ಕಥೆ-367
*ಉಪಯೋಗ*
ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದನು. ಅವನದೊಂದು ದೊಡ್ಡ ತೋಟವಿತ್ತು. ಆ ತೋಟದ ಉತ್ಪನ್ನದಿಂದ ಸ್ಥಿತಿವಂತನಾಗಿದ್ದ ಅವನು ಒಂದು ಸಲ ಕಾಯಿಲೆ ಬಿದ್ದು ಮರಣ ಹೊಂದಿದ್ದನು.
ಶ್ರೀಮಂತನು ತೀರಿಕೊಂಡ ಮೇಲೆ ಅವನ ಸಕಲ ಆಸ್ತಿಯೂ ಅವನ ಮಗನ ಕೈಗೆ ಬಂದಿತು. ಒಂದು ದಿನ ಅವನು ತೋಟದಲ್ಲಿ ತಿರುಗಾಡುತ್ತಿರುವಾಗ ಅವನ ಗಮನವು ಅಕಸ್ಮಾತ್ತಾಗಿ ತೋಟದ ಸುತ್ತಲೂ ಹಾಕಿದ ಮುಳ್ಳು ಬೇಲಿಯ ಕಡೆಗೆ ಹರಿಯಿತು.
ಸುಂದರವಾದ ತನ್ನ ತೋಟದ ಸುತ್ತಲೂ ಮುಳ್ಳು ಬೇಲಿ ಹರಡಿರುವುದು ಅವನ ಮನಸ್ಸಿಗೆ ಹಿಡಿಸಲಿಲ್ಲ. ಅದಷ್ಟೇ ಅಲ್ಲ, ಈ ಮುಳ್ಳು ಬೇಲಿಯಿಂದ ಉಪಯೋಗವೂ ಏನು ಇಲ್ಲ ಹಾಗೂ ತೋಟದ ಅಂದವೂ ಹಾಳಾಗುತ್ತದೆ ಎಂಬ ಯೋಚನೆಯು ಬಂತು, ಮುಳ್ಳು ಬೇಲಿಯನ್ನು ಕಿತ್ತು ಬಿಸಾಡಿ ಆ ಸ್ಥಳದಲ್ಲಿ ಬೇರೆ ಗಿಡಗಳನ್ನು ಬೆಳೆಸಬೇಕೆಂದು ಅವನು ಯೋಚಿಸಿದನು. ಆ ಯೋಚನೆ ಮನದಲ್ಲಿ ಬಂದ ಒಡನೆ ಆಳನ್ನು ಕೂಗಿ, "ಎಲ್ಲಾ ಮುಳ್ಳು ಬೇಲಿಯನ್ನು ಕಿತ್ತು ಹಾಕು" ಎಂದನು.
ಒಡೆಯನ ಮಾತು ಕೇಳಿ ಆಳಿಗೆ ಆಶ್ಚರ್ಯವಾಯಿತು, ಬಹುಶಃ ತನ್ನ ಒಡೆಯನ ತಲೆ ಕೆಟ್ಟಿರಬಹುದು, ಇಲ್ಲವೇ ತಮಾಷೆಗಾಗಿ ಹೀಗೆ ಹೇಳುತ್ತಿರಬಹುದು ಅಂದುಕೊಂಡನು. ಆದರೂ ತಾನು ಒಡೆಯನಿಗೆ ಪ್ರಾಮಾಣಿಕ ಸಲಹೆ ನೀಡಬೇಕೆಂದುಕೊಂಡನು.
"ಯಜಮಾನರೇ, ಈ ಮುಳ್ಳು ಬೇಲಿಯನ್ನು ತೆಗೆದುಬಿಟ್ಟರೆ ಅಲ್ಪ ಸಮಯದಲ್ಲಿ ನಮ್ಮ ತೋಟವು ಹಾಳಾಗುವುದು. ಆದ್ದರಿಂದ ತಾವು ದಯವಿಟ್ಟು ಹಾಗೆ ಮಾಡದಿರಿ" ಎಂದು ನಮ್ರತೆಯಿಂದ ನುಡಿದನು.
ಅವನ ಮಾತುಗಳನ್ನು ಕೇಳಿ ತೋಟದ ಒಡೆಯನಿಗೆ ಬಹಳ ಕೋಪ ಬಂತು. ಯಕಸ್ಚಿತ ಒಬ್ಬ ಅಳು ತನಗೆ ಬುದ್ಧಿ ಹೇಳಲು ಬರುತ್ತಿದ್ದಾನಲ್ಲ! ಎಷ್ಟು ಇವನಿಗೆ ಅಹಂಕಾರ ಅಂದುಕೊಂಡನು. "ಎಲ್ಲವೂ, ನನಗೆ ಬುದ್ಧಿ ಹೇಳುವ ಗೋಜಿಗೆ ಹೋಗಬೇಡ, ಮೊದಲು ನಾನು ಹೇಳಿದಂತೆ ಕೇಳು ನಿನ್ನ ಯೋಚನೆ ನಿನ್ನ ತಲೆಗಷ್ಟೆ ಸೀಮಿತವಾಗಿರಲಿ" ಎಂದನು.
ಆಗ ಅಳು ಅನಿವಾರ್ಯವಾಗಿ ಒಡೆಯನ ಆಜ್ಞೆಯನ್ನು ಕಾರ್ಯಗತಗೊಳಿಸಬೇಕಾಯಿತು. ಅರ್ಧ ದಿನದಲ್ಲಿ ಇಡೀ ಬೇಲಿಯನ್ನು ಕಿತ್ತೊಗೆದನು. ಅದನ್ನು ನೋಡಿ ಯಜಮಾನನಿಗೂ ಸಮಾಧಾನವಾಯಿತು.
ಆದರೆ, ಈ ಸಮಾಧಾನವು ಅವನಿಗೆ ಬಹಳ ದಿನಗಳ ಕಾಲ ಉಳಿಯಲಿಲ್ಲ. ಏಕೆಂದರೆ ಈಗ ಕಳ್ಳ ಜನರಿಗೆ ಪೋಲಿ ದನಗಳಿಗೆ ಅಡ್ಡಿಯೇ ಇಲ್ಲದಂತಾಯಿತು. ಕೆಲವೇ ದಿನಗಳಲ್ಲಿ ಆ ತೋಟವು ಸಂಪೂರ್ಣ ಹಾಳಾಗಿ ಆ ಶ್ರೀಮಂತನು ನಿರ್ಗತಿಕನಾದನು.
*ನೀತಿ :*
*ಯಾವುದೇ ವಸ್ತು ಉಪಯೋಗಕ್ಕೆ ಬಾರದೆಂದು ತೀರ್ಮಾನಿಸುವ ಮೊದಲು ಚೆನ್ನಾಗಿ ಯೋಚನೆ ಮಾಡಬೇಕು ಇಲ್ಲದಿದ್ದರೆ ಹಾನಿಯಾಗುವುದು.*
No comments:
Post a Comment