ಕಥೆ-360
ಪವಿತ್ರ ಕಾರ್ಯದಲ್ಲಿ ಅಡಗಿದೆ ನಮ್ಮ ಪಾವನ!
ಮೊದಲನೆಯವನು ಸ್ಯಾಮ್, ಎರಡನೆಯವನು ಜಾನ್ ಹಾಗೂ ಮೂರನೆಯವನು ಎರಿಕ್. ಈ ಮೂವರೂ ರಾಲ್ಫ್ ಎಂಬ ರಾಜನ ಮಕ್ಕಳು. ಇತ್ತ ರಾಲ್ಫ್‌ಗೆ ಮುಪ್ಪು ಆವರಿಸಿದೆ. ಕೈಕಾಲುಗಳು ತ್ರಾಣ ಕಳೆದುಕೊಂಡಿವೆ. ಹಾಸಿಗೆ ಹಿಡಿದಿದ್ದಾನೆ. ಇನ್ನು ಕೆಲವೇ ದಿನಗಳಲ್ಲಿ ಸಾಯಲಿದ್ದಾನೆ. ಆ ಬಗ್ಗೆ ರಾಲ್ಫ್‌ಗೆ ಯಾವ ಅಳುಕೂ ಇಲ್ಲ, ಪಶ್ಚಾತಾಪವಂತೂ ಇಲ್ಲವೇ ಇಲ್ಲ. ಆದರೂ ಆತನ ಮುಖದಲ್ಲಿ ಚಿಂತೆ ಎದ್ದು ಕಾಣುತ್ತಿರುತ್ತದೆ. ಉತ್ತರಾಧಿಕಾರಿಯನ್ನಾಗಿ ಯಾರನ್ನು ನೇಮಕ ಮಾಡಬೇಕೆಂಬ ಪ್ರಶ್ನೆ ಆತನನ್ನು ಕಾಡುತ್ತಿರುತ್ತದೆ. ತನ್ನ ಮೂವರೂ ಮಕ್ಕಳನ್ನು ಬರಮಾಡಿಕೊಂಡ ರಾಲ್ಫ್ ಮಕ್ಕಳೇ ನನಗೆ ಸಾವು ಸಮೀಪಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಸಾಯಲಿದ್ದೇನೆ. ಹಾಗಾಗಿ ನಾನು ಬದುಕಿರುವಾಗಲೇ ಉತ್ತರಾದಿಕಾರಿಯನ್ನು ನೇಮಕ ಮಾಡಬೇಕೆಂಬ ಗೊಂದಲವುಂಟಾಗಿದೆ. ಆದ್ದರಿಂದ ಒಂದು ಪರೀಕ್ಷೆಯನ್ನಿಟ್ಟಿದ್ದೇನೆ. ಅಗೋ ಅಲ್ಲೊಂದು ಕೋಣೆಯಿದೆ. ಯಾವ ವಸ್ತುವೇ ಆಗಿದ್ದರೂ ಅದರಿಂದ ಯಾರು ಆ ಕೋಣೆಯನ್ನು ಮೊದಲು ತುಂಬಿಸುತ್ತಾರೋ ಅವರೇ ಮುಂದಿನ ರಾಜ ಎಂದು ಹೇಳುತ್ತಾನೆ.
ಹೀಗೆ ಹೇಳಿದ ಕೂಡಲೇ ಕಾರ್ಯ ಪ್ರವೃತ್ತನಾದ ಮೊದಲನೆಯ ಮಗ ಸ್ಯಾಮ್, ಅಮೂಲ್ಯವಾದ ವಜ್ರಗಳಿಂದ ಕೋಣೆಯನ್ನು ತುಂಬಿಸಲು ಮುಂದಾಗುತ್ತಾನೆ. ಆದರೆ ಅರ್ಧ ತುಂಬುವಷ್ಟರಲ್ಲಿ ಇದ್ದ ವಜ್ರವೆಲ್ಲ ಬರಿದಾಗುತ್ತದೆ. ಎರಡನೇಯ ಮಗ ಚಿನ್ನವನ್ನು ತಂದು ತುಂಬಿಸುತ್ತಾನೆ. ಆದರೂ ಕೋಣೆ ತುಂಬುವುದಿಲ್ಲ. ಅಣ್ಣಂದಿರಿಬ್ಬರನ್ನೂ ನೋಡುತ್ತಾ ನಿಂತಿದ್ದ ಕೊನೆಯ ಮಗ ಎರಿಕ್, ನಿಧಾನವಾಗಿ ದೀಪವೊಂದನ್ನು ಹಚ್ಚಿ ಕೋಣೆಯ ಮಧ್ಯದಲ್ಲಿಡುತ್ತಾನೆ. ಕತ್ತಲೆ ಮರೆಯಾಗುತ್ತದೆ. ಕೋಣೆಯ ತುಂಬ ಬೆಳಕು ಆವರಿಸುತ್ತದೆ. ಎರಿಕ್ ಉತ್ತರಾದಿಕಾರಿಯಾಗುತ್ತಾನೆ . ವಿದ್ಯೆಯೂ ಕೂಡ ಒಂದು ಬೆಳಕು. ಅಂತಹ ಬೆಳಕನ್ನು ಚೆಲ್ಲುವುದು ಒಂದು ಪವಿತ್ರ ಕಾರ್ಯವೇ ಸರಿ. ಪವಿತ್ರ ಕಾರ್ಯದಲ್ಲಿ ಅಡಗಿದೆ ನಮ್ಮ ಪಾವನ..🙏🙏💐💐💐
No comments:
Post a Comment