ಕಥೆ-330
ಮೆದುಳಿಗೆ ಧನಾತ್ಮಕ ಸೂಚನೆ ಬಹಳ ಮುಖ್ಯ
ಒಮ್ಮೆ ಇಬ್ಬರು ಮಕ್ಕಳು ಪಾರ್ಕ್‌ನಲ್ಲಿ ಆಟವಾಡುತ್ತಿದ್ದರು. ಅದರಲ್ಲಿ ಒಬ್ಬನಿಗೆ 8 ವರ್ಷ ವಯಸ್ಸು. ಇನ್ನೊಬ್ಬ ಅವನಿಗಿಂತ ಒಂದು ವರ್ಷ ದೊಡ್ಡವನು. ಸರಿ, ಸಣ್ಣವನ ಹೆಸರು ಟಾಮ್, ದೊಡ್ಡವನು ಜಿಮ್ ಎಂದಿರಲಿ. ಇಬ್ಬರ ಅಮ್ಮಂದಿರೂ ಅದೇ ಪಾರ್ಕ್‌ನ ಕಲ್ಲು ಬೆಂಚಿನ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದರು. ಆಗ ಇವರಿಬ್ಬರೂ ಅಲ್ಲಿದ್ದ ಮರವನ್ನೇರಿ ಕೊಂಬೆಗಳನ್ನು ಹಿಡಿದು ನೇತಾಡುತ್ತಿದ್ದರು. ಅದು ಅಂಥ ದೊಡ್ಡ ಮರವೇನಲ್ಲ. ಜಿಮ್‌ಗಿಂತ ಟಾಮ್ ಎತ್ತರದ ಕೊಂಬೆಯೇರಿ ಜೀಕುತ್ತಿದ್ದ. ಅಷ್ಟರಲ್ಲಿ ಗಾಳಿ ಜೋರಾಗಿ ಬೀಸತೊಡಗಿತು. ರೆಂಬೆ-ಕೊಂಬೆಗಳು ಗಾಳಿಯ ರಭಸಕ್ಕೆ ಅಲ್ಲಾಡತೊಡಗಿದವು. ಅಲ್ಲಿ ಕುಳಿತಿದ್ದ ಅಮ್ಮಂದಿರಿಬ್ಬರೂ ಗಾಬರಿಯಾದರು. ಟಾಮ್‌ನ ಅಮ್ಮ ಜೋರಾಗಿ ‘ಟಾಮ್ ಕೊಂಬೆಯನ್ನು ಗಟ್ಟಿಯಾಗಿ ಹಿಡಿದುಕೋ’ ಎಂದು ಕೂಗಿದರೆ, ಜಿಮ್‌ನ ತಾಯಿ ‘ಮಗೂ ಜಿಮ್ ಬೀಳಬೇಡ’ ಎಂದು ಗಾಬರಿಯಿಂದ ಕಿರುಚಿದರು.
ಮರುಕ್ಷಣವೇ ಜಿಮ್ ಹಿಡಿತ ತಪ್ಪಿ ಕೆಳಗೆ ಬಿದ್ದುಬಿಟ್ಟ. ಟಾಮ್ ಕೊಂಬೆಯನ್ನು ಗಟ್ಟಿಯಾಗಿ ಹಿಡಿದಿದ್ದರಿಂದ ಬಚಾವಾದ. ಗಾಳಿ ನಿಂತ ಮೇಲೆ ನಿಧಾನವಾಗಿ ಇಳಿದು ಬಂದ. ಕೊನೆಗೆ ಇಬ್ಬರೂ ತಾಯಂದಿರು ಮನೆಯ ದಾರಿ ಹಿಡಿದರು. ಜಿಮ್‌ನ ತಾಯಿ ‘ಅಲ್ಲ, ಇಬ್ಬರೂ ಒಂದೇ ಮರದ ಮೇಲಿದ್ದರು. ಗಾಳಿಯ ರಭಸವೂ ಅಷ್ಟೇನೂ ಇರಲಿಲ್ಲ. ಆದರೂ ಜಿಮ್ ಹೇಗೆ ಕೆಳಕ್ಕೆ ಬಿದ್ದ?’ ಎಂದು ಆಶ್ಚರ್ಯಪಟ್ಟರು.
ಆಗ ಟಾಮ್‌ನ ಅಮ್ಮ ಹೇಳಿದರು-‘ನೀವು ‘ಬೀಳಬೇಡ’ ಎಂದು ಹೇಳಿದ್ದೇ ಅವನು ಕೆಳಗೆ ಬೀಳಲು ಕಾರಣ. ಯಾಕೆ ಗೊತ್ತಾ? ನಾನವನಿಗೆ ‘ಗಟ್ಟಿಯಾಗಿ ಹಿಡಿದುಕೋ’ ಎಂದಷ್ಟೇ ಹೇಳಿದೆ. ಅದನ್ನವನು ಬೇಗ ಅರ್ಥ ಮಾಡಿಕೊಂಡ. ಹೇಳಿದಂತೆಯೇ ಕೊಂಬೆಯನ್ನು ಗಟ್ಟಿಯಾಗಿ ಹಿಡಿದ. ಆದರೆ ನೀವು ‘ಬೀಳಬೇಡ’ ಎಂದಿರಿ. ನಿಮ್ಮ ಮಗ ಮೊದಲು ಬೀಳುವುದನ್ನು ಕಲ್ಪಿಸಿಕೊಂಡ. ನಂತರ ಬೀಳಬಾರದು ಎಂಬುದು ಅವನಿಗೆ ಅರ್ಥವಾಯಿತು. ‘ಗಟ್ಟಿಯಾಗಿ ಹಿಡಿದುಕೋ’ ಎಂಬುದು ಪಾಸಿಟಿವ್ ಸೂಚನೆ. ಆದರೆ ಬೀಳಬೇಡ ಎಂಬುದು ನೆಗೆಟಿವ್ ಸೂಚನೆಯಂತಾಗುತ್ತದೆ. ಹಾಗಾಗಿ ನಾವು ಯಾವಾಗಲೂ ನಮ್ಮ ಮೆದುಳಿಗೆ ಧನಾತ್ಮಕ ಸೂಚನೆಗಳನ್ನೇ ನೀಡಬೇಕು’ ಎಂದರು. ಕೃಪೆ: ವಿಶ್ವ ವಾಣಿ.
No comments:
Post a Comment