Tuesday, April 2, 2024

 ಕಥೆ-354

ಸ್ವಾರ್ಥಕ್ಕಾಗಿ ಜನರನ್ನು ಗೋಳಾಡಿಸಬೇಕೆ?

ಕ್ರೂರ ಸ್ವಭಾವಗಳು ಇರಬಹುದಾದ ರಾಜ -ಮಹಾರಾಜರಿಗೆ, ಸುಲ್ತಾನ-ನವಾಬರಿಗೆ ಜನರನ್ನು ಗೋಳಾಡಿಸುವುದು ಒಂದು ಬಗೆಯ ಮೋಜು! ಬಹಳ ಹಿಂದೆ ಬಾದಶಾಹರು ಒಬ್ಬರಿದ್ದರಂತೆ. ಅವರಿಗೆ ಜಗತ್ತಿನಲ್ಲಿ ಎಲ್ಲೂ ಇರದಂಥ ಬೃಹತ್ತಾದ ಪ್ರಾರ್ಥನಾ ಮಂದಿರವನ್ನು ಕಟ್ಟಿಸಬೇಕೆಂಬ ಬಯಕೆ ಉಂಟಾಯಿತು. ಅದಕ್ಕಾಗಿ ದೊಡ್ಡದೊಂದು ನಕಾಶೆ ಹಾಕಿಸಿದರು. ಕಟ್ಟಡ ಕಟ್ಟಿಸಲಾರಂಭಿಸಿದರು. ಆ ಮಂದಿರ ಅದೆಷ್ಟು ದೊಡ್ಡ ಕಟ್ಟಡ ವೆಂದರೆ ಬಾದಶಾಹರವರ ಖಜಾನೆಯೆಲ್ಲ ಖಾಲಿಯಾದರೂ ಕಟ್ಟಡದ ಅರ್ಧಭಾಗವೂ ಮುಗಿಯಲಿಲ್ಲ.

ಧನಕ್ಕಾಗಿ ಬಾದಶಾಹರು ಜನರ ಮೇಲೆ ಭಾರಿಯೆನಿಸುವ ಕರಗಳನ್ನು ಹೇರಿದರು. ನಿಷ್ಕರುಣೆಯಿಂದ ವಸೂಲು ಮಾಡಿದರು. ಕಟ್ಟಡ ನಿರ್ಮಾಣಕ್ಕೆ ಜನ ಸಾಲದೆ ಇದ್ದಾಗ ದೇಶದ ಬಾಲಕರು, ಯುವಕರು, ಮಹಿಳೆಯರು, ಮುದುಕರು, ಹೀಗೆ ಎಲ್ಲಾ ವಯಸ್ಸಿನ ಜನರು ಕಟ್ಟಡ ನಿರ್ಮಾಣದಲ್ಲಿ ದುಡಿಯಲೇಬೇಕೆಂಬ ಕಾನೂನು ಹೊರಡಿಸಿದರು. ಜನರು ದುಡಿಯಬೇಕಿತ್ತು, ಇಲ್ಲದಿದ್ದರೆ ಶೂಲವನ್ನೇರ ಬೇಕಿತ್ತು. ಇಡೀ ದೇಶದ ವ್ಯವಸಾಯ, ವ್ಯಾಪಾರಗಳು ನಿಂತು ಹೋದವು. ದೇಶ ಬಡವಾಯಿತು. ಜನರೆಲ್ಲ ನರಳುತ್ತಿದ್ದರು.

ಏನಾದರೇನು, ಕೊನೆಗೊಂದು ದಿನ ಪ್ರಾರ್ಥನಾ ಮಂದಿರದ ನಿರ್ಮಾಣ ಮುಗಿಯಿತು. ಭವ್ಯವಾದ ಬೃಹತ್ ಪ್ರಾರ್ಥನಾ ಮಂದಿರವನ್ನು ವಿಜೃಂಭಣೆಯಿಂದ ಉದ್ಘಾಟಿಸಲಾಯಿತು. ದೇಶದೇಶಾಂತರಗಳಿಂದ ರಾಜಮಹಾರಾಜರು, ಸಾವಿರಾರು ಪ್ರಜೆಗಳೂ ಬಂದರು. ಪ್ರಾರ್ಥನಾ ಮಂದಿರವನ್ನು ನೋಡಿದರು. ಅದರ ವೈಭವವನ್ನು ಮೆಚ್ಚಿಕೊಂಡು ಬಾದಶಾಹರನ್ನು ಹೊಗಳಿದ್ದೇ ಹೊಗಳಿದ್ದು. ಬಾದಶಾಹರು ಸಂತಸ ಪಟ್ಟಿದ್ದೇ ಪಟ್ಟಿದ್ದು. ಆಗ ಯಾರೋ ಒಬ್ಬರು ‘ಮಹಾಪ್ರಭು! ತಮ್ಮ ರಾಜಧಾನಿಯ ಹೊರಗಡೆ ಒಬ್ಬ ಸನ್ಯಾಸಿ ಇದ್ದಾರೆ, ಆದರೆ ಅವರು ಇದುವರೆಗೂ ಮಂದಿರವನ್ನು ನೋಡಲು ಬಂದಿಲ್ಲ!’ ಎಂದು ಬಾದಶಾಹರ ಕಿವಿ ಚುಚ್ಚಿದ.

ಬಾದಶಾಹರು ತಕ್ಷಣ ಆ ಸನ್ಯಾಸಿಯನ್ನು ಕರೆಸಿದರು. ಸಿಟ್ಟಿನಿಂದ ‘ನೀವು ನಮ್ಮನ್ನು ಅವಮಾನಗೊಳಿಸಿದ್ದೀರಿ. ನಾವು ಕಟ್ಟಿಸಿದ ಪ್ರಾರ್ಥನಾ ಮಂದಿರವನ್ನು ಲಕ್ಷಾಂತರ ಮಂದಿ ಬಂದು ನೋಡಿದ್ದಾರೆ, ಹಾಡಿ ಹೊಗಳಿದ್ದಾರೆ. ಆದರೆ ಇದುವರೆಗೆ ನೀವೇಕೆ ಬಂದಿಲ್ಲ?’ ಎಂದು ಸಿಟ್ಟಿನಿಂದ ಗದರಿಸಿದರು. ಸನ್ಯಾಸಿಯು ‘ಪಾಳು ಬಿದ್ದಂಗಡಿಯನ್ನು ನೋಡಲು ನಾನೇಕೆ ಬರಲಿ?’ ಎಂದುಬಿಟ್ಟರು. ಬಾದಶಾಹರಿಗೆ ಮತ್ತಷ್ಟು ಸಿಟ್ಟು ಬಂದಿತು. ‘ಭವ್ಯ ಮಂದಿರವನ್ನು ಪಾಳು ಬಿದ್ದಂಗಡಿ ಎಂದೇಕೆ ಕರೆಯುತ್ತೀರಿ?’ ಎಂದಾಗ, ಸನ್ಯಾಸಿ ಸಮಾಧಾನದಿಂದಲೇ ‘ಈ ಕಟ್ಟಡವನ್ನು ಕಟ್ಟುವುದಕ್ಕಾಗಿ ನೀವು, ಜನ ಹೊರಲಾರದಂಥ ಕರ-ತೆರಿಗೆ ಹೇರಿ ಅವರ ಪ್ರಾಣ ಹಿಂಡಿದ್ದೀರಿ.

ವಯಸ್ಸಿನ ಅಂತರವಿಲ್ಲದೆ ಎಲ್ಲರಿಂದಲೂ ಕಡ್ಡಾಯವಾಗಿ ದುಡಿಸಿಕೊಂಡು ಅವರು ನರಳುವಂತೆ ಮಾಡಿದ್ದೀರಿ. ದುಡಿಯಲು ಬಾರದವರನ್ನು ಸೆರೆಮನೆಗೆ ಹಾಕಿದ್ದೀರಿ ಅಥವಾ ಕೊಂದು ಹಾಕಿದ್ದೀರಿ. ಇಡೀ ದೇಶ ಬಡವಾಗಿದೆ. ನಿಮ್ಮ ಬಯಕೆಯ ಮಂದಿರವನ್ನು ಕಟ್ಟುವುದಕ್ಕಾಗಿ ಜನರ ರಕ್ತದ ಮತ್ತು ಕಣ್ಣೀರಿನ ಹೊಳೆಯೇ ಹರಿದಿದೆ. ಹೀಗೆ ನಿಷ್ಕರುಣೆ–ಯಿಂದ ಕಟ್ಟಲ್ಪಟ್ಟ ಪ್ರಾರ್ಥನಾ ಮಂದಿರ, ಈ ಗುಡಿಯು ಪಾಳು ಬಿದ್ದಂಗಡಿಯಲ್ಲವೇ? ಪಾಳು ಬಿದ್ದಂಗಡಿಯನ್ನು ನೋಡಲು ನಾನೇಕೆ ಬರಬೇಕು?’ ಎಂದು ಹೇಳಿದಾಗ, ಬಾದಶಾಹರ ಎದೆಗೇ ಯಾರೋ ಒದ್ದಂತಾಯಿತು. ಇದುವರೆಗೂ ಅವರಿಗೆ ಯಾರೂ ಹೀಗೆ ಹೇಳಿರಲಿಲ್ಲ.

ಇದಾದ ನಂತರ ಬಾದಶಾಹರು ಬಹಳ ಚಿಂತೆಗೊಳಗಾದರು. ಅವರು ದೇಶದಲ್ಲೆಲ್ಲಾ ಮಾರುವೇಷದಲ್ಲಿ ಸಂಚರಿಸಿ ಜನರನ್ನು ಮಾತನಾಡಿಸಿದರು. ಯಾರೂ ಬಾದಶಾಹರ ಬಗ್ಗೆ ಒಳ್ಳೆಯ ಮಾತನಾಡುತ್ತಿರಲಿಲ್ಲ. ಎಲ್ಲರೂ ಶಾಪ ಹಾಕುತ್ತಿದ್ದರು. ಈ ಮಾತುಗಳೆಲ್ಲ ಬಾದಶಾಹರ ಮನಸ್ಸನ್ನು ಎಷ್ಟು ತಟ್ಟಿತೆಂದರೆ ಕೊನೆಗೊಂದು ದಿನ ಬಾದಶಾಹರು ತಮ್ಮ ಸಾಮ್ರಾಜ್ಯವನ್ನೆಲ್ಲ ತೊರೆದು ಫಕೀರರಾದರಂತೆ. ಪ್ರಾರ್ಥನೆ ಸಲ್ಲಿಸುತ್ತ ತನ್ನ ಅತಿರೇಕಗಳನ್ನು ಮನ್ನಿಸುವಂತೆ ದೇವರನ್ನು ಕೇಳಿಕೊಳ್ಳುತ್ತಿದ್ದರಂತೆ!

ಉದ್ದೇಶಗಳು ಎಷ್ಟೇ ಮಹತ್ವದ್ದಾಗಿದರೂ, ಅವುಗಳ ಕಾರ್ಯಗತಗೊಳಿಸುವ ಮಾರ್ಗಗಳೂ ಯಾರಿಗೂ ಭಾರವಾಗಬಾರದಲ್ಲವೇ? ಸ್ವಾರ್ಥಕ್ಕಾಗಿ ಜನರನ್ನು ಗೋಳಾಡಿಸಿದರೆ, ಅದು ಮೆಚ್ಚುಗೆಯಾಗುವುದಿಲ್ಲ ಅಲ್ಲವೇ?

👍💐💐💐💐💐

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು