Sunday, April 7, 2024

 ಕಥೆ-359

ನಂಬಿ ಕೆಟ್ಟವರಿಲ್ಲ !

ನಂಬಿ ಕೆಟ್ಟವರಿಲ್ಲ ಎಂಬುದು ಬಸವಣ್ಣನವರ ವಚನವೊಂದರ ಮೊದಲ ಸಾಲುಗಳು. ಈ ಸಾಲುಗಳ ಸತ್ಯವನ್ನು ಸಾಬೀತು ಪಡಿಸುವ ಪ್ರಸಂಗವೊಂದು ಪ್ಯಾರಿಸ್‌ನಲ್ಲಿ ನಡೆದಿತ್ತಂತೆ. ಆ ಕುತೂಹಲಕಾರಿಯಾದ ಪ್ರಸಂಗ ಹೀಗಿದೆ.

1902ರ ಒಂದು ಸಂಜೆ, ಅಲ್ಲಿದ್ದ ಕೆಫೇ ಮ್ಯಾಗ್ಸಿಮ್ ಎಂಬ ಉಪಾಹಾರ ಗೃಹಕ್ಕೆ ಹಂಗೇರಿ ದೇಶದಿಂದ ಬಂದಿದ್ದ, ಬಹುಶಃ ಆಗಷ್ಟೇ ಮದುವೆಯಾಗಿದ್ದ, ಯುವಕ-ಯುವತಿಯ ಜೋಡಿಯೊಂದು ಬಂದು ಉಪಾಹಾರ ಸ್ವೀಕರಿಸುತ್ತಿದ್ದರು. ಪ್ರೀತಿಯ ಮಾತುಕತೆಗಳಲ್ಲಿ ಮೈಮರೆತಿದ್ದರು. ಕೊನೆಯಲ್ಲಿ ಉಪಾಹಾರದ ಬಿಲ್ಲು ಸಲ್ಲಿಸಲು ಜೇಬಿಗೆ ಕೈಹಾಕಿದ ಯುವಕ ಗಾಬರಿಯಾದ. ಏಕೆಂದರೆ ಅವರ ಪರ್ಸ್ ಕಳುವಾಗಿಬಿಟ್ಟಿತ್ತು! ಯುವಕ ಉಪಾಹಾರ ಗೃಹದ ಮಾಲೀಕರ ಬಳಿ ಹೋಗಿ ‘ನನ್ನ ಪರ್ಸ್ ಕಳುವಾಗಿದೆ. ಅದರಲ್ಲಿದ್ದ ನನ್ನ ರೈಲ್ವೆ ಟಿಕೇಟುಗಳೂ ಕಳುವಾಗಿದೆ. ನಿಮ್ಮ ಬಿಲ್ಲನ್ನು ಪಾವತಿ ಮಾಡಲೂ ನನ್ನ ಬಳಿ ಹಣವಿಲ್ಲ.

ನಾನೀಗ ಏನು ಮಾಡಲಿ? ನನ್ನ ಮಾತನ್ನು ನಂಬಿ’ ಎಂದರು. ಸಹೃದಯಿ ಮಾಲೀಕರು ‘ಆಯಿತು. ನಾನು ನಿಮ್ಮ ಮಾತನ್ನು ನಂಬುತ್ತೇನೆ. ನೀವೆಲ್ಲಿಯವರು? ನೀವೇನು ಮಾಡುತ್ತೀರಿ?’ ಎಂದು ಕೇಳಿದರು. ಯುವಕ ‘ನನ್ನ ಹೆಸರು ಫ್ರಾ್ಂಜ್‌ ಲೆಹೆರ್. ಹಂಗೇರಿ ದೇಶದವನು. ನಾನೂ ಸಂಗೀತಗಾರ ಮತ್ತು ಕವಿ. ನಮ್ಮ ತಂದೆಯೂ ಸಂಗೀತಗಾರರು. ನಾನು ನಾಟಕಗಳನ್ನೂ, ಕವನಗಳನ್ನೂ ಬರೆಯುತ್ತೇನೆ’ ಎಂದು ಪರಿಚಯಿಸಿಕೊಂಡರು. ಮಾಲೀಕರಿಗೆ ಏನನಿಸಿತೋ ಏನೊ? ಅವರು ‘ಉಪಾಹಾರ ಗೃಹದ ಬಿಲ್ಲನ್ನು ನೀವು ನಿಮ್ಮೂರಿಗೆ ಹೋದ ನಂತರ ಕಳುಹಿಸಿ ಕೊಟ್ಟರಾಯಿತು. ಆದರೆ ನಿಮ್ಮೂರಿಗೆ ಮರಳಿ ಹೋಗಲು ನಿಮಗೆ ಹಣ ಬೇಕಲ್ಲವೇ? ನಾನು ಮತ್ತೊಂದಷ್ಟು ಹಣ ಕೊಡುತ್ತೇನೆ. ತೆಗೆದುಕೊಳ್ಳಿ. ಅದನ್ನುಪಯೋಗಿಸಿಕೊಂಡು ನಿಮ್ಮೂರಿಗೆ ಸುರಕ್ಷಿತವಾಗಿ ಹಿಂತಿರುಗಿ. ನನ್ನ ಹಣವನ್ನು ಅಲ್ಲಿಂದ ಕಳುಹಿಸಿಕೊಡಿ’ ಎಂದು ಹೇಳಿ ಆ ಯುವಕನ ಕೈಗೆ ಬೇಕಾಗುವಷ್ಟು ಹಣವನ್ನಿತ್ತರು.


ಮಾಲೀಕರ ಔದಾರ್ಯದಿಂದ ಬೆರಗಾದ ಲೆಹೆರ್ ‘ನಾನೊಂದು ಸಂಗೀತ-ನಾಟಕ ಬರೆಯುತ್ತಿದ್ದೇನೆ. ಅದರಲ್ಲಿ ನಿಮ್ಮ ಉಪಾಹಾರ ಗೃಹದ ಹೆಸರನ್ನು ಪ್ರಸ್ತಾಪಿಸುತ್ತೇನೆ. ನಿಮಗೆ ಅದರಿಂದ ಪ್ರಚಾರ ಸಿಗಬಹುದು. ಅದರಿಂದ ನಿಮ್ಮ ಉಪಕಾರದ ಋಣ ತೀರಿಸುತ್ತೇನೆ’ ಎಂದರು. ಮಾಲೀಕರು ಮುಗುಳ್ನಕ್ಕರು. ಶುಭ ಹಾರೈಸಿ ಆ ಜೋಡಿಯನ್ನು ಕಳುಹಿಸಿಕೊಟ್ಟರು. ಲೆಹೆರ್ ಹಂಗೇರಿಗೆ ಹಿಂತಿರುಗಿದ ನಂತರ ಮಾಲೀಕರ ಅಷ್ಟೂ ಹಣವನ್ನು ಹಿಂತಿರುಗಿಸಿದರು. ಅಷ್ಟೇ ಅಲ್ಲ! ಅವರು ಬರೆದ ‘ದಿ ಮೆರ್ರೀ ವಿಡೋ’ ಎಂಬ ಸಂಗೀತ-ನಾಟಕದಲ್ಲಿ (ಬ್ಯಾಲೆ) ‘ಕೆಫೇ ಮ್ಯಾಗ್ಸಿಮ್’ ಹೆಸರನ್ನು ಉಲ್ಲೇಖಿಸಿದರು.

1905ರ ಡಿಸೆಂಬರ್ 30ರಂದು ಪ್ರದರ್ಶನವನ್ನಾರಂಭಿಸಿದ ನಾಟಕ ಅದೆಷ್ಟು ಜನಪ್ರಿಯವಾಯಿತೆಂದರೆ ನೂರೈದು ವರ್ಷಗಳ ನಂತರವೂ, ಇಂದಿಗೂ ಅಲ್ಲಿ ಪ್ರದರ್ಶನಗೊಳ್ಳುತ್ತಿದೆ. ಮತ್ತು ಕೆಫೇ ಮ್ಯಾಗ್ಸಿಮ್ ಹೆಸರು ಪ್ರಸ್ತಾಪವಾಗುತ್ತಿದೆ. ನಾಟಕ ನೋಡಿದವರು ‘ಕೆಫೆ ಮ್ಯಾಗ್ಸಿಮ್’ ಎಲ್ಲಿದೆಯೆಂದು ಕೇಳುವಂತಾಗಿದೆ. ಇಂದು ಫ್ರಾ್ಂಜ್‌ ಲೆಹೆರ್ ಇಲ್ಲ. ಕೆಫೇ ಮ್ಯಾಗ್ಸಿಮ್‌ನ ಆ ಸಹೃದಯಿ ಮಾಲೀಕರೂ ಇಲ್ಲ. ಆದರೆ ‘ದಿ ಮೆರ್ರೀ ವಿಡೋ’ ಒಪೇರಾ ಇಂದಿಗೂ ಪ್ರದರ್ಶನಗೊಳ್ಳುತ್ತಿದೆ ಮತ್ತು ‘ಕೆಫೇ ಮ್ಯಾಗ್ಸಿಮ್’ ಈಗಲೂ ಇದೆ. ಅವು ಎರಡೂ ಪರಸ್ಪರ ನಂಬಿಕೆಯ ಮತ್ತು ಔದಾರ್ಯದ ಸಾಕ್ಷಿಯಾಗಿ ಶಾಶ್ವತವಾಗಿ ನಿಂತಿವೆ. ನಂಬಿ ಕೆಟ್ಟವರಿಲ್ಲ ಎಂಬ ಮಾತು ಸತ್ಯ ಆಗುವುದು ನಂಬಿಕೆ ಉಳಿಸಿಕೊಳ್ಳುವ ಲೆಹರ್‌ನಂಥ ಸಜ್ಜನರು ಇರುವುದರಿಂದ ಅಲ್ಲವೇ? ನಮ್ಮ ಬದುಕಿನಲ್ಲೂ ನಮಗೂ ಎಂದಾದರೂ, ಯಾರಾದರೂ, ಅಪರಿಚಿತರು ಕಷ್ಟಕ್ಕೆ ಸಿಲುಕಿ ಹಾಕಿಕೊಂಡವರು ಸಿಗಬಹುದು. ಅಂಥವರನ್ನು ನಂಬುವ ಮತ್ತು ಸಹಾಯ ಮಾಡುವ ಅವಕಾಶ ಸಿಗಬಹುದು.

ಶಕ್ತಿಯಿದ್ದರೆ, ನಮಗೆ ದೊಡ್ಡ ನಷ್ಟವೇನೂ ಆಗುವುದಿಲ್ಲವಾದರೆ, ನಾವೂ ಅಂಥವರಿಗೆ ಸಹಾಯ ಮಾಡಬಹುದು. ಯಾರಿಗೆ ಗೊತ್ತು? ಹಾಗೆ ಸಹಾಯ ಪಡೆದವರು ನಮ್ಮ ಹೆಸರನ್ನು ಶಾಶ್ವತವಾಗಿರಿಸಬಹುದು! ನಂಬಿ ಕೆಟ್ಟವರಿಲ್ಲ ಎನ್ನುವ ಗುಂಪಿನಲ್ಲಿ ನಾವೂ ಒಬ್ಬರಾಗಬಹುದು!

 ಕೃಪೆ: ವಿಶ್ವ ವಾಣಿ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು