ಕಥೆ-342
ಕಾಡುಗಳು ನಮ್ಮ ಗ್ರಹದ ಶ್ವಾಸಕೋಶಗಳು,
ಕಾಡುಗಳು ನಮ್ಮ ಗ್ರಹದ ಶ್ವಾಸಕೋಶಗಳು, ಮತ್ತು ನಾವು ಅವುಗಳನ್ನು ಸಂರಕ್ಷಿಸಬೇಕು. ನಾವು ಕಾಡುಗಳನ್ನು ಕಳೆದುಕೊಂಡರೆ, ನಾವು ತಾಪಮಾನದಲ್ಲಿ ಏರಿಕೆಯನ್ನು ಅನುಭವಿಸುತ್ತೇವೆ, ಪರಿಸರದಲ್ಲಿ ಏರುಪೇರು ಪ್ರಕೃತಿ ವಿಕೋಪಗಳು ನಮ್ಮನ್ನು ಕಾಡುತ್ತವೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ.
ಅರಣ್ಯವು ನಮ್ಮ ಪರಿಸರ ವ್ಯವಸ್ಥೆಯ ಪ್ರಮುಖ ಭಾಗವಾಗಿದ್ದು ಅದನ್ನು ರಕ್ಷಿಸಬೇಕಾಗಿದೆ. ಮರಗಳು ದ್ಯುತಿಸಂಶ್ಲೇಷಣೆಯ ಮೂಲಕ ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದುಕೊಂಡು ಆಮ್ಲಜನಕವನ್ನು ಗಾಳಿಗೆ ಬಿಡುಗಡೆ ಮಾಡುತ್ತವೆ. ಅರಣ್ಯದಲ್ಲಿನ ಮರಗಳ ಸಾಂದ್ರತೆಯು ಪರಿಸರ ವ್ಯವಸ್ಥೆಯ ಆರೋಗ್ಯದ ಸೂಚಕವಾಗಿದೆ. ಇದು ಎಲ್ಲಾ ಜೀವಿಗಳಿಗೆ ಆಹಾರ, ಆಶ್ರಯ ಮತ್ತು ಶಕ್ತಿಯ ಮೂಲವಾಗಿಯೂ ಕಾರ್ಯನಿರ್ವಹಿಸುತ್ತದೆ.
ಹಸಿರು ಹೊದ್ದ ಮರಗಳ ಸಾಲು., ಹಕ್ಕಿಗಳ ಕಲರವ, ವನ್ಯಪ್ರಾಣಿಗಳ ಸ್ವಚ್ಛಂದ ವಿಹಾರ, ಮುಗಿಲೆತ್ತರಕ್ಕೆ ಬೆಳೆದ ಮರಗಳೊಂದಿಗೆ ಆಕಾಶಕ್ಕೆ ದಿಟ್ಟಿಸಿದರೆ ಸಿಗುವ ಅನುಭೂತಿ., ಸಂಜೆಯಾದ ನಂತರ ಬದಲಾಗುವ ಅರಣ್ಯ ನೋಡುವ ರೀತಿ, ಗದ್ದಲಕ್ಕೆ ಆಸ್ಪದ ಕೊಡದೇ ನೀರವ ಮೌನವದ ಆ ಕ್ಷಣಗಳು ಎಂತಹ ಒತ್ತಡಗಳನ್ನು ದೂರ ಮಾಡುವ ಶಕ್ತಿ ಪಡೆದಿವೆ. ಕಾಡೆಂಬುದು ತಾಯಿಯಂತೆ ಸಂತೈಸುವ ಮಹಾ ಒಡಲು. ಅಲ್ಲಿ ಜಗತ್ತಿನ ಎಲ್ಲ ಜಂಝಡಗಳನ್ನು ಮರೆತು ಧ್ಯಾನಿಯಾಗಿ ಕುಳಿತರೆ ಸಿಗುವ ಆನಂದವನ್ನು ಅನುಭವಿಸಿಯೇ ತೀರಬೇಕು.
ಒಂದು ಪ್ರದೇಶದಲ್ಲಿ ಉತ್ತಮ ಆರೋಗ್ಯ ಹೊಂದಲು ಕನಿಷ್ಠ (ಮೂರನೇ ಒಂದು ಭಾಗದಷ್ಟು)
33.33% ರಷ್ಟಾದರೂ ಕಾಡು ಇರಲೇಬೇಕು. ಭಾರತದ ಅರಣ್ಯ ಪ್ರದೇಶ ಕೇವಲ 24.60% ಮಾತ್ರ.. ಇನ್ನು ಕರ್ನಾಟಕದ ಅರಣ್ಯ ಪ್ರದೇಶ ಕೇವಲ 22.61%ರಷ್ಟು ಮಾತ್ರ. ಅದರಲ್ಲೂ *ನಮ್ಮ ಕೊಪ್ಪಳ* ಜಿಲ್ಲೆಯ ಒಟ್ಟು ಅರಣ್ಯ ಪ್ರದೇಶ ಕೇವಲ *7.64 %* ಈ ಅಂಕಿ ಸಂಖ್ಯೆಗಳು ನಮಗೆ ಎಚ್ಚರಿಕೆ ಗಂಟೆಗಳಾಗಿವೆ ಎಂದು ಹೇಳಬಹುದು..
ಈ ಬೇಸಿಗೆಯಲ್ಲಿ ನಮ್ಮ ಮನೆಯ ನಲ್ಲಿಯಲ್ಲಿ ನೀರು ನಿಂತು ಹೋದಾಗ, ಊರಿನಲ್ಲಿ ಬಿಸಿಲ ಗಾಳಿ ಬೀಸಿದಾಗ ಸರಿಯಾಗಿ ಮಳೆ ಆಗದಿರುವಾಗ ಅಬ್ಬಬ್ಬಾ ಎಂತಹ ಕಾಲ ಬಂದು ಬಿಟ್ಟಿತಲ್ಲ ಎನ್ನುತ್ತೇವೆ. ಇದೆಲ್ಲ ಗಿಡಮರಗಳ ಕೊರತೆಯ ಕಾಣ್ಕೆ. ಏಕೆಂದರೆ ಕಾಡಿದ್ದರೆ ಮಳೆ, ಮಳೆಯಿದ್ದರೆ ನೀರು. ಮರಗಳಿದ್ದರೆ ತಂಗಾಳಿ, ಬದುಕು ನಿರಾಳ. ಜಾಗತಿಕ ತಾಪಮಾನದ ಕುರಿತು ಹತ್ತಾರು ಕಥಾನಕಗಳನ್ನು ಕೇಳಿ ಮುಂದೇನಾಗುವುದೋ ಎಂಬ ಆತಂಕ ನಮ್ಮ ಕಣ್ಣ ಮುಂದೆ ಬಂದರೂ, ಕನಿಷ್ಠ ಒಂದು ಸಸಿಯನ್ನಾದರೂ ನೆಡೋಣ. ಅದನ್ನು ಮರವಾಗಿಸುವೆಡೆಗೆ ಗಮನ ಕೊಡೋಣ ಎನ್ನುವ ಶಪಥ ಮಾಡಿಕೊಂಡರೆ ಜಾಗತಿಕ ತಾಪಮಾನದ ಆತಂಕಕ್ಕೆ ಪರಿಹಾರವನ್ನು ನಾವೇ ಕಂಡುಕೊಳ್ಳಬಹುದು. ಕಾಡನ್ನು ನಾವು ಪ್ರೀತಿಸುವುದೂ ಒಂದು ಅನಿವಾರ್ಯ ಮಾರ್ಗ, ಅಲ್ಲದೆ ಅದು ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ.
🌱🌱🌱🌱🌱

No comments:
Post a Comment