Tuesday, February 20, 2024

ಕಥೆ-312

 ಅವಮಾನವನ್ನು ಯಶಸ್ಸಿಗೆ ಅನುವಾದಿಸಿ.

ಅವನೊಬ್ಬ ಹುಡುಗ, ಹಾಡಿನ ಬಗ್ಗೆ ಅಪಾರ ಆಸಕ್ತಿ ಹೊಂದಿದವನು. ತಾನೊಬ್ಬ ಹಾಡುಗಾರನಾಗಬೇಕು, ತಾನೂ ವೇದಿಕೆಯ ಮೇಲೆ ಹಾಡಬೇಕು ಎಂದು ಹಂಬಲಿಸುತ್ತಲೇ ಪ್ರಾಥಮಿಕ, ಮಾಧ್ಯಮಿಕ ಶಾಲೆಯ ವಿದ್ಯಾಭ್ಯಾಸಮುಗಿಸಿದ. ಆದರೆ ತಾನು ವೇದಿಕೆಯ ಮೇಲೆ ಹಾಡಬೇಕು, ಹಾಡುಗಾರನಾಗಬೇಕು ಎಂಬ ಕನಸು ಈಡೇರಲೇ ಇಲ್ಲ, ಕಾರಣ ಹೆದರಿಕೆ ಮತ್ತು ಹಿಂಜರಿಕೆ. ಅಂತೂ ಪ್ರೌಢ ಶಾಲಾ ಹಂತಕ್ಕೆ ಬಂದಾದ ಮೇಲೆ ಎಂಟನೇ ತರಗತಿಯಲ್ಲಿರುವಾಗ ಒಮ್ಮೆ ಒಂದು ಅವಕಾಶ, ಗಾಯನ ಸ್ಪರ್ಧೆಯ ರೂಪದಲ್ಲಿ ಒದಗಿ ಬಂತು. ಎಲ್ಲಾ ರೀತಿಯ ಧೈರ್ಯವನ್ನು ಒಗ್ಗೂಡಿಸಿಕೊಂಡು, ಹಿಂಜರಿಕೆಯನ್ನು ನಿವಾರಿಸಿಕೊಂಡು, ಹುಡುಗ ಹಾಡಲು ಅನುವಾದ. ತನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ವೇದಿಕೆಯ ಮೇಲೆ ಹಾಡಲು ನಿಂತ ಹುಡುಗನಿಗೆ ತನ್ನ ಎದುರು ನೂರಾರು ಕಣ್ಣುಗಳು ತನ್ನನ್ನೇ ದುರುಗುಟ್ಟುವಂತೆ ಕಾಣುತ್ತಿದ್ದವು.


ಆ ನೋಟವನ್ನು ತಾಳಲಾರದೆ, ತಡವರಿಸುತ್ತಾ, ನಡುಗುತ್ತಾ ಕಂಠಪಾಠ ಮಾಡಿದ ಹಾಡನ್ನು ಕಂಠಪಾಠದಂತೆಯೇ ಒಪ್ಪಿಸಿ ಓಡಿದ. ಅವನ ನಡುಕ ಕಂಡ ಅವನೆಲ್ಲ ಮಿತ್ರ ವರ್ಗವೂ ಕೇಕೆಹಾಕಿ ನಗಲು ಪ್ರಾರಂಭಿಸಿದರು. ನಿನಗ್ಯಾಕೋ ಬೇಕು ಹಾಡು ಎಂದು ಅಣಕಿಸಿದರು. ಅವನ ಶಾಲೆಯ ಒಂದೆರಡು ಗುರುಗಳೂ ಅವನನ್ನೂ ಮೂದಲಿಸಿದರು. ಹುಡುಗನಿಗೆ ರಾತ್ರಿಯೆಲ್ಲ ನಿದ್ರೆಯಿಲ್ಲ. ಪದೇ ಪದೇ ಆಲೋಚಿಸಿದ ತನ್ನ ಹಾಡುಗಾರನಾಗಬೇಕೆಂಬ ಕನಸಿನ ಬಗ್ಗೆ ಚಿಂತಿಸಿದ. ಗುರುಗಳ ಮೂದಲಿಕೆ, ಮಿತ್ರರ ಅಣಕಿಸುವಿಕೆಗಳು ಚುಚ್ಚತೊಡಗಿದವು. ಇಂಥ ಸಂದರ್ಭ ಬೇರೆ ಯಾರಿಗೇ ಒದಗಿದ್ದರೂ ಸಾಕಷ್ಟು ಜನ ಬೇರೆಯದೇ ತೀರ್ಮಾನ ತೆಗೆದುಕೊಳ್ಳುತ್ತಿದ್ದರೇನೋ. ಆದರೆ ಈ ಹುಡುಗ ಎಲ್ಲರಂತವನಲ್ಲ. ಹಾಗಾದರೆ ಅವನ ತೀರ್ಮಾನ ಏನಾಗಿರಬಹುದು ? ಆ ಎಳೆಯ ವಯಸ್ಸಿನಲ್ಲಿಯೇ ಅವನು ತೀರ್ಮಾನಿಸಿಯೇ ಬಿಟ್ಟ. ತಾನು ಮುಂದೆ ಅದೇನೇ ಕಷ್ಟಬಂದರೂ ಹಾಡುಗಾರನಾಗಲೇಬೇಕು ಎಂದು. ಅವನ ತಾಲೀಮು ಪ್ರಾರಂಭವಾಯ್ತು.


ಯಾವ ಸಂಗೀತ ಗುರುವೂ ಇಲ್ಲ, ಸಂಗೀತ ಜ್ಙಾನವೂ ಇಲ್ಲ. ಆದರೆ ತಾನು ಕೇಳಿಸಿಕೊಳ್ಳುತ್ತಿದ್ದ ಪ್ರತೀ ಹಾಡನ್ನೂ ಅದೇ ರೀತಿ ಹಾಡುತ್ತಾ, ಅಭ್ಯಾಸ ಮಾಡತೊಡಗಿದ, ಅಭ್ಯಾಸ ಯಾವ ರೀತಿಯಿತ್ತೆಂದರೆ ಕುಳಿತಲ್ಲಿ, ನಿಂತಲ್ಲಿ, ಸ್ನಾನ ಮಾಡುವಾಗ, ಓದುವಾಗ, ನಿದ್ರೆ ಮಾಡುವಾಗ, ಅಷ್ಟೇ ಯಾಕೆ ಶೌಚಾಲಯದಲ್ಲಿ ಕುಳಿತಾಗಲೂ ಹಾಡಿನ ಅಭ್ಯಾಸ ನಡೆಯುತ್ತಿತ್ತು. ಅದೆಷ್ಟೋ ಸಂಧರ್ಭದಲ್ಲಿ ಅವನ ಅಭ್ಯಾಸ ಮನೆಯಲ್ಲಿದ್ದವರಿಗೆಲ್ಲಾ ಕಿರಿ ಕಿರಿ ಎನಿಸಿ, ಮನೆಯವರಿಂದ ಬೈಸಿಕೊಡದ್ದೂ ಇದೆ.


ಅವನ ತಂದೆಯೇ ಅವನಿಗೆ ಎಷ್ಟೋ ಬಾರಿ ನಿನ್ನ ಕತ್ತೆ ರಾಗ ನಿಲ್ಸು, ದೊಡ್ಡ ಹಾಡುಗಾರ ಆಗೋದು ಅಷ್ಟರಲ್ಲೇ ಐತಿ ಎಂದು ಬೈದಿದ್ದರು. ಆದರೆ ಹುಡುಗನಿಗೆ ಪ್ರತೀ ಬೈಗುಳವೂ ಅವನ ಹಾಡಿನ ತಾಲೀಮಿಗೆ ಸ್ಪೂರ್ತಿಯಾದವೇ ಹೊರತು ತೆಗಳಿಕೆಯಾಗಲಿಲ್ಲ. ತಾನೇಕೆ ಹಾಡುಗಾರನಾಗಬಾರದು ಎಂಬ ಒಂದೇ ಛಲದಿಂದ ಅಭ್ಯಸಿಸಿದ. ಹತ್ತನೇ ತರಗತಿಗೆ ಬರುವಷ್ಟರಲ್ಲಿ ಸುಮಾರು ಬೆಳವಣಿಗೆ ಹೊಂದಿದ್ದ ಹುಡುಗ ಅದೇ ಶಾಲೆಯ ಆವರಣದಲ್ಲೇ ಇದ್ದ ಕಾಲೇಜಿಗೆ ಸೇರಿ ತನ್ನ ಎರಡೇ ವರ್ಷದ ಪದವಿ ಪೂರ್ವಶಿಕ್ಷಣದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಚಾಂಪಿಯನ್ ವಿದ್ಯಾಥಿಯಾಗಿ ಹೊರಹೊಮ್ಮಿದ. ಏರ್ಪಡಿಸಿದ್ದ ಭಾವಗೀತೆ, ಜಾನಪದ ಗೀತೆ, ಭಕ್ತಿಗೀತೆ, ರಂಗೋಲಿ ಮತ್ತು ಛದೃವೇಷದಲ್ಲಿ ಭಾಗವಹಿಸಿದ್ದ ಐವತ್ತಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಗಳಿಸಿದ್ದ. ಈ ವಿದ್ಯಾರ್ಥಿ ಮೊದಲ ಬಾರಿ ಹಾಡಿದಾಗ ಮೂದಲಿಸಿದ ಶಿಕ್ಷಕರೂ ಆ ಕಾರ್ಯಕ್ರಮದಲ್ಲಿ ಮುಂದೆ ಬಂದು ವಿದ್ಯಾರ್ಥಿಯನ್ನು ಅಭಿನಂದಿಸಿ, ‘‘ಇಷ್ಟು ಸುಮಧುರ ಹಾಡುಗಾರ ಹೇಗಾದಿಯೂ ರಾಮು’’ಎಂದರು.


ಆಗ ಆ ಹುಡುಗ ಹೇಳಿದ ಮಾತು ‘‘ ಎಲ್ಲಾ ನಿಮ್ಮಿಂದ ಸರ್, ಆವತ್ತು ಎಂಟನೇ ತರಗತಿಯಲ್ಲಿ ನನಗೆ ಹಾಡಲು ಬಾರದು ಎಂದು ನೀವು ನಕ್ಕಾಗ ನಾನು ಅದನ್ನೇ ಛಾಲೆಂಜ್ ಆಗಿ ತಗೊಂಡು ಪ್ರತೀಕ್ಷಣವೂ ಅಭ್ಯಾಸ ಮಾಡಿದೆ, ಅದಕ್ಕೆ ಇವತ್ತು ಈ ರೀತಿಯ ಹಾಡುಗಾರನಾದೆ’’ಎಂದ. ಶಿಕ್ಷಕರು ಭಾವುಕರಾಗಿ ಮತ್ತೊಮ್ಮೆ ಆ ಹುಡುಗನನ್ನು ಅಭಿನಂದಿಸಿ ಆಶೀರ್ವದಿಸಿದರು. ಅದೇ ಹುಡುಗ ಮುಂದೆ ಕಠಿಣ ಪರಿಶ್ರಮದಿಂದ ಓದಿ ಪ್ರೌಢ ಶಾಲಾ ಶಿಕ್ಷಕನಾಗಿ, ಹಾಡುಗಾರನಾಗಿ, ಬರಹಗಾರನಾಗಿ ನಿಮ್ಮ ಮುಂದೆ ಈ ಬರಹವಿಟ್ಟಿದ್ದಾನೆ. ‘‘ಹೊಗಳಿಕೆ ಮತ್ತು ತೆಗಳಿಕೆ ಎಂಬ ಎರಡು ವಿಷಯಗಳು ಸಾಧಾರಣವಾಗಿ ಪ್ರತಿಯೊಬ್ಬ ವ್ಯಕ್ತಿಗೂ ಅನುಭವಕ್ಕೆ ಬಂದಿರುತ್ತವೆ. ಹೊಗಳಿಕೆಗೆ ವಿಶಾಲಾರ್ಥವಿದೆ, ಇಲ್ಲಿ ಹೊಗಳಿಕೆಯನ್ನು ‘‘ಪ್ರಶಂಸೆಯಾಗಿ’’ ನೋಡಿದರೆ ಪ್ರಶಂಸೆಗೊಳಗಾದವನು ಸಂತೋಷಿತನಾಗುವುದರೊಂದಿಗೆ ಸ್ಪೂರ್ತಿಯನ್ನು ಪಡೆಯುತ್ತಾನೆ. ಹಾಗಾಗಿ ನಾವು ಯಾವಾಗಲೂ ಇನ್ನೊಬ್ಬರ ಸದ್ಗುಣಗಳನ್ನು ಪ್ರಶಂಸಿಸಬೇಕು ಎಂದು ಶಾಲಾ ಮಕ್ಕಳಾಗಿರಬೇಕಾದಾಗಲೇ ಕಲಿತಿರುತ್ತೇವೆ.


ಆದರೆ ತೆಗಳಿಕೆ ಯಾರೂ ಇಷ್ಟಪಡದ ಅತೀ ಕಹಿ ವಿಷಯ, ತೆಗಳಿಸಿಕೊಳ್ಳಲು ಯಾರೂ ಇಚ್ಚಿಸುವುದಿಲ್ಲ. ಅಷ್ಟೇ ಅಲ್ಲ ತೆಗಳಿಕೆ ಮನಸ್ಸಿಗೆ ನೋವು ನೀಡುತ್ತದೆ. ಉತ್ಸಾಹವನ್ನು ಕುಗ್ಗಿಸುತ್ತದೆ. ಆದರೆ ನಿಜವಾದ ಅದ್ಭುತ ಸತ್ಯವೆಂದರೆ,ಯಾರು ತೆಗಳಿಕೆಯನ್ನು ಸವಾಲಾಗಿ ಸ್ವೀಕರಿಸುತ್ತಾರೋ, ಅವರು ಮುಂದೆ ಮಹತ್ತಾದುದನ್ನು ಖಂಡಿತ ವಾಗಿಯೂ, ಸಾಧಿಸಿಯೇ ಸಾಧಿಸುತ್ತಾರೆ.


ಕೃಪೆ:ರಾಘವೇಂದ್ರ ಈ ಹೊರಬೈಲು.  

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು