Wednesday, January 17, 2024

 ಕಥೆ-277

ಯಶಸ್ಸಿಗೆ ಲಿಫ್ಟ್ ಇಲ್ಲ! ಮೆಟ್ಟಿಲುಗಳಿವೆ!

ಮೇಲಕ್ಕೆ ಹತ್ತಿ ಹೋಗಲು ಇರುವ ಪ್ರಮುಖ ಮಾರ್ಗಗಳು ಎರಡೇ ಎರಡು ಅಲ್ಲವೇ? ಒಂದು ಮೆಟ್ಟಿಲುಗಳನ್ನು ಹತ್ತಿ ಹೋಗುವುದು. ಎರಡನೆಯದ್ದು ಯಂತ್ರಚಾಲಿತ ಲಿಫ್ಟ್ ಬಳಸುವುದು. ಮೊದಲನೆಯದ್ದು ಕಠಿಣ ಮಾರ್ಗ. ಎರಡನೆಯದ್ದು ಸುಲಭ ಮಾರ್ಗ. ಆದರೆ ಬದುಕಿನಲ್ಲಿ ಮೇಲಕ್ಕೆ ಬರಬೇಕೆಂದರೆ, ಯಶಸ್ವಿಯಾಗಬೇಕೆಂದರೆ, ಜನಸಾಮಾನ್ಯರಿಗೆ ಲಿಫ್ಟ್ ಸೌಕರ್ಯ ಇರಲಾರದು. ಅವರು ಮೆಟ್ಟಿಲನ್ನು ಏರಿಯೇ ಅಂದರೆ ಶ್ರಮ ವಹಿಸಿಯೇ ಮೇಲಕ್ಕೇರಬೇಕು ಅಲ್ಲವೇ? ಇದನ್ನು ವಿವರಿಸಿದ ಸಾಧಕರೊಬ್ಬರ ಮಾತುಗಳನ್ನು ಕೇಳೋಣ.

1963ರಲ್ಲಿ ರಾಜಸ್ಥಾನದ ಅಜ್ಮೀರಿನ ಶಾಲೆಯೊಂದರ ವಾರ್ಷಿಕೋತ್ಸವ ನಡೆಯುತ್ತಿತ್ತು. ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನವಿತ್ತು. ವೇದಿಕೆಯ ಮೇಲೆ ಒಬ್ಬ ಪಾತ್ರಧಾರಿ ಬಾಲಕ ಬಂದ. ಆತ ‘ತೊಲಗಾಚೆ ಇಲ್ಲಿಂದ! ಇಲ್ಲದಿದ್ದರೆ ನಾನೇ ನಿನ್ನ ಕತ್ತು ಹಿಡಿದು ದೂಡುತ್ತೇನೆ’ಎಂಬ ಪುಟ್ಟ ಸಂಭಾಷಣೆಯನ್ನಷ್ಟೇ ಹೇಳಬೇಕಿತ್ತು. ಆದರೆ ವೇದಿಕೆಯ ಝಗಮಗಿಸುವ ದೀಪಗಳನ್ನು, ಎದುರಿಗಿದ್ದ ನೂರಾರು ವಿದ್ಯಾರ್ಥಿಗಳನ್ನು ಕಂಡಾಗ ಆತನ ಕಾಲುಗಳು ನಡುಗಲಾರಂಭಿಸಿದವು. ಗಂಟಲಿಂದ ಸ್ವರಗಳೇ ಹೊರಡಲಿಲ್ಲ. ಆದರೂ ಸಾವರಿಸಿಕೊಂಡು ಕೈಬಾಯಿ ಸನ್ನೆಯಲ್ಲಿಯೇ ‘ತೊಲಗಾಚೆ, ಕತ್ತು ಹಿಡಿದು ದೂಡುತ್ತೇನೆ’ಎಂಬುದನ್ನು ಅಭಿನಯಿಸಿ ತೋರಿಸಿದ. ಆತ ಸಂಭಾಷಣೆಗಳನ್ನು ಹೇಳದಿದ್ದುದು ಸಭಿಕರಿಗೆ ವಿಚಿತ್ರವೆನಿಸಿತು. ಅವರೆಲ್ಲ ಗಟ್ಟಿಯಾಗಿ ನಕ್ಕರು. ಚಪ್ಪಾಳೆ ತಟ್ಟಿದರು. ಸಭಿಕರ ಚಪ್ಪಾಳೆಯಿಂದ ಬಾಲಕನಲ್ಲಿ ಹೆಮ್ಮೆ ಉಂಟಾಯಿತು. ತನ್ನಲ್ಲಿ ನಟನಾ ಪ್ರತಿಭೆ ಅಡಗಿದೆ ಎನಿಸಿತು. ಆತ ನಾಟಕ- ಸಿನಿಮಾಗಳಲ್ಲಿ ತನ್ನ ಅದೃಷ್ಟ ಕಂಡುಕೊಳ್ಳಬೇಕೆಂಬ ತೀರ್ಮಾನವನ್ನು ಅಲ್ಲಿಯೇ ಮಾಡಿದ. ಒಬ್ಬ ಹೊಸನಾಯಕ ನಟ ಹುಟ್ಟಿಕೊಂಡ!ಆತ ಅಂದಿನಿಂದ ನಾಟಕಗಳಲ್ಲಿ ಅಭಿನಯಿಸಲು ತೊಡಗಿದ. ಅವಕಾಶಗಳಿಗಾಗಿ ಎಲ್ಲೆಲ್ಲೋ ಸುತ್ತಾಡುತ್ತಿದ್ದ. ಮಗ ವಿದ್ಯಾವಂತನಾಗುವುದು ಬಿಟ್ಟು, ನಟನಾಗುವುದು ಆತನ ತಂದೆಗೆ ಇಷ್ಟವಿರಲಿಲ್ಲ. ಅವರು ಅದನ್ನು ಕಟುವಾಗಿ ವಿರೋಧಿಸಿದರು. ಆದರೆ ಆತ ತೀರ್ಮಾನ ಮಾಡಿಯಾಗಿತ್ತು! ಒಂದು ದಿನ ತನ್ನ ಬೈಸಿಕಲ್ಲನ್ನೂ, ಕೈಗಡಿಯಾರವನ್ನೂ ಮಾರಿಬಿಟ್ಟ. ಬಂದ ಹಣದಲ್ಲಿ ಮುಂಬೈ ರೈಲು ಹತ್ತಿ ಬಿಟ್ಟ. ಅಲ್ಲಿ ಆತನಿಗೆ ನಾಯಕ ನಟನ ಪಟ್ಟ ಕಾಯುತ್ತ ಕುಳಿತಿರಲಿಲ್ಲ. ಆತ ಫುಟ್‌ಪಾತ್‌ನಲ್ಲಿ ಮಲಗುತ್ತಿದ್ದ. ಹೊಟ್ಟೆಪಾಡಿಗಾಗಿ ಹಗಲಿನಲ್ಲಿ ಸೀರೆ ಜರಿಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಬಿಡುವಿನಲ್ಲಿ ಪ್ರತಿದಿನ ಹತ್ತಾರು ಸ್ಟುಡಿಯೋಗಳ ಬಾಗಿಲು ತಟ್ಟುತ್ತಿದ್ದ. ಕೊನೆಗೊಂದು ದಿನ ‘ಅಮಾನ್’ಎಂಬ ಚಿತ್ರದಲ್ಲಿ ಒಂದು ಪುಟ್ಟ ಪಾತ್ರ ಸಿಕ್ಕಿತು. ಆನಂತರ ಸಣ್ಣ ಪುಟ್ಟ ಅವಕಾಶಗಳು ದೊರೆಯತೊಡಗಿದವು. ನಿಶಾಂತ್ ಎಂಬ ಚಿತ್ರದಲ್ಲಿ ಆತನ ಪಾತ್ರ ಎಲ್ಲರ ಮೆಚ್ಚುಗೆ ಗಳಿಸಿತು. ಆತ ನಾಯಕ ನಟನಾಗಿ ಮಾರ್ಪಟ್ಟ. ನಂತರ ಆತ ಒಂದು ನೂರಕ್ಕೂ ಹೆಚ್ಚು ಚಲನಚಿತ್ರ ಗಳಲ್ಲಿ ಕೆಲಸ ಮಾಡಿದ. ಹಲವಾರು ರಾಷ್ಟ್ರಪ್ರಶಸ್ತಿ, ಫಿಲ್‌ಮ್‌‌ಫೇರ್ ಪ್ರಶಸ್ತಿಗಳನ್ನು ಗಳಿಸಿದ. ಕನ್ನಡದ ‘ತಬ್ಬಲಿಯು ನೀನಾದೆ ಮಗನೇ’ ಚಲನಚಿತ್ರದಲ್ಲಿ ಪೂಜಾರಿಯ ಪಾತ್ರ ಮಾಡಿ ಮೆಚ್ಚುಗೆ ಗಳಿಸಿದ.

2006ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನೂ ಗಳಿಸಿದರು! ಇಷ್ಟು ಹೊತ್ತಿಗೆ ಅವರು ಯಾರೆಂದು ನೀವು ಊಹಿಸಿ ರಬಹುದು! ಅವರು ಹಿಂದಿ ಚಲನಚಿತ್ರರಂಗದ ಖ್ಯಾತ ನಾಯಕ-ನಟ ನಾಸಿರುದ್ದೀನ್ ಷಾ! ಯಶಸ್ಸಿನ ಉತ್ತುಂಗದಲ್ಲಿರುವ ಅವರನ್ನೊಮ್ಮೆ ತಮ್ಮ ಯಶಸ್ಸಿನ ರಹಸ್ಯವೇನೆಂದು ಕೇಳಿದಾಗ ಅವರು, ‘ಬದುಕಿನಲ್ಲಿ ನಾವು ಏನಾಗಬೇಕು ಎಂಬುದರ ಬಗ್ಗೆ ನಮಗೊಂದು ಕನಸಿರಬೇಕು. ಆ ಕನಸನ್ನು ನನಸಾಗಿಸಿಕೊಳ್ಳಲು ಕಷ್ಟಗಳನ್ನು ಎದುರಿಸಲು ನಾವು ಸಿದ್ಧರಾಗಿರಬೇಕು. ಯಶಸ್ಸಿನ ಶಿಖರವನ್ನೇರಲು ಬದುಕಿನಲ್ಲಿ ಲಿಫ್ಟ್ ವ್ಯವಸ್ಥೆ ಇರುವುದಿಲ್ಲ. ಮೆಟ್ಟಿಲುಗಳನ್ನು ಒಂದೊಂದಾಗಿ ಏರುತ್ತಾ ಹೋಗಬೇಕು.

ಕಠಿಣ ಪರಿಶ್ರಮ ವಿರಬೇಕು. ಯಶಸ್ವಿಯಾಗುತ್ತೇನೆಂಬ ಆತ್ಮವಿಶ್ವಾಸವೂ ಇರಬೇಕು’ಎಂದಿದ್ದರಂತೆ. ನಾಸಿರುದ್ದೀನ್ ಷಾ ಅವರ ಯಶಸ್ಸಿನ ಸೂತ್ರಗಳು ಸಿನಿಮಾ ಕ್ಷೇತ್ರಕ್ಕೂ ಅನ್ವಯಿಸುತ್ತವೆ, ಹಾಗೆಯೇ ಬದುಕಿನ ಇತರ ಕ್ಷೇತ್ರಗಳಿಗೂ ಅನ್ವಯಿಸುತ್ತವಲ್ಲವೇ? ಕನಸಿಗೂ, ನನಸಿಗೂ ನಡುವೆ ಹೆಚ್ಚು ಅಂತರ ಇರುವುದಿಲ್ಲ.

ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮಗಳಿದ್ದರೆ ಕನಸು-ನನಸುಗಳ ಅಂತರವನ್ನು ನಿಭಾಯಿಸಬಹುದಲ್ಲವೇ? ಹಾಗೆ ಮೇಲಕ್ಕೇರಲು ಮೆಟ್ಟಿಲುಗಳನ್ನು ಕಷ್ಟಪಟ್ಟು ಏರಬೇಕಲ್ಲವೇ? ಲಿಫ್ಟ್ ಸೌಲಭ್ಯ ಎಲ್ಲರಿಗೂ ಲಭ್ಯವಿರುವುದಿಲ್ಲ ಅಲ್ಲವೇ?

ಕೃಪೆ :ವಿಶ್ವವಾಣಿ.                        

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು