ಕಥೆ-323
ಮುತ್ತುಲಕ್ಷ್ಮಿಯ ಮೂಗುತಿಯ ಕತೆ!
ವಿಸ್ಮಯಕಾರಿಯಾದ ನಿಜಜೀವನದ ಘಟನೆಯೊಂದು ಇಲ್ಲಿದೆ. ಕಳೆದ ಶತಮಾನದಲ್ಲಿ ಶಿವಮೊಗ್ಗ ನಗರದಲ್ಲಿದ್ದ ಡಾ||ಕೃಷ್ಣಮೂರ್ತಿ ಎಂಬ ಜನಪ್ರಿಯ ವೈದ್ಯರನ್ನು ಕಾಣಲು ದೂರದ ಮದರಾಸಿನಿಂದ ರಾಮನಾಥ ಚೆಟ್ಟಿಯಾರ್ ಮತ್ತು ಅವರ ಮಗಳು ಮುತ್ತುಲಕ್ಷ್ಮಿ ಎಂಬುವವರು ಬಂದರು. ಚೆಟ್ಟಿಯಾರರು ತಮ್ಮ ಮಗಳು ಒಪ್ಪಿದ ಹುಡುಗನೊಡನೆ ಒಂದು ವರ್ಷದ ಹಿಂದೆ ಆಕೆಯ ಮದುವೆ ಮಾಡಿದ್ದರು. ಮದುವೆಯಾದ ಸ್ವಲ್ಪ ದಿವಸಕ್ಕೆ ಅವಳಿಗೆ ವಿಪರೀತ ತಲೆನೋವು ಶುರುವಾಯಿತು. ಅದರಿಂದ ಅವಳ ಜೀವನವು ದುರ್ಭರವಾಯಿತು. ತಂದೆ ಅವಳನ್ನು ಮದರಾಸಿನ ಅನೇಕ ಪ್ರಸಿದ್ಧ ವೈದ್ಯರುಗಳಿಗೂ, ವೆಲ್ಲೂರಿನ ಜಗತ್ಪ್ರಸಿದ್ಧ ಆಸ್ಪತ್ರೆಗೂ ಕರೆದುಕೊಂಡು ಹೋಗಿ ತೋರಿಸಿದ್ದರು. ಎಲ್ಲೂ ಪ್ರಯೋಜನವಾಗಲಿಲ್ಲ. ಅವಳನ್ನು ಪರೀಕ್ಷಿಸಿದ ವೈದ್ಯರುಗಳು ಅವಳಿಗೆ ಯಾವ ಖಾಯಿಲೆಯೂ ಇಲ್ಲವೆನ್ನುತ್ತಿದುದೂ ನಿಜ! ಆದರೆ ಆಕೆಗೆ ಸಹಿಸಲಾಗದಷ್ಟು ತಲೆನೋವು ಇರುತ್ತಿದುದೂ ನಿಜ!
ಚೆಟ್ಟಿಯಾರರು ಹತಾಶರಾಗಿದ್ದಾಗ ಸ್ನೇಹಿತರೊಬ್ಬರು ಈ ವೈದ್ಯರ ಬಗ್ಗೆ ಹೇಳಿ, “ಅವರು ಎಂತೆಂತಹುದೋ ಖಾಯಿಲೆಗಳನ್ನು ವಾಸಿಮಾಡಿದ್ದಾರಂತೆ. ಒಮ್ಮೆ ಅವರಿಗೂ ತೋರಿಸಿ ನೋಡಿ” ಎಂದಿದ್ದರು. ತಕ್ಷಣ ಚೆಟ್ಟಿಯಾರ್ರವರು ಮಗಳನ್ನು ಕರೆದುಕೊಂಡು ಕಾರಿನಲ್ಲಿ ಶಿವಮೊಗ್ಗಕ್ಕೆ ಧಾವಿಸಿದ್ದರು. ಚೆಟ್ಟಿಯಾರರು ಹೇಳಿದ ವಿವರಗಳನ್ನೆಲ್ಲಾ ಡಾ||ಕೃಷ್ಣಮೂರ್ತಿಯವರು ಶಾಂತವಾಗಿ ಕೇಳಿಸಿಕೊಂಡರು. ಆನಂತರ ಮುತ್ತುಲಕ್ಷ್ಮಿಯ ಮದುವೆಗೆ ಮುಂಚಿನ ಆರೋಗ್ಯದ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಚೆಟ್ಟಿಯಾರರು “ಮದುವೆಗೆ ಮುಂಚೆ ಅವಳ ಆರೋಗ್ಯ ಬಹಳ ಚೆನ್ನಾಗಿತ್ತು” ಎಂದರು. ನಂತರ ವೈದ್ಯರು ಮುತ್ತುಲಕ್ಷ್ಮಿಯ ಕಡೆ ತಿರುಗಿ “ಮಗೂ, ನಿನ್ನ ಮೂಗುಬೊಟ್ಟನ್ನು ತೆಗೆದು ನನಗೆ ಕೊಡುತ್ತೀಯಾ?” ಎಂದರು. ಈ ವಿಚಿತ್ರ ಬೇಡಿಕೆಗೆ ಆಕೆ ಅವಾಕ್ಕಾದಳು. ಆದರೂ ತಂದೆಯವರು ಕೊಡಲು ಸೂಚಿಸಿದಾಗ ಅವಳು ಮೂಗುತಿಯನ್ನು ತೆಗೆದು ಕೊಟ್ಟಳು. ಆನಂತರ ವೈದ್ಯರು “ಹೊರಗೆ ಹೋಗಿ ಸ್ವಲ್ಪ ಹೊತ್ತು ಸುತ್ತಾಡಿ ಬಾರಮ್ಮಾ” ಎಂದರು. ಆಕೆ ಮರುಮಾತನಾಡದೆ ಹೊರನಡೆದಳು.
ಹೊರಗಡೆ ಬಂದ ಮುತ್ತುಲಕ್ಷ್ಮಿ ಹಸಿರು ಗಿಡ-ಮರ, ಅಂದದ ಹೂವು-ಹಕ್ಕಿಗಳನ್ನು ನೋಡುತ್ತಾ ಅಡ್ಡಾಡಿದಳು. ಅಲ್ಲಿಯ ಬಿಸಿಲು ಮತ್ತು ಗಾಳಿ ಮುಖಕ್ಕೆ ಸೋಕಿದಂತೆ, ಒಂದು ಹೊಸ ಚೈತನ್ಯ, ಹುಮ್ಮಸ್ಸು, ಆನಂದ ಅವಳಿಗೆ ಉಂಟಾಯಿತು. ಸುಮಾರು ಅರ್ಧ ಘಂಟೆ ಸುತ್ತಾಡಿ ಒಳ ಬಂದಳು. ಅವಳು ಬಿಸಿಲಿಗೆ ಬೆವರಿದ್ದಳು. ಆದರೆ ಮುಖದಲ್ಲಿ ಸಂತಸದ ಕಳೆ ಮೂಡಿತ್ತು. ತಲೆನೋವು ಮಾಯವಾಗಿತ್ತು. ವೈದ್ಯರು “ಈಗ ಹೇಗನಿಸುತ್ತೇ?” ಪ್ರಶ್ನಿಸಿದರು. ಮುತ್ತುಲಕ್ಷ್ಮಿಯು “ಈಗ ನನಗೆ ತಲೆನೋವೇ ಇಲ್ಲ” ಉತ್ತರಿಸಿದಳು.
ಡಾ||ಕೃಷ್ಣಮೂರ್ತಿ ಹೇಳಿದರು “ಚೆಟ್ಟಿಯಾರ್ರವರೇ. ನಿಮ್ಮ ಮಗಳ ತಲೆನೋವಿಗೆ ಕಾರಣ ಅವಳ ಮೂಗುತಿ! ಅದರ ವಜ್ರ ಪ್ರತಿಫಲಿಸಿ ಅವಳ ಕಣ್ಣಿಗೆ ಆಯಾಸ ಮಾಡುತ್ತಿತ್ತು. ಅದರಿಂದ ತಲೆನೋವು ಬರುತ್ತಿತ್ತು. ಅದನ್ನು ತೆಗೆಯುತ್ತಲೆ ತಲೆನೋವು ಮಾಯವಾಯಿತು” ಎಂದು ಹೇಳಿ ಅವಳ ಮೂಗುತಿಯನ್ನು ವಾಪಸ್ಸು ಕೊಟ್ಟರು.
ಚೆಟ್ಟಿಯಾರ್ ಮತ್ತು ಅವರ ಮಗಳ ಆನಂದಕ್ಕೆ ಪಾರವೇ ಇರಲಿಲ್ಲ. ಚೆಟ್ಟಿಯಾರರು ವೈದ್ಯರಿಗೆ ಅಪಾರ ವಂದನೆಗಳನ್ನು ಸಲ್ಲಿಸಿದರು. ಮತ್ತು ನೋಟುಗಳ ಒಂದು ಕಂತೆಯನ್ನು ತೆಗೆದು ಡಾಕ್ಟರ ಮೇಜಿನ ಮೇಲಿಟ್ಟರು. ವೈದ್ಯರು “ಇಷ್ಟೆಲ್ಲ ದುಡ್ಡು ನನಗೆ ಬೇಡ. ನನ್ನ ಫೀಸು ಹತ್ತು ರೂಪಾಯಿ ಮಾತ್ರ. ಅಷ್ಟು ಕೊಟ್ಟರೆ ಸಾಕು” ಎಂದರು. ಚೆಟ್ಟಿಯಾರರು ಎಷ್ಟು ಒತ್ತಾಯ ಮಾಡಿದರೂ ಅದಕ್ಕಿಂತ ಜಾಸ್ತಿ ತೆಗೆದುಕೊಳ್ಳಲು ವೈದ್ಯರು ಒಪ್ಪಲಿಲ್ಲ. ವಿಸ್ಮಯಗೊಂಡ ಚೆಟ್ಟಿಯಾರ್ರವರು “ಭಗವಂತ! ಜಗತ್ತಿನಲ್ಲಿ ಇಂತಹ ಅದ್ಭುತ ವ್ಯಕ್ತಿಗಳು ಇದ್ದಾರೆಯೇ?” ಎಂದುಕೊಳ್ಳುತ್ತಾ ಹೊರಟರು.
ಡಾ||ಕೃಷ್ಣಮೂರ್ತಿಯವರ ಪುಣ್ಯಸ್ಮರಣೆಗೆ ಪ್ರಣಾಮಗಳು. ಹಾಗೂ ಭಾರತೀಯ ವಿದ್ಯಾಭವನದ ಭವನ್ಸ್ ಜರ್ನಲ್ ಮಾಸಪತ್ರಿಕೆಯಲ್ಲಿ ೧೯೯೫ರಲ್ಲಿ ಪ್ರಕಟವಾಗಿದ್ದ ಈ ಘಟನೆಯನ್ನು ಮನ್ನಾರ್ ಕೃಷ್ಣರಾವ್ ಮಾಸ್ತರರು ತಮ್ಮ ಬದುಕು-ಬೆಳಕು ಭಾಗ-೧ರಲ್ಲಿ ಉಲ್ಲೇಖಿಸಿದ್ದಾರೆ. ಅವರಿಗೂ ಧನ್ಯವಾದಗಳು.
ಈ ಶತಮಾನದ ಹೈಟೆಕ್ ಆಸ್ಪತ್ರೆಗಳನ್ನೂ, ಅದರ ವೈದ್ಯರುಗಳ ದುಬಾರಿ ಚಿಕಿತ್ಸೆಗಳನ್ನೂ ಕಂಡಿರುವ ನಮ್ಮೆಲ್ಲರಿಗೂ ಈ ಘಟನೆ ವಿಸ್ಮಯಕಾರಿ ಎನಿಸುತ್ತದಲ್ಲವೇ
*ಎಸ್.ಷಡಕ್ಷರಿ*
No comments:
Post a Comment