ಕಥೆ-311
ಅನ್ಯರ ವಸ್ತು ಪ್ರಾಣಕ್ಕೆ ಕುತ್ತು
ಒಬೃ ಕಳ್ಳನಿದ್ದನು, ಅವನು ಯಾರ ಕೈಗೆ ಸಿಗದೆ ಊರಿಂದ ಊರಿಗೆ ತಿರುಗಿ- ಕಳ್ಳತನ ಮಾಡಿಯೇ ಜೀವನ ಸಾಗಿಸುತ್ತಿದ್ದ. ಹೀಗೆ ಒಂದು ದಿನ ಒಂದು ಊರಿಗೆ ಕಳ್ಳತನ ಮಾಡಲು ಬಂದ ಆ ಊರಲ್ಲಿ ಯಾರೂ ಅಷ್ಟೇನೂ ಸ್ಥಿತಿವಂತರಾಗಿರಲ್ಲಿಲ್ಲ, ಹಾಗಾಗಿ, ಆ ಊರಲ್ಲಿ ಕಳ್ಳನು ಸುಮಾರು ಮನೆ ಕೊಳ್ಳ ಹೊಡೆಯಲು ಪ್ರಯತ್ನ ಮಾಡಿದರೂ ಅವನಿಗೆ ಏನೂ ಸಿಗಲಿಲ್ಲ. ಕೊನೆಗೆ ಆ ಊರಲ್ಲಿ ಒಂದು ರಾತ್ರಿ ಮನೆಯೊಂದರಲ್ಲಿ ಕುದುರೆಯನ್ನು ಕಂಡು ಅದನ್ನೇ ಕದ್ದನು. ಆ ರಾತ್ರಿಯೇ ಕಳ್ಳನು ಕುದುರೆಯನ್ನು ಓಡಿಸಿಕೊಂಡು ಹೋಗುತ್ತಿರಲು ನೋಡು ನೋಡುತ್ತಲೇ ಬೆಳಕು ಹರಿಯಿತು. ಅಷ್ಟು ಹೊತ್ತಿಗೆ ಅವನು ಒಂದು ದೊಡ್ಡ ಊರಿಗೆ ಬಂದು ಸೇರಿದ್ದ ಆ ಊರಲ್ಲಿ ಒಂದು ಸಂತೆ ನಡೆಯುತಿತ್ತು. ಕಳ್ಳ ತನ್ನ ಚಾಣಾಕ್ಷತನದಿಂದ ಆ ಸಂತೆಯಲ್ಲಿ ಕುದುರೆಯನ್ನು ಮಾರಾಟಕ್ಕೆ ಇಟ್ಟನು. ಸುಮಾರು ಜನರು ಪೊಗದಸ್ತಾದ ಕುದುರೆಯನ್ನು ಕಂಡು ಬೆರಗಾಗಿ ವಿಚಾರಿಸಿದರೆ ಹೊರತು ಯಾರೂ ಅದನ್ನು ಕೊಳ್ಳಲು ಮುಂದಾಗಲಿಲ್ಲ. ಹೀಗೆ ಹೊತ್ತು ಕಳೆಯಿತು. ಸಂಜೆ ಆಯಿತು. ಅನ್ನ ನೀರಿಲ್ಲದೆ ಕಳ್ಳನ ಹೊಟ್ಟೆ ಚುರುಗುಟ್ಟಿತು. ಕೊನಗೆ ಒಬ್ಬ ಖರೀದಿ ಮಾಡಲು ಬಂದ ಅವನು ಕುದುರೆಯ ಬೆಲೆ ಎಷ್ಟು ? ಎಂದು ಕೇಳಿದನು. ಕಳ್ಳ ಐವತ್ತು ಸಾವಿರ ಎಂದ, ಖರೀದಿ ಮಾಡುವವನು 'ಅಷ್ಟಾಗಿ ಇಲ್ಲ, ಕುದುರೆಯ ಬೆಲೆ ಎಲ್ಲಾ ಕಡೆ ಹತ್ತು ಸಾವಿರ ಇದೆ' ಎಂದ. ಕಳ್ಳ ಸ್ವಲ್ಪ ಯೋಚನೆ ಮಾಡಿ ಇರಬಹುದು ಎಂದು ತಿಳಿದು, 'ಆಯಿತು. ಹತ್ತು ಸಾವಿರ ಕೊಡಿ' ಎಂದ ಖರೀದಿ ಮಾಡುವವನು ಇನ್ನೂ ಚೌಕಾಸಿ ಮಾಡುತ್ತ, 'ಇಲ್ಲ ಇಲ್ಲ, ಕುದುರೆಯ ವ್ಯಾಪಾರ ನೆಲ ಕಚ್ಚಿದ. ಎರಡು ಮೂರು ವರ್ಷದಿಂದ ಎಲ್ಲಿಯೂ ಕುದುರೆ ವ್ಯಾಪಾರವಿಲ್ಲ, ಕುದುರೆಯ ಬೆಲೆ ಐದು ಸಾವಿರಕ್ಕೆ ಇಳಿದಿದೆ' ಎಂದ. ಕುದುರೆಗಳ ಬಗ್ಗೆ ಏನನ್ನೂ ತಿಳಿಯದ ಕಳ್ಳ, 'ಆಯಿತು ಮಹಾ ಸ್ವಾಮಿಗಳೇ, ಐದು ಸಾವಿರವೇ ಕೊಡಿ' ಎಂದನು. ಖರೀದಿ ಮಾಡುವವನು, 'ಆಯಿತು ಐದು ಸಾವಿರ ರೂಪಾಯಿ ಕೊಡುತ್ತೇನೆ. ಆದರೆ ಒಂದು ಸಲ ಒಂದು ಸುತ್ತು ಹಾಕಿ ಹೇಗೆ ಈ ಕುದುರೆ ಓಡುತ್ತೆ ಎಂದು ಪರೀಕ್ಷಿಸಿ ನಂತರ ಹಣ ಕೊಡುತ್ತೇನೆ' ಎಂದ. ಬೆಳಗ್ಗಿನಿಂದ ಸಂಜೆವರೆಗೆ ಹಸಿದ ಹೊಟ್ಟೆಯಲ್ಲಿದ್ದ ಕಳ್ಳ ಏನನ್ನೂ ಯೋಚಿಸದೆ, 'ಆಯಿತು, ಒಂದು ಸುತ್ತು ಓಡಿಸಿ ನೋಡಿ ಹಣ ಕೊಡಿ' ಎಂದನು. ಖರೀದಿ ಮಾಡುವವನು ಸರ ಸರನೆ ಕುದುರೆಯನ್ನು ಏರಿ, 'ಪರೀಕ್ಷೆ ಮಾಡುತ್ತೇನೆ' ಎಂದವನೇ ನೋಡ ನೋಡುತ್ತಲೇ ಓಡಿಸಿಕೊಂಡು ಹೋಗೇ ಬಿಟ್ಟನು. ಹಿಂತಿರುಗಿ ಬರಲೇ ಇಲ್ಲ. ಖರೀದಿ ನೆಪದಲ್ಲಿ ಬಂದವನು ಈ ಕಳ್ಳನಿಗಿಂತ ದೊಡ್ಡ ಕಳ್ಳನಾಗಿದ್ದ. ಕೊನೆಗೆ ಈ ಸಣ್ಣ ಕಳ್ಳನನ್ನು ಆರಕ್ಷಕರು ಸೆರೆ ಹಿಡಿದರು. ಸೆರೆಮನೆಯಲ್ಲಿ ಕೂಡಿಹಾಕಿದರು.
ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು (ಕದ್ದದ್ದು) ಪರರಿಗೆ..
ಅನ್ಯರ ವಸ್ತು ಪ್ರಾಣಕ್ಕೆ ಅಪತ್ತು
No comments:
Post a Comment