ಬೀಳ್ಕೊಡುವ ಸಮಾರಂಭ
ನೂರಾರು ಕನಸಿನ ಪುಸ್ತಕವ ಹೆಗಲೇರಿಸಿ, ಆತ್ಮವಿಶ್ವಾಸದ ಸಮವಸ್ತ್ರ ಧರಿಸಿ, ನವ ಗೆಳೆತನದ ಜಡೆಯ ಹೆಣೆಸಿ, ಹೊಸದೊಂದು ಚೇತನದೊಂದಿಗೆ ಪುಟ್ಟ ನಗುವಿನೊಂದಿಗೆ - ಜ್ಞಾನವ ಅರಸಿ ಬಂದ ವಿದ್ಯಾರ್ಥಿಗಳೇ !
ಗೆಳೆತನದ ಉಯ್ಯಾಲೆಯಲಿ ತೇಲಾಡಿ, ಸಾವಿರ ನೆನಪಿನ ಗೋಪುರ ಕಟ್ಟಿಸಿ, ತುಸು ಮುನಿಸಿನ ಮೊಗವ ಅರಳಿಸಿ, ಮತ್ತದೇ ನಿರೀಕ್ಷೆಯೊಂದಿಗೆ ಕಣ್ಣಂಚಿನ ಕಣ್ಣೀರಿನೊಂದಿಗೆ ಶಾಲೆಯಿಂದ ಬೀಳ್ಕೊಡುವ ನಿಮಗೆ ಸಿಹಿ ಕಹಿ ಬಾಳಲ್ಲಿ ಕಹಿ ಮರೆಯಾಗಿ ಸಿಹಿ ಜೀವನ ಜಿನುಗುತಿರಲಿ..
ಸಿಹಿ ಕಹಿಗಳ ಸಾಂಗತ್ಯ ಅದುವೇ ಯುಗಾದಿ
ನೋವು ನಲಿವುಗಳ ಆತಿಥ್ಯ ಅದೇ ಬದುಕಿನ ಹಾದಿ
ವಿದ್ಯಾರ್ಥಿ ಮತ್ತು ಶಿಕ್ಷಕರ ಅಗಲಿಕೆ ಅದೇ ಬೀಳ್ಕೊಡುವ ಸಮಾರಂಭ..
ಪ್ರತಿಯೊಬ್ಬರ ಜೀವನದಲ್ಲಿ ಭೇಟಿ ಆಕಸ್ಮಿಕ, ಆದರೆ ಅಗಲಿಕೆ ಅನಿವಾರ್ಯ. ಮುಂದಿನ ಉನ್ನತ ವ್ಯಾಸಂಗ ಮಾಡಲು ಶಾಲೆಯಿಂದ ಬೀಳ್ಕೊಡಲ್ಪಡುವುದು ಅನಿವಾರ್ಯ ಆದರೆ ಮುಂದಿನ ಹಂತ ಬಹಳಷ್ಟು ಜವಾಬ್ದಾರಿ ಹೊಂದಿದೆ ಹಾಗಾಗಿ ಮುಂದಿನ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕೈಯಲ್ಲಿದೆ.
ಉತ್ತಮ ಭವಿಷ್ಯಕ್ಕೆ ಉತ್ತಮ ಹವ್ಯಾಸ ಅನಿವಾರ್ಯ...
ಹವ್ಯಾಸ ಬದಲಿಸು ಹಣೆಬರಹ ಬದಲಾದಿತು. ನೋಡುವ ನೋಟ ಬದಲಿಸು ಜೀವನದ ಚಿತ್ರಣ ಬದಲಾದಿತು. ನೀನು ನಡೆಸುವ ಹಡಗನ್ನು ಬದಲಿಸಬೇಕೆಂದೇನಿಲ್ಲ ಕೇವಲ ದಿಕ್ಕನ್ನು ಬದಲಿಸಿದರೆ ಸಾಕು ಗುರಿ ತಲುಪಲು, ನಿಮ್ಮ ಜೀವನ ಯಶಸ್ಸಿನ ಗುರಿಯತ್ತ ತಲುಪಲು..
ಈ ವರ್ಷದ ಬೀಳ್ಕೊಡುಗೆ ಸಮಾರಂಭ ನಮ್ಮ ಮುಖ್ಯೋಪಾಧ್ಯಾಯರಾದ ಶ್ರೀ ಮುಕುಂದ ಭಗವತಿ ಅವರ ನೇತೃತ್ವದಲ್ಲಿ ಉಳಿದ ಸಿಬ್ಬಂದಿಗಳ ಸಹಕಾರದಿಂದ ಇಂದು ಅರ್ಥಪೂರ್ಣವಾಗಿ ನೆರವೇರಿತು.. ಇದಕ್ಕೆ ಸಂಪೂರ್ಣ ಬೆಂಬಲ ನೀಡಿದವರು ನಮ್ಮ ಎಸ್.ಡಿ.ಎಮ್.ಸಿ ಯವರು..
ಅಧ್ಯಕ್ಷರಾದ ಶ್ರೀ ನಿಂಗಪ್ಪ ದೇವರುಗುಡಿ ಉಪಾಧ್ಯಕ್ಷರಾದ ಶ್ರೀ ಪ್ರಾಣೇಶಗೌಡ ಮಾಲಿಪಾಟೀಲ್, ಸದಸ್ಯರುಗಳಾದ ಮರ್ತುಜಾ ನದಾಫ್, ಮಲ್ಲಿಕಾರ್ಜುನ ಕೆಂಪಣ್ಣವರ, ಶ್ರೀ ಹರಗೇರಿಮಠ ಇತರ ಸದಸ್ಯರು ಸಹ ಭಾಗಿಯಾಗಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ನಮ್ಮ ಶಾಲೆ ಬೀಳ್ಕೊಡುವ ಸಮಾರಂಭಕ್ಕೆ ಮೊಟ್ಟಮೊದಲ ಬಾರಿಗೆ ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ವಿಶೇಷ ಅತಿಥಿಗಳಾದ ಪಕ್ಕದ ಮುಧೋಳ ಗ್ರಾಮದ ವೈದ್ಯರು ಸಮಾಜ ಸೇವಕರು ಮತ್ತು ಮಾರ್ಗದರ್ಶಕರಾದ ಡಾ:ಅಂದಾನಯ್ಯ ಶಾಡ್ಲಗೇರಮಠ ಅವರು ಆಗಮಿಸಿದ್ದರು..
ಕಾರ್ಯಕ್ರಮಕ್ಕೆ ಬಂದಂತ ಎಲ್ಲರನ್ನು ಗಣಿತ ಶಿಕ್ಷಕರು ಅಚ್ಚುಕಟ್ಟಾಗಿ ಸ್ವಾಗತಿಸಿದರು..
ಡಾ:ಅಂದಾನಯ್ಯ ಶಾಡ್ಲಗೇರಮಠ ಅವರು ತಾಯಿಯ ಪ್ರೀತಿಯ ಎಷ್ಟು ದೊಡ್ಡದು, ಮಕ್ಕಳಲ್ಲಿ ಮೌಲ್ಯಗಳು ಇರಬೇಕು, ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ನಿಮ್ಮ ಹಿರೇಮ್ಯಾಗೇರಿ ಶಿಕ್ಷಕರ ಸದ್ಬಳಕೆ ಮಾಡಿಕೊಳ್ಳಿ ಎಂದರು, ಅದಲ್ಲದೆ 10ನೇ ತರಗತಿ ಮುಗಿದ ನಂತರ ಯಾವ ಯಾವ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡರೆ ಏನೆಲ್ಲಾ ಆಗಬಹುದು ಎಂದು ಸಹ ಸಾಕಷ್ಟು ಮಾಹಿತಿ ಕೊಟ್ಟರು. ಮಕ್ಕಳಿಗೆ ಒಂದು ಹೊಸ ಹುಮ್ಮಸ್ಸನ್ನು ನೀಡಿದರು.
ಮಕ್ಕಳು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದ ಶ್ರೀ ಮಹಾಂತೇಶ ಗಾಣಿಗೇರ ಯುವ ಮುಖಂಡರು, ಮುಂದಿನ ಭವಿಷ್ಯ ಚೆನ್ನಾಗಿರಲಿ ಎಂದು ಶುಭ ಹಾರೈಸಿದರು..
ಪ್ರಾಥಮಿಕ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಬಸವರಾಜ್ ರಾಮಶೆಟ್ಟಿ ಅವರು ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು..
ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿಯಾದ ಶ್ರೀ ಜಯಶ್ರೀ ಮೇಡಂ ಅವರು ಮಕ್ಕಳು ತಂದೆ ತಾಯಿ ಅವರ ಹೆಸರು ತರುವಂತ ಕೆಲಸ ಮಾಡಬೇಕು ಒಂದು ಚಿಕ್ಕ ಇರುವೆ ನಮಗೆ ಸಾಧನೆಗೆ ಸ್ಫೂರ್ತಿ ಆಗುತ್ತದೆ, ರಾಮಾಯಣ ಮಹಾಭಾರತದ ಉತ್ತಮ ನೀತಿಗಳನ್ನ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು..
ಪ್ರಶಿಕ್ಷಣಾರ್ಥಿಯಾದ ಕುಮಾರಿ ಐಶ್ವರ್ಯ ಮೇಡಂ ಅವರು ಇಗಿನಿಂದಲೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮಕ್ಕಳು ತಯಾರಾಗಬೇಕೆಂದು ಸಲಹೆ ನೀಡಿದರು..
ಮಕ್ಕಳು ನಮ್ಮ ಶಾಲೆಗೆ ಉತ್ತಮ ಫಲಿತಾಂಶ ತರಬೇಕೆಂದು ಮುಂದಿನ ಭವಿಷ್ಯ ಚೆನ್ನಾಗಿರಲಿ ಎಂದು ನಮ್ಮ ಮುಖ್ಯೋಪಾಧ್ಯಾಯರು ಶುಭ ಹಾರೈಸಿದರು..
ಎಲ್ಲರಿಗೂ ವಂದಿಸುವ ಮೂಲಕ ಉತ್ತಮ ನಿರೂಪಣೆಯನ್ನು ಸಮಾಜ ವಿಜ್ಞಾನ ಶಿಕ್ಷಕರು ನಿರ್ವಹಿಸಿದರು..
ಊಟದ ನಂತರ ಮಕ್ಕಳಾದ ಸ್ನೇಹ ಸಹನಾ ಪ್ರತಿಭಾ ರಕ್ಷಿತಾ
ಅಲ್ಮಾಸ್ ಪೂಜಾ ಸಹನಾ ಬೇರಗಿ
ವಿಶ್ವನಾಥ್ ಮಹಾಂತೇಶ್ ಸೊಹಿಲ್ ಪ್ರಸನ್ನ ತಮ್ಮ ಅನುಭವಗಳನ್ನು ಕವನ, ಚಟುವಟಿಕೆಗಳ ಮೂಲಕ ವ್ಯಕ್ತಪಡಿಸಿದರು
ನಂತರ ನಮ್ಮ ಶಾಲೆಯ ನಿವೃತ್ತ ಶಿಕ್ಷಕರಾದ ಶ್ರೀ ಶರಣಪ್ಪ ಸಿಳ್ಳಿನ ಸರ್ ಅವರು ಮಕ್ಕಳು ಓದುವ ವಯಸ್ಸಿನಲ್ಲಿ ಚೆನ್ನಾಗಿ ಓದಿ ಮುಂದೆ ನಿಮ್ಮ ಸ್ವಂತ ದುಡಿಮೆ ಮಾಡುವ ಉತ್ತಮ ಪ್ರಜೆಗಳಾಗಿ ಎಂದು ಸಲಹೆ ನೀಡಿದರು..
ನಂತರ ಪಲ್ಲೆದ ಸರ್ ಕವನ ವಾಚನದ ಮೂಲಕ ಮಕ್ಕಳಿಗೆ ಶುಭ ಹಾರೈಸಿದರು, ಅಲ್ಲದೆ ಸಮಾಜ ವಿಜ್ಞಾನ ಶಿಕ್ಷಕರು ಸಹ ನಿಮ್ಮ ಉತ್ತಮ ಕೆಲಸಗಳಿಗೆ ನಾವು ಬೆನ್ನೆಲುಬಾಗಿರುತ್ತೇವೆ ಎಂದು ಸಹ ಮಕ್ಕಳಲ್ಲಿ ಧೈರ್ಯವನ್ನು ತುಂಬಿದರು..
ಮಕ್ಕಳ ಬೇಜಾರನ್ನು ಕಳೆಯಲು ಮನೋಜಗೌಡ ಬಸಾಪೂರ ಚಂದಿರನೇತಕೆ ಓಡುವನಮ್ಮ ಹಾಡನ್ನು ಹಾಡಿ ಎಲ್ಲರನ್ನೂ ರಂಜಿಸಿದನು..
ಮಕ್ಕಳು ವಿವಿಧ ಪಾಠ ಮತ್ತು ಆಟೋಟಗಳಲ್ಲಿ ಪಡೆದ ಪ್ರಶಸ್ತಿಗಳನ್ನು ಮತ್ತು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು ಎಲ್ಲರಿಗೂ ಶುಭವಾಗಲಿ ಎಂದು ಮತ್ತೊಮ್ಮೆ ಮುಖ್ಯೋಪಾಧ್ಯಾಯರು ಅಧ್ಯಕ್ಷ ಭಾಷಣ ಮೂಲಕ ತಿಳಿಸಿದರು..
ಮಧ್ಯಾಹ್ನ ಕಾರ್ಯಕ್ರಮದ ನಿರೂಪಣೆಯನ್ನು 9ನೇ ತರಗತಿ ವಿದ್ಯಾರ್ಥಿಯಾದ ಕುಮಾರಿ ಸಿಂಧು ರಾಮಶೆಟ್ಟಿ ಅಚ್ಚುಕಟ್ಟಾಗಿ ನೆರವೇರಿಸಿದಳು..
ಈ ಬೀಳ್ಕೊಡುವ ಸಮಾರಂಭದ ಕೆಲವೊಂದು ಕಮಿಟಿಗಳ ಉಸ್ತುವಾರಿಯಾಗಿ ಶ್ರಮಿಸಿದ್ದು ಮುಖ್ಯೋಪಾಧ್ಯಾಯರು, ಕನ್ನಡ ಮೇಡಂ, ಹಿಂದಿ ಮೇಡಂ, ಗಣಿತ ಶಿಕ್ಷಕರು, ಆಂಗ್ಲ ಶಿಕ್ಷಕರು, ವಿಜ್ಞಾನ ಶಿಕ್ಷಕರು ಮತ್ತು ಪರಿಚಾಕರು.
ಇವರಿಗೆ ಬೆನ್ನೆಲುಬಾಗಿ ನಿಂತದ್ದು 9ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು. 9ನೇ ತರಗತಿ ವಿದ್ಯಾರ್ಥಿಗಳಿಗೆ ನಮ್ಮ ಶಾಲೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು..
ಛಾಯಾಗ್ರಾಹಕರಾಗಿ ಬಂದು ನಮ್ಮನ್ನು ಒಂದು ಕಡೆ ಜೋಡಿಸಿದ ಶ್ರೀ ಜಲಾರ್ ಅವರಿಗೆ ಧನ್ಯವಾದಗಳು
ಕೊನೆಯ ಮಾತು
ಬೀಳ್ಕೊಡುಗೆ ಸಮಾರಂಭ ಇದು ಕೇವಲ ಔಪಚಾರಿಕ ಮಾತ್ರ.
ನಮ್ಮ ಜೀವನದ ಅನುಭವದ ಪಾಠಗಳನ್ನು ಕಲಿಯುವಷ್ಟು ಆಯುಷ್ಯ ನಮಗಿಲ್ಲ.. ಬೇರೆಯವರ ಜೀವನದ ಪಾಠಗಳು ಸಹ ನಮಗೂ ಪಾಠಗಳೇ ಅವುಗಳನ್ನು ಅರಿತುಕೊಂಡು ನಾವು ತಿದ್ದಿಕೊಳ್ಳಬಹುದು,
10ನೇ ತರಗತಿ ವಿದ್ಯಾರ್ಥಿಗಳು ಮುಂದಿನ ದಿನಗಳನ್ನು ಉತ್ತಮವಾಗಿ ಬಳೆಸಿಕೊಂಡು ಮುಂದೆ ತಾವುಗಳು ನಮ್ಮ ಶಾಲೆಗೆ ವಿಶೇಷ ಅತಿಥಿ ಸ್ಥಾನದಲ್ಲಿ ಕೂಡುವಂತಾಗಲಿ, ಸಮಾಜ ನಿಮ್ಮನ್ನು ಸನ್ಮಾನಿಸುವಂತಾಗಲಿ ಎಂಬುದು ನಮ್ಮ ಎಲ್ಲಾ ಶಾಲಾ ಸಿಬ್ಬಂದಿಯ ಕನಸು ಮತ್ತು ಶುಭ ಹಾರೈಕೆ..
ಎಲ್ಲರಿಗೂ ಒಳ್ಳೆಯದಾಗಲಿ
All the best...
By: Shankargouda Basapur
No comments:
Post a Comment