬಿಳಿಯ ದೈತ್ಯರನ್ನು ಸೋಲಿಸಲು ಕರಿಯನಿಂದ ಸಾಧ್ಯವೇ? ಇಂಥ ಹುಚ್ಚಾಟಕ್ಕೆ ಒಂದು ದಿನ ಬಾಕ್ಸಿಂಗ್ ರಿಂಗ್‌ನಲ್ಲೇ ಇವನು ರಕ್ತಕಾರಿ ಸಾಯುತ್ತಾನೆ. ಇದೆಲ್ಲಾ ಬೇಕಾ ಈ ಕರಿಯನಿಗೆ?…’ ಎಂದೆಲ್ಲಾ ಮೂದಲಿಸಿದವರೇ ಹೆಚ್ಚು. ಆದರೆ ಜ್ಯಾಕ್ ನಿಜಕ್ಕೂ ಸೋಲುತ್ತಿರಲಿಲ್ಲ, ಆತ ಬಾಕ್ಸಿಂಗ್‌ನ ದೊಡ್ಡ ದೊಡ್ಡ ಪಟ್ಟುಗಳನ್ನು, ಪಾಠಗಳನ್ನು ತನ್ನ ಎದುರಾಳಿಗಳಿಂದ ಕಲಿಯುತ್ತಿದ್ದ. ತನಗೆ ಬೀಳುತ್ತಿದ್ದ ಒಂದೊಂದು ಪೆಟ್ಟು ಕೂಡ ಅವನಿಗೆ ಬಹಳ ಮುಖ್ಯವಾಗಿತ್ತು.

ಒಂದು ದಿನ ಜ್ಯಾಕ್ ಜಾನ್ಸನ್‌ಗೆ ತನ್ನ ಕಲಿಕೆ ಮುಗಿಯಿತು ಎಂದು ಅನಿಸಿತು. ಯಾರಿಗೂ ಸಿಗದ ಅತ್ಯುತ್ತಮ ಬಾಕ್ಸಿಂಗ್ ತರಬೇತಿ ಅದು! ‘ನಾನೀಗ ಬಾಕ್ಸರ್ ಆಗಿದ್ದೇನೆ’ ಎಂದು ತನಗೆ ತಾನೇ ಸರ್ಟಿಫಿಕೇಟ್ ಕೊಟ್ಟುಕೊಂಡ. ಹಾಗಾದರೆ ಮುಂದೇನಾಯ್ತು? ಯಾರು ಇವನನ್ನು ಹೊಡೆದು ಕೇಕೆ ಹಾಕಿ ನಕ್ಕಿದ್ದರೋ (ನಿಜಾರ್ಥದಲ್ಲಿ ಜ್ಯಾಕ್‌ನ ಗುರುಗಳು) ಅವರ ವಿರುದ್ಧವೇ ತೊಡೆ ತಟ್ಟಿ ನಿಂತ. ‘ಬಿಳಿಯ ದೈತ್ಯ’ರನ್ನು ಮೊದಲ ಸುತ್ತುಗಳಲ್ಲೇ ಕೆಡವಿ ಬೀಳಿಸಿ ‘ವರ್ಲ್ಡ್ ಹೆವಿ ವೆಯ್ಟ್ ಚಾಂಪಿಯನ್‌ಶಿಪ್’ನ ವಿಜೇತನಾದ!

ಅವನ ಎದುರಾಳಿಗಳಿಗೆ ಅಚ್ಚರಿ! ಜ್ಯಾಕ್ ಬಾಕ್ಸಿಂಗ್‌ನಲ್ಲಿ ಎಷ್ಟು ಪರಿಣತನಾಗಿದ್ದನೆಂದರೆ ಎದುರಾಳಿಯ ಮನಸ್ಸನ್ನು ಓದುವಷ್ಟು, ಅವರು ಪಟ್ಟುಗಳನ್ನು ಪ್ರಯೋಗಿಸುವ ಮುನ್ನವೇ ಅದನ್ನು ಪ್ರತಿರೋಧಿಸುವಷ್ಟು!

ಉಳಿದ ಬಾಕ್ಸರ್‌ಗಳಂತೆ ಜ್ಯಾಕ್ ನಿರ್ಜೀವ ಪಂಚಿಂಗ್ ಬ್ಯಾಗ್ ಉಪಯೋಗಿಸಿ ಬಾಕ್ಸಿಂಗ್ ಕಲಿತವನಲ್ಲ. ದೈತ್ಯ ಬಾಕ್ಸರ್‌ಗಳ ಪೆಟ್ಟಿನ, ಅವರ ದೇಹಭಾಷೆಯ, ಅವರು ಉಪಯೋಗಿಸುತ್ತಿದ್ದ ಪಟ್ಟು-ಪ್ರತಿಪಟ್ಟುಗಳ ಮೂಲಕ ಬಹಳ ಪ್ರಾಯೋಗಿಕವಾಗಿ ವಿದ್ಯೆ ಕಲಿತವನು. ಎಲ್ಲಕ್ಕೂ ಹೆಚ್ಚಾಗಿ ಅವನು ಕಲಿತಿದ್ದು ಸೋಲುಗಳ ಮೂಲಕ, ನೋವಿನ-ಅವಮಾನದ ಮೂಲಕ! ಇನ್ಯಾರು ತಾನೇ ಅವನನ್ನು ಸೋಲಿಸಲು ಸಾಧ್ಯ?

ಜ್ಯಾಕ್ ಜಾನ್ಸನ್‌ನ್ನು ಆ ಕಾಲದ ಶ್ರೇಷ್ಠ ಬಾಕ್ಸರ್ ಎಂದು ಜಗತ್ತು ಒಪ್ಪಿಕೊಂಡಿತು, ಅಪ್ಪಿಕೊಂಡಿತು. ಜ್ಯಾಕ್‌ನ ಕನಸು, ಛಲ ಮುಂದೆ ಮೊಹಮ್ಮದ್ ಆಲಿಯಂಥ ಹಲವಾರು ಬಾಕ್ಸರ್‌ಗಳಿಗೆ ಸ್ಫೂರ್ತಿಯಾಯಿತು. ಅಂದು ಜ್ಯಾಕ್ ಜಾನ್ಸನ್ ಹೋರಾಡಿದ್ದು ಕೇವಲ ಬಿಳಿಯ ಬಾಕ್ಸರ್‌ಗಳ ವಿರುದ್ಧ ಮಾತ್ರವಲ್ಲ. ಆತ ಹೋರಾಡಿದ್ದು ವರ್ಣಭೇದ ನೀತಿಯ ವಿರುದ್ಧ, ತನ್ನ ಕನಸಿಗೆ ಅಡ್ಡಗಾಲಾಗಿದ್ದ ಬಣ್ಣದ ಕೀಳರಿಮೆಯ ವಿರುದ್ಧ, ತನ್ನೊಳಗಿನ ಭಯದ ವಿರುದ್ಧ! ಹಾಗಾಗಿಯೇ ಇಂದಿಗೂ ಅವನನ್ನು ಒಬ್ಬ ‘ಫೈಟರ್’ ಎಂದು ಜಗತ್ತು ನೆನಪಿಸಿಕೊಳ್ಳುತ್ತದೆ. ಅವನಿಂದ ಸ್ಫೂರ್ತಿ ಪಡೆಯುತ್ತದೆ. ನೋವು, ಅವಮಾನ ಕಲಿಸುವ ಪಾಠವನ್ನು ಯಾವ ಗುರುವೂ, ಯಾವ ಶಾಲೆ-ಕಾಲೇಜು- ವಿಶ್ವವಿದ್ಯಾಲಯದ ಪದವಿಯೂ ಕಲಿಸುವುದಿಲ್ಲ.

ಹುಳಿ ಪೆಟ್ಟನ್ನು ನೋವು ಎಂದು ಕೊಂಡರೆ ಯಾವ ಕಲ್ಲು ಶಿಲೆಯಾಗುವುದಿಲ್ಲ, ನೋವುಂಡ ಜೀವವೇ ಒಂದು ಸುಂದರ ಮೂರ್ತಿಯಾಗುತ್ತದೆ ಎಲ್ಲರಿಂದ ಪೂಜನೀಯಗೊಳ್ಳುತ್ತದೆ.. ಸೋಲಿನ ಮುಂದಿದೆ ಗೆಲುವಿನ ಹೆಜ್ಜೆ ಗೆದ್ದು ತೋರಿಸು...

ಸಾಧಿಸಿದ ಸಾಧಕರು ಪ್ರತಿ ನೋವು ನಲಿವಿನಲ್ಲೂ ಹೊಸದೊಂದು ಪಾಠವನೇ ಕಲಿಯುತಲೆ ಗೆದ್ದವರು..

ಕೃಪೆ: ವಿಶ್ವವಾಣಿ.

1 comment:

  1. ತುಂಬಾ ಒಳ್ಳೆಯ ಕಥೆ ಸರ್. ಸ್ಪೂರ್ತಿ ನೀಡುವ ಲೇಖನ. ಧನ್ಯವಾದಗಳು

    ReplyDelete

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು