ಕಥೆ-341
ನಿಮ್ಮ ಕಾಯಂ ವಿಳಾಸ ಯಾವುದು ಹೇಳುತ್ತೀರಾ?
ಕುತೂಹಲಕಾರಿಯಾದ ಈ ಪ್ರಶ್ನೆಯನ್ನು ನಮ್ಮ ಬದುಕಿನುದ್ದಕ್ಕೂ ಕೇಳಿಸಿಕೊಳ್ಳುತ್ತಲೇ ಬಂದಿದ್ದೇವಲ್ಲವೇ? ನಿಮ್ಮ ಕಾಯಂ ವಿಳಾಸ ಯಾವುದು? ಎಂಬ ಪ್ರಶ್ನೆಯನ್ನು ನಾವು ಪ್ರಾಥಮಿಕ ಶಾಲೆಗೆ ಪ್ರವೇಶ ಪಡೆಯಲು ಹೋದಾಗ ಕೇಳಲಾಗಿತ್ತು. ಮಾಧ್ಯಮಿಕ ಶಾಲೆಗೆ, ಪ್ರೌಢಶಾಲೆಗೆ ಸೇರಿಕೊಳ್ಳುವಾಗ, ಕಾಲೇಜಿಗೆ ಸೇರುವಾಗಲೂ ಇದೇ ಪ್ರಶ್ನೆಯನ್ನು ಕೇಳಲಾಗಿತ್ತು. ಮುಂದೆ ಕೆಲಸಕ್ಕೆ ಸೇರುವಾಗ, ಸ್ವಂತ ಮನೆ ಕಟ್ಟಿಕೊಳ್ಳಲು ನಿವೇಶನ ಹುಡುಕುವಾಗ, ಮದುವೆಯ ರಿಜಿಸ್ಟ್ರೇಷನ್ ಮಾಡಿಕೊಳ್ಳುವಾಗ, ಹೀಗೆ ಬದುಕಿನ ಅನೇಕ ಘಟ್ಟಗಳಲ್ಲಿ ಈ ಪ್ರಶ್ನೆಯನ್ನು ನಮಗೆ ಕೇಳಲಾಗಿದೆ!
ವಿಚಿತ್ರವೇನೆಂದರೆ ಈ ಕಾಯಂ ಪ್ರಶ್ನೆಗೆ ನಮ್ಮ ಉತ್ತರ ಕಾಯಮ್ಮಾಗಿ ಒಂದೇ ಆಗಿದೆಯೇ? ಇಲ್ಲವೇ ಇಲ್ಲ! ಏಕೆಂದರೆ ನಮ್ಮ ಕಾಯಂ ವಿಳಾಸ ಹತ್ತಾರು ಬಾರಿ ಬದಲಾಗಿದೆ. ಹಾಗಾಗಿ ಪ್ರಶ್ನೆ ಒಂದೇ ಆದರೂ ಉತ್ತರಗಳು ಮಾತ್ರ ಬೇರೆ ಬೇರೆಯಾಗಿದೆ. ಎಲ್ಲ ನಿವಾಸಗಳೂ, ವಿಳಾಸಗಳೂ ತಾತ್ಕಾಲಿಕವೇ! ನಿವಾಸ ತಾತ್ಕಾಲಿಕ ಎನ್ನುವುದರ ಬಗೆಗಿನ ಘಟನೆಯೊಂದು ಇಲ್ಲಿದೆ. ಹಿಂದಿನ ಕಾಲದಲ್ಲಿ ಹೋಟೆಲ್‌ಗಳು ಇರುತ್ತಿರಲಿಲ್ಲ. ಆಗ ಯಾತ್ರಿಗಳು ಪರವೂರುಗಳಲ್ಲಿ ಒಂದೆರಡು ದಿನ ವಸತಿ ಮಾಡಬೇಕಾಗಿ ಬಂದರೆ ಅವರ ಅನುಕೂಲಕ್ಕಾಗಿ ಮುಸಾಫಿರ್ ಖಾನೆಗಳು (ಧರ್ಮಛತ್ರಗಳು) ಇರುತ್ತಿದ್ದವು. ಒಬ್ಬ ಸುಲ್ತಾನರಿಗೆ ತಮ್ಮ ಅರಮನೆಯ ಬಗ್ಗೆ ಬಹಳ ಹೆಮ್ಮೆಯಿತ್ತು.
ಒಂದು ದಿನ ಸುಲ್ತಾನರು ಆಸ್ಥಾನದಲ್ಲಿ ಕುಳಿತಿದ್ದಾಗ ಒಬ್ಬ ಫಕೀರರು ಅಲ್ಲಿಗೆ ಬಂದರು. ಸಾಮಾನ್ಯವಾಗಿ ಫಕೀರರು, ದರ್ವೇಶಿಗಳನ್ನು ಕಂಡರೆ ಸುಲ್ತಾನರಿಗೆ ಬಹಳ ಗೌರವ. ಹಾಗಾಗಿ ಸುಲ್ತಾನರು ಆ ಫಕೀರರನ್ನು ಆದರದಿಂದ ಸ್ವಾಗತಿಸಿದರು. ಆಸನ ಸ್ವೀಕರಿಸಲು ಕೇಳಿಕೊಂಡರು. ಆದರೆ ಫಕೀರರು ನೇರವಾಗಿ ಸುಲ್ತಾನರ ಸಿಂಹಾಸನದ ಪಕ್ಕದಲ್ಲಿ ನಿಂತು ಕೊಂಡರು. ತಮ್ಮ ಜೋಳಿಗೆಯಿಂದ ಒಂದು ಚಾದರವನ್ನು ತೆಗೆದರು. ಅದನ್ನು ನೆಲದ ಮೇಲೆ ಹಾಸಿದರು. ಅದರ ಮೇಲೆ ಮಲಗಿಬಿಟ್ಟರು.
ಸುಲ್ತಾನರಿಗೆ ಫಕೀರರ ವರ್ತನೆ ವಿಸ್ಮಯವನ್ನುಂಟು ಮಾಡಿತು. ಅವರು ‘ತಾವೇನು ಮಾಡುತ್ತಿದ್ದೀರೋ ನನಗೆ ಅರ್ಥವಾಗುತ್ತಿಲ್ಲ’ ಎಂದು ಕೇಳಿದರು. ಆಗ ಫಕೀರರು ‘ಒಂದೆರಡು ದಿನಗಳ ಕಾಲ ನಾನು ಈ ಮುಸಾಫಿರ್ ಖಾನೆಯಲ್ಲಿ ಇರಬೇಕೆಂದು ಕೊಂಡಿದ್ದೇನೆ’ ಎಂದರು. ಸುಲ್ತಾನರಿಗೆ ಕೊಂಚ ಸಿಟ್ಟು ಬಂದಿತು, ಅವರು ‘ಫಕೀರರೇ, ಇದು ನನ್ನ ಅರಮನೆ! ತಾವು ಇಲ್ಲಿ ಒಂದೆರಡು ದಿನಗಳ ಕಾಲ ಇರಬೇಕೆಂದಿದ್ದರೆ, ತಾವು ಧಾರಾಳವಾಗಿ ಇರಬಹುದು. ಆದರೆ ಇದನ್ನು ಯಾತ್ರಿಗಳು ಬಂದು ಒಂದೆರಡು ದಿನ ಇದ್ದು ಹೋಗುವ ಮುಸಾಫಿರ್ ಖಾನೆ ಎಂದೇಕೆ ಕರೆಯುತ್ತೀರಿ?’ ಎಂದು ಸಿಟ್ಟಿನಿಂದಲೇ ಕೇಳಿದರು.
ಫಕೀರರು ನಸುನಗುತ್ತಲೇ ‘ಇದು ನಿಮ್ಮ ಅರಮನೆಯೇ? ಮುಸಾಫಿರ ಖಾನೆ ಅಲ್ಲವೇ? ಹಾಗಾದರೆ ನಿಮಗಿಂತ ಮೊದಲು ಇಲ್ಲಿ ವಾಸವಾಗಿದ್ದವರು ಯಾರು?’ ಎಂದು ಕೇಳಿದರು. ಸುಲ್ತಾನರು ‘ನಮ್ಮ ತಂದೆಯವರು ಇಲ್ಲಿ ವಾಸ ಮಾಡುತ್ತಿದ್ದರು’ ಎಂದರು. ಫಕೀರರು ‘ಅವರಿಗೂ ಮೊದಲು ಇಲ್ಲಿ ಇದ್ದವರು ಯಾರು?’ ಎಂದು ಪ್ರಶ್ನಿಸಿದರು. ಸುಲ್ತಾನರು ಕೊಂಚ ಅಸಹನೆಯಿಂದಲೇ ‘ನಮ್ಮ ತಾತನವರು ಇಲ್ಲಿ ವಾಸವಾಗಿದ್ದರು. ಅದಕ್ಕೂ ಮುಂಚೆ ನಮ್ಮ ಮುತ್ತಾತಂದಿರೂ,
ಅಷ್ಟೇ ಏಕೆ, ನಮ್ಮ ವಂಶದವರೆಲ್ಲಾ ಇದೇ ಅರಮನೆಯಲ್ಲಿ ಜೀವನ ನಡೆಸಿದರು’ ಎಂದರು.
ಆಗ ಫಕೀರರು ನಿಮ್ಮ ವಂಶದವರಿಗಿಂತ ಮುಂಚೆ ಇಲ್ಲಿ ಯಾರು ವಾಸ ಮಾಡಿದ್ದರು?
ಯಾರೋ ವಾಸ ಮಾಡಿದ್ರು..
‘ನಿಮಗಿಂತ ಮೊದಲು ನಿಮ್ಮ ವಂಶದವರೆಲ್ಲಾ ಇಲ್ಲಿ ಇದ್ದು ಹೋಗಿದ್ದಾರೆ. ಅದಕ್ಕೂ ಮುಂಚೆ ಯಾರೋ ವಾಸ ಮಾಡಿ ಹೋಗಿದ್ದಾರೆ, ನಿಮ್ಮ ನಂತರ ಬರುವ ಮುಂದಿನ ಸುಲ್ತಾನರೂ ಇಲ್ಲಿಯೇ ಇದ್ದು ಹೋಗಲಿದ್ದಾರೆ. ಹಾಗಿದ್ದರೆ ಇದು ಮುಸಾಫಿರ ಖಾನೆಯಲ್ಲದೇ ಮತ್ತೇನು? ಒಂದೆರಡು ದಿನಗಳ ಬದಲು ಕೆಲವು ವರ್ಷಗಳು ಇದ್ದಿರಬಹುದು. ಅಷ್ಟೇ ವ್ಯತ್ಯಾಸ’ ಎಂದು ಹೇಳಿದಾಗ, ಸುಲ್ತಾಾನರಿಗೆ ಆಘಾತವಾದಂತಾಯಿತು. ಸಾಮಾನ್ಯ ಸ್ಥಿತಿಗೆ ಬರಲು ಕೊಂಚ ಹೊತ್ತು ಹಿಡಿಯಿತು!
ಈಗ ನಾವು ಯೋಚಿಸುವ ಸಮಯ! ನಮ್ಮ ಮನೆಗಳೂ (ಅರಮನೆಗಳು) ಮುಸಾಫಿರ ಖಾನೆಗಳೇ ಅಲ್ಲವೇ? ನಮ್ಮ ಖಾಯಂ ವಿಳಾಸಗಳು ತಾತ್ಕಾಲಿಕ ವಿಳಾಸಗಳೇ ಅಲ್ಲವೇ?
ಇಲ್ಲಿ ಯಾರು ಖಾಯಂ ವಿಳಾಸ ಹೊಂದಿಲ್ಲ. ಖಾಯಂ ಉಳಿಯುವ ಕೆಲಸ ಮಾಡಬಹುದು.ಮಾಡುವ ಪ್ರಯತ್ನ ಒಂದಿದ್ದರೆ ಸಮಯವು ನಮ್ಮದೇ ಕೆಲಸವು ನಮ್ಮದೇ.. ನಮ್ಮ ಹೆಜ್ಜೆ ಗುರುತುಗಳನ್ನು ಮಾತ್ರ ಇಲ್ಲಿ ಬಿಟ್ಟು ಹೋಗಬಹುದು..
👍💐
No comments:
Post a Comment