Wednesday, April 24, 2024

 ಕಥೆ-375

ಇನ್ನೂ ಬೇಕು ಬೇಕು ಎನ್ನುವಾಗಲೇ ನಿಲ್ಲಿಸಬೇಕು..

ಇಲ್ಲೊಂದು ವಿನೋದದ ಘಟನೆ ಇದೆ. ಘಟನೆಯಲ್ಲಿ ವಿನೋದ ಇರುವಂತೆಯೇ ಕೆಲವು ಪಾಲಿಸಬಹುದಾದ ನಿಯಮಗಳೂ ಇವೆ. 

ಒಂದೂರಿನಲ್ಲಿ ಒಬ್ಬ ಸಂಗೀತದ ವಿದ್ವಾಂಸರು ಇದ್ದರು. ಹಾಡಲು ಕುಳಿತರೆ ಮೈಮರೆಯುತ್ತಿದ್ದರು. ಕೆಲವೊಮ್ಮೆ ಕೇಳುಗರೂ ಮೈಮರೆತು ಕೇಳುತ್ತಿದ್ದುದನ್ನು ಅವರು ಗಮನಿಸಿದ್ದರು. ಒಮ್ಮೆ ರೈಲ್ವೆ ಸ್ಟೇಷನ್ನಿನ ಬಳಿಯಿದ್ದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಅಲ್ಲಿ ಅವರಿಗೆ ಕೆಲವರು ಪರಿಚಯಸ್ಥರು ಸಿಕ್ಕರು. ಲೋಕಾಭಿರಾಮದ ಮಾತುಕತೆ ನಡೆಯಿತು. ಬಾಗಿಲು ಮುಚ್ಚಿದ್ದ ಅಂಗಡಿಯೊಂದರ ಜಗುಲಿಯಲ್ಲಿ ಕುಳಿತು ಎಲ್ಲರೂ ಮಾತನಾಡ ಹತ್ತಿದರು. ಒಬ್ಬರು ನೀವು ದಾಸರಪದಗಳನ್ನು ಚೆನ್ನಾಗಿ ಹಾಡುತ್ತೀರಿ ಎಂದರು.

ಮತ್ತೊಬ್ಬರು ವಚನ ಗಾಯನದಲ್ಲೂ ತಮ್ಮದು ಎತ್ತಿದ ಕೈ ಎಂದರು. ಇನ್ನೊಬ್ಬರು ತಮ್ಮ ಶಿಷ್ಯರು ಅಮೋಘ ಸಾಧನೆ ಮಾಡಿದ್ದಾರೆ ಎಂದರು. ಹೊಗಳಿಕೆ ಯಾರಿಗೆ ಪ್ರಿಯವಾಗುವುದಿಲ್ಲ? ಪರಿಚಯಸ್ಥರು ಹೊಗಳುತ್ತಲೇ ಹೋದರು. ವಿದ್ವಾಂಸರು ಹೊಗಳಿಕೆಯ ಪೀಠವನ್ನು ಏರುತ್ತಲೇ ಹೋದರು. ಆಗೊಬ್ಬರು ಒಂದು ಹಾಡು ಹೇಳಬೇಕೆಂದು ವಿದ್ವಾಂಸರನ್ನು ಕೇಳಿಕೊಂಡರು. ಅಷ್ಟು ಹೊತ್ತಿಗಾಗಲೇ ಹೊಗಳಿಕೆಯ ಪೀಠದ ತುತ್ತ ತುದಿಯನ್ನೇರಿ ಕುಳಿತಿದ್ದ ವಿದ್ವಾಂಸರು ಕಣ್ಮುಚ್ಚಿಕೊಂಡು ಹಾಡಲು ಆರಂಭಿಸಿದರು. ಆ ಹಾಡು ಮುಗಿಯುತ್ತಿದ್ದಂತೆ ಮತ್ತೊಬ್ಬರು ಮತ್ತೊಂದು ಹಾಡನ್ನು ಕೇಳಲು ಇಚ್ಛಿಸಿದರು.

ವಿದ್ವಾಂಸರು ಅದನ್ನೂ ಹಾಡತೊಡಗಿದರು. ಅಷ್ಟು ಹೊತ್ತಿಗೆ ಉಚಿತ ಹಾಡುಗಾರಿಕೆಯನ್ನು ಕೇಳಲು ಸಾಕಷ್ಟು ಜನ ಸೇರಿದ್ದರು. ಒಬ್ಬೊಬ್ಬರು ಒಂದೊಂದು ಹಾಡು ಬಯಸುತ್ತಿದ್ದರು. ವಿದ್ವಾಂಸರು ಹಾಡುತ್ತಿದ್ದರು. ಹೀಗೆ ಒಂದು ಉಚಿತ ಸಂಗೀತ ಕಛೇರಿಯೇ ಅಲ್ಲಿ ನಡೆಯತೊಡಗಿತು. ಕೇಳುವ ಕಿವಿಗಳು ಹೆಚ್ಚಾಗುತ್ತಿದ್ದಂತೆ ಹಾಡುವ ಬಾಯಿಯ ಉತ್ಸಾಹವೂ ಹೆಚ್ಚಾಗುತ್ತಾ ಹೋಯಿತು. ತಮ್ಮ ಹಾಡು ಕೇಳಲು ಇಷ್ಟೊಂದು ಜನ ಸೇರಿರುವುದು ಕಂಡು ಆನಂದವೋ ಆನಂದ! ವಿದ್ವಾಂಸರು ಕಣ್ಣು ಮುಚ್ಚಿ ಹಾಡುತ್ತಿದ್ದಂತೆ ಎಲ್ಲಿಂದಲೋ ‘ಠಣ್ -ಠಣ್, ಠಣ್-ಠಣ್’ ಶಬ್ದ ಕೇಳಿಸಿತು. ಅದನ್ನು ಕೇಳಿ ಅವರು ಕಣ್ತೆರೆದು ನೋಡಿದರು. ನೆರೆದಿದ್ದ ಜನರೆಲ್ಲಾ ಒಬ್ಬೊಬ್ಬರೇ ಸರಸರನೆ ಎದ್ದು ಹೋಗುತ್ತಿದ್ದರು. ಪರಿಚಯಸ್ಥರೂ ಹೊರಟು ಹೋಗುತ್ತಿದ್ದರು.

ಕೊನೆಗೆ ಕೇವಲ ಇಬ್ಬರು ಉಳಿದುಕೊಂಡರು. ಏಕೆಂದು ಮಾಸ್ತರರಿಗೆ ಅರ್ಥವಾಗಲಿಲ್ಲ. ಹಾಡುವುದನ್ನು ನಿಲ್ಲಿಸಿ ಆ ‘ಠಣ್-ಠಣ್’ ಶಬ್ದವೇನು? ಜನ ಏಕೆ ಎದ್ದು ಹೋದರು? ಎಂದು ಕೇಳಿದಾಗ, ಒಬ್ಬರು ಇಲ್ಲೇ ಸಮೀಪದಲ್ಲಿ ರೈಲು ನಿಲ್ದಾಣವಿದೆ. ಆ ‘ಠಣ್-ಠಣ್’ ಶಬ್ದ ಟ್ರೈನು ಬರುವ ಸೂಚನೆಯ ಗಂಟೆ. ಎದ್ದು ಹೋದವರೆಲ್ಲ ಟ್ರೈನಿಗೆ ಹೋಗುವವರು. ಅದಕ್ಕೆ ಅವರು ಎದ್ದು ಹೋದದ್ದು ಎಂದರು. ಹಾಡುಗಾರರು ನೀವಿಬ್ಬರಾದರೂ ಗಂಟೆಯ ಶಬ್ದ ಕೇಳಿ ಎದ್ದು ಹೋಗಲಿಲ್ಲವಲ್ಲ, ನನ್ನ ಪುಣ್ಯ ಎಂದದ್ದಕ್ಕೆ, ಒಬ್ಬರು ನನಗೆ ಮಾಡಲು ಏನೂ ಕೆಲಸವಿಲ್ಲ. ಎಲ್ಲಿಗೂ ಹೋಗಬೇಕಾಗೂ ಇಲ್ಲ. ನೀವು ಪುಗಸಟ್ಟೆ ಹಾಡುತ್ತಿದ್ದೀರಿ.

ನಾನು ಕೇಳುತ್ತಾ ಕುಳಿತೆ ಎಂದರು. ಇನ್ನೊಬ್ಬರು ಮಾತ್ರ ನಿಮ್ಮ ಹಾಡು ಕೇಳಿ ಆನಂದಿಸುತ್ತ ಕುಳಿತಿದ್ದೇನೆ. ಇದೊಂದು ಅಪರೂಪದ ಅವಕಾಶ ಎಂದರು. ಅಷ್ಟೊಂದು ಜನ ಸೇರಿದ್ದರೂ ತಮ್ಮ ಹಾಡುಗಾರಿಕೆಯನ್ನು ನಿಜವಾಗಿಯೂ ಆನಂದಿಸಲು ಕುಳಿತಿದ್ದವರು ಒಬ್ಬರೋ ಇಬ್ಬರೋ ಎಂಬ ಕಟುಸತ್ಯದ ಅರಿವು ವಿದ್ವಾಂಸರಿಗಾಯಿತಂತೆ! ಈ ಪ್ರಕರಣದಿಂದ ಪಾಠ ಕಲಿತ ವಿದ್ವಾಂಸರು ತಮ್ಮ ಹಾಡುಗಾರಿಕೆಗಾಗಿ ಕೆಲವು ನಿಯಮಗಳನ್ನು ತಾವೇ ಹಾಕಿಕೊಂಡರಂತೆ. ಅವೇನೆಂದರೆ ಎಲ್ಲೆಂದರಲ್ಲಿ ಹಾಡಲು ಕೂಡಬಾರದು. ಕುಳಿತವರೆಲ್ಲ ಕೇಳಲೆಂದೇ ಕುಳಿತಿರುವರೆಂದು ಭಾವಿಸಬಾರದು. (ಕೆಲವರು ಟ್ರೈನಿಗಾಗಿ ಕಾಯುತ್ತಿರಬಹುದು. ಕೆಲವರು ಮಾಡಲು ಬೇರೇನೂ ಕೆಲಸವಿಲ್ಲದಿರುವುದರಿಂದ ಕುಳಿತಿರಬಹುದು.) ಕೇಳುವವರು ಇದ್ದಾರೆಂದು ಹಾಡುತ್ತಲೇ ಹೋಗಬಾರದು. ಅವರು ಇನ್ನೂ ‘ಬೇಕು-ಬೇಕು’ ಎನ್ನುತ್ತಿರುವಾಗಲೇ ನಿಲ್ಲಿಸಬೇಕು! ಈ ಸರಳ ನಿಯಮಗಳು ಹಾಡುಗಾರರಿಗೂ ಉಪಯೋಗವಾಗಬಹುದು. ಭಾಷಣಕಾರರಿಗೂ ಉಪಯೋಗವಾಗಬಹುದು!

ಕೃಪೆ:ಎಸ್.ಷಡಕ್ಷರಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು