ಕಥೆ-327
ಲಿಂಬೆರಸ ಹೆಚ್ಚಾಯಿತೆಂದು ಜ್ಯೂಸ್ ಎಸೆಯಲಾಗುತ್ತದೆಯೇ?
ನಿಮ್ಮ ಮನೆಗೆ ಯಾರೋ ಅತಿಥಿಗಳು ಬರುತ್ತಾರೆ. ಆಗ ನೀವು ಲಿಂಬೆಹಣ್ಣಿನ ಜ್ಯೂಸ್ ಮಾಡುತ್ತೀರಿ. ಆದರೆ ಕೈ ತಪ್ಪಿನಿಂದಾಗಿ ಅಗತ್ಯಕ್ಕಿಂತ ಹೆಚ್ಚಿನ ಲಿಂಬೆರಸ ಸೇರಿಸಿದ್ದರಿಂದ ಜ್ಯೂಸ್ ಕುಡಿಯಲಾರದಷ್ಟು ಹುಳಿಯಾಗುತ್ತದೆ. ಆಗ ಜ್ಯೂಸ್‌ನಿಂದ ಲಿಂಬೆರಸವನ್ನು ಬೇರ್ಪಡಿಸಲಾಗುತ್ತದೆಯೇ? ಇಲ್ಲ. ಕೆಲವು ಸಂಗತಿಗಳು ಘಟಿಸಿದ ಮೇಲೆ ಅವನ್ನು ಸರಿಪಡಿಸಲಾಗದು. ಅಷ್ಟೂ ಜ್ಯೂಸನ್ನು ಚೆಲ್ಲಲೂ ಮನಸ್ಸು ಬರುವುದಿಲ್ಲ. ಆಗೇನು ಮಾಡುತ್ತೀರಿ?
ಆಗಿರುವ ಒಂದೇ ಒಂದು ದಾರಿಯೆಂದರೆ ಜ್ಯೂಸ್‌ಗೆ ಇನ್ನೊಂದಷ್ಟು ನೀರು ಮತ್ತು ಸಕ್ಕರೆ ಸೇರಿಸಿ ಹುಳಿಯ ಪ್ರಮಾಣ ಕಡಿಮೆಗೊಳಿಸುವುದು. ಹಾಗಾದರೆ ಈಗ ಲಿಂಬೆ ಜ್ಯೂಸ್‌ನ್ನು ನಮ್ಮ ನಿಮ್ಮ ಬದುಕಿಗೆ ಹೋಲಿಸಿ ನೋಡೋಣ. ಕೆಲವೊಮ್ಮೆ ಬದುಕಿನಲ್ಲಿ ಕೆಟ್ಟ ಘಟನೆಗಳು, ತಪ್ಪು ಆಯ್ಕೆಗಳು, ತಪ್ಪು ನಿರ್ಧಾರಗಳು, ಅಹಿತಕರ ಸಂಗತಿಗಳು ನಡೆದು ಹೋಗಿಬಿಡುತ್ತವೆ. ಅವನ್ನೆಲ್ಲ ಮತ್ತೆ ಸರಿಪಡಿಸುವುದು ಜ್ಯೂಸ್‌ನಿಂದ ಲಿಂಬೆರಸ ಬೇರ್ಪಡಿಸಿದಷ್ಟೇ ಅಸಂಭವ. ಆಗ ಬದುಕೇ ಬೇಡ ಎನ್ನಲಾಗುವುದೇ? ಆಗಿ ಹೋಗಿದ್ದರ ಬಗ್ಗೆಯೇ ಯೋಚಿಸುತ್ತಾ ಇನ್ನೊಂದಷ್ಟು ಸಮಯ ವ್ಯರ್ಥಗೊಳಿಸುವುದು ಮೂರ್ಖತನ. ಅದರ ಬದಲು ಬದುಕಿಗೆ ಇನ್ನೊಂದಷ್ಟು ಒಳ್ಳೆಯ ವಿಷಯಗಳನ್ನು ಸೇರಿಸುವತ್ತ ಗಮನ ಹರಿಸಬೇಕು. ಆಗ ಕೆಟ್ಟದ್ದು ಗೌಣವಾಗಿ ಬದುಕು ಹಸನಾಗುತ್ತದೆ. ಬದುಕಿನಲ್ಲಿ ಎಲ್ಲವೂ ಸರಿಯಿರಬೇಕು, ಎಲ್ಲರೂ ಪರಿಪೂರ್ಣರಿರಬೇಕು ಎಂದು ಬಯಸುವುದಕ್ಕಿಂತ ಇರುವುದನ್ನು ಅನುಭವಿಸುವ ಕಲೆ ಗೊತ್ತಿರಬೇಕು.
ಆಗ ಜೀವನ ಸುಖಕರವಾಗಿರುತ್ತದೆ ಮತ್ತು ತೃಪ್ತಿಕರವಾಗಿರುತ್ತದೆ
No comments:
Post a Comment