ಕಥೆ-379
ಶಾಂತಿಯಿಂದ ಜೀವಿಸುವುದೇ ಜೀವನದ ಪರಮೋದ್ದೇಶ
ಬಹಳ ಹಿಂದೆ ಮಹತ್ವಾಕಾಂಕ್ಷಿಯಾದ ರಾಜನೊಬ್ಬನಿದ್ದ. ಕೆಲವೊಮ್ಮೆ ಆತನ ಆಕಾಂಕ್ಷೆಗಳು ದುರಾಸೆಯ ಮಿತಿಯನ್ನೂ ಮೀರಿ ಬಿಡುತ್ತಿದ್ದವು. ಆತ ದಂಡಯಾತ್ರೆ ಮೂಲಕ ಸುತ್ತಲಿನ ಹತ್ತಾರು ದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ. ಆತನಿಗೊಬ್ಬ ಬುದ್ಧಿವಂತ, ಜ್ಞಾನಿಯೆನಿಸಿಕೊಂಡ ಮಹಾಮಂತ್ರಿಯಿದ್ದ. ಒಮ್ಮೆ ಆತ ರಾಜನನ್ನು ‘ಮಹಾರಾಜರೆ ನೀವು ಎಲ್ಲಿಯವರೆಗೆ ದಂಡಯಾತ್ರೆ ಕೈಗೊಳ್ಳುತ್ತಲೇ ಇರುತ್ತೀರಿ, ನಿಮ್ಮ ಗುರಿಯೇನು?’ ಎಂದು ಕೇಳಿದ. ಅದಕ್ಕೆ ರಾಜ ಹೇಳಿದ-‘ಇಡೀ ಏಷ್ಯಾ ನನ್ನ ಅಧೀನದೊಳಗೆ ಬರಬೇಕು’ ಎಂದ. ‘ಆಮೇಲೆ?’ ಎಂದು ಕೇಳಿದ ಮಂತ್ರಿ. ‘ನಂತರದಲ್ಲಿ ನಾನು ಅರೇಬಿಯಾದ ರಾಜನಾಗಬೇಕು’ ಎಂದ. ‘ಆಮೇಲೆ ಸುಮ್ಮನಾಗುತ್ತೀರೋ?’ ಎಂದು ಪ್ರಶ್ನಿಸಿದ ಮಂತ್ರಿ.
‘ಇಲ್ಲ, ಆಮೇಲೆ ಯುರೋಪ್, ಆಫ್ರಿಕಾ ಖಂಡಗಳ ಮೇಲೆ ದಂಡೆತ್ತಿ ಹೋಗುತ್ತೇನೆ. ನಂತರದಲ್ಲಿ ಇಡೀ ಪ್ರಪಂಚವನ್ನು ಜಯಿಸಿ ಚಕ್ರವರ್ತಿ ಎನಿಸಿಕೊಳ್ಳುತ್ತೇನೆ’ ಎಂದ ಗರ್ವದಿಂದ. ‘ಆಮೇಲೆ?!’ ಎಂದ ಮಂತ್ರಿ. ಕುಪಿತನಾದ ರಾಜ ‘ಆಮೇಲೇನು ಉಳಿದಿರುತ್ತದೆ ಮಂತ್ರಿವರ್ಯರೆ. ನಾನು ವಿಶ್ರಾಂತಿಯಿಂದ, ಶಾಂತಿಯ ಜೀವನ ನಡೆಸುತ್ತೇನೆ’ ಎಂದ. ‘ಹಾಗಾದರೆ ಈಗೇಕೆ ನೀವು ಇಲ್ಲಿ ಶಾಂತಿಯಿಂದ, ಆರಾಮಾಗಿ ಜೀವಿಸಬಾರದು? ಶಾಂತಿಯಿಂದ ಜೀವಿಸುವುದೇ ಜೀವನದ ಪರಮೋದ್ದೇಶವಾದರೆ ಅದನ್ನು ಇಂದಿನಿಂದಲೂ ಮಾಡಬಹುದಲ್ಲವೆ. ಅದಕ್ಕಾಗಿ ಪ್ರಪಂಚವನ್ನು ಗೆಲ್ಲುವ, ಯಾರನ್ನೋ ಕೊಲ್ಲುವ ಅವಶ್ಯವಿದೆಯೇ?’ ಎಂದು ಕೇಳಿದ ಮಂತ್ರಿ. ರಾಜನಲ್ಲಿ ಆ ಪ್ರಶ್ನೆಗೆ ಉತ್ತರ ಉಳಿದಿರಲಿಲ್ಲ
No comments:
Post a Comment