ಕಥೆ-314
50 ಕೋಟಿ ರುಪಾಯಿ ಇದ್ದರೂ ಒಂದು ಕ್ಷಣವನ್ನೂ ಖರೀದಿಸಲು ಸಾಧ್ಯವಿಲ್ಲ.
ಆತನೊಬ್ಬ ಮಹತ್ವಾಕಾಂಕ್ಷಿ ಉದ್ಯಮಿ. ಬಿಜಿನೆಸ್ ಬೆಳೆಸಬೇಕು, ಹಣ ಮಾಡಬೇಕು ಎಂಬುದು ಅವನ ಜೀವನದ ಪರಮೋದ್ದೇಶ. ಹಣ, ಹಣ, ಹಣ ಎಂದು ದುಡ್ಡಿನ ಹಿಂದೆ ಬಿದ್ದು ಉಳಿದೆಲ್ಲವನ್ನೂ, ಉಳಿದವರೆಲ್ಲರನ್ನೂ ನಿರ್ಲಕ್ಷಿಸಿದ. ಹೆಂಡತಿ-ಮಕ್ಕಳಿಗೂ ಆತ ಸಮಯ ಕೊಡುತ್ತಿರಲಿಲ್ಲ. ಹೀಗೆ ಹೊಟ್ಟೆ ಬಟ್ಟೆ ಕಟ್ಟಿ ದುಡಿದು 50 ಕೋಟಿ ಆಸ್ತಿಯ ಒಡೆಯನಾದ. ಆದರೆ, ಅವನು ಅಷ್ಟಕ್ಕೇ ಸುಮ್ಮನಾಗಲಿಲ್ಲ. 50 ಕೋಟಿ ನೂರಾಗಲಿ, ನೂರು ಇನ್ನೂರಾಗಲಿ ಎಂದು ಆಶಿಸಿದ. ಒಂದು ದಿನ ಬೆಳಗೆದ್ದು ಇನ್ನೇನು ಆಫೀಸ್‌ಗೆ ಹೊರಡಬೇಕು ಎನ್ನುವಷ್ಟರಲ್ಲಿ ಅವನ ಮನೆಯಲ್ಲಿ ಆಗಂತುಕನೊಬ್ಬ ಕಾಣಿಸಿಕೊಂಡ. ‘ಏಯ್ ಯಾರೋ ನೀನು? ನನ್ನನ್ನು ನೋಡಲು ಬರುವಾಗ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಬೇಕು ಅಂತ ಗೊತ್ತಿಲ್ವಾ? ಅದ್ಹೆಂಗೆ ಒಳಗೆ ಬಂದೆ ನೀನು?’ ಎಂದು ಶ್ರೀಮಂತ ಕೂಗಾಡಿದ. ಅದಕ್ಕೆ ಆಗಂತುಕ ನಕ್ಕು ಹೇಳಿದ ‘ನಾನು ಬರುವಾಗ ಯಾರ ಅಪಾಯಿಂಟ್‌ಮೆಂಟ್ ಕೂಡ ಪಡೆಯೋ ಅವಶ್ಯ ಇಲ್ಲ. ನಾನ್ಯಾರೂಂತ ಗೊತ್ತಾಗಲಿಲ್ವಾ? ನಾನು ಮೃತ್ಯು! ನನ್ನನ್ನು ಯಾರೂ ಕರೆಯೋದಿಲ್ಲ. ನಾನು ಕರೆಯದೇ ಬರುವ ಅತಿಥಿ. ನಾನ್ಯಾರಿಗೂ ಕಾಣಿಸುವುದಿಲ್ಲ. ಯಾರನ್ನು ಕರೆದುಕೊಂಡು ಹೋಗಲು ಬರುತ್ತೀನೋ ಅವರಿಗೆ ಮಾತ್ರ ಕಾಣಿಸುತ್ತೇನೆ’.
‘ಇದು ಅನ್ಯಾಯ, ಅನ್ಯಾಯ. ನನ್ನನ್ನು ಯಾವಾಗ ಕರೆದುಕೊಂಡು ಹೋಗ್ತೀಯ?’ ಎಂದು ಶ್ರೀಮಂತ ಗಾಬರಿಯಿಂದ ಕೇಳಿದ. ‘ಈಗಲೇ, ಈ ಕ್ಷಣದಲ್ಲೇ’ ‘ಅಯ್ಯಯ್ಯೋ ಈಗಷ್ಟೇ ನಾನು 50 ಕೋಟಿ ಆಸ್ತಿ ಮಾಡಿಟ್ಟಿದ್ದೇನೆ. ಅದನ್ನು ಅನುಭವಿಸುವುದರೊಳಗೆ ಕರೆದುಕೊಂಡು ಹೋಗ್ತೀನಿ ಅಂತಿದ್ಯಾ. ಇದು ಸರಿಯಲ್ಲ. ನನಗೆ ಒಂದಷ್ಟು ಸಮಯ ಕೊಡು. ಸರಿ ಒಂದು ಒಪ್ಪಂದಕ್ಕೆ ಬರೋಣ. ನಾನು ನಿನಗೆ 25 ಕೋಟಿ ರುಪಾಯಿ ಕೊಡುತ್ತೇನೆ. ನನಗೆ ಒಂದು ತಿಂಗಳು ಸಮಯ ಕೊಡು. ಅಷ್ಟರೊಳಗೆ ನಾನು ಉಳಿದ ಹಣದಲ್ಲಿ ಜೀವನವನ್ನು ಅನುಭವಿಸುತ್ತೇನೆ’ ಎಂದು ಶ್ರೀಮಂತ ಅಂಗಲಾಚಿದ. ‘ನಿನ್ನನ್ನು ನೋಡಿದರೆ ನನಗೆ ನಗು ಬರುತ್ತದೆ ಕಣಯ್ಯಾ. ಈಗಲೂ ನೀನು ಅರ್ಧದಷ್ಟು ಹಣ ಮಾತ್ರ ಕೊಡಲು ತಯಾರಿದ್ದೀಯ. ಆದರೆ ನಿನಗೆ ನನ್ನ ಕೆಲಸದ ಬಗ್ಗೆ ಗೊತ್ತಿಲ್ಲ. ಇಲ್ಲಿಯವರೆಗಿನ ಜೀವನ ನಿನ್ನದಾಗಿತ್ತು. ಅದನ್ನು ಹೇಗೆ ಉಪಯೋಗಿಸಬೇಕೋ ಅದು ನಿನ್ನದೇ ಕೈಯಲ್ಲಿತ್ತು.
ಈಗ ನಿನ್ನ ಸಮಯ ಮುಗಿದಿದೆ. ನಾನು ಒಂದು ಕ್ಷಣವನ್ನೂ ನಿನಗೆ ಹೆಚ್ಚಿಗೆ ಕೊಡಲಾಗುವುದಿಲ್ಲ’ ಎಂದಿತು ಬಾಗಿಲಿನಲ್ಲಿ ನಿಂತಿದ್ದ ಸಾವು. ‘ಆಯ್ತು ಪೂರ್ತಿ 50 ಕೋಟಿಯೂ ನಿನ್ನದೇ. ಕನಿಷ್ಠ ಒಂದು ದಿನವನ್ನಾದರೂ ಕೊಡು ನನಗೆ’. ‘ಆಗುವುದೇ ಇಲ್ಲ. ಆದರೆ ನಿನಗೆ ಒಂದೆರಡು ನಿಮಿಷಗಳನ್ನು ಕೊಡುತ್ತೇನೆ. ಏನು ಮಾಡುತ್ತೀಯೋ ಮಾಡು’ ಎಂದಿತು ಮೃತ್ಯು. ಶ್ರೀಮಂತ ತನ್ನ ಕೋಣೆಗೆ ಓಡಿ ಹೋದ. ಅಲ್ಲಿದ್ದ ಪುಸ್ತಕದಿಂದ ಒಂದು ಹಾಳೆ ಹರಿದು ಅದರ ಮೇಲೆ ಹೀಗೆ ಗೀಚಿದ- ‘ಇಂದು ನನ್ನ ಬದುಕಿನ ಕೊನೆಯ ದಿನ. ಇವತ್ತು ನನಗೆ ಅರಿವಾದ ಸತ್ಯವೆಂದರೆ ನಿಮ್ಮ ಬಳಿ 50 ಕೋಟಿ ರುಪಾಯಿ ಇದ್ದರೂ ಅದರಿಂದ ಒಂದು ಕ್ಷಣವನ್ನೂ ಖರೀದಿಸಲು ಸಾಧ್ಯವಿಲ್ಲ. ಬದುಕಿನಲ್ಲಿ ಹಣವೊಂದೇ ಎಲ್ಲವೂ ಅಲ್ಲ. ನಾನು ದುಡ್ಡು ಮಾಡುವ ಆತುರದಲ್ಲಿ ನನ್ನಿಡೀ ಜೀವನವನ್ನು ವ್ಯರ್ಥವಾಗಿ ಕಳೆದುಬಿಟ್ಟೆ. ಇವತ್ತು ಖಾಲಿ ಕೈಯಲ್ಲಿ ಜೀವನ ಮುಗಿಸಿ ಹೋಗುತ್ತಿದ್ದೇನೆ. ನಾನು ಗಳಿಸಿದ ಹಣವೂ ನನ್ನೊಂದಿಗೆ ಬರುವುದಿಲ್ಲ, ತೆಗೆದುಕೊಂಡು ಹೋಗುವಂಥ ಸುಂದರ ನೆನಪುಗಳನ್ನೂ ನಾನು ಸೃಷ್ಟಿಸಿಲ್ಲ. ನೀವು ನನ್ನಂತಾಗಬೇಡಿ. ಪ್ರತಿ ಕ್ಷಣವನ್ನೂ ಆಸ್ವಾದಿಸುತ್ತಾ ಬದುಕಿ. ಸಾವು ಬಾಗಿಲಿನಲ್ಲಿ ನಿಂತಾಗ ಅದರೊಂದಿಗೆ ಹಣದ ವ್ಯವಹಾರಕ್ಕಿಳಿಯಬೇಡಿ’.
No comments:
Post a Comment